ಈ ದಿನ ಸಂಪಾದಕೀಯ | ದೇವಾಲಯ ಪ್ರವೇಶಕ್ಕೆ ಅಂಗಲಾಚುವ ದಲಿತರಿಗೆ ಬಾಬಾಸಾಹೇಬರು ಹೇಳಿದ್ದ ಪಾಠಗಳೇನು?

Date:

Advertisements

ದೇವಾಲಯ ಪ್ರವೇಶ ಮಾತ್ರಕ್ಕೆ ಸೀಮಿತವಾಗದೆ ಚಾತುರ್ವರ್ಣ್ಯ ಮತ್ತು ಜಾತಿಪದ್ಧತಿಯ ನಿರ್ಮೂಲನೆಯೇ ತಮ್ಮ ಅಂತಿಮ ಗುರಿ ಎಂದು ಮಹಾತ್ಮ ಗಾಂಧಿ ಮತ್ತು ಹಿಂದೂ ಸುಧಾರಕರು ಸಾರಿ ಹೇಳುವರೇ, ಅದಕ್ಕಾಗಿ ದುಡಿಯುವ ಕೆಚ್ಚನ್ನು ತೋರುವರೇ ಎಂಬುದು ಡಾ ಅಂಬೇಡ್ಕರ್ ಪ್ರಶ್ನೆಯಾಗಿತ್ತು.

ಹಿಂದೂ ಮಂದಿರಗಳಿಗೆ ‘ಅಸ್ಪೃಶ್ಯ’ರ ಪ್ರವೇಶ ಇಂದಿಗೂ ದೊಡ್ಡ ಪ್ರಶ್ನೆಯಾಗಿಯೇ ಉಳಿದಿದೆ. ಹೆಚ್ಚೆಂದರೆ ಪೊಲೀಸರ  ರಕ್ಷಣೆಯಲ್ಲಿ ಮುಜರಾಯಿ ದೇವಾಲಯಗಳನ್ನು ಪ್ರವೇಶಿಸಬಹುದು. ಪ್ರವೇಶ ನಿರಾಕರಿಸಿ ಹಿಂದಕ್ಕೆ ಕಳಿಸುವ, ಪ್ರಶ್ನಿಸಿದರೆ ಥಳಿಸುವ, ಸಾಯಬಡಿಯುವ ಪ್ರಕರಣಗಳು ಜರುಗುತ್ತಲೇ ಇವೆ. ಹರಿಜನರಿಗೆ ಪ್ರವೇಶ ನಿಷಿದ್ಧ ಎಂಬ ಬೋರ್ಡುಗಳು ಗ್ರಾಮಭಾರತದಿಂದ ಈಗಲೂ ತೊಲಗಿಲ್ಲ.

ಖ್ಯಾತ ಸಂಗೀತಗಾರ ಮತ್ತು ರಾಜ್ಯಸಭಾ ಸದಸ್ಯ ಇಳಯರಾಜಾ ತಮಿಳುನಾಡಿನ ವಿರುಧುನಗರ ಜಿಲ್ಲೆಯ ಆಂಡಾಳ್ ದೇವಾಲಯದಲ್ಲಿ ಇಂತಹುದೇ ಅವಹೇಳನ ಎದುರಿಸಿದ್ದು ಇತ್ತೀಚಿನ ಘಟನೆ.

