ರಾಷ್ಟ್ರನಾಯಕ, ಮಾಜಿ ಸಿಎಂ ಎಸ್ ನಿಜಲಿಂಗಪ್ಪನವರ ಅಭಿಮಾನದ, ಪ್ರೀತಿಯ ಮನೆಯನ್ನು ಸರ್ಕಾರ ಖರೀದಿಸಿ, ಸ್ಮಾರಕ ಮಾಡಬೇಕೆಂಬ ಅವರ ಅಭಿಮಾನಿಗಳು ಅನೇಕ ವರ್ಷಗಳಿಂದ ಬೇಡಿಕೆಯಿಟ್ಟು ಒತ್ತಾಯಿಸುತ್ತಿದ್ದರು. ಎಸ್ ಎನ್ ಅಭಿಮಾನಿಗಳ ಬೇಡಿಕೆ ಕೊನೆಗೂ ನೆರವೇರಿದ್ದು, ಸರ್ಕಾರ ಮನೆಯನ್ನು ಖರೀದಿಸಿ ವಶಕ್ಕೆ ಪಡೆದಿದೆ.
ಹತ್ತಿಪ್ಪತ್ತು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಚಿತ್ರದುರ್ಗದ ವಿ ಪಿ ಬಡಾವಣೆಯಲ್ಲಿರುವ ಮಾಜಿ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪ ಅವರ ನಿವಾಸ ಖರೀದಿ ಕೊನೆಗೂ ಬಗೆಹರಿದಿದೆ.
ಡಿಸೆಂಬರ್ 12ರ ಮಧ್ಯಾಹ್ನ 1 ಗಂಟೆಗೆ ನಿಜಲಿಂಗಪ್ಪ ಅವರ ಪುತ್ರ ಕಿರಣ್ ಶಂಕರ್ ಮನೆಯನ್ನು ಸರ್ಕಾರದ ಪರವಾಗಿ ತಹಶೀಲ್ದಾರ್ ಹೆಸರಿಗೆ ನೋಂದಣಿ ಮಾಡಿಸಿದ್ದಾರೆ. ತಹಶೀಲ್ದಾರ್ ಡಾ ನಾಗವೇಣಿಯವರಿಗೆ ಮನೆಯ ಕಾಗದ ಪತ್ರಗಳನ್ನು ಹಸ್ತಾಂತರಿಸಿದ್ದಾರೆ. ಈ ಹಿಂದೆ ಸರ್ಕಾರ ನಿಜಲಿಂಗಪ್ಪ ಅವರ ಮನೆ ಖರೀದಿಗೆ ಅನುದಾನವನ್ನೂ ನೀಡಿತ್ತು. ಕಾರಣಾಂತರಗಳಿಂದ ಪ್ರಕ್ರಿಯೆ ಪೂರ್ಣಗೊಳ್ಳದೆ ಹಾಗೆಯೇ ಉಳಿದಿತ್ತು.

ಒಂದು ಹಂತದಲ್ಲಿ ಎಸ್ ನಿಜಲಿಂಗಪ್ಪ ಮನೆ ಖರೀದಿಗೆ ಕಾಂಗ್ರೆಸ್ ಕೂಡ ಮುಂದಾಗಿತ್ತು. ಖರೀದಿಸಿ ಕಾಂಗ್ರೆಸ್ ಕಚೇರಿಯನ್ನಾಗಿ ವಿನ್ಯಾಸಗೊಳಿಸುವ ಚರ್ಚೆಯೂ ನಡೆದಿತ್ತು. ಆದರೆ ಚಿತ್ರದುರ್ಗದ ಜನತೆ ಮತ್ತು ನಿಜಲಿಂಗಪ್ಪ ಅವರ ಅಭಿಮಾನಿಗಳು ಸ್ಮಾರಕವನ್ನಾಗಿ ಬದಲಾಯಿಸಲು ಒತ್ತಡ ಹೇರಿದ್ದರು. ಈ ಹಿನ್ನೆಲೆಯಲ್ಲಿ ನಿಜಲಿಂಗಪ್ಪ ಅವರ ನಿವಾಸಕ್ಕೆ ತೆರಳಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮನೆ ವೀಕ್ಷಿಸಿದ್ದರು. ಈಗ ಸರ್ಕಾರವೇ ₹4.18 ಕೋಟಿಗೆ ಮನೆಯನ್ನು ಖರೀದಿ ಮಾಡಿದೆ ಎಂದು ಎಸ್ಸೆನ್ಸ್ ಸ್ಮಾರಕ ಟ್ರಸ್ಟ್ ಸದಸ್ಯರು ತಿಳಿಸಿದ್ದಾರೆ.

