ಕೇಸರಿ ಶಾಲು ಹಾಕಿಕೊಂಡ ಯುವಕರು ಮಂಡ್ಯದಲ್ಲಿ ಎರಡು ಬೈಕುಗಳಲ್ಲಿ ಹೋಗುತ್ತಿದ್ದ ಮುಸ್ಲಿಂ ಯುವಕರನ್ನು ತಡೆದು ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಒತ್ತಾಯಿಸುತ್ತಿರುವ ವಿಡಿಯೋ ಹರಿದಾಡುತ್ತಿದೆ. ಭಕ್ತಿಯಿಂದ ಕೂಗಬೇಕಿರುವ ಘೋಷಣೆ ಹೀಗೆ ಅನ್ಯ ಧರ್ಮೀಯರನ್ನು ಕೆಣಕಲು ಬಳಸಿದರೆ ಯಾರ ಘನತೆ ಕಳೆಯುತ್ತದೆ ಎಂಬ ಪ್ರಜ್ಞೆ ಇದೆಯೇ? ಪ್ರಭು ಶ್ರೀರಾಮಚಂದ್ರ ಯಾವುದಕ್ಕೆ ಪ್ರೇರಣೆ? ಪುಂಡಾಟ, ದ್ವೇಷ, ಅನ್ಯಾಯ, ಹಿಂಸೆಗೆ ಶ್ರೀರಾಮನ ಅಭಯ ಇದೆ ಎಂದು ಅರ್ಥವೇ?
1992 ಡಿಸೆಂಬರ್ 6ರಂದು ಅಯೋಧ್ಯೆಯ ವಿವಾದಿತ ಬಾಬರಿ ಮಸೀದಿ ಕೆಡವಲಾಯಿತು. ಆ ನಂತರ ನಡೆದ ಹಿಂಸಾಚಾರ, ಕಾನೂನು ಹೋರಾಟ, ರಾಮಲಲ್ಲಾನ ಗೆಲುವು, ಮಂದಿರ ನಿರ್ಮಾಣ ಎಲ್ಲವೂ ನಡೆದು ಹೋಗಿದೆ. ರಾಮಜನ್ಮಭೂಮಿ ವಿವಾದದ ತೀರ್ಪು ಪ್ರಕಟವಾಗುವ ದಿನ ದೇಶದೆಲ್ಲೆಡೆ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಮುಸ್ಲಿಮರು ಹಿಂಸಾಚಾರ ನಡೆಸಬಹುದು ಎಂಬುದು ಪ್ರಭುತ್ವದ ಕಲ್ಪನೆಯಾಗಿತ್ತು. ಆದರೆ ಸ್ವತಃ ಈ ದೇಶ ಮುಸ್ಲಿಮರೇ ತೀರ್ಪನ್ನು ಸ್ವಾಗತಿಸಿ, ಎಲ್ಲಿಯೂ ಹಿಂಸಾಚಾರ ನಡೆಯದಂತೆ, ದೇಶದ ಜವಾಬ್ದಾರಿಯುತ ಪ್ರಜೆಗಳಾಗಿ ಘನತೆಯಿಂದ ನಡೆದುಕೊಂಡರು. ಅಷ್ಟೇ ಏಕೆ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ ಮುಸ್ಲೀಮರೂ ಇದ್ದಾರೆ.
