ಗ್ರಾಹಕರ ಬಳಕೆಗೆ ಬಾರದ ಎಟಿಎಂ ಯಂತ್ರ ನಿರ್ವಹಣೆ ಬಗ್ಗೆ ಎಸ್ ಬಿಐ ಬ್ಯಾಂಕ್ ಅಧಿಕಾರಿಗಳು ಅಸಡ್ಡೆ ಉತ್ತರ ನೀಡಿ ಗ್ರಾಹಕರನ್ನು ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಈ ಜೊತೆಗೆ ಬ್ಯಾಂಕ್ ಸಿಬ್ಬಂದಿಗಳಲ್ಲಿ ಬಹುತೇಕ ಕನ್ನಡ ಬಾರದ ಸಿಬ್ಬಂದಿಗಳಿದ್ದು ಗ್ರಾಮೀಣ ಗ್ರಾಹಕರಿಗೆ ಸರಿಯಾದ ಉತ್ತರ ಸಿಗದೆ ಬೇಸರ ವ್ಯಕ್ತಪಡಿಸುತ್ತಿರುವ ಘಟನೆ ಸೇರಿದಂತೆ ಬಹಳ ವಿಚಾರದಲ್ಲಿ ರೋಸಿಹೋದ ಗ್ರಾಹಕರ ಪರವಾಗಿ ಕನ್ನಡ ವಿಜಯಸೇನೆ ಸಂಘಟನೆಯ ಪದಾಧಿಕಾರಿಗಳು ಸೋಮವಾರ ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿದರು.
ಬೆಳಿಗ್ಗೆ ಬ್ಯಾಂಕ್ ಮುಂದೆ ಜಮಾಯಿಸಿದ ವಿಜಯಸೇನೆ ಕಾರ್ಯಕರ್ತರು ಬ್ಯಾಂಕ್ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಮೇಲಾಧಿಕಾರಿ ಎಜಿಎಂ ಸ್ಥಳಕ್ಕೆ ಬರಬೇಕು ಎಂದು ಆಗ್ರಹಿಸಿ ಧರಣಿ ಮುಂದುವರೆಸಿದರು. ಗುಬ್ಬಿ ಪಟ್ಟಣದಲ್ಲಿ ಎರಡು ಎಸ್ ಬಿಐ ಬ್ಯಾಂಕ್ ಶಾಖೆಗಳಿದ್ದು ಪೊಲೀಸ್ ಠಾಣೆ ಪಕ್ಕದಲ್ಲಿ ಹೊಸ ಶಾಖೆ ಆರಂಭವಾಗಿ ನಾಲ್ಕು ವರ್ಷ ಕಳೆದರೂ ಇಲ್ಲಿನ ಎಟಿಎಂ ದಿನ ಪೂರ್ತಿ ಕೆಲಸ ಮಾಡಿಲ್ಲ. ವಾರಾಂತ್ಯದ ರಜೆ ಹಾಗೂ ಹಬ್ಬಗಳ ರಜೆಯಲ್ಲಿ ಎಟಿಎಂ ಸಂಪೂರ್ಣ ಬಾಗಿಲು ಮುಚ್ಚಲಾಗುತ್ತಿದೆ. ಡಿಜಿಟಲ್ ಯುಗದಲ್ಲಿ ಕ್ಯಾಶ್ ಲೆಸ್ ವ್ಯವಹಾರ ಮಾಡುವ ಮಾತುಗಳನ್ನು ಹೇಳುವ ಬ್ಯಾಂಕ್ ಅಧಿಕಾರಿಗಳು ಅವರ ಎಟಿಎಂ ಬಾಗಿಲು ಹಾಕುತ್ತಿರುವುದು ವಿಷಾದನೀಯ. ಈ ಹಿನ್ನಲೆ ಬ್ಯಾಂಕ್ ಮೇಲಾಧಿಕಾರಿಗಳು ಸ್ಥಳಕ್ಕೆ ಬಂದು ಗ್ರಾಹಕರ ಕಷ್ಟ ಆಲಿಸಬೇಕು ಎಂದು ಕನ್ನಡ ವಿಜಯಸೇನೆ ತಾಲ್ಲೂಕು ಅಧ್ಯಕ್ಷ ವಿನಯ್ ಆಗ್ರಹಿಸಿದರು.
