ಪದವಿಪೂರ್ವ ಮಹಾವಿದ್ಯಾಲಯಗಳ ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ತಂಡಕ್ಕೆ ಆಯ್ಕೆಯಾಗಿದ್ದ ದಲಿತ ವಿದ್ಯಾರ್ಥಿಯನ್ನು ಕೈಡಲಾಗಿದೆ. ರಾಜಕೀಯ ಪ್ರಭಾವದಿಂದ ದಲಿತ ವಿದ್ಯಾರ್ಥಿಯನ್ನು ತಂಡದಿಂದ ಹೊರಹಾಕಿ ಬೇರೊಬ್ಬ ವಿದ್ಯಾರ್ಥಿಯನ್ನು ಸೇರಿಸಿಕೊಳ್ಳಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಆರೋಪಿಸಿದೆ.
ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ದಸಂಸ ಮುಖಂಡ ಮಂಜುನಾಥ್ ಗಿಳಿಯಾರ್, ”ಉಡುಪಿ ಜಿಲ್ಲೆಯ ದಲಿತ ವಿದ್ಯಾರ್ಥಿ ಸುಜಿತ್‌ನನ್ನು ತಂಡದಿಂದ ಹೊರಗಿಟ್ಟು, ಜಿಲ್ಲಾಡಳಿತ ದ್ರೋಹ ಮಾಡಿದೆ. ಸುಜಿತ್ ಅವರು ತಾಳಿಕೋಟೆಯಲ್ಲಿ ನಡೆದ ಪಂದ್ಯಾವಳಿಯಲ್ಲಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿದ್ದರು. ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ತಾಳಿಕೋಟೆಯಲ್ಲಿ ನಡೆದ ಪಂದ್ಯಾಕೂಟದಲ್ಲಿ ಏಳು ಪಂದ್ಯದಲ್ಲಿ ಭಾಗವಹಿಸಿದ್ದ ಸುಜಿತ್, ಫೈನಲ್ ಪಂದ್ಯದ ಸಮಯದಲ್ಲಿ ಕೈಗೆ ಪಟ್ಟಾಗಿ ಆಟದಿಂದ ಹೊರಗುಳಿದಿದ್ದರು. ಬದಲಿ ಆಟಗಾರ ಆಡಿದ್ದು, ಸುಜಿತ್ ಪ್ರತಿನಿಧಿಸಿದ್ದ ತಂಡ ಗೆಲುವು ಸಾಧಿಸಿತ್ತು” ಎಂದು ವಿವರಿಸಿದ್ದಾರೆ.
“ರಾಷ್ಟ್ರ ಮಟ್ಟದ ಪಂದ್ಯಕೂಟಕ್ಕೆ ರಾಜ್ಯ ಮಟ್ಟದಲ್ಲಿ ಗೆದ್ದ ತಂಡದ ಅರು ಆಟಗಾರರು ಇರಬೇಕೆಂದು ನಿಮಯಗಳು ಹೇಳುತ್ತಿವೆ. ಎಲ್ಲ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆರು ಮಂದಿಯನ್ನು ಗೆದ್ದ ತಂಡದಿಂದ ಆರಿಸಲಾಗುತ್ತದೆ. ರಾಷ್ಟ್ರೀಯ ಮಟ್ಟದ ಪಂದ್ಯಾವಳಿಯ ಆಯ್ಕೆ ಪಟ್ಟಿಯಲ್ಲಿ ಸುಜಿತ್ ಹೆಸರು ಇತ್ತು. ಆದರೆ, ಈಗ ರಾಜಕೀಯ ಪ್ರಭಾವದಿಂದ ಬೇರೊಬ್ಬನನ್ನು ಆಯ್ಕೆ ಮಾಡಿ, ಸುಜಿತ್ ಹೆಸರು ಕೈಬಿಡಲಾಗಿದೆ” ಎಂದು ಆರೋಪಿಸಿದ್ದಾರೆ.

“ಡಿಸೆಂಬರ್ 22ರಂದು ರಾಷ್ಟ್ರ ಮಟ್ಟದ ಪಂದ್ಯಾಕೂಟ ತೆಲಂಗಾಣದಲ್ಲಿ ನಡೆಯಲಿದೆ. ಆದಷ್ಟು ಶೀಘ್ರವೇ ಸಂಬಂಧ ಪಟ್ಟ ಇಲಾಖೆಯನ್ನು ಸಂಪರ್ಕಿಸಿ ವಿದ್ಯಾರ್ಥಿಗೆ ನ್ಯಾಯ ಕೊಡಿಸಲು ಪ್ರಯತ್ನಿಸುತ್ತೇವೆ” ಎಂದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ದಸಂಸ ಮುಖಂಡ ಸುಂದರ್ ಮಾಸ್ತರ್, ಶ್ಯಾಮ್’ರಾಜ್ ಬಿರ್ತಿ, ಅಣ್ಣಪ್ಪ ನಕ್ರೆ,ಶ್ರೀಧರ್ ಬೈಲೂರು, ಸುಜಿತ್ ಬೈಲೂರು, ಶಿವನಂದ ಸೇರಿದಂತೆ ಹಲವರು ಉಪಸ್ಥಿತರಿದ್ದರು.