ಒಂದಾದ ಮೇಲೊಂದರಂತೆ ಮಸೀದಿಗಳನ್ನು ವಿವಾದದ ನೆಲವನ್ನಾಗಿಸಲು ಬಲಪಂಥೀಯ, ಹಿಂದುತ್ವವಾದಿಗಳು ಹವಣಿಸುತ್ತಿದ್ದಾರೆ. 14ನೇ ಶತಮಾನದ ಐತಿಹಾಸಿಕ ಅಟಾಲಾ ಮಸೀದಿಯ ಜಾಗದಲ್ಲಿಯೂ ಹಿಂದೆ ಮಂದಿರವಿತ್ತು ಎಂದು ಅರ್ಜಿ ಸಲ್ಲಿಸಿದ್ದಾರೆ. ಸಮೀಕ್ಷೆಗೆ ಕೋರಿದ್ದಾರೆ. ಸದ್ಯ, ಆ ಮಸೀದಿಯ ಸಮೀಕ್ಷೆಗೆ ಅವಕಾಶ ನೀಡಲು ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲಾ ನ್ಯಾಯಾಲಯವು ನಿರಾಕರಿಸಿದೆ.
ಕಳೆದ ವಾರ, ಪೂಜಾ ಸ್ಥಳಗಳ ಕಾಯ್ದೆ-1991ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದ್ದು, ಯಾವುದೇ ಧಾರ್ಮಿಕ ಸ್ಥಳಗಳ ಸಮೀಕ್ಷೆಗೆ ಅವಕಾಶ ನೀಡದಂತೆ ವಿಚಾರಣಾ ನ್ಯಾಯಾಲಯಗಳಿಗೆ ಸೂಚನೆ ನೀಡಿ, ಮಧ್ಯಂತರ ಆದೇಶ ಹೊರಡಿಸಿತ್ತು. ಈ ಬೆನ್ನಲ್ಲೇ, ಜೌನ್‌ಪುರ ಜಿಲ್ಲಾ ನ್ಯಾಯಾಲಯವು ಮಸೀದಿಯ ಸಮೀಕ್ಷೆಗೆ ಅವಕಾಶ ನೀಡಲು ನಿರಾಕರಿಸಿದೆ.
‘ಸ್ವರಾಜ್ ವಾಹಿನಿ ಅಸೋಸಿಯೇಷನ್’ ಎಂಬ ಹಿಂದುತ್ವ ಸಂಘಟನೆ ಮತ್ತು ಸಂತೋಷ್ ಕುಮಾರ್ ಮಿಶ್ರಾ ಎಂಬವರು ಪುರಾತನ ಮಸೀದಿಯ ಜಾಗದಲ್ಲಿ ‘ಅಟಾಲಾ ದೇವಿ ಮಂದಿರ’ ಇತ್ತು. ಸನಾತನದ ಧರ್ಮದ ಅನುಯಾಯಿಗಳು ಅಲ್ಲಿ ಪೂಜೆ ಮಾಡುವ ಹಕ್ಕನ್ನು ಹೊಂದಿದ್ದಾರೆ. ಆ ಮಸೀದಿಯನ್ನು ಮಂದಿರವೆಂದು ಘೋಷಸಬೇಕೆಂದು ಅರ್ಜಿ ಸಲ್ಲಿಸಿದ್ದರು.
ಸದ್ಯ, ಮಸೀದಿಯ ಜಾಗದಲ್ಲಿ ಸಮೀಕ್ಷೆಗೆ ಆದೇಶಿಸಲು ಜೌನ್‌ಪುರ ಜಿಲ್ಲಾ ನ್ಯಾಯಾಲಯದ ಸಿವಿಲ್ ಜಡ್ಜ್ (ಜೆಡಿ) ಸುಧಾ ಶರ್ಮಾ ಅವರು ನಿರಾಕರಿಸಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆಯನ್ನು 2025ರ ಮಾರ್ಚ್ 2ಕ್ಕೆ ಮುಂದೂಡಿದ್ದಾರೆ.