Advertisements

ಹಿಂದೂ ಅಲ್ಲ ಎಂಬ ಕಾರಣಕ್ಕಾಗಿ ಖ್ಯಾತ ಗಾಯಕ ಯೇಸುದಾಸನ್ ಅವರಿಗೆ ಕೇರಳದ ಗುರುವಾಯೂರಪ್ಪನ್ ದೇವಾಲಯ ಮತ್ತೆ ಮತ್ತೆ ಪ್ರವೇಶ ನಿರಾಕರಿಸಿತು. ಹಿಂದೂಗಳೆಲ್ಲ ಒಂದು ಎಂದು ಹೇಳುವವರು ‘ಅಸ್ಪೃಶ್ಯ ದಲಿತ’ ಎಂಬ ಕಾರಣಕ್ಕಾಗಿ ಪ್ರಸಿದ್ಧ ಸಂಗೀತ ನಿರ್ದೇಶಕ ಇಳಯರಾಜಾ ಅವರಿಗೆ ಗರ್ಭಗುಡಿಯ ಸಾಮೀಪ್ಯ ನಿರಾಕರಿಸಲಾಗಿದೆ. ಯೇಸುದಾಸ್ ಅವರ ಕೃಷ್ಣಭಕ್ತಿ, ಇಳಯರಾಜಾ ಅವರ ಹಿಂದೂ ಧಾರ್ಮಿಕ ಶ್ರದ್ಧೆ ಯಾವುದನ್ನೂ ಸಂಪ್ರದಾಯವಾದಿಗಳು ಲೆಕ್ಕಕ್ಕೆ ಇಡಲಿಲ್ಲ.

‘ಜಿರಳೆಯಾಗಿಯೋ ನೊಣವಾಗಿಯೋ ಹುಟ್ಟಿದ್ದರೂ ಗುರುವಾಯೂರು ಮಂದಿರ ಪ್ರವೇಶ ಸಾಧ್ಯವಿತ್ತು. ಮನುಷ್ಯನಾದ ಕಾರಣ ನನಗೆ ಆ ಭಾಗ್ಯ ಸಿಗಲಿಲ್ಲ’ ಎಂದು ಕೊರಗಿದ್ದರು ಯೇಸುದಾಸ್. ದಲಿತರನ್ನು ಹಿಂದೂ ಎಂದು ಲೆಕ್ಕಕ್ಕೆ ಇಟ್ಟುಕೊಂಡು ‘ಆಟಕ್ಕೆ ಮತ್ತು ಊಟಕ್ಕೆ’ ಹೊರಗಿಡಲಾಗಿದೆ.

ತಮ್ಮನ್ನು ಒಳಗೆ ಬಿಟ್ಟುಕೊಳ್ಳದ ದೇವಾಲಯಗಳ ಪ್ರವೇಶಕ್ಕಾಗಿ ದಮನಿತರು ಯಾಕಾಗಿ ಹಾತೊರೆದು ಅಂಗಲಾಚಬೇಕು ಎಂಬ ಪ್ರಶ್ನೆಯನ್ನು ಖುದ್ದು ಬಾಬಾ ಸಾಹೇಬರೂ ಕೇಳಿದ್ದರು. ಹಿಂದೂವಾಗಿ ಹುಟ್ಟಿದ್ದೇನೆ, ಹಿಂದೂವಾಗಿಯೇ ಸಾಯಲಾರೆ ಎಂದ ಅವರು ಕಟ್ಟಕಡೆಗೆ ಆಲಿಂಗಿಸಿಕೊಂಡಿದ್ದು ಬೌದ್ಧ ಧರ್ಮವನ್ನು.

ಬಾಬಾ ಸಾಹೇಬರು ನಾಸಿಕದ ಕಾಳಾರಾಮ ದೇವಸ್ಥಾನ ಪ್ರವೇಶಕ್ಕಾಗಿ ಚಳವಳಿ ನಡೆಸಿ 94 ವರ್ಷಗಳೇ ಉರುಳಿವೆ.  ದೇವಾಲಯ ಪ್ರವೇಶ ದಮನಿತರ ಸಮಸ್ಯೆಗಳಿಗೆ ಪರಿಹಾರ ಅಲ್ಲವೆಂಬ ವಾಸ್ತವ ಬಾಬಾ ಸಾಹೇಬರಿಗೆ ತಿಳಿದಿತ್ತು. ಆದರೆ ಹಕ್ಕು ಸಾಧನೆಗಾಗಿ, ಆತ್ಮಗೌರವಕ್ಕಾಗಿ ಕಾಳಾರಾಮ್ ಆಂದೋಲನ ನಡೆಸಿದ್ದರು. ಆನಂತರ ಅದರ ಗೊಡವೆಯಿಂದ ದೂರ ಉಳಿದರು.

