ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಚರ್ಚಿಸಲು ನಮ್ಮ ಕಾಂಗ್ರೆಸ್ ಸರ್ಕಾರ ಸಿದ್ಧವಾಗಿದೆ. ಆದರೆ ಬಿಜೆಪಿಗೆ ಆ ಬಗ್ಗೆ ಚರ್ಚೆ ನಡೆಸುವುದು ಇಷ್ಟವಿಲ್ಲ. ಸುಮ್ಮನೇ ರಾಜಕಾರಣ ಮಾಡುವುದರಲ್ಲೇ ಕಾಲಹರಣ ಮಾಡುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಆರೋಪಿಸಿದ್ದಾರೆ.
ಈ ಬಗ್ಗೆ ಭಾನುವಾರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, “ಉತ್ತರ ಕರ್ನಾಟಕದ ನೀರಾವರಿ ಸಮಸ್ಯೆ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ನಾವು ಚರ್ಚೆ ನಡೆಸಿ ಒಂದು ಪರಿಹಾರವನ್ನು ಕಾಣಬೇಕು. ಆದರೆ ಬಿಜೆಪಿಯವರು ಮಾತ್ರ ಒಗ್ಗಟ್ಟಿನಲ್ಲಿಲ್ಲ. ಅವರಲ್ಲೇ ಪರಸ್ಪರ ಮನಸ್ತಾಪಗಳಿವೆ. ಈ ಸಮಸ್ಯೆ ಬಗ್ಗೆ ಚರ್ಚಿಸುವ ಮನಸೇ ಅವರಲ್ಲಿ ಇಲ್ಲ” ಎಂದರು.
ಇದನ್ನು ಓದಿದ್ದೀರಾ? ಪ್ರತಿಯೊಬ್ಬ ಕಾಂಗ್ರೆಸಿಗನೂ ಐತಿಹಾಸಿಕ ಬೆಳಗಾವಿ ಅಧಿವೇಶನ ಶತಮಾನೋತ್ಸವಕ್ಕೆ ಸಾಕ್ಷಿಯಾಗಲಿ: ಡಿ ಕೆ ಶಿವಕುಮಾರ್
“ನಮ್ಮ ಸರ್ಕಾರ ಯೋಜನೆ ಜಾರಿಗೆ ಬದ್ಧವಿದೆ. ಈಗಾಗಲೇ ಟೆಂಡರ್ ಕರೆಯುವ ಎಲ್ಲ ಸಿದ್ಧತೆ ಮಾಡಲಾಗಿದೆ. ಈ ಯೋಜನೆಗೆ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಅನುಮತಿ ನೀಡುವ ಭರವಸೆ ನಮಗಿದೆ. ಅನುಮತಿ ದೊರೆತ ಕೂಡಲೇ ಕಾಮಗಾರಿ ಪ್ರಾರಂಭಿಸಲಾಗುವುದು” ಎಂದು ತಿಳಿಸಿದರು.
“ಉತ್ತರ ಕರ್ನಾಟಕದ ನೀರಾವರಿ ಸಮಸ್ಯೆ ಯೋಜನೆ ಅನುಷ್ಠಾನದ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಂಸದ ಜಗದೀಶ್ ಶೆಟ್ಟರ್ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಯೋಜನೆ ಪ್ರಕ್ರಿಯೆಯ ಪ್ರತಿಯೊಂದು ಹಂತವನ್ನೂ ಅವರು ಸಂಭ್ರಮಿಸಿದ್ದರು. ನಾವು ಅವರನ್ನೂ ಭೇಟಿ ಮಾಡಿ ಮನವಿ ಮಾಡಿದ್ದೆವು. ಅವರೂ ಕೂಡಾ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೆರಬೇಕು” ಎಂದು ಡಿಕೆಶಿ ಅಭಿಪ್ರಾಯಿಸಿದರು.