ಆದರೆ, ಶ್ರೀರಾಮನ ಭಕ್ತರು ಎಂದು ಹೇಳಿಕೊಳ್ಳುವ ಉಗ್ರ ಹಿಂದುತ್ವವಾದಿಗಳು ಹಿಂಸಾಕೃತ್ಯ ಮಾಡುವಾಗ, ಗಲಭೆ ಮಾಡುವಾಗ ಭಗವಾಧ್ವಜ ಹಿಡಿದು ಜೈ ಶ್ರೀರಾಮ್ ಘೋಷಣೆ ಕೂಗುವುದು ಏನನ್ನು ಸೂಚಿಸುತ್ತದೆ? ಶ್ರೀರಾಮನನ್ನು ಆದರ್ಶ ಪುರುಷ, ಪುರುಷೋತ್ತಮ ಎಂದು ಆರಾಧಿಸುವ ಹಿಂದೂ ಸಮಾಜ ಈ ಬಗ್ಗೆ ಯಾಕೆ ಮೌನವಾಗಿದೆ? ಹಾದಿಬೀದಿಯಲ್ಲಿ ಶ್ರೀರಾಮನಿಗೆ ಘೋಷಣೆ ಕೂಗುವುದು, ಅನ್ಯ ಧರ್ಮೀಯರಿಗೂ ಕೂಗುವಂತೆ ಒತ್ತಾಯ ಮಾಡಿ ಹಿಂಸೆ ನೀಡುವುದನ್ನು ಸ್ವತಃ ಶ್ರೀರಾಮನೇ ಒಪ್ಪುವನೇ? ಈ ಬಗ್ಗೆ ಎಲ್ಲಿಯೂ ಧಾರ್ಮಿಕ ಮುಖಂಡರು ಮಾತನಾಡುತ್ತಿಲ್ಲ, ಪುಂಡರಿಗೆ ಬುದ್ಧಿ ಹೇಳುತ್ತಿಲ್ಲ. ಅದಕ್ಕೆ ಬದಲಾಗಿ ಧಾರ್ಮಿಕ ವೇದಿಕೆಗಳಲ್ಲಿ ಸಂವಿಧಾನ ಬದಲಿಸುವ, ರಾಜಕೀಯ ಟೀಕೆಗಳನ್ನು ಮಾಡುತ್ತ ಒಂದು ಪಕ್ಷದ ಪರ ನಿಲುವು ತೋರುತ್ತಾ ಮಠಾಧೀಶರೂ ಗೌರವ ಕಳೆದುಕೊಳ್ಳುತ್ತಿದ್ದಾರೆ. ಶಾಲೆ, ಕಾಲೇಜುಗಳಲ್ಲಿಯೂ ಜೈ ಶ್ರೀರಾಮ್ ಎಂಬುದು ಯಾರನ್ನೋ ಪ್ರಚೋದಿಸುವ ಘೋಷಣೆಯಾಗುತ್ತಿದೆ. ಬಿಜೆಪಿ ನಾಯಕರು ವಿಧಾನಸಭೆಯೊಳಗೂ ಘೋಷಣೆ ಕೂಗುತ್ತಿರುವುದನ್ನು ಇತ್ತೀಚೆಗೆ ನೋಡಿದ್ದೇವೆ. ಲೋಕಸಭೆಗೆ ಪ್ರಧಾನಿ ಮೋದಿ ಬರುವಾಗ ಅವರ ಪಕ್ಷದ ಸದಸ್ಯರು ಜೈ ಶ್ರೀರಾಮ್ ಘೋಷಣೆ ಕೂಗುತ್ತಾರೆ. ಇತ್ತ ಸಿಎಂ ಸಿದ್ದರಾಮಯ್ಯ ಅವರನ್ನು ಕೆಣಕಲೂ ಬಿಜೆಪಿ ಕಾರ್ಯಕರ್ತರು ಇದೇ ಘೋಷಣೆ ಕೂಗುತ್ತಾರೆ. ಇದಕ್ಕೆ ಅರ್ಥವಿದೆಯೇ?
ಡಿ.6ರಂದು ಮಧ್ಯಪ್ರದೇಶದ ಮೂವರು ಮುಸ್ಲಿಂ ಬಾಲಕರನ್ನು ಹಿಂದೂ ಯುವಕನೊಬ್ಬ ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಬಲವಂತ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಮುಖ ಮೂತಿ ಎಂದು ನೋಡದೇ ಮತಾಂಧ ಹಿಂದೂ ಯುವಕ ಆ ಪುಟ್ಟ ಮಕ್ಕಳಿಗೆ ಚಪ್ಪಲಿಯಲ್ಲಿ ಹೊಡೆದು ಹಿಂಸಿಸುತ್ತಿದ್ದ. ಅಷ್ಟಕ್ಕೂ ಮುಸ್ಲಿಮರಿಂದ ಜೈ ಶ್ರೀರಾಮ್ ಘೋಷಣೆ ಕೂಗಿಸಿ ಯಾರಿಗೆ ಏನು ಪ್ರಯೋಜನ? ಆ ಯುವಕನಿಗೆ ಏನು ಸಿಕ್ಕಿತು? ಹತ್ತಾರು ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ. ಕೋರ್ಟ್, ಜೈಲು ಎಂದು ಇನ್ನು ಆತನ ಕುಟುಂಬದವರು ಅಲೆಯಬೇಕು.