‘ಶೋಷಿತ ವರ್ಗದವರು ದೈವಭಕ್ತರಾಗಬೇಕು ಎಂದಾಗಲೀ, ದೇವಾಲಯದ ಪ್ರವೇಶಕ್ಕೆ ಅವಕಾಶ ದೊರೆತ ಮಾತ್ರಕ್ಕೆ ಅವರು ಹಿಂದೂ ಸಮಾಜದ ಅವಿಭಾಜ್ಯ ಅಂಗ ಆಗುತ್ತಾರೆಂದಾಗಲೀ, ದೇವಾಲಯ ಪ್ರವೇಶ ಸತ್ಯಾಗ್ರಹವನ್ನು ನಾನು ಆರಂಭಿಸಲಿಲ್ಲ. ಶೋಷಿತ ವರ್ಗದ ಜನರನ್ನು ಹುರಿದುಂಬಿಸಲು ಮತ್ತು ಹಿಂದು ಸಮಾಜದಲ್ಲಿ ತಮ್ಮ ಸ್ಥಾನಮಾನವನ್ನು ಅರಿತುಕೊಳ್ಳಲಿ ಎಂಬುದು ನನ್ನ ಉದ್ದೇಶವಾಗಿತ್ತು. ಈ ಕೆಲಸದಲ್ಲಿ ಯಶಸ್ವಿಯಾಗಿದ್ದೇನೆ.  ಇದರ ಹೊರತಾಗಿ ದೇವಾಲಯ ಪ್ರವೇಶದಲ್ಲಿ ಯಾವುದೇ ಪ್ರಯೋಜನ ಇಲ್ಲ. ಶೋಷಿತ ವರ್ಗದ ಜನ ತಮ್ಮ ಎಲ್ಲ ಗಮನವನ್ನು ರಾಜಕೀಯ ಮತ್ತು ಶಿಕ್ಷಣ ಕ್ಷೇತ್ರದತ್ತ ಹರಿಸಬೇಕು. ಈ ಎರಡರ ಮಹತ್ವವನ್ನು ಬಹಳ ಬೇಗನೆ ಅವರು ಅರಿತುಕೊಳ್ಳುವರು ಎಂದು ಆಶಿಸುತ್ತೇನೆ’ ಎಂದಿದ್ದರು ಅಂಬೇಡ್ಕರ್.

1933ರ ಫೆಬ್ರವರಿ ನಾಲ್ಕರಂದು ಅಂಬೇಡ್ಕರ್ ಮತ್ತು ಗಾಂಧಿ ಯರವಾಡ ಜೈಲಿನಲ್ಲಿ ಭೇಟಿಯಾಗಿದ್ದರು. ಬ್ರಿಟಿಷ್ ಆಡಳಿತದ ಮದ್ರಾಸ್ ಪ್ರೆಸಿಡೆನ್ಸಿಯ ಇಂಪೀರಿಯಲ್ ಲೆಜಿಸ್ಲೇಟಿವ್ ಕೌನ್ಸಿಲ್ ನಲ್ಲಿ ಡಾ ಪಿ ಸುಬ್ಬರಾಯನ್ ಅವರು ದೇವಾಲಯ ಪ್ರವೇಶ ಮಸೂದೆಯನ್ನು ಮಂಡಿಸಿದ್ದ ಹಿನ್ನೆಲೆ ಈ ಭೇಟಿಗೆ ಇತ್ತು. ದಲಿತರು ಮತ್ತು ಹಿಂದೂ ತಳವರ್ಗಗಳ ಜನರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶ ನೀಡುವ ಮತ್ತು ಪ್ರವೇಶ ನಿರಾಕರಣೆಯನ್ನು ಶಿಕ್ಷಾರ್ಹ ಅಪರಾಧವೆಂದು ಈ ಮಸೂದೆ ಪರಿಗಣಿಸಿತ್ತು. ಮಸೂದೆಯ ಪ್ರತಿಯನ್ನು ಗಾಂಧೀಜಿಗೆ ಕಳಿಸಿದ್ದರು ಸುಬ್ಬರಾಯನ್. ಈ ಮಸೂದೆಯನ್ನು ಬೆಂಬಲಿಸುವಂತೆ ಅಂಬೇಡ್ಕರ್ ಅವರನ್ನು ಗಾಂಧಿ ಕೋರಿದ್ದರು. ಈ ಕೋರಿಕೆಯನ್ನು ಅಂಬೇಡ್ಕರ್ ನೇರವಾಗಿ ತಿರಸ್ಕರಿಸಿದ್ದರು.

