12ನೇ ಶತಮಾನದ ಬಸವಣ್ಣನವರ ಕಾಲಘಟ್ಟದಲ್ಲೇ ತಮ್ಮ ಅನುಭವ ಮಂಟಪದಲ್ಲಿ ಅಸ್ಪೃಶ್ಯರಿಗೆ ಪಾಠ ಪ್ರವಚನ ಕಲಿಸುತ್ತಿದ್ದರು ಎಂದು ದಲಿತ ಶೋಷಿತ ರಕ್ಷಣಾ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಲೋಕೇಶ್ ಚಂದ್ರ ತಿಳಿಸಿದರು.
ಹಾಸನ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಭೀಮ್ ಆರ್ಮಿಯಿಂದ ಹಮ್ಮಿಕೊಂಡಿದ್ದ ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟಲು ಕಾನೂನು ಅರಿವು ಹಾಗೂ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
“ಪರಿಶಿಷ್ಟ ಜಾತಿ/ಪಂಗಡಗಳು ಅಂದರೇನು ಎನ್ನುವುದನ್ನು ನೋಡಿದರೆ ಹಲವು ಜಾತಿಗಳನ್ನು ಪರಿಷ್ಕರಣೆಗೊಳಿಸಿ ಮಾಡಿದ ಪಟ್ಟಿಯನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳೆಂದು ಕರೆಯುತ್ತೇವೆ. ಎಸ್‌ಸಿ/ಸ್‌ಟಿ ದೌರ್ಜನ್ಯ ತಡೆ ಕಾಯಿದೆಯು ಪರಿಶಿಷ್ಟ ಜಾತಿ 101 ಮತ್ತು ಪರಿಶಿಷ್ಟ ಪಂಗಡಗಳ 52 ಸೇರಿದಂತೆ ಒಟ್ಟು 153 ಜಾತಿಗಳಿಗೆ ಅನ್ವಯಿಸುತ್ತದೆ” ಎಂದು ಹೇಳಿದರು.
“ಅಸ್ಪೃಶ್ಯತೆ ನಿರ್ಮೂಲನೆ ಬಗ್ಗೆ ಯಾರ್‍ಯಾರು ಮುಂದಾಗಿದ್ದರೆಂಬ ವಿಚಾರದ ಇತಿಹಾಸ ತಿಳಿಯುವ ಅಗತ್ಯತೆ ಇದೆ. ಈಗ ಹಲವಾರು ಕಾಯಿದೆಗಳಿವೆ. ಅದರಲ್ಲಿ ಮಕ್ಕಳ ಮೇಲಿನ ರಕ್ಷಣಾ ಕಾಯಿದೆ, ಮಹಿಳಾ ಮೇಲಿನ ಕಾಯಿದೆ, ಎಸ್‌ಸಿ/ಸ್‌ಟಿ ದೌರ್ಜನ್ಯ ತಡೆ ಕಾಯಿದೆ ಸೇರಿದಂತೆ ಹಲವಾರು ಕಾಯಿದೆಗಳಿವೆ. ಕ್ರಿಶ್ತ ಪೂರ್ವದಲ್ಲಿ ಭಗವಾನ್ ಬುದ್ಧರು ಅಸ್ಪೃಶ್ಯತೆ ತೊಡೆದುಹಾಕಲು ಹೋರಾಡಿದವರು, ದೇಶದ ಇತಿಹಾಸದಲ್ಲಿ ಅವರೇ ಪ್ರಥಮರು. 12ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪಗಳಲ್ಲಿ ಪಾಠ ಪ್ರವಚನ ಮಾಡುವುದರ ಮೂಲಕ ಅಸ್ಪೃಶ್ಯತೆ ಹೋಗಲಾಡಿಸಲು ಮುಂದಾದರು. ಬಸವಣ್ಣನವರ ಕಾಲಘಟ್ಟದಲ್ಲೇ ಅಸ್ಪೃಶ್ಯರಿಗೆ ಪಾಠ ಪ್ರವಚನ ಕಲಿಸುತ್ತಿದ್ದರು ಎಂಬುದನ್ನು ಕಾಣಬಹುದು” ಎಂದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಕಷ್ಟದಿಂದ ಬಂದವರು ಎಲ್ಲವನ್ನೂ ನಿಭಾಯಿಸಬಲ್ಲರು
ಕಾರ್ಯಕ್ರಮದಲ್ಲಿ ದೌರ್ಜನ್ಯ ತಡೆ ಕಾಯಿದೆ ಕುರಿತು ವಿಚಾರವನ್ನು ಸಿದ್ದರಾಜು ಕೆಂಪನಹಳ್ಳಿ ಮಂಡಿಸಿದರು. ಇದೇ ವೇಳೆ ಭೀಮ್ ಆರ್ಮಿ ರಾಜ್ಯ ಕಾರ್ಯಾಧ್ಯಕ್ಷ ಹೆಚ್ ಎಸ್ ಪ್ರದೀಪ್, ಪ್ರಗತಿಪರ ಚಿಂತಕ ಕೆ ಹೆಚ್ ಮೊಹಮ್ಮದ್ ಮುಸ್ಲಿಯಾರ್, ಭೀಮ್ ಆರ್ಮಿ ರಾಜ್ಯ ಉಪಾಧ್ಯಕ್ಷ ಜಯಕುಮಾರ್ ಹಾದಿಗೆ, ಬೇಲೂರು ತಾಲೂಕು ಅಧ್ಯಕ್ಷ ಕೀರ್ತಿ ಬಿ ಅಣ್ಣಪ್ಪ, ಆಲೂರು ತಾಲೂಕು ಅಧ್ಯಕ್ಷ ಜಗದೀಶ್ ನಿಡನೂರು, ಜಿಲ್ಲಾ ಉಪಾಧ್ಯಕ್ಷ ನವೀನ್ ಸಾಲಗಾಮೆ, ಖಜಾಂಚಿ ಎಂ ಸಿ ಮಂಜುನಾಥ, ತಾಲೂಕು ಅಧ್ಯಕ್ಷ ಡಿ ಕೆ ಹೇಮಂತ್, ಸಂಚಾಲಕ ಪರಮೇಶ್ ಸೇರಿದಂತೆ ಇತರರು ಇದ್ದರು.