ಬೀದರ್ ತಾಲೂಕಿನ ವಿಳಾಸಪುರ ಗ್ರಾಮದಲ್ಲಿ ಡಿ.12ರಂದು ತಡರಾತ್ರಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿ ಅವಮಾನಿಸಿರುವ ಘಟನೆಯನ್ನು ದಲಿತ ಸಂಘಟನೆಗಳ ಒಕ್ಕೂಟ ತೀವ್ರವಾಗಿ ಖಂಡಿಸಿ ಪ್ರತಿಭಟನೆ ನಡೆಸಿತು.
ಹುಮನಾಬಾದ್ ಪಟ್ಟಣದ ಪ್ರವಾಸಿ ಮಂದಿರದಿಂದ ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ಮುಖಾಂತರ ತೆರಳಿದ ಒಕ್ಕೂಟದ ಪ್ರಮುಖರು ಅಂಬೇಡ್ಕರ್ ಪುತ್ಥಳಿ ಎದುರು ಮಾನವ ಸರಪಳಿ ರಚಿಸಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಹಸೀಲ್ದಾರ್ ಮೂಲಕ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ.ಪರಮೇಶ್ವರ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ʼರಾಜ್ಯದಲ್ಲಿ ಕಾಂಗ್ರೆಸ್ ನೇತ್ರತ್ವದ ಸರ್ಕಾರ ಅಧಿಕಾರಕ್ಕೇರಿದ ನಂತರ ಜಿಲ್ಲೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಸಂವಿಧಾನವನ್ನು ಅವಮಾನಿಸುವ ಕೃತ್ಯಗಳು ನಿರಂತರವಾಗಿ ನಡೆಯುತ್ತಿವೆ. ಅಲ್ಲದೇ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ತವರು ಕ್ಷೇತ್ರ ಭಾಲ್ಕಿಯಲ್ಲಿ ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿರುವುದು ಖಂಡನೀಯವಾಗಿದೆʼ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಒಂದು ವರ್ಷದಿಂದ ಭಾಲ್ಕಿ ತಾಲ್ಲೂಕಿನ ಮಳಚಾಪೂರ, ತಳವಾಡ (ಕೆ), ರಾಚಪ್ಪಾ ಗಡಿಗೌಡಗಾಂದ, ಚಳಕಾಪೂರ ಗ್ರಾಮಗಳಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆದಿದ್ದು, ತಪ್ಪಿಸ್ಥರ ವಿರುದ್ಧ ದಾಖಲಾದ ಪ್ರಕರಣಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಆರೋಪಿಗಳಿಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಉಸ್ತುವಾರಿ ಸಚಿವರ ತವರು ಕ್ಷೇತ್ರದಲ್ಲಿ ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿರುವುದನ್ನು ಪರಿಶೀಲಿಸಿ ಸಚಿವ ಖಂಡ್ರೆ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ : ಪ್ರಕರಣ ದಾಖಲು; ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ
ಪ್ರತಿಭಟನೆಯಲ್ಲಿ ಭೀಮ ಆರ್ಮಿ ಸಂಘಟನೆ ತಾಲ್ಲೂಕಾಧ್ಯಕ್ಷ ಅನೀಲ ದೊಡ್ಡಿ, ಭಾರತೀಯ ದಲಿತ ಪ್ಯಾಂಥರ್ ತಾಲ್ಲೂಕಾಧ್ಯಕ್ಷ ಗಣಪತಿ ಅಷ್ಟೂರೆ, ದ್ರಾವಿಡ ಕ್ರಾಂತಿ ಯುವ ಸೇನೆಯ ಗೌತಮ್ ಪ್ರಸಾದ್ ಸೇರಿದಂತೆ ಪ್ರಮುಖರಾದ ಕೈಲಾಸ ಮೇಟಿ, ಶಿವಾನಂದ ಕಟ್ಟಿಮನಿ, ಶಿವಕುಮಾರ ಜೀವಾ, ಮುಕೇಶ ಪಾಂಡೆ, ಶಶಿಕಾಂತ್ ಡಾಂಗೆ, ಶೇಕ್ ಮಕ್ಸೂದ್, ಈಶ್ವರ ಕ್ರಾಂತಿ ಸೇರಿದಂತೆ ಅನೇಕರಿದ್ದರು.