ಹತ್ತು ದಿನಗಳ ನಂತರ 1933ರ ಫೆಬ್ರವರಿ 14ರಂದು ಅಂಬೇಡ್ಕರ್ ಈ ಕುರಿತು ವಿವರವಾದ ಹೇಳಿಕೆಯೊಂದನ್ನು ನೀಡಿದ್ದರು. ಅಸ್ಪೃಶ್ಯತೆಯ ಆಚರಣೆ ಕಾನೂನುಬಾಹಿರ ಎಂದು ಸಾರದೆ ಇರುವ ದೇವಾಲಯ ಪ್ರವೇಶ ಮಸೂದೆ ಅವಾಸ್ತವಿಕ ಎಂದು  ಟೀಕಿಸಿದ್ದರು. ಕೇವಲ ದೇವಾಲಯ ಪ್ರವೇಶವಷ್ಟೇ ತಮ್ಮ ಆದ್ಯತೆ ಅಲ್ಲ ಎಂಬುದು ಅವರು ನೀಡಿದ ಸ್ಪಷ್ಟನೆಯಾಗಿತ್ತು.

ಅವರು ಮುಂದಿಟ್ಟಿದ್ದ ವಾದ ಹೀಗಿತ್ತು- ‘ಶೋಷಿತರು ಹಿಂದೂ ಧರ್ಮವೇ ತಮ್ಮ ಧರ್ಮವೆಂದು ಬಗೆಯಬೇಕಿದ್ದರೆ ಅದು ಸಾಮಾಜಿಕ ಸಮಾನತೆಯ ಧರ್ಮ ಆಗಬೇಕು. ಹಿಂದೂ ಧಾರ್ಮಿಕ ಸಂಹಿತೆಗೆ ಕೇವಲ ದೇವಾಲಯ ಪ್ರವೇಶದ ತಿದ್ದುಪಡಿ ತಂದ ಮಾತ್ರಕ್ಕೆ ಹಿಂದೂ ಧರ್ಮ ಸಮಾನ ಸ್ಥಾನಮಾನ ನೀಡುವ ಧರ್ಮ ಆಗಿಬಿಡುವುದಿಲ್ಲ. ಈ ಸಮಾನ ಸ್ಥಾನಮಾನದ ತತ್ವವನ್ನು ಹಿಂದೂ ಧರ್ಮ ಗುರುತಿಸುವುದೇ ಇಲ್ಲ.