ಡಿ. 16ರಂದು ನಿನ್ನೆ ಮಂಡ್ಯದಲ್ಲಿ ಕೇಸರಿ ಶಾಲು ಹಾಕಿಕೊಂಡ ಯುವಕರು, ಎರಡು ಬೈಕುಗಳಲ್ಲಿ ಹೋಗುತ್ತಿದ್ದ ಮುಸ್ಲಿ ಯುವಕರನ್ನು ತಡೆದು ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಒತ್ತಾಯಿಸುತ್ತಿರುವ ವಿಡಿಯೋ ಹರಿದಾಡುತ್ತಿದೆ. ಬೈಕಿನ ಕೀ ಕಿತ್ತುಕೊಂಡು ಮುಸ್ಲಿಂ ಯುವಕರ ಸುತ್ತುವರಿದ ಹಿಂದೂ ಕಾರ್ಯಕರ್ತರು ಬೆದರಿಕೆ ಹಾಕುತ್ತಿದ್ದರು. ಮಂಡ್ಯದ ಪುಂಡರ ಮೇಲೆ ಸ್ವಯಂಪ್ರೇರಿತ ದೂರು ದಾಖಲಿಸಿದ್ದಾರೆ ಪೊಲೀಸರು. ಆದರೇನು ಅವರ ಮೇಲಿನ ಪ್ರಕರಣಕ್ಕೆ ತಡೆ ನೀಡಲು, ಎಫ್‌ಐಆರ್ ರದ್ದುಪಡಿಸಲು ಹೈಕೋರ್ಟ್ ಪೀಠಗಳಿವೆ. ಇತ್ತೀಚಿನ ಕೆಲ ತೀರ್ಪುಗಳು ಪುಂಡಾಟ ಮೆರೆಯುವವರಿಗೆ ಧೈರ್ಯ ತುಂಬಿದೆಯೇ ಎಂಬ ಅನುಮಾನ ಬರುತ್ತಿದೆ.

ದಕ್ಷಿಣ ಕನ್ನಡದ ಕಡಬ ತಾಲ್ಲೂಕಿನ ಮರ್ಧಾಳದ ಮಸೀದಿಗೆ ನುಗ್ಗಿ ಜೈಶ್ರೀರಾಮ್ ಘೋಷಣೆ ಕೂಗಿದ ಹಿಂದೂ ಯುವಕರ ಮೇಲಿನ ಪ್ರಕರಣವನ್ನು ಕೇವವ ಇಪ್ಪತ್ತು ದಿನಗಳಲ್ಲಿ ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ. ಮಸೀದಿ ಬಳಿ ಜೈಶ್ರೀರಾಮ್ ಘೋಷಣೆ ಕೂಗಿದರೆ ಯಾರ ಧಾರ್ಮಿಕ ಭಾವನೆಗೂ ಧಕ್ಕೆಯಾಗಲ್ಲ ಎಂದು ನ್ಯಾ. ನಾಗಪ್ರಸನ್ನ ಪೀಠ ಹೇಳಿದೆ. ಆ ತೀರ್ಪಿನ ವಿರುದ್ಧ ಮಸೀದಿಯವರು ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿನ್ನು (ಡಿ.16) ನಿನ್ನೆ ಸುಪ್ರೀಂಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಂಡಿತ್ತು. “ಇದು ಹೇಗೆ ಅಪರಾಧವಾಗುತ್ತದೆ” ಎಂದು ಸುಪ್ರೀಂ ಪೀಠವೂ ಅರ್ಜಿದಾರರನ್ನು