ಮೂರು ತಿಂಗಳ ಹಿಂದೆ ಕಾಂಗ್ರೆಸ್ ಪಕ್ಷದಿಂದ ನಿಜಲಿಂಗಪ್ಪ ಅವರ ಮನೆ ಖರೀದಿ ಮಾಡಲು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ ಕೆ ತಾಜಪೀರ್ ಕೆಪಿಸಿಸಿ ಅಧ್ಯಕ್ಷರಿಗೆ ಪತ್ರ ಬರೆದಿದ್ದರು. ಆನಂತರ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಂದು ಮನೆಯನ್ನು ವೀಕ್ಷಣೆ ಮಾಡಿ, ನಿಜಲಿಂಗಪ್ಪ ಅವರ ಮೊಮ್ಮಗ ಕಿರಣ್ ಶಂಕರ್ ಅವರ ಜೊತೆ ಮಾತುಕತೆ ನಡೆಸಿ ಹೋಗಿದ್ದರು. ಆದರೆ, ಈ ಮಾತುಕತೆ ಮುಂದುವರೆದಂತೆ ಕಾಣಲಿಲ್ಲ. ಕೆಲದಿನಗಳ ಹಿಂದಷ್ಟೇ ನಿಜಲಿಂಗಪ್ಪನವರ ಪುತ್ರ ಕಿರಣ್ ಶಂಕರ್ ಮನೆ ಮಾರಾಟಕ್ಕಿದೆಯೆಂದು ಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದರು.

ಈ ವೇಳೆ ಎಚ್ಚೆತ್ತ ಸರ್ಕಾರ ಮನೆ ಖರೀದಿಗೆ ಇದ್ದ ಎಲ್ಲ ತಾಂತ್ರಿಕ ಹಾಗೂ ಕಾನೂನಾತ್ಮಕ ತೊಡಕುಗಳನ್ನು ನಿವಾರಿಸಿಕೊಂಡು ಅಂತಿಮವಾಗಿ ಡಿಸೆಂಬರ್ 12ರಂದು ಖರೀದಿ ಮಾಡಿದೆ. ಮುಂದೆ ಈ ಮನೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹಸ್ತಾಂತರವಾಗಿ ಸ್ಮಾರಕವಾಗಿ ಅಭಿವೃದ್ಧಿಯಾಗಲಿದೆ ಎಂದು ಹೇಳಲಾಗುತ್ತಿದೆ.
1956 ರಲ್ಲಿ ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿಯಾದ ದೊಡ್ಡ ಸಿದ್ದವನಹಳ್ಳಿ ನಿಜಲಿಂಗಪ್ಪ “ರಾಷ್ಟ್ರನಾಯಕ” ಎಂಬ ಬಿರುದಿನಿಂದ ಹೆಸರಾದವರು. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಅವರು ಗಾಂಧಿ ಅನುಯಾಯಿಯಾಗಿದ್ದು, ಕಾಂಗ್ರೆಸ್‌ನ ಕಟ್ಟಾಳಾಗಿ ಶಾಸನಸಭೆಗಳಲ್ಲಿ ಆಯ್ಕೆಯಾಗಿದ್ದರು. 1946-50ರವರೆಗಿನ ಸಂವಿಧಾನ ಸಭೆಗೆ ಆಯ್ಕೆಯಾಗಿದ್ದರು. ಕರ್ನಾಟಕದ ಏಕೀಕರಣದ ಕೂಗು ಎದ್ದಾಗ ಅದಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಅಖಂಡ ಕರ್ನಾಟಕದ ಏಕೀಕರಣಕ್ಕೆ ಹೋರಾಡಿದವರಲ್ಲಿ ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪನವರು ಅಗ್ರಗಣ್ಯರು. ಹಾಗಾಗಿ ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿ ಎನ್ನುವ ಹೆಗ್ಗಳಿಕೆ ನಿಜಲಿಂಗಪ್ಪನವರಿಗೆ ಸಂದಿದೆ.

ಕರ್ನಾಟಕ ರತ್ನ ಪ್ರಶಸ್ತಿಗೆ ಭಾಜನರಾದ ಅವರಿಗೆ ಕರ್ನಾಟಕದ ಶಿಲ್ಪಿ ಎಂದೂ ಕರೆಯಲಾಗುತ್ತದೆ. ನಾಲ್ಕು ಬಾರಿ ವಿವಿಧ ಸನ್ನಿವೇಶಗಳಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ನಿಜಲಿಂಗಪ್ಪ ಸುಮಾರು ಎಂಟು ವರ್ಷ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದಾರೆ. ಸರಳ, ಸಜ್ಜನ, ನೇರ ನಿಷ್ಠುರ ಮತ್ತು ಪ್ರಾಮಾಣಿಕತೆಯ ಆಡಳಿತಕ್ಕೆ ಹೆಸರಾಗಿದ್ದ ನಿಜಲಿಂಗಪ್ಪನವರು ಎರಡು ಬಾರಿ ರಾಷ್ಟ್ರಪತಿಯಾಗುವ ಅವಕಾಶಕ್ಕೆ ಇಂದಿರಾಗಾಂಧಿ ಮತ್ತು ಮೊರಾರ್ಜಿ ದೇಸಾಯಿಯವರು ಆಹ್ವಾನ ನೀಡಿದರೂ ನಯವಾಗಿಯೇ ತಿರಸ್ಕರಿಸಿದ ಅವರು ರಾಜ್ಯ ರಾಜಕಾರಣದಲ್ಲೇ ಇರುವ ಇಂಗಿತ ವ್ಯಕ್ತಪಡಿಸಿದ್ದರು.