ಹಿಂದೂ ಧರ್ಮ ಸಾಮಾಜಿಕ ಸಮಾನತೆಯ ಧರ್ಮವಾಗಬೇಕಿದ್ದರೆ ಕೇವಲ ದೇವಾಲಯ ಪ್ರವೇಶದ ತಿದ್ದುಪಡಿ ಸಾಲದು. ಚಾತುರ್ವರ್ಣ್ಯ ಸಿದ್ಧಾಂತ ನಿರ್ಮೂಲ ಆಗಬೇಕು. ಎಲ್ಲ ಅಸಮಾನತೆಗಳ ಬೇರು ಮಾತ್ರವಲ್ಲದೆ ಜಾತಿಪದ್ಧತಿ ಮತ್ತು ಅಸ್ಪೃಶ್ಯತೆಯ ಪೋಷಕ ಈ ಚಾತುರ್ವರ್ಣ್ಯ. ಜಾತಿಪದ್ಧತಿ ಮತ್ತು ಅಸ್ಪೃಶ್ಯತೆ ಅಸಮಾನತೆಯ ಹೊರರೂಪಗಳಷ್ಟೇ ಆಗಿವೆ. ಅವುಗಳ ಪ್ರಾಣವಿರುವುದು ಚಾತುರ್ವರ್ಣ್ಯ ಸಿದ್ಧಾಂತದಲ್ಲಿ. ಈ ಸಿದ್ದಾಂತವನ್ನು ಕಿತ್ತೊಗೆಯದೆ ಇದ್ದರೆ, ದಮನಿತರು ದೇವಾಲಯ ಪ್ರವೇಶಕ್ಕೇ ತೃಪ್ತರಾಗಿ ಒಪ್ಪಿ ಕುಳಿತುಕೊಳ್ಳುವುದಿಲ್ಲ. ದೇವಾಲಯ ಪ್ರವೇಶವನ್ನು ತಿರಸ್ಕರಿಸುವುದಷ್ಟೇ ಅಲ್ಲದೆ ಹಿಂದೂ ಧರ್ಮವನ್ನೂ ತಿರಸ್ಕರಿಸುತ್ತಾರೆ. ಚಾತುರ್ವರ್ಣ್ಯ ಮತ್ತು ಜಾತಿಪದ್ಧತಿ ದಮನಿತರ ಆತ್ಮಗೌರವವನ್ನು ಗುರುತಿಸುವುದಿಲ್ಲ. ಇವುಗಳು ಎಲ್ಲಿಯವರೆಗೂ ಮುಂದುವರೆಯುತ್ತವೆಯೋ ಅಲ್ಲಿಯವರೆಗೆ ದಮನಿತ ವರ್ಗಗಳನ್ನು ಕೀಳು ಎಂದೇ ಬಗೆಯಲಾಗುತ್ತದೆ.

ದಮನಿತ ಸಮುದಾಯಗಳ ಜನ ದೇವಾಲಯ ಪ್ರವೇಶವನ್ನು ಬಯಸುವರೇ ಅಥವಾ ಬಯಸುವುದಿಲ್ಲವೇ? ಈ ಮುಖ್ಯ ಪ್ರಶ್ನೆಯನ್ನು ಎರಡು ನಿಲುವುಗಳ ಮೂಲಕ ಎದುರುಗೊಳ್ಳಬೇಕಾಗುತ್ತದೆ. ಒಂದನೆಯದು ಭೌತಿಕ ದೃಷ್ಟಿಕೋನದ್ದು. ಶಿಕ್ಷಣ, ಉನ್ನತ ಉದ್ಯೋಗ ಹಾಗೂ ಸಂಪಾದನೆಯ ದಾರಿಗಳನ್ನು ಹಿಡಿಯಬೇಕು. ಸಾಮಾಜಿಕ ಬದುಕಿನ ತಕ್ಕಡಿಯಲ್ಲಿ ಸೂಕ್ತ ಸ್ಥಾನಮಾನ ಪಡೆದರೆಂದರೆ ಗೌರವಾರ್ಹ ಆಗುತ್ತಾರೆ. ಸಂಪ್ರದಾಯವಾದಿಗಳು ಅವರನ್ನು ನೋಡುವ ರೀತಿನೀತಿ ನಿಶ್ಚಿತವಾಗಿ ಬದಲಾಗುತ್ತದೆ. ಬದಲಾಗದೆ ಹೋದರೆ ಅದರಿಂದ ದಮನಿತ ಸಮುದಾಯಗಳಿಗೆ ಯಾವ ನಷ್ಟವೂ ಇಲ್ಲ. ಎರಡನೆಯದು ಆತ್ಮಗೌರವದ ವಾದ.

