ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಮಹಾ ವಿಕಾಸ ಅಘಾಡಿ ಭಾರಿ ಸೋಲನ್ನು ಅನುಭವಿಸಿದ ನಂತರ ಇಂಡಿಯಾ ಒಕ್ಕೂಟವನ್ನು ಮುನ್ನಡೆಸುವ ಟಿಎಂಸಿಯ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರ ಪ್ರಸ್ತಾಪವನ್ನು ಕಾಂಗ್ರೆಸ್ ಬಹಿರಂಗವಾಗಿ ತಿರಸ್ಕರಿಸಿರುವುದು ಕೂಡ ಒಳ್ಳೆಯ ಬೆಳವಣಿಗೆಯಲ್ಲ. ಮಮತಾ ಅವರ ಹೇಳಿಕೆಯ ಬಗ್ಗೆ ಮಾತನಾಡಿದ್ದ ಕಾಂಗ್ರೆಸ್‌ನ ಹಿರಿಯ ನಾಯಕ ಮಾಣಿಕಂ ಟಾಗೋರ್ ‘ಇದೊಂದು ಒಳ್ಳೆಯ ಜೋಕ್’ ಎಂದಿದ್ದರು. ಮಾಣಿಕಂ ಹೇಳಿಕೆಯ ಬಗ್ಗೆ ಕಾಂಗ್ರೆಸ್‌ನ ಹಿರಿಯ ನಾಯಕರು ಇಲ್ಲಿಯವರೆಗೂ ಪ್ರತಿಕ್ರಿಯೆ ನೀಡಿಲ್ಲ.
ಹತ್ತಾರು ಭಿನ್ನಾಭಿಪ್ರಾಯಗಳ ಹೊರತಾಗಿಯೂ ‘ಇಂಡಿಯಾ’ ಒಕ್ಕೂಟದ ಮಿತ್ರಪಕ್ಷಗಳು ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಎನ್‌ಡಿಎ ಒಕ್ಕೂಟದ ವಿರುದ್ಧ ಪ್ರಬಲ ಪೈಪೋಟಿ ನೀಡುವಲ್ಲಿ ಯಶಸ್ವಿಯಾಗಿದ್ದವು. ಮೈತ್ರಿಯನ್ನು ಒಗ್ಗೂಡಿಸಿಕೊಂಡು ಸಂಘ ಪರಿವಾರದಂತ ದೈತ್ಯ ಶಕ್ತಿಯನ್ನು ಹೊಂದಿರುವ ಬಿಜೆಪಿಯನ್ನು ಎದುರಿಸುವುದು ಕಷ್ಟಸಾಧ್ಯವಾಗಿತ್ತು. ಪಶ್ಚಿಮ ಬಂಗಾಳ, ಪಂಜಾಬ್ ಮತ್ತು ಕೇರಳದಲ್ಲಿ ಮಿತ್ರಪಕ್ಷಗಳೆ ಪರಸ್ಪರ ಎದುರಾಳಿ ಪಕ್ಷಗಳಾಗಿದ್ದವು. ಆದರೂ ಇವೆಲ್ಲವನ್ನೂ ಸರಿದೂಗಿಸಿಕೊಂಡು ಹೋದ ಇಂಡಿಯಾ ಒಕ್ಕೂಟ ಒಗ್ಗಟ್ಟಾಗಿ ಹೋರಾಟ ನಡೆಸಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್, ಟಿಎಂಸಿ, ಎಸ್‌ಪಿ, ಡಿಎಂಕೆ, ಮಹಾವಿಕಾಸ್ ಅಘಾಡಿ ಪಕ್ಷಗಳ ಉತ್ತಮ ಪ್ರದರ್ಶನವು ಬಿಜೆಪಿ ವಿರುದ್ಧದ ಹೋರಾಟಕ್ಕೆ ಹೊಸ ವೇದಿಕೆಯನ್ನು ಕಲ್ಪಿಸಿತ್ತು.