ಎಟಿಎಂ ಯಂತ್ರಗಳಲ್ಲಿ ಹಣದ ವ್ಯವಹಾರ ಮಾಡಲಾಗದೆ ಸ್ಥಳೀಯರು ಸಾಕಷ್ಟು ಪರದಾಡಿದ್ದಾರೆ. ಆಸ್ಪತ್ರೆಯ ವೆಚ್ಚಕ್ಕೆ ಡಿಪಾಸಿಟ್ ಮಾಡಲು ಹಲವು ಮಂದಿ ಎಟಿಎಂ ಹುಡುಕಿ ಅಲೆದಾಡಿದ್ದು ಪ್ರತಿ ವಾರದ ಅಂತ್ಯದಲ್ಲಿ ಮಾಮೂಲಿಯಾಗಿ ಕಾಣುತ್ತಿದೆ. ಡಿಜಿಟಲ್ ವ್ಯವಹಾರ ಎಂದು ಹೇಳುವ ಬ್ಯಾಂಕ್ ಅಧಿಕಾರಿಗಳ ಬಳಿ ಪ್ರಶ್ನಿಸಿದರೆ ಎಟಿಎಂ ನಿರ್ವಹಣೆ ಮಾಡುವ ಏಜೆನ್ಸಿ ಹೆಸರು ಹೇಳಿ ಜಾಣ ಮೌನ ವಹಿಸುತ್ತಾರೆ. ಯಂತ್ರಗಳು ಕೆಟ್ಟು ನಿಂತರೆ ಕೂಡಲೇ ದುರಸ್ಥಿ ಮಾಡದ ಏಜೆನ್ಸಿ ಗ್ರಾಹಕರಿಂದ ದೂರು ಬಂದ ಮೇಲೂ ಇತ್ತ ಕಡೆ ಗಮನಹರಿಸುವುದಿಲ್ಲ. ಬ್ಯಾಂಕ್ ಅಧಿಕಾರಿಗಳು ಏಜೆನ್ಸಿಗೆ ಕೂಡಲೇ ದುರಸ್ಥಿಗೆ ಕರೆಯುವ ಜವಾಬ್ದಾರಿ ಹೊರಬೇಕಿದೆ ಎಂದು ವಿಜಯಸೇನೆ ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಜಿ.ಎಸ್.ಮಂಜುನಾಥ್ ಒತ್ತಾಯಿಸಿದರು.
ಪ್ರತಿಭಟನೆ ವಿಚಾರ ತಿಳಿದ ಬಳಿಕ ಎಚ್ಚೆತ್ತ ಅಧಿಕಾರಿಗಳಿಂದ ಎಟಿಎಂ ದುರಸ್ಥಿ ಕೆಲಸ ಆರಂಭಿಸಿ ದಿನದ 24 ಗಂಟೆ ಕಾರ್ಯ ನಿರ್ವಹಿಸುವ ವಾಗ್ದಾನ ಬಳಿಕ ವಿಜಯಸೇನೆ ಪ್ರತಿಭಟನೆ ಸ್ಥಗಿತ ಗೊಳಿಸಿದರು.
ಪ್ರತಿಭಟನೆಯಲ್ಲಿ ವಿಜಯಸೇನೆ ಯುವ ಘಟಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಾಸು ಅರಸ್ ಗೌಡ, ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಸುರಿಗೇನಹಳ್ಳಿ ರಂಗನಾಥ್, ಸೇನೆಯ ಸದಸ್ಯರಾದ ರಮೇಶ್ ಜಿಡ್ರಾ, ತೇಜಸ್, ಸಜ್ಜು, ಶ್ರೀಧರ್, ಗೌತಮ್, ಯಶಸ್ಸು, ಮದನ್, ಕುಶಲ್, ಮಹಮದ್ ಗೌಸ್,