ಬಹಳ ಹಿಂದಿನ ಮಾತೇನೂ ಅಲ್ಲ, ‘ನಾಯಿಗಳು ಮತ್ತು ಭಾರತೀಯರಿಗೆ ಪ್ರವೇಶವಿಲ್ಲ’ ಎಂಬ ಬೋರ್ಡುಗಳನ್ನು ಭಾರತದಲ್ಲಿ ಐರೋಪ್ಯರು ನಡೆಸುತ್ತಿದ್ದ ಕ್ಲಬ್ ಗಳು ಮತ್ತು ಸಾಮಾಜಿಕ ರೆಸಾರ್ಟುಗಳ ಕದಗಳ ಮೇಲೆ ತೂಗು ಹಾಕಲಾಗುತ್ತಿತ್ತು. ಹಿಂದೂಗಳು ನಡೆಸುವ ದೇವಾಲಯಗಳ ಹೊರಗೆ ಇಂದು ಇಂತಹುದೇ ಬೋರ್ಡುಗಳಿರುತ್ತವೆ. ಒಂದೇ ವ್ಯತ್ಯಾಸ. ಎಲ್ಲ ಹಿಂದುಗಳು ಮತ್ತು ಪ್ರಾಣಿಗಳಿಗೆ ಪ್ರವೇಶವಿದೆ ಅಸ್ಪೃಶ್ಯರಿಗೆ ಅವಕಾಶವಿಲ್ಲ ಎಂದು ಈ ಬೋರ್ಡುಗಳು ಸಾರುತ್ತವೆ. ಐರೋಪ್ಯರ ಕ್ಲಬ್ ಗಳು ಮತ್ತು ಹಿಂದೂ ದೇವಾಲಯದ ಬೋರ್ಡುಗಳ ನಡುವೆ ಸಮಾನ ಅಂಶವಿದೆ. ಆದರೆ ಹಿಂದೂಗಳು ತಮ್ಮನ್ನು ಒಳಗೆ ಸೇರಿಸುವಂತೆ ಅಹಂಕಾರಿ ಐರೋಪ್ಯರನ್ನು ಬೇಡಲಿಲ್ಲ.

ಹಿಂದೂಗಳು ಅಹಂಕಾರದಿಂದ  ಹೊರಗಿಟ್ಟಿರುವ ಜಾಗಕ್ಕೆ ತನ್ನನ್ನು ಬಿಟ್ಟುಕೊಳ್ಳುವಂತೆ ಅಸ್ಪೃಶ್ಯ ಯಾಕೆ ಅಂಗಲಾಚಬೇಕು? ನಿನ್ನ ದೇವಾಲಯದ ಕದವನ್ನು ನನಗಾಗಿ ತೆರೆಯುವುದು ಬಿಟ್ಟದ್ದು ನಿನಗೆ ಸೇರಿದ್ದು. ಅದು ನನಗೆ ಹೋರಾಟದ ಸಂಗತಿಯೇನೂ ಅಲ್ಲ. ಮೂಲಭೂತ ಮನುಷ್ಯ ಘನತೆಯನ್ನು ಗೌರವಿಸದೆ ಇರುವುದು ದುರ್ನಡತೆ ಎಂದು ನಿನಗೆ ಅನ್ನಿಸಿದರೆ ನಿನ್ನ ದೇವಾಲಯದ ಬಾಗಿಲನ್ನು ತೆರೆದಿಟ್ಟು ಸಜ್ಜನನಾಗು. ಆದರೆ ಒಳ್ಳೆಯ ಮನುಷ್ಯನಾಗುವುದಕ್ಕಿಂತ ಹಿಂದೂ ಆಗುವುದೇ ಸರಿ  ಅನ್ನಿಸಿದರೆ (ದೇವಾಲಯದ) ಬಾಗಿಲುಗಳನ್ನು ಮುಚ್ಚಿಕೊಂಡು ಹಾಳಾಗಿ ಹೋಗು, ನೀನುಂಟು, ನಿನ್ನ ದೇವಸ್ಥಾನ ಉಂಟು, ನನಗೇನು ಎಂದು ಐಹಿಕ ಕ್ಷೇಮದಲ್ಲಿ ಆಸಕ್ತನಾಗಿರುವ ದಮನಿತ ವ್ಯಕ್ತಿ ಹೇಳಬೇಕು.