ಆದರೆ ವಿಧಾನಸಭೆ ಚುನಾವಣೆಯಲ್ಲಿ ಹರಿಯಾಣದಲ್ಲಿ ಕಾಂಗ್ರೆಸ್‌ನ ಅನಿರೀಕ್ಷಿತ ಸೋಲು ಮತ್ತು ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿಯ ಹೀನಾಯ ಸೋಲು ಮಿತ್ರಪಕ್ಷಗಳ ನಡುವೆ ಉದ್ಭವಿಸುತ್ತಿರುವ ಭಿನ್ನಾಭಿಪ್ರಾಯಗಳನ್ನು ಮತ್ತಷ್ಟು ಹೆಚ್ಚಿಸಿವೆ. ಅದಾನಿ, ಸಂಭಲ್, ಉತ್ತರ ಪ್ರದೇಶ ಉಪಚುನಾವಣೆ ಫಲಿತಾಂಶಗಳ ಬಗ್ಗೆ ಮೈತ್ರಿಕೂಟದ ನಾಯಕರು ತೆಗೆದುಕೊಂಡ ವಿಭಿನ್ನ ನಿಲುವುಗಳು ಇಂಡಿಯಾ ಒಕ್ಕೂಟದ ಭಿನ್ನಾಭಿಪ್ರಾಯಗಳನ್ನು ಮತ್ತಷ್ಟು ಹೆಚ್ಚಿಸಿತು.
ಲೋಕಸಭೆ ಚುನಾವಣೆಯ ನಂತರ ಕಾಂಗ್ರೆಸ್ ಪುನಶ್ಚೇತನದ ಹಾದಿಯಲ್ಲಿ ಮುನ್ನಡೆಯುತ್ತಿದೆ ಎಂಬ ವಿಶ್ವಾಸವಿತ್ತು. ಆದರೆ ಹರಿಯಾಣದಲ್ಲಿನ ಸೋಲು, ಮೈತ್ರಿಕೂಟದ ಗೆಲುವಿನ ಭಾಗವಾಗಿದ್ದರೂ ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್‌ನಲ್ಲಿ ಕಳಪೆ ಪ್ರದರ್ಶನ ಮತ್ತು ಮಹಾರಾಷ್ಟ್ರದಲ್ಲಿ ಭಾರಿ ಸೋಲಿನ ನಂತರ ಪಕ್ಷಕ್ಕೆ ಭಾರಿ ಆಘಾತವಾಗಿದೆ. ಸಂಸತ್ತಿನಲ್ಲಿ ಬಿಜೆಪಿಯನ್ನು ಮಣಿಸಲು ವಿರೋಧ ಪಕ್ಷಗಳು ತಮ್ಮದೆ ಆದ ವಿಭಿನ್ನ ಕಾರ್ಯತಂತ್ರಗಳನ್ನು ಹೊಂದಿದ್ದಾರೆ. ಇವೆಲ್ಲವೂ ಏಕೀಕೃತವಾಗಿಲ್ಲ. ಸಂಭಲ್ ವಿಷಯದಲ್ಲಿ ಎಸ್‌ಪಿ, ಕೇಂದ್ರದ ವಿವಿಧ ಹಗರಣಗಳಲ್ಲಿ ಟಿಎಂಸಿ ಇತರ ಪ್ರತಿಪಕ್ಷಗಳನ್ನು ಬೆಂಬಲಿಸಿತು. ಆದರೆ ಅದಾನಿ ವಿಷಯದ ಬಗ್ಗೆ ಕಾಂಗ್ರೆಸ್ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿತು. ಇಲ್ಲಿಯೇ ಎಲ್ಲವೂ ಸರಿಯಾಗಿಲ್ಲ ಎಂಬುದು ಸ್ಪಷ್ಟವಾಯಿತು.