ಪ್ರಶ್ನೆ ಮಾಡಿದೆ. ಇವೆಲ್ಲ ಕೋಮುವಾದಿ ಪುಂಡರಿಗೆ ಯಾವ ಸಂದೇಶ ರವಾನಿಸುತ್ತಿದೆ ಎಂಬುದರ ದರ್ಶನವಾಗುತ್ತಿದೆ. ಈ ತಿಂಗಳು ಹನುಮ ಜಯಂತಿ, ದತ್ತ ಮಾಲಾ ಅಭಿಯಾನ ಎಂದು ರಾಜ್ಯದ ಎಲ್ಲೆಡೆ ಭಕ್ತಿಗಿಂತ ಜಾಸ್ತಿ ಪುಂಡಾಟ ಮೆರೆಯುವುದನ್ನು ಕಾಣುತ್ತಿದ್ದೇವೆ. ಇದೇ ರೀತಿ ಮುಸ್ಲಿಮರು ಹಿಂದೂಗಳನ್ನು ಕೆಣಕಲು ಘೋಷಣೆ ಕೂಗಿದರೆ ಪರಿಸ್ಥಿತಿ ಏನಾಗಬಹುದು ಎಂದು ನ್ಯಾಯಪೀಠಗಳು ತೀರ್ಪು ನೀಡುವಾಗ ಯೋಚಿಸಬೇಕಿದೆ.
ಮುಸ್ಲಿಮರನ್ನು ಶ್ರೀರಾಮನ ಪರ ಘೋಷಣೆ ಕೂಗುವಂತೆ ಹಲ್ಲೆ ಮಾಡುವುದು ಈ ಒಂದು ದಶಕದಲ್ಲಿ ಕಂಡು ಬಂದ ಹೊಸ ಬೆಳವಣಿಗೆ. ಮುಸ್ಲಿಂ ವ್ಯಕ್ತಿಗಳನ್ನು ತಡೆದು ಜೈಶ್ರೀರಾಮ್ ಘೋಷಣೆ ಕೂಗಿಸುವ ದರ್ದು ಹಿಂದೂಗಳಿಗೆ ಯಾಕೆ ಬಂತು? ಮುಸ್ಲಿಂ ವೃದ್ಧನ ಗಡ್ಡಕ್ಕೆ ಬೆಂಕಿಯಿಟ್ಟು ರಾಮನಿಗೆ ಜೈ ಹೇಳಿಸುವುದು ಯಾವ ಆದರ್ಶ? ಇದೊಂದು ಕಿಡಿಗೇಡಿ ಕೃತ್ಯ ಅಲ್ಲವೇ? ಮೋದಿಯವರಾಗಲಿ, ಕೇಂದ್ರ ಸರ್ಕಾರದ ಒಬ್ಬರಾದರೂ ಇಂತಹ ಅಮಾನವೀಯ ನಡವಳಿಕೆಯನ್ನು ಖಂಡಿಸುವ ಹೇಳಿಕೆ ನೀಡಲ್ಲ. ʼಮೌನಂ ಸಮ್ಮತಿ ಲಕ್ಷಣಂʼ ಎಂದು ಅರ್ಥವೇ? ಮೋದಿಯವರಿಗೆ ನಿಜವಾದರೂ ಈ ದೇಶದ ಎಲ್ಲ ಪ್ರಜೆಗಳ ಮೇಲೆ ಕಾಳಜಿ ಇದ್ದಿದ್ದರೆ ಅವರು ಪ್ರತಿ ತಿಂಗಳು ರೇಡಿಯೋ ಭಾಷಣ ಮಾಡುವಾಗ ಇಂತಹ ವಿಕೃತ ಕೃತ್ಯವನ್ನು ಖಂಡಿಸುವ ಅವಕಾಶ ಇತ್ತು. ತಮ್ಮ ಬೆಂಬಲಿಗರಿಗೆ ತಿಳಿ ಹೇಳುವ ಕೆಲಸ ಅವರು ಮಾಡಿಲ್ಲ. ಉತ್ತರ ಭಾರತದಲ್ಲಿ ಇಂತಹ ಪ್ರಕರಣಗಳು ಹೆಚ್ಚು ಸುದ್ದಿಯಾಗುತ್ತಿದ್ದವು. ಅದೀಗ ಕರ್ನಾಟಕದಲ್ಲೂ ನಡೆಯುತ್ತಿರುವುದು ಆಘಾತಕಾರಿ. ನಮಗೆ ಯುಪಿ ಮಾದರಿಯೇ!