ಮಸೀದಿಯನ್ನು ಮಂದಿರ ಎಂದು ಘೋಷಿಸುವಂತೆ ಕೋರಿ ಈ ಹಿಂದೆ ಹಿಂದುತ್ವ ಸಂಘಟನೆಗಳು ಸಲ್ಲಿಸಿರುವ ಬಹುತೇಕ ಅರ್ಜಿಗಳನ್ನು ದೇಶದ ವಿವಿಧ ನ್ಯಾಯಾಲಯಗಳು ಮಾನ್ಯ ಮಾಡಿವೆ. ಮಸೀದಿಗಳ ಸಮೀಕ್ಷೆಗೆ ಆದೇಶಿಸಿವೆ. ಆದರೆ, ಇದೇ ಮೊದಲ ಬಾರಿಗೆ ಮಸೀದಿಯೊಂದರ ಸಮೀಕ್ಷೆಗೆ ಅವಕಾಶ ನಡೆಸಲು ವಿಚಾರಣಾ ನ್ಯಾಯಾಲಯವೊಂದು ನಿರಾಕರಿಸಿದೆ.
ಬಾಬರಿ ಮಸೀದಿಯ ಜಾಗವನ್ನು ರಾಮಮಂದಿರಕ್ಕೆ ಬಿಟ್ಟುಕೊಟ್ಟು ಸುಪ್ರೀಂ ಕೋರ್ಟ್ ಆದೇಶ ನೀಡಿದ ಬಳಿಕ ದೇಶದಲ್ಲಿ ಮಸೀದಿಯಡಿ ಮಂದಿರ ಹುಡುಕುವ ಪರಿಪಾಠ ಹೆಚ್ಚಾಗುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಮಥುರಾದ ಶಾಹಿ ಈದ್ಗಾ-ಕೃಷ್ಣ ಜನ್ಮಭೂಮಿ, ವಾರಣಾಸಿಯ ಜ್ಞಾನವಾಪಿ, ಸಂಭಾಲ್‌ನ ಶಾಹಿ ಜಾಮಾ ಮಸೀದಿ, ಅಜ್ಮೀರ್ ದರ್ಗಾ ಶರೀಫ್ ಸೇರಿದಂತೆ ವಿವಿಧ ಮಸೀದಿ ದರ್ಗಾಗಳನ್ನು ದೇವಸ್ಥಾನವೆಂದು ಘೋಷಿಸಲು ಕೋರಲಾಗಿದೆ. ಈ ಪೈಕಿ ಬಹುತೇಕ ಪ್ರಕರಣಗಳಲ್ಲಿ ನ್ಯಾಯಾಲಯಗಳು ಸಮೀಕ್ಷೆಗೆ ಆದೇಶಿಸಿದೆ.
1991ರ ಆರಾಧನಾ ಸ್ಥಳಗಳ ಕಾಯ್ದೆ ದೇಶಕ್ಕೆ ಸ್ವಾತಂತ್ರ್ಯ ಬರುವಾಗ ಆರಾಧನಾ ಸ್ಥಳಗಳು ಹೇಗಿತ್ತೋ, ಅದೇ ಸ್ವರೂಪದಲ್ಲಿ ಮುಂದುವರೆಸಲು ಹೇಳುತ್ತದೆ. ಆದರೆ, ನ್ಯಾಯಾಲಯದ ಸಮೀಕ್ಷೆ ಆದೇಶಗಳು ಈ ಕಾನೂನಿಗೆ ವಿರುದ್ದವಾಗಿದೆ. ಈ ಕಳವಳಕಾರಿ ಬೆಳವಣಿಗೆಯ ವಿರುದ್ದ ಹಲವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಮಸೀದಿಗಳ ಸಮೀಕ್ಷೆಗೆ ಆದೇಶಿಸುವುದಕ್ಕೆ ಮಧ್ಯಂತರ ತಡೆ ನೀಡಿದೆ. ಆರಾಧನಾ ಸ್ಥಳಗಳ ಕಾಯ್ದೆಯನ್ನು ಪಾಲಿಸುವಂತೆ ಕೆಳ ನ್ಯಾಯಾಲಯಗಳಿಗೆ ಸೂಚಿಸಿದೆ. ಡಿಸೆಂಬರ್ 12ರಂದು ನೀಡಿರುವ ಈ ಆದೇಶ ಅತ್ಯಂತ ಮಹತ್ವದ್ದಾಗಿದೆ.