ಉತ್ತರ ಪ್ರದೇಶ ಉಪಚುನಾವಣೆಯಲ್ಲಿನ ಭಿನ್ನಾಭಿಪ್ರಾಯಗಳ ವಿಷಯದ ಬಗ್ಗೆ ಕಾಂಗ್ರೆಸ್ ಮೌನವಾಗಿರುವ ಬಗ್ಗೆ ಹಲವು ಎಸ್‌ಪಿ ಸಂಸದರು ಅಖಿಲೇಶ್ ಯಾದವ್ ಅವರಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಂಸತ್ತಿನಲ್ಲಿ ಸಂಭಲ್ ಹಿಂಸಾಚಾರದ ವಿಷಯವನ್ನು ಎಸ್‌ಪಿ ಪ್ರಸ್ತಾಪಿಸಿದಾಗ, ಕಾಂಗ್ರೆಸ್ ಉದ್ದೇಶಪೂರ್ವಕವಾಗಿ ಮೌನ ವಹಿಸಿತು. ಆದರೆ ಒಂದು ದಿನದ ನಂತರ ರಾಹುಲ್ ಮತ್ತು ಪ್ರಿಯಾಂಕಾ ಸ್ವತಃ ಸಂಭಲ್‌ಗೆ ತೆರಳಿದರು. ಇದು ಕೂಡ ಎಸ್‌ಪಿ ಹಾಗೂ ಕಾಂಗ್ರೆಸ್ ನಡುವಿನ ಭಿನ್ನಾಭಿಪ್ರಾಯ ಹೆಚ್ಚಾಗಿರುವ ಬಗ್ಗೆ ತಿಳಿಸುತ್ತದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ನೆಹರೂ ನಿಂದಿಸಿದರೆ ಅಲ್ಪರು ಮಹಾನ್ ನಾಯಕರಾಗಲು ಸಾಧ್ಯವೇ?
ವಿಧಾನಸಭೆ ಚುನಾವಣೆಗಳಲ್ಲಿ ಸೀಟು ಹಂಚಿಕೆಯ ಸಮಸ್ಯೆಯನ್ನು ಬಗೆಹರಿಸಲು ಇಂಡಿಯಾ ಮೈತ್ರಿಕೂಟದ ಪಕ್ಷಗಳು ಸರಿಯಾಗಿ ಒಮ್ಮತದ ನಿರ್ಧಾರಕ್ಕೆ ಬಂದಿಲ್ಲ. ಹರಿಯಾಣದಲ್ಲಿ ಎಎಪಿ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದರೆ ಫಲಿತಾಂಶ ಬೇರೆಯಾಗಬಹುದಿತ್ತು. ಇದೀಗ ಎಎಪಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇವೆಲ್ಲ ಕಾರಣಗಳು ಇಂಡಿಯಾ ಒಕ್ಕೂಟದ ಭವಿಷ್ಯದ ಮೇಲೆ ಪ್ರಶ್ನಾರ್ಥಕ ಚಿಹ್ನೆಗಳನ್ನು ಮೂಡಿಸಿವೆ. ಈ ನಡುವೆ ದೆಹಲಿ ಚುನಾವಣೆಯಲ್ಲಿ ಎಎಪಿಗೆ ಸಮಾಜವಾದಿ ಪಕ್ಷ ಬೆಂಬಲ ನೀಡಿದೆ. ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಈಗಾಗಲೇ ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷಕ್ಕೆ ಬೇಷರತ್ ಬೆಂಬಲ ಘೋಷಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಜೊತೆ ಸೀಟು ಒಪ್ಪಂದ ಮಾಡಿಕೊಂಡಿದ್ದ ಅಖಿಲೇಶ್ ಯಾದವ್ ಪಕ್ಷ ಕೆಲವು ಸ್ಥಾನಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿತ್ತು. ದೆಹಲಿಯಲ್ಲಿ ಯಾವುದೇ ಮೈತ್ರಿ ಇಲ್ಲ ಎಂದು ಕಾಂಗ್ರೆಸ್ ಮತ್ತು ಎಎಪಿ ಈಗಾಗಲೇ ತಿಳಿಸಿದ್ದು, ತಮ್ಮ ಅಭ್ಯರ್ಥಿಗಳನ್ನು ಹೆಸರಿಸಲು ಮುಂದಾಗಿವೆ. ಇದರೊಂದಿಗೆ ಮಹಾರಾಷ್ಟ್ರದ ನಂತರ ದೆಹಲಿಯಲ್ಲಿ ಇಂಡಿಯಾ ಒಕ್ಕೂಟದಲ್ಲಿ ಬಿರುಕುಗಳು ಮತ್ತಷ್ಟು ಗಟ್ಟಿಯಾದವು.