ಕರ್ನಾಟಕದಲ್ಲಿ ಮೂರು ವರ್ಷಗಳ ಹಿಂದೆ ಭಾರೀ ಸುದ್ದಿಯಾದ ಕಾಲೇಜುಗಳಲ್ಲಿ ಹಿಜಾಬ್ ಧರಿಸುವ ವಿಚಾರದಲ್ಲಿ ಅನಗತ್ಯ ವಿವಾದ ಎಬ್ಬಿಸಿದ ಹಿಂದುತ್ವ ಸಂಘಟನೆಗಳು ಎಲ್ಲಾ ಧರ್ಮದ ವಿದ್ಯಾರ್ಥಿಗಳು ಬೆರೆತು ಕಲಿಯುವ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗಿದ್ದರು. ಕ್ರೈಸ್ತರ ಶಾಲೆಯ ಶಿಕ್ಷಕಿಯೊಬ್ಬರು ರಾಮದೇವರಿಗೆ ಅವಮಾನಿಸಿದರು ಎಂಬ ಕಾರಣಕ್ಕೆ ಹಿಂದುತ್ವದ ಕಾರ್ಯಕರ್ತರು ಮಂಗಳೂರಿನ ಇಬ್ಬರು ಬಿಜೆಪಿ ಶಾಸಕರರಾದ ಭರತ್ ಶೆಟ್ಟಿ, ವೇದವ್ಯಾಸ ಕಾಮತ್ ಬೆಂಬಲದೊಂದಿಗೆ ಅಲ್ಲೂ ಹೋಗಿ ಜೈಶ್ರೀರಾಮ್ ಘೊಷಣೆ ಕೂಗಿದ್ದರು. ಮಸೀದಿ ಕಟ್ಟಡಕ್ಕೆ ಅಕ್ರಮವಾಗಿ ಪ್ರವೇಶಿಸಿ ಧ್ವಜ ಕಿತ್ತು ಹಾಕುವ ಕಾನೂನುಬಾಹಿರ ಕೆಲಸ ಮಾಡುವಾಗಲೂ ಅದೇ ಘೋಷಣೆ, ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ಮಾಡುವಾಗಲೂ ಅದೇ ಘೋಷಣೆ, ಸದನದೊಳಗೆ ಸರ್ಕಾರದ ವಿರುದ್ಧ ಪ್ರತಿಭಟಿಸುವಾಗಲೂ ಜೈಶ್ರೀರಾಮ್! ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಧರ್ಮಸ್ಥಳ ದೇವಸ್ಥಾನಕ್ಕೆ ಹೋದರೆ ಬಿಜೆಪಿ ಕಾರ್ಯಕರ್ತರು ಅವರನ್ನು ಗೇಲಿ ಮಾಡಲು ಜೈಶ್ರೀರಾಮ್ ಘೋಷಣೆ ಕೂಗಿದ್ದರು. ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆ ಹೋಗುವಾಗಲೂ ಹೀಗೇ ಮಾಡಿದ್ದರು. ಭಕ್ತಿಯಿಂದ ಕೂಗಬೇಕಿರುವ ಘೋಷಣೆ ಹೀಗೆ ವಿರೋಧಿಗಳನ್ನು ಛೇಡಿಸಲು, ಅನ್ಯ ಧರ್ಮೀಯರನ್ನು ಕೆಣಕಲು ಬಳಸಿದರೆ ಯಾರ ಘನತೆ ಕಳೆಯುತ್ತದೆ ಎಂಬ ಪ್ರಜ್ಞೆ ಇದೆಯೇ? ಪ್ರಭು ಶ್ರೀರಾಮಚಂದ್ರ ಯಾವುದಕ್ಕೆ ಪ್ರೇರಣೆ? ಪುಂಡಾಟ, ದ್ವೇಷ, ಅನ್ಯಾಯ, ಹಿಂಸೆಗೆ ಶ್ರೀರಾಮನ ಅಭಯ ಇದೆ ಎಂದು ಅರ್ಥವೇ?
