ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಪರಿಚಲನೆಯಾಗುತ್ತಿದ್ದು, ಕರಾವಳಿ ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದೆ. ತಮಿಳುನಾಡಿನಲ್ಲಿ ಸುರಿದ ಭಾರೀ ಮಳೆಗೆ ಪ್ರವಾಹ ಉಂಟಾಗಿದ್ದು, ಮರಿ ಆನೆಯೊಂದು ಕೊಚ್ಚಿ ಹೋಗಿ, ಸಾವನ್ನಪ್ಪಿರುವ ಘಟನೆ ಕುಟ್ರಾಲಂ ಜಲಪಾತದ ಬಳಿ ನಡೆದಿದೆ.
ಕುರ್ಟಾಲಂ ಬೆಟ್ಟಗಳ ಶ್ರೇಣಿಯಲ್ಲಿ ಭಾರೀ ಮಳೆಯಾಗಿದ್ದು, ಪ್ರವಾಹ ಉಂಟಾಗಿದೆ. ಪ್ರವಾಹದಲ್ಲಿ ಮರಿ ಆನೆಯೊಂದು ಕೊಚ್ಚಿಹೋಗಿದೆ. ಕುರ್ಟಾಲಂ ಮುಖ್ಯ ಜಲಪಾತದಿಂದ ಬಿದ್ದು, ಸಾವನ್ನಪ್ಪಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಆನೆಯ ಮೃತದೇಹವನ್ನು ಜಲಪಾತದಿಂದ ಹೊರತೆಗೆದಿದ್ದಾರೆ. ಸುಮಾರು ಏಳರಿಂದ ಎಂಟು ವರ್ಷದ ಆನೆ ಮೃತಪಟ್ಟಿದೆ. ಮರಣೋತ್ತರ ಪರೀಕ್ಷೆಯ ನಂತರ ಆನೆಯ ಮೃತದೇಹವನ್ನು ಹೂಳುವ ಪ್ರಕ್ರಿಯೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುಟ್ರಾಲಂನ ಎಲ್ಲಾ ಜಲಪಾತಗಳಲ್ಲಿ ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಸಚಿವ ಕೆಕೆಎಸ್‌ಎಸ್‌ಆರ್ ರಾಮಚಂದ್ರನ್ ಅವರು ತೆಂಕಶಿ ಜಿಲ್ಲೆಯಲ್ಲಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರವಾಹದ ಸಂದರ್ಭದಲ್ಲಿ ಜನರನ್ನು ರಕ್ಷಿಸಲು 25 ವಿಪತ್ತು ರಕ್ಷಣಾ ಸಿಬ್ಬಂದಿಯ ತಂಡ ಸಿದ್ಧವಾಗಿದೆ ಎಂದು ಅವರು ಹೇಳಿದ್ದಾರೆ. ವಡಕರೈನ ಅನುಮಾನ್ ನದಿ ತೀರದಲ್ಲಿ ವಾಸಿಸುವ 70 ನಿವಾಸಿಗಳನ್ನು ಪರಿಹಾರ ಶಿಬಿರದಲ್ಲಿ ಇರಿಸಲಾಗಿದೆ.