ಮಕ್ಕಳು ಕೇವಲ ಅಂಕಗಳಿಸುವ ಯಂತ್ರಗಳಂತೆ ಶಿಕ್ಷಣ ಕಲಿತರೆ ಸಾಲದು, ಸಮಗ್ರವಾಗಿ ಶೈಕ್ಷಣಿಕ, ಸಾಮಾಜಿಕ ಸೇರಿದಂತೆ ಎಲ್ಲ ರಂಗಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ಒಂದು ಉತ್ತಮ ಶಿಕ್ಷಣ ಕಲಿಯಬೇಕು ಎಂದು ಹಾಸನ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಕಾಂತರಾಜು ತಿಳಿಸಿದರು.
ಹಾಸನ ನಗರದ 80 ಫೀಟ್ ರಸ್ತೆ ಬಳಿ ಇರುವ ತಾಜ್ ಕನ್ವೆನ್ಷನ್ ಹಾಲ್‌ನಲ್ಲಿ ಬೆಂಗಳೂರಿನ ಕರ್ನಾಟಕ ಉರ್ದು ಅಕಾಡೆಮಿ, ಹಾಸನ ಜಿಲ್ಲಾ ಮಟ್ಟದ ಸರ್ಕಾರಿ ಹಾಗೂ ಸರ್ಕಾರೇತರ ಉರ್ದು ಶಾಲೆಗಳ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಅಖಿಲ ಭಾರತ ಮಟ್ಟದ ಕವಿಗೋಷ್ಠಿ ಮುಶಾಯಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣದ ಜತೆಗೆ ಸಂಸ್ಕಾರವನ್ನೂ ಕೂಡ ಕಲಿಯಬೇಕು. ಸಂಸ್ಕಾರದ ನಿಟ್ಟಿನಲ್ಲಿ ಮಕ್ಕಳು ಓದುವ ಅಭ್ಯಾಸ ಇಂದು ಕಡಿಮೆಯಾಗುತ್ತಿದೆ. ಪ್ರಾಪಂಚಿಕ ವಿಷಯಗಳ ಬಗ್ಗೆ ಅರಿವು ಹೊಂದಬೇಕು. ಸಮಾನತೆ, ಭ್ರಾತೃತ್ವದ ಜತೆಗೆ ಸಮಾಜದಲ್ಲಿ ಶಿಕ್ಷಣದಿಂದ ಉನ್ನತವಾದ ಹುದ್ದೆಗಳನ್ನು ಅಲಂಕರಿಸಿ ಸಮಾಜಕ್ಕೆ ಕೊಡುಗೆ ನೀಡಬೇಕು” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಜನಪ್ರಿಯ ಆಸ್ಪತ್ರೆಯ ಮುಖ್ಯಸ್ಥ ಅಬ್ದುಲ್ ಬಶೀರ್ ಮಾತನಾಡಿ, “ಉರ್ದು ಕವಿಗೋಷ್ಠಿ ಕಾರ್ಯಕ್ರಮ ಆಯೋಜನೆಗೊಂಡಿರುವುದು ತುಂಬಾ ಸಂತೋಷದ ವಿಷಯ. ಹಾಗೆಯೇ ಮಕ್ಕಳು ಈ ಕಾರ್ಯಕ್ರಮದಲ್ಲಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸಬೇಕು ಮತ್ತು ಓದುವ ಅಭ್ಯಾಸವನ್ನು ಹೆಚ್ಚೆಚ್ಚು ಬೆಳೆಸಿಕೊಳ್ಳಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ವಿಜಯನಗರ | ʼತಿಂಡಿಗೆ ಬಂದ ತುಂಡೇರಾಯʼ ನಾಟಕ ಪ್ರದರ್ಶನ
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬೆಂಗಳೂರಿನ ಕರ್ನಾಟಕ ಉರ್ದು ಅಕಾಡೆಮಿ ಸಂಯೋಜಕ ಮತ್ತು ಸದಸ್ಯ ಡಾ. ಅಕ್ಟರ್ ಸೈಯಿದಾ ಕಾನಂ ಮಾತನಾಡಿ, “ಈ ರೀತಿಯ ಕಾರ್ಯಕ್ರಮಗಳನ್ನು ಜಿಲ್ಲಾಮಟ್ಟದಲ್ಲಿ ಆಯೋಜನೆ ಮಾಡಿರುವುದು ನಮಗೆ ತುಂಬಾ ಸಂತೋಷ ತಂದಿದೆ. ಇಂತಹ ಕಾರ್ಯಕ್ರಮಗಳಿಂದ ಮಕ್ಕಳಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಉಪಯುಕ್ತವಾಗಿದೆ. ಈ ನಿಟ್ಟಿನಲ್ಲಿ ಮಕ್ಕಳು ಕಾರ್ಯಕ್ರಮದ ಸಂಪೂರ್ಣ ಉಪಯೋಗ ಪಡೆದುಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು” ಎಂದು ಕೋರಿದರು.