ದೆಶದೆಲ್ಲೆಡೆ ಬಿಜೆಪಿ ಮತ್ತು ಆರೆಸ್ಸೆಸ್, ಬಜರಂಗದಳ, ಹಿಂದೂ ಮಹಾಸಭಾ, ವಿಶ್ವ ಹಿಂದೂ ಪರಿಷತ್ ಹೀಗೆ ನಾನಾ ಹೆಸರಿನಲ್ಲಿ ಹಿಂದುತ್ವ ಕಾರ್ಯಕರ್ತರು ದಾಂಧಲೆ ನಡೆಸುತ್ತಿದ್ದಾರೆ. ಕೋಮುಗಲಭೆ, ಹಿಂಸಾಚಾರದಲ್ಲಿ ಭಾಗಿಯಾಗಿ ಕೇಸು ಹಾಕಿಸಿಕೊಳ್ಳುವ ಯುವಕರಲ್ಲಿ ಯಾರೊಬ್ಬರೂ ರಾಜಕೀಯ ಮುಖಂಡರ ಮಕ್ಕಳಿರುವುದಿಲ್ಲ, ಶ್ರೀಮಂತರ ಮನೆಯ ಮಕ್ಕಳಿರುವುದಿಲ್ಲ. ಬಡ ಮತ್ತು ಕೆಳವರ್ಗಗಳ ಅರ್ಧಕ್ಕೆ ಶಾಲೆ ಬಿಟ್ಟ ಹುಡುಗರಿಗೆ ಧರ್ಮದ ಅಮಲು ಹತ್ತಿಸಿ ಬೀದಿಗೆ ಬಿಡುತ್ತಿದ್ದಾರೆ. ಮುಖಂಡರು ರಾಜಕೀಯ ಬೇಳೆ ಬೇಯಿಸಿಕೊಂಡು ಅಧಿಕಾರ ಅನುಭವಿಸುತ್ತ ಸುಖವಾಗಿರುತ್ತಾರೆ. ಗಲಭೆ, ಪ್ರತಿಭಟನೆಯಲ್ಲಿ ಭಾಗಿಯಾದ ಯುವಕರು ನಂತರ ಕೋರ್ಟು, ಜೈಲು ಅಂತ ವರ್ಷಗಳ ಕಾಲ ಅಲೆಯುವಂತಾಗುತ್ತದೆ. ಹೀಗೆ ಧರ್ಮ ಧರ್ಮಗಳ ಮಧ್ಯೆ ರಾಜಕೀಯ ನಾಯಕರು ದ್ವೇಷದ ವಿಷಬೀಜ ಬಿತ್ತಿದ ಪರಿಣಾಮ ಮುಸ್ಲಿಮರ ಮೇಲೆ ನಿರಂತರ ದಾಳಿಗಳಾಗುತ್ತಿವೆ.
