ರೈತರು ಕೇವಲ ಸಾಂಪ್ರದಾಯಿಕ ಬೆಳೆಗಳ ಮೇಲೆ ಅವಲಂಬಿತರಾದರೆ ಅಧಿಕ ಆದಾಯ ಗಳಿಸಲು ಸಾಧ್ಯವಿಲ್ಲ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ತೋಟಗಾರಿಕೆ ಬೆಳೆಗಳನ್ನು ಬೆಳೆದರೆ ಯಶಸ್ಸು ಸಾಧಿಸಬಹುದು. ಮೊದಲ ಪ್ರಯತ್ನದಲ್ಲೇ ಸೇವಂತಿಗೆ ಕೃಷಿಯಿಂದ ಲಕ್ಷ ಲಕ್ಷ ಗಳಿಸುತ್ತಿರುವ ಜಗದೀಶ ಮಾದರಿ ರೈತರಾಗಿ ಸೈ ಎನಿಸಿಕೊಂಡಿದ್ದಾರೆ.
ಬೀದರ್ ತಾಲೂಕಿನ ಚಟ್ನಳ್ಳಿ ಗ್ರಾಮದ ಯುವ ರೈತನೊಬ್ಬ ತಮ್ಮ 30 ಗುಂಟೆ ಜಮೀನಿನಲ್ಲಿ ಸೇವಂತಿಗೆ ಹೂವು ಬೆಳೆದಿದ್ದಾರೆ. ಸೇವಂತಿಗೆ ಗಿಡ ಬಳ್ಳಿಯಾಕಾರದಲ್ಲಿ ಗೊಂಚಲಾಗಿ ಬೆಳೆದಿದಿದ್ದು ತಿಂಗಳಿಗೆ ಒಂದು ಆದಾಯ ಗಳಿಸುತ್ತಿದ್ದಾರೆ.
ಬೀದರ್ ನಗರದಲ್ಲಿ ವಾಸಿಸುವ ರೈತ ಜಗದೀಶ ತಮ್ಮ ಸ್ವಂತ ಊರು ಚಟ್ನಳ್ಳಿ ಗ್ರಾಮದಲ್ಲಿರುವ ಭೂಮಿಯಲ್ಲಿ ಮೊದಲ ಬಾರಿ ಪುಷ್ಪ ಕೃಷಿ ಕೈಗೊಂಡು ಹೊಸ ಪ್ರಯೋಗ ಮಾಡಿದ್ದಾರೆ. ಬೀದರ್‌ದಿಂದ 15 ಕಿ.ಮೀ. ದೂರದ ಜಮೀನಿಗೆ ತಾಯಿ, ಸೋದರತ್ತೆ ಕಾರಿನಲ್ಲಿ ತೆರಳಿ, ಹೊಲದಲ್ಲಿ ಕೆಲಸ ಮುಗಿಸಿಕೊಂಡು ಸಂಜೆ ಮರಳಿ ಮನೆಗೆ ತೆರಳುತ್ತಾರೆ.
ಸೇವಂತಿಗೆ ತೋಟದಲ್ಲಿ ಸಣ್ಣ ಹುಲ್ಲಿನ ಕಡ್ಡಿ ಸಹ ಇರದಂತೆ ಜತನದಿಂದ ಬೆಳೆದಿದ್ದಾರೆ. ಹೂವಿನ ತೋಟ ರಸ್ತೆಯಲ್ಲಿ ತೆರಳುವ ಪಾದಚಾರಿ, ವಾಹನ ಸವಾರರಿಗೆ ತನ್ನತ್ತ ಸೆಳೆಯುತ್ತಿದೆ. ತೋಟಕ್ಕೆ ಕಾಲಿಟ್ಟರೆ ಸಾಕು, ಹೂವುಗಳು ಸ್ವಾಗತಿಸುತ್ತಿವೆ. ಅವುಗಳನ್ನು ನೋಡುವುದೇ ಒಂದು ಚೆಂದವಾಗಿದೆ.