ಮಮತಾಗೆ ಬೆಂಬಲ ನೀಡದ ಕಾಂಗ್ರೆಸ್
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಮಹಾ ವಿಕಾಸ ಅಘಾಡಿ ಭಾರಿ ಸೋಲನ್ನು ಅನುಭವಿಸಿದ ನಂತರ ಇಂಡಿಯಾ ಒಕ್ಕೂಟವನ್ನು ಮುನ್ನಡೆಸುವ ಟಿಎಂಸಿಯ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರ ಪ್ರಸ್ತಾಪವನ್ನು ಕಾಂಗ್ರೆಸ್ ಬಹಿರಂಗವಾಗಿ ತಿರಸ್ಕರಿಸಿರುವುದು ಕೂಡ ಒಳ್ಳೆಯ ಬೆಳವಣಿಗೆಯಲ್ಲ. ಮಮತಾ ಅವರ ಹೇಳಿಕೆಯ ಬಗ್ಗೆ ಮಾತನಾಡಿದ್ದ ಕಾಂಗ್ರೆಸ್‌ನ ಹಿರಿಯ ನಾಯಕ ಮಾಣಿಕಂ ಟಾಗೋರ್ ‘ಇದೊಂದು ಒಳ್ಳೆಯ ಜೋಕ್’ ಎಂದಿದ್ದರು. ಮಾಣಿಕಂ ಹೇಳಿಕೆಯ ಬಗ್ಗೆ ಕಾಂಗ್ರೆಸ್‌ನ ಹಿರಿಯ ನಾಯಕರು ಇಲ್ಲಿಯವರೆಗೂ ಪ್ರತಿಕ್ರಿಯೆ ನೀಡಿಲ್ಲ. ಕೈ ನಾಯಕನ ಹೇಳಿಕೆ ಇಂಡಿಯಾ ಒಕ್ಕೂಟದಲ್ಲಿ ವಿರೋಧಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಇಂಡಿಯಾ ಮೈತ್ರಿಕೂಟವು ಸುಮಾರು ಎರಡು ವರ್ಷಗಳಿಂದ ಅಸ್ತಿತ್ವದಲ್ಲಿದೆ. ಕಳೆದ ವರ್ಷ ಪಾಟ್ನಾ, ಬೆಂಗಳೂರು, ಮುಂಬೈ ಮತ್ತು ದೆಹಲಿಯಲ್ಲಿ ನಾಲ್ಕು ಸಭೆಗಳನ್ನು ನಡೆಸಿದೆ. ಈ ವರ್ಷದ ಜನವರಿಯಲ್ಲಿ ಮಮತಾ ಬ್ಯಾನರ್ಜಿ ವರ್ಚುವಲ್ ಸಭೆಯನ್ನು ನಡೆಸಿದ್ದರು.
ವರ್ಚುವಲ್ ಸಭೆಯಲ್ಲಿ, ಬಿಹಾರ ಸಿಎಂ ನಿತೀಶ್ ಕುಮಾರ್ ಅವರನ್ನು ಇಂಡಿಯಾ ಒಕ್ಕೂಟದ ಸಂಯೋಜಕರನ್ನಾಗಿ ಮಾಡುವ ಸಲಹೆಯನ್ನು ಬ್ಯಾನರ್ಜಿ ತಳ್ಳಿಹಾಕಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಧ್ಯಕ್ಷರಾಗಲು ಬೆಂಬಲ ಸೂಚಿಸಿದ್ದರು. ಖರ್ಗೆ ಒಕ್ಕೂಟದ ಅಧ್ಯಕ್ಷರು ಆಗಿ ನೇಮಕಗೊಂಡರು. ಅನಂತರ ನಡೆದ ಹಲವು ರಾಜಕೀಯ ಬೆಳವಣಿಗೆಯಲ್ಲಿ ನಿತೀಶ್ ಕುಮಾರ್ ಆರ್‌ಜೆಡಿಯೊಂದಿಗಿನ ಮನಸ್ತಾಪದೊಂದಿಗೆ ಇಂಡಿಯಾ ಒಕ್ಕೂಟ ಬಿಟ್ಟು ಎನ್‌ಡಿಎ ಸೇರಿಕೊಂಡರು. ನಿತೀಶ್ ಬಿಜೆಪಿ ಬಣ ಸೇರಿದರೂ ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟ ಉತ್ತಮ ಸಾಧನೆ ಮಾಡಿತ್ತು. ಕಾಂಗ್ರೆಸ್ ಕೂಡ ದಶಕಗಳ ನಂತರ 100ರ ಸಮೀಪ ಸೀಟು ಗಳಿಸಿತ್ತು.
