ವರ್ತಮಾನದ ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರಶಸ್ತಿಗಳು ಮೌಲ್ಯ ಕಳೆದುಕೊಂಡಿವೆ ಎಂದು ಕವಿ, ಕಥೆಗಾರ ಹಾವೇರಿಯ ಲಿಂಗರಾಜ ಸೊಟ್ಟಪ್ಪನವರ ಅಭಿಪ್ರಾಯಪಟ್ಟರು.
ಹೂವಿನ ಹಡಗಲಿ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಭಾನುವಾರ ಸಿಂಚನ ಪ್ರಕಾಶನ, ಮೇ ಸಾಹಿತ್ಯ ಮೇಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 2021-22ನೇ ಸಾಲಿನ ಸಿಂಚನ ಕಾವ್ಯ ಪ್ರಶಸ್ತಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ʼಪ್ರಸ್ತುತ ದಿನಗಳಲ್ಲಿ ಪ್ರಶಸ್ತಿಗಾಗಿಯೇ ಬರೆಯುವ ಒಂದು ವಲಯ ಹುಟ್ಟಿಕೊಂಡಿದೆ. ಬಹುಮಾನದ ಮೊತ್ತ ಹೆಚ್ಚಿಸಿ ಅದರ ಮೌಲ್ಯವನ್ನು ಕಡಿಮೆ ಮಾಡುತ್ತಿದ್ದಾರೆ. ಲಾಬಿ, ಸ್ವಜನಪಕ್ಷಪಾತ ಶಿಫಾರಸ್ಸು ಪ್ರಮಾಣ ಸಾಹಿತ್ಯದಲ್ಲಿ ಹೆಚ್ಚುತ್ತಿದೆ. ಬರೆದಿರುವ ಕಥೆ, ಕವಿತೆಗಳಿಗೆ ಓದುಗರೇ ಆಸ್ತಿ ಎನ್ನುವ ಭಾವದೊಂದಿಗೆ ಜನರ ನೋವು ಸಂಕಷ್ಟಗಳಿಗೆ ಲೇಖಕರು ಸ್ಪಂದಿಸಬೇಕು ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸುತ್ತದೆʼ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಎಸ್ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಗ್ರಶ್ರೇಣಿಯಲ್ಲಿ ಪಾಸಾದ ತುಂಗಭದ್ರಾ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಬೀದರ್ | ʼಸೇವಂತಿಗೆʼ ಕೃಷಿಯಲ್ಲಿ ಯಶಸ್ಸು ಕಂಡ ಯುವ ರೈತ : ತಿಂಗಳಿಗೆ ಒಂದು ಲಕ್ಷ ಆದಾಯ!
ಕಾರ್ಯಕ್ರಮದಲ್ಲಿ ಸಾಹಿತಿ ಪ್ರಕಾಶ್ ಮಲ್ಕಿಒಡೆಯರ್, ಮಲ್ಲಿಗೆ ಪ್ರಕಾಶನದ ಖಾದರ ಬಾಷಾ, ಭಾರತೀಯ ಸರ್ವಧರ್ಮ ರಕ್ಷಣಾ ವೇದಿಕೆಯ ಮುಖಂಡ ಖಾಜಾ ಹುಸೇನ್, ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಶಿವಲಿಂಗಪ್ಪ, ಸರ್ಕಾರಿ ನೌಕರರ ಸಂಘದ ನಿರ್ದೇಶಕ ಮಂಜುನಾಥ ಬೋವಿ, ಸಿಂಚನ ಪ್ರಕಾಶನದ ಸವಿತಾ ಅಂಗಡಿ ಹಾಗೂ ಇತರರು ಉಪಸ್ಥಿತರಿದ್ದರು.