ತೆಲಂಗಾಣದ ಹೈದರಾಬಾದ್‌ದಿಂದ ₹3 ಒಂದರಂತೆ 6,500 ಸೇವಂತಿಗೆ ಹೂ ಸಸಿಯನ್ನು ತಂದಿದ್ದಾರೆ. ಜುಲೈ ಮೊದಲ ವಾರದಲ್ಲಿ ಚನ್ನಾಗಿ ಹದ ಮಾಡಿದ 30 ಗುಂಟೆ ಪ್ರದೇಶದಲ್ಲಿ ಗಿಡದಿಂದ ಗಿಡಕ್ಕೆ ಒಂದು ಅಡಿ ಅಂತರ ಬಿಟ್ಟು ಸಸಿ ನಾಟಿ ಮಾಡಿದ್ದಾರೆ. ಕೊಟ್ಟಿಗೆ ಗೊಬ್ಬರ ಸೇರಿದಂತೆ ರಾಸಾಯನಿಕ ಗೊಬ್ಬರವೂ ಬಳಸಿದ್ದಾರೆ. ದಿನ ಬಿಟ್ಟು ದಿನಕ್ಕೆ ನೀರು ಹಾಯಿಸುತ್ತಾರೆ. ನಾಟಿ ಮಾಡಿದ ಬಳಿಕ ಮೂರು ತಿಂಗಳಲ್ಲಿ ಇಳುವರಿ ಕೈಗೆ ಲಭ್ಯವಾಗಿದೆ. ದೀಪಾವಳಿ ಹಬ್ಬದಲ್ಲಿ ಬೆಳೆ ಬರುವಂತೆ ನಾಟಿ ಮಾಡಿದ್ದಾರೆ.
ಭೂಮಿ ಹದ, ಸಸಿ ಖರೀದಿ, ಔಷಧಿ ಸಿಂಪಡಣೆ, ಸಾವಯವ ಗೊಬ್ಬರ, ಕಟಾವು ಸೇರಿದಂತೆ ಇನ್ನಿತರ ಸೇರಿ ಒಟ್ಟು ₹60 ಸಾವಿರ ಖರ್ಚು ತಗುಲಿದೆಯಂತೆ. ದೀಪಾವಳಿ ಹಬ್ಬದಿಂದ ಇಳುವರಿ ಬರಲು ಆರಂಭವಾಗಿದ್ದು, ದಿನಕ್ಕೆ 1 ರಿಂದ 2 ಕ್ವಿಂಟಾಲ್ ಹೂವನ್ನು ಜಗದೀಶ ಹೂವನ್ನು ಬೀದರ್, ಮನ್ನಾಏಖೇಳ್ಳಿ, ಉದಗೀರ್ ಮಾರುಕಟ್ಟೆಗೆ ಮಾರಾಟ ಮಾಡುತ್ತಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹80 ರಿಂದ ₹100 ದರ ಇದೆ. ಕಟಾವು, ಸಾಗಾಟ ಎಲ್ಲಾ ಖರ್ಚುಗಳನ್ನು ಕಳೆದು ತಿಂಗಳಿಗೆ ₹1 ಲಕ್ಷ ಆದಾಯ ಪಡೆಯುತ್ತಿದ್ದಾರೆ.
ʼಇದೇ ಮೊದಲ ಬಾರಿಗೆ ಹೂವು ಕೃಷಿ ಪ್ರಯತ್ನಿಸಿದ್ದೇವೆ. ಹೂ ಕೃಷಿ ಮಾಡುವುದು ಸುಲಭವಲ್ಲ, ನಷ್ಟವಾಗುತ್ತದೆ ಎಂದು ಬಹಳ ಜನ ಹೇಳಿದ್ದರು. ಆದರೆ, ಸಂಬಂಧಿಕರ ಪ್ರೋತ್ಸಾಹ ಜೊತೆಗೆ ತಾಯಿ ಶಕುಂತಲಾ ಗೊರನಳ್ಳಿಕರ್ ಹಾಗೂ ಸೋದರತ್ತೆ ಅವರು ಇದಕ್ಕೆ ಸಾಥ್ ನೀಡಿದ್ದಾರೆ. ಮೊದಲು ಕೃಷಿಯಿಂದ ನಾವು ಯಶಸ್ಸು ಗಳಿಸಬಹುದೆಂಬ ನಿರೀಕ್ಷೆ ಖುದ್ದು ನಮಗೇ ಇರಲಿಲ್ಲ. ಅಧಿಕ ಇಳುವರಿ ಬರುತ್ತಿರುವುದನ್ನು ಕಂಡ ಎಲ್ಲರೂ ಮೆಚ್ಚುಗೆಗೆ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ನಮ್ಮ ಉತ್ಸಾಹವೂ ಇಮ್ಮಡಿಯಾಗಿದೆʼ ಎಂದು ಜಗದೀಶ ಗೊರನಳ್ಳಿಕರ್ ಹೇಳುತ್ತಾರೆ.