ಇವಿಎಂ ಪರ ನಿಂತ ಒಮರ್ ಅಬ್ದುಲ್ಲಾ, ಟಿಎಂಸಿ
ಇಂಡಿಯಾ ಒಕ್ಕೂಟದ ಮತ್ತೊಂದು ಮಿತ್ರಪಕ್ಷವಾದ ಜಮ್ಮು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಕೂಡ ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದಂತಿದೆ. ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಅವರು ಇವಿಎಂ ಬಗ್ಗೆ ದೂಷಿಸುವುದನ್ನು ಕಾಂಗ್ರೆಸ್ ಮೊದಲು ಬಿಡಬೇಕು ಎಂದು ಹೇಳಿದ್ದಾರೆ. ನಿಮ್ಮ 100ಕ್ಕೂ ಹೆಚ್ಚು ಸಂಸದರು ಅದೇ ಇವಿಎಂನಿಂದ ಚುನಾಯಿತರಾದಾಗ, ಅದನ್ನು ನಿಮ್ಮ ಪಕ್ಷದ ಗೆಲುವು ಎಂದು ನೀವು ಆಚರಿಸುತ್ತೀರಿ. ನಂತರ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ನಿಮ್ಮ ಪಕ್ಷ ಸೋತ ತಕ್ಷಣ ಇವಿಎಂ ಬಗ್ಗೆ ದೂಷಿಸುತ್ತೀರಿ ಎಂದು ಹೇಳಿರುವುದು ಇಂಡಿಯಾ ಒಕ್ಕೂಟಕ್ಕೆ ಮಾತ್ರವಲ್ಲ ಕಾಂಗ್ರೆಸಿಗೂ ಕಸಿಯುಸಿಯುಂಟು ಮಾಡಿದೆ. ಅದೇ ರೀತಿ ನಿತೀಶ್ ಕುಮಾರ್ ಇಂಡಿಯಾ ಒಕ್ಕೂಟ ಬಿಟ್ಟು ಹೋಗಲು ಅಧ್ಯಕ್ಷೀಯ ಪದವಿಯೇ ಕಾರಣವಾಗಿದೆ. ಅವರನ್ನು ಇಂಡಿಯಾ ಒಕ್ಕೂಟದ ಅಧ್ಯಕ್ಷರನ್ನಾಗಿ ಮಾಡಿದ್ದರೆ ಎನ್‌ಡಿಎ ಸೇರುತ್ತಿರಲಿಲ್ಲ ಎಂದು ಒಮರ್ ಅಬ್ದುಲ್ಲಾ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷನ ಮಾತಿಗೆ ಟಿಎಂಸಿ ಕೂಡ ಬೆಂಬಲ ವ್ಯಕ್ತಪಡಿಸಿದೆ. ‘ಇವಿಎಂಗಳನ್ನು ಹ್ಯಾಕ್ ಮಾಡಬಹುದು ಎಂದು ಯಾರಾದರೂ ಭಾವಿಸಿದರೆ, ಅವರು ಚುನಾವಣಾ ಆಯೋಗವನ್ನು ಭೇಟಿ ಮಾಡಿ ಮತ್ತು ಇವಿಎಂಗಳನ್ನು ಹೇಗೆ ಹ್ಯಾಕ್ ಮಾಡಬಹುದು ಎಂಬುದನ್ನು ತೋರಿಸಬೇಕು. ಕೇವಲ ಬೇಕಾಬಿಟ್ಟಿ ಹೇಳಿಕೆಗಳನ್ನು ನೀಡುವ ಮೂಲಕ ಏನನ್ನೂ ಸಾಧಿಸಲು ಸಾಧ್ಯವಿಲ್ಲ’ ಎಂದು ಟಿಎಂಸಿಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ತಿಳಿಸಿದ್ದಾರೆ. ಈ ಇಬ್ಬರು ಹಿರಿಯ ನಾಯಕರ ಮಾತುಗಳು ಎರಡು ಪಕ್ಷಗಳು ಇಂಡಿಯಾ ಒಕ್ಕೂಟದಿಂದ ದೂರ ಹೋಗುವ ಸೂಚನೆಯಂತಿವೆ.