ಅನೇಕ ರಾಜಕೀಯ ಸ್ಥಿತ್ಯಂತರಗಳ ಮಧ್ಯೆ ಇಂದಿರಾಗಾಂಧಿಯೊಂದಿಗಿನ ಭಿನ್ನಾಭಿಪ್ರಾಯದ ಬಳಿಕ 1969ರಲ್ಲಿ ನೀಲಂ ಸಂಜೀವ ರೆಡ್ಡಿ, ಕೆ ಕಾಮರಾಜ್, ಮೊರಾರ್ಜಿ ದೇಸಾಯಿ ಹಾಗೂ ರಾಷ್ಟ್ರ ಮಟ್ಟದ ಮುಖಂಡರೊಡನೆ ಸಂಸ್ಥಾ ಕಾಂಗ್ರೆಸ್‌ಅನ್ನು ಸ್ಥಾಪಿಸಿದ್ದೂ ಕೂಡ ಒಂದು ಇತಿಹಾಸ. ಅವರು 1969ರಲ್ಲಿ ಅವಿಭಜಿತ ಕಾಂಗ್ರೆಸ್‌ನ ಕೊನೆಯ ಅಧ್ಯಕ್ಷರಾಗಿದ್ದರು. ಸದಾ ಅಧಿಕಾರದ ಕುರ್ಚಿಗೆ ಅಂಟಿಕೊಂಡಿರುವ, ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ದುರಾಡಳಿತದ ಇಂದಿನ ಬಹುತೇಕ ರಾಜಕಾರಣಿಗಳಿಗೆ ವಿರುದ್ಧವಾಗಿ ಪ್ರಾಮಾಣಿಕ ಆಡಳಿತ ನಿರ್ವಹಿಸಿದ ತನ್ನ ಕುಟುಂಬಸ್ಥರನ್ನು ಅಧಿಕಾರದಿಂದ ದೂರವಿರಿಸಿ, ರಾಜಕಾರಣದಿಂದಲೂ ದೂರವಿರಿಸಿದ ಮಾದರಿ ರಾಜಕಾರಣದ ಮೇಲ್ಪಂಕ್ತಿ ಹಾಕಿಕೊಟ್ಟ ಸಜ್ಜನ ರಾಜಕಾರಣಿ, ರಾಷ್ಟ್ರನಾಯಕ ಎಸ್ ನಿಜಲಿಂಗಪ್ಪ ಎಂದರೆ ಅತಿಶಯೋಕ್ತಿಯಲ್ಲ.
ಈ ಸುದ್ದಿ ಓದಿದ್ದೀರಾ? ರಾಯಚೂರು | ರಕ್ತಸ್ರಾವದಿಂದ ಬಾಣಂತಿ ಸಾವು; ಮಟಮಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಡಿಸಿ ಭೇಟಿ
ಇಂದಿಗೂ ಅತ್ಯಂತ ಪ್ರೀತಿಯಿಂದ ಸ್ಮರಿಸುವ ಟಿಬೆಟಿಯನ್ ಸಮುದಾಯ, ನಿರಾಶ್ರಿರಾಗಿ ಬಂದಾಗ ಭೂಮಿ ನೀಡಿ ನೆಲೆ ಕಲ್ಪಿಸಿಕೊಟ್ಟಿದ್ದು ಇದೇ ಎಸ್ ನಿಜಲಿಂಗಪ್ಪನವರ ಅಧಿಕಾರದ ಅವಧಿಯಲ್ಲಿಯೇ ಎಂಬುದನ್ನು ಇಂದಿಗೂ ಅನೇಕ ಹಿರಿಯ ಟಿಬೆಟಿಯನ್ನರು ಸ್ಮರಿಸುತ್ತಾರೆ. ಇಂತಹ ಮುತ್ಸದ್ದಿ ನಿಜಲಿಂಗಪ್ಪನವರು ರಾಜ್ಯದಲ್ಲಿ ಹಲವು ಪ್ರಗತಿ ಯೋಜನೆಗಳನ್ನು ಜಾರಿಗೆ ತಂದಿದ್ದರು.
ಡಿಸೆಂಬರ್ 10ರಂದು ಇಂತಹ ಸರಳ, ಸಜ್ಜನ, ಪ್ರಾಮಾಣಿಕ ರಾಜಕಾರಣಿ, ರಾಷ್ಟ್ರನಾಯಕ ನಿಜಲಿಂಗಪ್ಪನವರ ಜನ್ಮದಿನಾಚರಣೆ ನೆರವೇರಿದ ಎರಡು ದಿನಗಳಲ್ಲಿ ಸರ್ಕಾರ ಅವರ ನಿವಾಸವನ್ನು ಖರೀದಿಸಿ ಸ್ಮಾರಕವಾಗಿಸುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿದೆ ಎಂಬುದು ಅತ್ಯಂತ ಸ್ವಾಗತಾರ್ಹ.

ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು