ರಾಯಚೂರು ನಗರದ ಚಂದ್ರಬಂಡಾ ರಸ್ತೆಯಲ್ಲಿರುವ ಆಶ್ರಯ ಕಾಲೋನಿಯ ಸರ್ವೇ ನಂಬರ್ 572, 573 ಮತ್ತು 574ರಲ್ಲಿ ವಾಸವಾಗಿರುವ ನಿವಾಸಿಗಳಿಗೆ ಮನೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿ ಆಶ್ರಯ ಕಾಲೊನಿ ನಿವಾಸಿಗಳ ಸಂಘದಿಂದ ಸೋಮವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
“199-92ನೇ ಸಾಲಿನಲ್ಲಿ ಆಶ್ರಯ ಕಾಲೋನಿ ಯೋಜನೆ ವತಿಯಿಂದ ಮನೆಗಳನ್ನು ನಿರ್ಮಿಸಿದ್ದು, ಯಾವುದೇ ಫಲಾನುಭವಿಗಳು ವಾಸವಿರಲಿಲ್ಲ. ಮನೆಗಳನ್ನು ದುರಸ್ತಿ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ನೀರು ವಿದ್ಯುತ್, ರಸ್ತೆ, ಒಳಚರಂಡಿ, ಯಾವುದೇ ಮೂಲಸೌಲಭ್ಯವಿಲ್ಲ. ಈ ಹಿನ್ನೆಲೆಯಲ್ಲಿ ಮೂಲಸೌಲಭ್ಯ ಹಾಗೂ ಹಕ್ಕುಪತ್ರಕ್ಕಾಗಿ ಮನವಿ ಮಾಡಿದರೂ ಈವರೆಗೆ ಹಕ್ಕುಪತ್ರ ನೀಡಿಲ್ಲ” ಎಂದು ನಿವಾಸಿಗಳು ದೂರಿದರು.
“ಮನೆಯ ವಿದ್ಯುತ್ ರಶೀದಿ, ಆಧಾರ್ ಕಾರ್ಡ್, ಚುನಾವಣಾ ಐಡಿಕಾರ್ಡ್, ಬ್ಯಾಂಕ್, ರೇಷನ್ ಕಾರ್ಡ್‌ನಲ್ಲಿಯೂ ಮನೆಗಳ ನಂಬರ್, ವಿಳಾಸ ಸೇರ್ಪಡೆಯಾಗಿವೆ. ಚುನಾವಣೆಯಲ್ಲಿ ಮತ ಚಲಾಯಿಸಿಕೊಂಡು ಬೇಡಿಕೆ ಈಡೇರಿಸುತ್ತಿಲ್ಲ. ಹಕ್ಕುಪತ್ರ ನೀಡಬೇಕೆಂದು 2014-15ರಲ್ಲಿ ಸುತ್ತೋಲೆ ಹೊರಡಿಸಿದೆ, 2015-16ರಲ್ಲಿ ಶಾಸಕರು ಸಮಿತಿ ಮಾಡಿ ಸಭೆ ನಡೆಸಿದ್ದರು. ಆದರೆ ಇತ್ತೀಚೆಗೆ ಕೆಲವು ಗೂಂಡಾಗಳು ಹಕ್ಕುಪತ್ರ ತಂದು ಮನೆ ಖಾಲಿಮಾಡುವಂತೆ ದೌರ್ಜನ್ಯ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಬೀದಿನಾಯಿಗಳ ದಾಳಿಗೆ ಯುವತಿ ಬಲಿ; ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡುವಂತೆ ಪ್ರತಿಭಟನೆ
“600 ಮನೆಗಳಲ್ಲಿ ವಾಸಿಸುತ್ತಿರುವ 600 ಅರ್ಹ ಫಲಾನುಭವಿಗಳಿಗೆ ಕೂಡಲೇ ಹಕ್ಕುಪತ್ರ ನೀಡಬೇಕು” ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನಿವಾಸಿಗಳಾದ ಗೋವಿಂದ ನಾಯಕ, ಆಶಪ್ಪ, ನಾಗೇಂದ್ರ, ಮೌನೇಶ, ಕೆ ಬಸವರಾಜ, ಕೆ ಮಲ್ಲೇಶ, ಅನ್ವರ್ ಸೇರಿದಂತೆ ಇತರರು ಇದ್ದರು.