ಶಿವಸೇನಾ ನಾಯಕರ ನಿಲುವುಗಳು
ಇತ್ತೀಚಿಗೆ ಮಹಾರಾಷ್ಟ್ರದ ಉದ್ಧವ್ ಬಣದ ಶಿವಸೇನಾ ನಾಯಕರ ಹೇಳಿಕೆಗಳು ಕಾಂಗ್ರೆಸ್ ಸೇರಿದಂತೆ ಇಂಡಿಯಾ ಒಕ್ಕೂಟದ ಮಿತ್ರ ಪಕ್ಷಗಳ ನಾಯಕರಿಗೆ ಇರುಸುಮುರುಸು ಉಂಟುಮಾಡುತ್ತಿವೆ. ಸೈದ್ಧಾಂತಿಕ ರೀತಿಯ ಹಾಗೂ ಕೋಮು ಭಾವನೆಯನ್ನು ಕೆರಳಿಸುವಂತಹ ಭಾಷಣಗಳನ್ನು ಬಹಿರಂಗವಾಗಿಯೇ ಶಿವಸೇನಾ ನಾಯಕರು ಮಾಡುತ್ತಿದ್ದಾರೆ. ಇಂಡಿಯಾ ಒಕ್ಕೂಟ ಮಾತ್ರವಲ್ಲದೆ, ಮಹಾರಾಷ್ಟ್ರದಲ್ಲಿರುವ ಮಹಾವಿಕಾಸ್ ಅಘಾಡಿಯ ಮಿತ್ರಪಕ್ಷಗಳು ಉದ್ಧವ್ ಬಣದಿಂದ ಹೊರಬರಬೇಕೆಂದು ಒತ್ತಾಯಿಸುತ್ತಿದ್ದಾರೆ. ಕರ್ನಾಟಕದ ಬೆಳಗಾವಿ ವಿಚಾರದಲ್ಲಿ ಶಿವಸೇನೆಯ ಉದ್ಧವ್ ಬಣ ಮೊದಲಿನಿಂದಲೂ ವಿರೋಧ ನಿಲುವು ತಾಳುತ್ತಿದೆ.
ಈ ಮೊದಲು ರಾಜ್ ಠಾಕ್ರೆ, ಉದ್ಧವ್ ಠಾಕ್ರೆ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ವಿವಾದಿತ ಹೇಳಿಕೆ ನೀಡಿ ಜನರಲ್ಲಿ ದ್ವೇಷ ಭಾವನೆ ಹುಟ್ಟು ಹಾಕುತ್ತಿದ್ದರು. ಈಗ ಅವರ ಸಾಲಿಗೆ ಉದ್ದವ್ ಠಾಕ್ರೆ ಪುತ್ರ ಶಾಸಕ ಆದಿತ್ಯ ಠಾಕ್ರೆ ಕೂಡ ಸೇರ್ಪಡೆಗೊಂಡಿದ್ದಾರೆ. ಕಾಂಗ್ರೆಸ್, ಶಿವಸೇನೆ ಇಂಡಿಯಾ ಒಕ್ಕೂಟದ ಮೈತ್ರಿ ಪಕ್ಷಗಳೆಂದು ಮರೆತು ಬೆಳಗಾವಿ ಕರ್ನಾಟಕಕ್ಕೆ ಸೇರಬೇಕೆಂದು ಮತ್ತೆ ವಿವಾದ ಸೃಷ್ಟಿಸುತ್ತಿದ್ದಾರೆ. ಇಂತಹ ಹೇಳಿಕೆಗಳು ಇಂಡಿಯಾ ಒಕ್ಕೂಟದಲ್ಲಿ ಮತ್ತಷ್ಟು ಬಿರುಕುಗಳು ಸೃಷ್ಟಿಯಾಗಲು ಪ್ರಮುಖ ಕಾರಣವಾಗುತ್ತವೆ.