ಇದನ್ನೂ ಓದಿ ಮಂಡ್ಯ | ಜೈಶ್ರೀರಾಮ್ ಘೋಷಣೆ ಕೂಗುವಂತೆ ಒತ್ತಾಯ; ಹನುಮ ಮಾಲಾಧಾರಿಗಳ ವಿರುದ್ಧ ಪ್ರಕರಣ ದಾಖಲು
ಮಸೀದಿಯ ಧ್ವಜ ಕಿತ್ತು ಭಗವಾಧ್ವಜ ಹಾರಿಸುವುದು, ಮಸೀದಿಯ ಮುಂದೆ ಪ್ರಚೋದನಕಾರಿ ಭಾಷಣ, ಡಿಜೆ ಕುಣಿತ, ಜೋರಾಗಿ ಸಂಗೀತ ಹಾಕೋದು, ಜೈ ಶ್ರೀರಾಮ್ ಕೂಗುವುದು ಇಂತಹ ಅಪಸವ್ಯಗಳನ್ನು ಮಾಡುತ್ತಾ ಸಮಾಜದಲ್ಲಿ ಸೌಹಾರ್ದತೆ ಕದಡುವ ಕೆಲಸ ಮಾಡಿದವರು ಇದೇ ಭಾರತದ ಬಹುಸಂಖ್ಯಾತ ಹಿಂದೂಗಳಲ್ಲವೇ? ಹೀಗೆ ಕೋಮುದ್ವೇಷದ ಬೆಂಕಿಯುಗುಳುವ ಹಿಂದೂ ಮುಖಂಡರೆಂದುಕೊಂಡವರು ಈಗ ಅದೇ ಬಾಂಗ್ಲಾ ದೇಶದ ಅಲ್ಪಸಂಖ್ಯಾತ ಹಿಂದೂಗಳಿಗೆ ಅನ್ಯಾಯವಾಗುತ್ತಿದೆ ಎಂದು ಇಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಎಲ್ಲೇ ಹಿಂಸಾಚಾರ ನಡೆದರೂ ಧ್ವನಿ ಎತ್ತಬೇಕಿರುವುದು ಮಾನವ ಧರ್ಮ. ಆದರೆ ತಮ್ಮವರಿಗೆ ನೋವಾದಾಗ ಮಾತ್ರ ಪ್ರತಿಭಟಿಸೋದು, ಮತ್ತೆ ತಾವೇ ಅಂತಹ ಕೃತ್ಯ ಎಸಗೋದು ಅಮಾನವೀಯ ನಡೆ. ಇಂತಹ ಗೋಸುಂಬೆಗಳಿಗೆ ಎಲ್ಲೋ ಆದ ಅನ್ಯಾಯವನ್ನೂ ಖಂಡಿಸುವ ನೈತಿಕತೆ ಇದೆಯೇ?

ಹೇಮಾ ವೆಂಕಟ್
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.
ನೀವು ಇದೇ ಮಾತನ್ನು ಎಲ್ಲರಿಗೂ ಅಳವಡಿಸಿ, ಬೇರೆ ಧರ್ಮದವರಿಗೆ ಈ ಮಾತನ್ನು ಹೇಳಿದರೆ, ನಿಮ್ಮ ಕಥೆ ಏನಾಗಬಹುದು ಎಂಬುದನ್ನು ಯೋಚಿಸಿ,, ಅವರು ಮಾಡಿದ್ದು ತಪ್ಪೇ ಒಪ್ಪುತ್ತೇನೆ, ಹಾಗಾಗಲು ಕಾರಣವನ್ನು ಹುಡುಕಿ……, ಇದನ್ನು ಹೇಳುವವರು ಅವರಿಗೆ ಇಂತಹ ಸ್ಥಿತಿ ಬಂದಾಗಲೇ ಅರಿವಾಗುವುದು ಏನೆಂದು 🙏🏻
I totally agree with you. This paper always paper give advice to only hindus but not for muslims. Born in India enjoying all benifits in India but saying pakistan zindabad is ok. Doing terorist activities in India and joining terorist organisation is ok. Marring 4 girls and making home as children churning factory is ok. Converting gullible poor hindus is ok
But saying jai shri ram in Hindu country is not ok.
Why all targeting Hindus, can we list the incidents happened on Hindus. Why secularism is only for Hindus. If you have guts to write write the facts did by other religions then you see what will be your status. If you can’t provide justice to all region’s equally pls don’t write & humiliate the journalism.
ನಮಸ್ಕಾರ. ತಮಗೆ ಬಾಂಗ್ಲಾದೇಶ ದಲ್ಲಿ ಹಿಂದೂಗಳ ಮೇಲೆ ಅತ್ಯಾಚಾರ ಅನಾಚಾರ ಕಾಣಿಸುತ್ತಿಲ್ಲವ?