ಮಲ್ಲಾಬಾದ ಏತ ನೀರಾವರಿ ಕಾಮಗಾರಿ ಕೂಡಲೇ ಪುನರಾರಂಭಿಸಬೇಕೆಂದು ಆಗ್ರಹಿಸಿ ಮಲ್ಲಬಾದ ಏತ ನೀರಾವರಿ ರೈತ ಹೋರಾಟ ಸಮಿತಿ ನೇತ್ರತ್ವದಲ್ಲಿ ನೂರಾರು ರೈತರು, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಕಲಬುರಗಿ- ರಾಯಚೂರು ರಾಷ್ಟ್ರೀಯ ಹೆದ್ದಾರಿ ತಡೆದು ಧರಣಿ ನಡೆಸಿದರು.
ಜೇವರ್ಗಿ ತಾಲ್ಲೂಕಿನ ಯಳವಾರ ವೃತದಿಂದ ಎತ್ತಿನ ಬಂಡಿಗಳ ಮೆರವಣಿಗೆ ಮೂಲಕ ಚಿಗರಳಿ ಕ್ರಾಸ್ ಬಳಿ ಬಂದ ಪ್ರತಿಭಟನಾಕಾರರು ಸುಮಾರು ನಾಲ್ಕು ಗಂಟೆಗೂ ಅಧಿಕ ಕಾಲ ರಸ್ತೆ ಬಂದ್ ಮಾಡಿ ಧರಣಿ ನಡೆಸಿ ಕೆಕೆಆರ್‌ಡಿಬಿ ಅಧ್ಯಕ್ಷರೂ ಆದ ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಲ್ಲಬಾದ ಏತ ನೀರಾವರಿ ರೈತ ಹೋರಾಟ ಸಮಿತಿಯ ಸಂಚಾಲಕ ಮಹೇಶಕುಮಾರ್ ರಾಠೋಡ್ ಮಾತನಾಡಿ, ʼನಾಲ್ಕು ದಶಕದ ಹೋರಾಟದ ಫಲವಾಗಿ ಆರಂಭಗೊಂಡಿರುವ ಮಲ್ಲಾಬಾದ ಏತ ನೀರಾವರಿ ಯೋಜನೆಯಿಂದ ಸುತ್ತಲಿನ 60ಕ್ಕೂ ಹೆಚ್ಚಿನ ಗ್ರಾಮಗಳ ರೈತರಿಗೆ ಅನುಕೂಲವಾಗಲಿದೆ. ಆದರೆ ಕಾಮಗಾರಿ ಸ್ಥಗಿತಗೊಂಡಿದೆʼ ಎಂದರು.
ʼಯೋಜನೆಗೆ 330.40 ಕೋಟಿ ರೂ. ಕಾಮಗಾರಿಗೆ ಅನುಮೋದನೆ ಕೊಡಲಾಗಿದೆ, ಇದೀಗ ಅನುಮೋದನೆ ಕೊಟ್ಟು ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸುವಂತೆ ತೀರ್ಮಾನ ಕೈಗೊಂಡಿದ್ದರೂ ಕಾಂಗ್ರೆಸ್ ನೇತ್ರತ್ವದ ಸರ್ಕಾರ ಅಧಿಕಾರಕ್ಕೇರಿದ ಮೇಲೆ ಕೆಲಸ ಪ್ರಾರಂಭಿಸದೇ ಇಲಾಖೆಯ ಸುತ್ತೋಲೆಯಿಂದ ಅದನ್ನು ಸ್ಥಗಿತಗೊಳಿಸಲಾಗಿದೆʼ ಎಂದು ಕಿಡಿಕಾರಿದರು.

ಸರಕಾರಕ್ಕೆ ಮತ್ತು ಶಾಸಕರಿಗೆ ಹಲವು ಬಾರಿ ಮನವಿ ಮಾಡಿ ಕೆಲಸ ಪ್ರಾರಂಭಿಸಲು ಒತ್ತಾಯಿಸಿದ್ದೇವೆ, ಈವರೆಗೆ ಅವರು ಕಿವಿಗುಡದೇ ಸರಕಾರದ ನಿರ್ಲಕ್ಷತನದಿಂದಾಗಿ ಕಾಮಗಾರಿ ಪ್ರಾರಂಭಿಸದೇ ಕಾಲಹರಣ ಮಾಡಿ ಜನ ವಿರೋಧಿ ನಡೆ ಅನುಸರಿಸುತ್ತಿದ್ದಾರೆ ಎಂದು ಮಹಾಂತಗೌಡ ಪಾಟೀಲ ನಂದಿಹಳ್ಳಿ ಆಕ್ರೋಶ ವ್ಯಕ್ತಪಡಿಸಿದರು.
ʼಕಲ್ಯಾಣ ಕರ್ನಾಟಕ ಭಾಗದ ಹಿಂದುಳಿದ ತಾಲ್ಲೂಕಿನ ಸುಮಾರು 68 ಗ್ರಾಮಗಳ ಅಂದಾಜು 1 ಲಕ್ಷ ಎಕರೆ ಪ್ರದೇಶಕ್ಕೆ ಯೋಜನೆಯಿಂದ ನೀರಾವರಿ ಸೌಲಭ್ಯ ದೊರಕಲಿದೆ. ಹೀಗಾಗಿ ಕೂಡಲೇ ಟೆಂಡರ್ ಕರೆದು ಕಾಮಗಾರಿ ಪುನಾರಂಭಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಜಿಲ್ಲೆಯಲ್ಲಿ ಮೂರು ವರ್ಷಗಳಲ್ಲಿ 141 ಕೊಲೆ : ಗೃಹ ಸಚಿವ ಜಿ.ಪರಮೇಶ್ವರ
ಪ್ರತಿಭಟನೆಯಲ್ಲಿ ಪ್ರಮುಖರಾದ ಶಿವರಾಜ್ ಪಾಟೀಲ್ ರದ್ದೇವಾಡಗಿ, ಶೋಭಾ ಬಾಣಿ, ಬಾಬು ಪಟೇಲ್, ಗುರುನಾಥ ಸಾಹು ರಾಜವಾಳ, ಮಲ್ಲಣಗೌಡ ಪಾಟಿಲ ಕಲ್ಲೂರ, ರಾಜಾ ಪಟೇಲ್ ಯಾಳವಾರ, ಶಾಂತಯ್ಯ ಗುತ್ತೇದಾರ, ಮಲ್ಲಿಕಾರ್ಜುನ ಕೆಲ್ಲೂರ, ಇಬ್ರಾಹಿಂ ಪಟೇಲ್ ಯಾಳವಾರ, ಮಹಮ್ಮದ ಚೌದರಿ, ಬಿ.ಹೆಚ್.ಮಾಲೀಪಾಟಲ್, ದಸ್ತಗಿರ್ ಸಾಬ್, ಗಿರೀಶ್ ತುಂಬಗಿ, ದೇವೇಂದ್ರ ಚಿಗರಳ್ಳಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ರೈತರು ಪಾಲ್ಗೊಂಡಿದ್ದರು.