ʼಜಿಲ್ಲೆಯಲ್ಲಿ ಹೂ ಮಾರುಕಟ್ಟೆ ಇದ್ದಿದ್ದರೆ ನಮ್ಮಲ್ಲಿನ ಸೇವಂತಿಗೆ ಇನ್ನೂ ಹೆಚ್ಚಿನ ಬೆಲೆ ದೊರೆಯುತ್ತಿತ್ತು. ಆದರೆ ಇಲ್ಲಿ ಸೂಕ್ತ ಹೂ ಮಾರುಕಟ್ಟೆ ಸಿಗುತ್ತಿಲ್ಲ. ಕೆ.ಜಿ.ಯೊಂದಕ್ಕೆ ಪ್ರಸ್ತುತ ₹80 ರೂ.ಇದೆ. ಹಬ್ಬ, ಹರಿದಿನಗಳು ಬಂದ ವೇಳೆ ದರ ಹೆಚ್ಚಾಗುತ್ತದೆ. ಹೀಗಾಗಿ ಬೀದರಿನ ಹೂವು ಅಂಗಡಿ ವರ್ತಕರಿಗೆ ಪ್ರತಿದಿನ ಮಾರಾಟ ಮಾಡುತ್ತಿದ್ದೇನೆʼ ಎಂದು ಹೇಳಿದರು.
ಕಡಿಮೆ ಅವಧಿ ಹಾಗೂ ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿಯನ್ನು ಬಿಳಿ ಸೇವಂತಿಗೆ ನೀಡುತ್ತದೆ. ಕಾಲಕಾಲಕ್ಕೆ ನೀರು ಹಾಯಿಸಿ, ವಾರಕ್ಕೊಮ್ಮೆ ಗೊಬ್ಬರ, ಕಳೆ ತೆಗೆಯುವುದು ಹಾಗೂ ಹೂ ಕತ್ತರಿಸಿದ ನಂತರ ಔಷಧಿ ಸಿಂಪಡಣೆ ಮಾಡಬೇಕು. ಎರಡ್ಮೂರು ಅಡಿ ಎತ್ತರ ಬೆಳೆದ ಸೇವಂತಿಗೆ ಗಿಡಗಳನ್ನು ಉತ್ತಮ ರೀತಿಯಿಂದ ನಿರ್ವಹಣೆ ಮಾಡಿ ಅಧಿಕ ಇಳುವರಿ ನಿರೀಕ್ಷಿಸಬಹುದು ಎನ್ನುವುದು ಅವರ ಅಭಿಮತ.
ಈ ಸುದ್ದಿ ಓದಿದ್ದೀರಾ? ಬೀದರ್ | ತೀವ್ರಗೊಂಡ ಕಾರಂಜಾ ಸಂತ್ರಸ್ತರ ಧರಣಿ : ಡಿ.18ರಂದು ಸಿಎಂ ನೇತೃತ್ವದಲ್ಲಿ ಸಭೆ
ʼಕಪ್ಪು, ಕೆಂಪು ಭೂಮಿಯಲ್ಲಿ ಸೇವಂತಿಗೆ ಬೇಸಾಯ ಮಾಡಬಹುದು. ನಾವು ತೊಗರಿ, ಸೋಯಾ, ಜೋಳ ಬೆಳೆಯುತ್ತೇವೆ. ಬೋರ್‌ವೆಲ್ ನೀರು ಇರುವುದರಿಂದ ಸ್ವಲ್ಪ ಜಮೀನಿನಲ್ಲಿ ಹೂ ಕೃಷಿಯತ್ತ ಮುಖ ಮಾಡಿದ್ದೇವೆ. ತೋಟದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದ ಹೂವು ಇದೆ. ಇನ್ನೂ ಒಂದು ತಿಂಗಳು ಹೂವು ಕಟಾವು ನಿರಂತರವಾಗಿ ನಡೆಯುತ್ತದೆ. ನಿರೀಕ್ಷೆಗಿಂತ ಹೆಚ್ಚಿನ ಆದಾಯ ಬರುತ್ತಿದೆ, ಮುಂದಿನ ವರ್ಷ ಗುಲಾಬಿ, ಚೆಂಡು ಹೂವು ಬೆಳೆಯಬೇಕೆಂದು ನಿರ್ಧರಿಸಿದ್ದೇವೆ ಎಂದು ರೈತ ಜಗದೀಶ ಖುಷಿ ಹಂಚಿಕೊಂಡರು.
ಯುವ ರೈತ ಜಗದೀಶ ಗೊರನಳ್ಳಿಕರ್ ಅವರೊಂದಿಗೆ ಮಾಹಿತಿ ತಿಳಿಯಲು ಮೊ.ಸಂಖ್ಯೆ : 7204832442

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.
ಸುಪರ್