ಡಿಎಲ್ ನವೀಕರಣ ಮಾಡಿಸಲು ವೈದ್ಯಕೀಯ ಪ್ರಮಾಣಪತ್ರ ಕೋರಿ ಜಯದೇವ್ ಎಂಬುವವರು ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಪರೀಕ್ಷೆಗೊಳಗಾಗಿದ್ದು, ಪ್ರಮಾಣಪತ್ರಕ್ಕೆ ಸಹಿಮಾಡಿ ವಿತರಿಸುವ ವೇಳೆ ವೈದ್ಯಾಧಿಕಾರಿ ಡಾ. ಬಿ ಜಿ ಕುಮಾರಸ್ವಾಮಿ ₹100 ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆಂಬ ಆರೋಪ ಕೇಳಿಬಂದಿದೆ.
ಮಾಗಡಿ ಜಯದೇವ ಎಂಬುವವರು ಆರೋಪ ಮಾಡಿದ್ದು, ಪ್ರಮಾಣ ಪತ್ರಕ್ಕೆ ₹100 ಲಂಚ ಕೇಳಿದ ಆಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.

“27 ವರ್ಷಗಳ ಸರ್ವೀಸ್‌ನಲ್ಲಿ ಯಾರ ಕೈಲೂ ಸರ್ಕಾರಕ್ಕೆ ಹಣ ಕಟ್ಟಿಸಿಲ್ಲ. ಗೆಜೆಟೆಡ್ ಆಫೀಸರ್‌ಗೆ ₹100 ಬೆಲೆ ಇಲ್ಲವೇ?, ಮೇಲಿನಿಂದ ಕೆಳಗಿನವರೆಗೆ ಎಲ್ಲರೂ ಲಂಚ ತೆಗೆದುಕೊಳ್ಳುತ್ತಾರೆ. ನಾನು ಮಾತ್ರ ಹರಿಶ್ಚಂದ್ರನಂತೆ ಕುಳಿತುಕೊಂಡಿರುವುದು ಸರಿಯೇ?” ಎಂಬಿತ್ಯಾದಿ ನಡೆಯುವ ಸಂಭಾಷಣೆ ಆಡಿಯೋದಲ್ಲಿ ದಾಖಲಾಗಿದೆ.
“ಹಿರಿಯ ತಜ್ಞರು ಹಾಗೂ ವೈದ್ಯರೂ ಆಗಿರುವಂತಹ ಡಾ. ಬಿ ಜಿ ಕುಮಾರಸ್ವಾಮಿ ಸಾರ್ವಜನಿಕರ ಬಳಿ ನಿತ್ಯವೂ ₹100 ರಿಂದ ₹500 ರೂಪಾಯಿಗಳವರೆಗೆ ಬಹಿರಂಗವಾಗಿ, ನಿಸ್ಸಂಕೋಚವಾಗಿ ಡಿಮ್ಯಾಂಡ್ ಮಾಡಿ ಲಂಚ ಕೇಳುತ್ತಾರೆ. ಇವರು ಸಾರ್ವಜನಿಕ ಸೇವೆಯಲ್ಲಿ ಅಧಿಕಾರಿ. ಸರ್ಕಾರ ₹2 ಲಕ್ಷಕ್ಕೂ ಅಧಿಕವಾಗಿ ಸಂಬಳ ನೀಡುತ್ತದೆ. ಇದರ ಜ್ಞಾನವೇ ಇಲ್ಲದೆ ಕೂಲಿ ಮಾಡುವ ಜನರ ಬಳಿ ಈ ರೀತಿ ಲಂಚದ ಮೂಲಕ ಹಣವನ್ನು ವಸೂಲಿ ಮಾಡುತ್ತಿರುವುದು ಭ್ರಷ್ಟಾಚಾರವಾಗಿದೆ” ಎಂದು ಮಾಗಡಿ ಜಯದೇವ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಮಾಣಪತ್ರ ಮಾಡಿಸಲು ಆಸ್ಪತ್ರೆಗೆ ಬಂದ ವ್ಯಕ್ತಿಯೋರ್ವರಿಂದ ಲಂಚ ಕೇಳಿದ್ದು, ಮಹಿಳಾ ರೋಗಿಗಳ ಬಳಿಯೂ ಅಸಭ್ಯ ವರ್ತನೆ ತೋರಿದ ಆರೋಪದ ಮೇಲೆ ರಾಮನಗರ ಜಿಲ್ಲಾ ಹಿರಿಯ ವೈದ್ಯಾಧಿಕಾರಿ ಡಾ ಬಿ ಜಿ ಕುಮಾರಸ್ವಾಮಿ ಮೇಲೆ ಸಾಮಾಜಿಕ ಹೋರಾಟಗಾರ ಸ್ವಾಮಿ ಎಚ್ ಎಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಇದನ್ನು ನೋಡಿದ್ದೀರಾ? ಸಮ್ಮೇಳನದಲ್ಲಿ ಬಾಡೂಟ: 5 ರೂಪಾಯಿ ಡಾಕ್ಟರ್ ಹೇಳೋದೇನು?
ಡಾ ಬಿ ಜಿ ಕುಮಾರಸ್ವಾಮಿ ರೋಗಿಗಳಿಂದ ಲಂಚ ಕೇಳುತ್ತಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದನ್ನು ಆಧರಿಸಿ ರಾಮನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಸ್ವಾಮಿ ದೂರು ಸಲ್ಲಿಸಿದ್ದಾರೆ.
“ಮಹಿಳಾ ರೋಗಿಗಳ ಜತೆಗೆ ಅನುಚಿತ ವರ್ತನೆ ತೋರುತ್ತಾನೆ. ಮುಜುಗರಕ್ಕೆ ಈಡಾಗುವಂತೆ ಅಸಭ್ಯವಾಗಿ ಮಾತನಾಡಿ ಚಿಕಿತ್ಸೆ ನೀಡುವುದು ಈತನ ಚಾಳಿಯಾಗಿದೆ. ಈ ದುರ್ನಡತೆ ಹಾಗೂ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಡಾ. ಬಿ ಜಿ ಕುಮಾರಸ್ವಾಮಿ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು” ಎಂದು ಆಗ್ರಹಿಸಿದ್ದಾರೆ.
ರಾಮನಗರ ಜಿಲ್ಲಾ ಆಸ್ಪತ್ರೆಯ ಅವ್ಯವಸ್ಥೆಗಳ ಬಗ್ಗೆ ಶೀಘ್ರವೇ ಇಲಾಖೆ ತನಿಖೆ ನಡೆಸಿ ತಪ್ಪಿತಸ್ಥ ವೈದ್ಯನಿಗೆ ಶಿಕ್ಷೆ ನೀಡಬೇಕು. ಮುಂದಿನ ದಿನಗಳಲ್ಲಿ ಇಂತಹ ಅಧಿಕಾರಿಗಳಿಂದ ಯಾವುದೇ ರೀತಿಯ ತಪ್ಪುಗಳು ನಡೆಯದಂತೆ ,ಇತರರಿಗೆ ಮಾದರಿಯಾಗುವಂತೆ ತಪ್ಪಿತಸ್ಥನಿಗೆ ದಂಡನೆ ನೀಡಬೇಕು” ಎಂದು ಸ್ವಾಮಿ ತಮ್ಮ ದೂರಿನಲ್ಲಿ ಒತ್ತಾಯಿಸಿದ್ದಾರೆ.