ಇಂಡಿಯಾ ಒಕ್ಕೂಟ ಏನು ಮಾಡಬೇಕು
ಇಂಡಿಯಾ ಒಕ್ಕೂಟ ಬಿರುಕುಗಳನ್ನು ತಡೆದು ಮತ್ತಷ್ಟು ಗಟ್ಟಿಯಾಗಲು ಈಗಿನಿಂದಲೇ ಸಜ್ಜುಗೊಳ್ಳಬೇಕು. 2029ರ 19ನೇ ಲೋಕಸಭೆ ಚುನಾವಣೆಗೆ ಇನ್ನೂ ನಾಲ್ಕೂವರೆ ವರ್ಷಗಳ ಸಮಯವಿದೆ. 2027ರಲ್ಲಿ ಉತ್ತರ ಪ್ರದೇಶ ಸೇರಿದಂತೆ ಹಲವು ವಿಧಾನಸಭೆ ಚುನಾವಣೆಗಳು ನಡೆಯಲಿವೆ. ಸಾರ್ವತ್ರಿಕ ಚುನಾವಣೆಯ ನಂತರ ಕಾಂಗ್ರೆಸ್ ಸೇರಿದಂತೆ ಮಿತ್ರಪಕ್ಷಗಳು ಸೋಲಿನ ಆಘಾತ ಅನುಭವಿಸಿವೆ. ಕಾಂಗ್ರೆಸ್ ಸೇರಿದಂತೆ ಇಂಡಿಯಾ ಒಕ್ಕೂಟದ ಪ್ರಮುಖ ನಾಯಕರು ಮತ್ತೆ ಯಶಸ್ವಿಯಾಗಲು ಸಂಘಟನಾ ತಂತ್ರವನ್ನು ಮತ್ತಷ್ಟು ಚುರುಕುಗೊಳಿಸಬೇಕಿದೆ. ಸೋಲಿನಿಂದ ಹತಾಶಗೊಳ್ಳದೆ ಕ್ಷಿಪ್ರವಾಗಿ ಚೇತರಿಸಿಕೊಳ್ಳಬೇಕಾದ ಅಗತ್ಯವಿದೆ.
ಕಾಂಗ್ರೆಸ್ ಕೂಡ ತನ್ನ ನಿಲುವುಗಳನ್ನು ಬದಲಿಸಿಕೊಳ್ಳಬೇಕು. ಟಿಎಂಸಿಯ ಮಮತಾ ಬ್ಯಾನರ್ಜಿಗೆ ಅವಕಾಶ ನೀಡಲು ಹಿಂಜರಿಯಬಾರದು. ಯಾರೊಬ್ಬರನ್ನು ಅಸಮರ್ಥ ಎಂದು ನೋಡುವ ಅಗತ್ಯವಿಲ್ಲ. ಮಮತಾ ಅವರು ಪಶ್ಚಿಮ ಬಂಗಾಳದಲ್ಲಿ ಸಿಪಿಐ, ಬಿಜೆಪಿಯನ್ನು ಮಣಿಸಿ ಮಾಡಿದ ರಾಜಕೀಯ ಕ್ರಾಂತಿ ಕೂಡ ಅಸಾಧ್ಯವಾದುದು. 1989ರಲ್ಲಿ ವಿ ಪಿ ಸಿಂಗ್ ಮಾಡಿದ್ದನ್ನು ಮಮತಾ ಇಂಡಿಯಾ ಒಕ್ಕೂಟದಲ್ಲಿ ಮಾಡಿ ತೋರಿಸಿದರೆ ಅಚ್ಚರಿಯೇನಿಲ್ಲ. ವಿ ಪಿ ಸಿಂಗ್ ಆ ಕಾಲದಲ್ಲಿಯೇ ಎಲ್ಲ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಎಡ ಮತ್ತು ಬಲಪಂಥದಿಂದ ಬೆಂಬಲಿತವಾದ ಕೇಂದ್ರೀಯ ಮತ್ತು ಪ್ರಾದೇಶಿಕ ಶಕ್ತಿಗಳನ್ನು ಒಟ್ಟುಗೂಡಿಸುವ ಮೂಲಕ ಆಗಿನ ಪ್ರಬಲ ಕಾಂಗ್ರೆಸ್‌ಗೆ ರಾಷ್ಟ್ರೀಯ ಮಟ್ಟದಲ್ಲಿ ಪರ್ಯಾಯ ಸರ್ಕಾರವನ್ನು ರಚಿಸುವಲ್ಲಿ ಯಶಸ್ವಿಯಾದರು. ದೇಶದಲ್ಲಿ ಪ್ರಜಾಪ್ರಭುತ್ವ ಬಲಿಷ್ಠವಾಗಿ ಮನಸ್ಸುಗಳು ಒಟ್ಟುಗೂಡಬೇಕಷ್ಟೆ.