ದೇವಾಲಯ ಪ್ರವೇಶಕ್ಕೆ ಅವಕಾಶ ನೀಡುವ ಈ ಪ್ರಸ್ತಾಪದ ಹಿಂದಿನ ಉದ್ದೇಶವಾದರೂ ಏನು? ದೇವಾಲಯ ಪ್ರವೇಶವೇ ದಮನಿತರ ಸಾಮಾಜಿಕ ಸ್ಥಾನಮಾನ ಮುನ್ನಡೆಯ ಅಂತಿಮ ಗುರಿಯೇ? ಅಥವಾ ಅದು ಮೊದಲ ಹೆಜ್ಜೆಯೇ, ಅದು ಮೊದಲ ಹೆಜ್ಜೆಯೇ ಆಗಿದ್ದರೆ ಅಂತಿಮ ಗುರಿ ಯಾವುದು? ದೇವಾಲಯ ಪ್ರವೇಶ ಅಂತಿಮ ಗುರಿ ಎಂಬುದನ್ನು ದಮನಿತ ವರ್ಗಗಳು ಎಂದೆಂದಿಗೂ ಒಪ್ಪುವುದಿಲ್ಲ. ಅವರು ಅದನ್ನು ತಿರಸ್ಕರಿಸುವರು ಮಾತ್ರವಲ್ಲದೆ, ಹಿಂದು ಸಮಾಜ ತಮ್ಮನ್ನು ತಿರಸ್ಕರಿಸಿರುವ ಕಾರಣ ತಮ್ಮ ‘ಹಣೆಬರಹ’ವನ್ನು ಬೇರೆಲ್ಲಾದರೂ ಅರಸಲು ಸ್ವತಂತ್ರರು. ದೇವಾಲಯ ಪ್ರವೇಶ ಅವರ ಪಾಲಿಗೆ ಮೊದಲ ಹೆಜ್ಜೆ ಮಾತ್ರ.

ದಮನಿತರು ತಮಗೆ ಸಮಾನತೆ ಮತ್ತು ಸಾಮಾಜಿಕ ಸ್ಥಾನಮಾನ ನೀಡುವ ಧರ್ಮವನ್ನು ಬಯಸುತ್ತಾರೆ. ಚಾತುರ್ವರ್ಣ್ಯ ಮತ್ತು ಜಾತಿ ಪದ್ಧತಿಯನ್ನು ತ್ಯಜಿಸಿ ಹಿಂದೂ ಶಾಸ್ತ್ರಗಳಿಂದ ಕಿತ್ತು ಹಾಕಿದರೆ ಮಾತ್ರವೇ ತಾವು ಹಿಂದೂಗಳಾಗಿ ಉಳಿಯುತ್ತೇವೆ ಎಂದು ದಮನಿತರು ಹೇಳಬೇಕು. ದೇವಾಲಯ ಪ್ರವೇಶ ಮಾತ್ರಕ್ಕೆ ಸೀಮಿತವಾಗದೆ ಚಾತುರ್ವರ್ಣ್ಯ ಮತ್ತು ಜಾತಿಪದ್ಧತಿಯ ನಿರ್ಮೂಲನೆಯೇ ತಮ್ಮ ಅಂತಿಮ ಗುರಿ ಎಂದು ಮಹಾತ್ಮ ಗಾಂಧಿ ಮತ್ತು ಹಿಂದೂ ಸುಧಾರಕರು ಸಾರಿ ಹೇಳುವರೇ? ಅದಕ್ಕಾಗಿ ದುಡಿಯುವ ಕೆಚ್ಚನ್ನು ತೋರಿಸುವರೇ?

ದಮನಿತರು ದೇವಾಲಯ ಪ್ರವೇಶ ತಿದ್ದುಪಡಿಯನ್ನು ಒಪ್ಪಿದ ಮಾತ್ರಕ್ಕೆ ಚಾತುರ್ವರ್ಣ ಮತ್ತು ಜಾತಿಪದ್ಧತಿಯ ವಿರುದ್ಧ ಅವರ ಹೋರಾಟವನ್ನು ನಿಲ್ಲಿಸಬೇಕೆಂದು ಅರ್ಥವಲ್ಲ ಎಂಬುದಾಗಿ ಮಹಾತ್ಮಾ ಮತ್ತು ಸುಧಾರಕ ಹಿಂದೂಗಳು ವಾದಿಸಬಹುದು. ಈ ವಾದ ಸರಿಯಿರಬಹುದು. ಈ ವಾದವನ್ನು ಮುಂದಿಡುವಾಗ ತಾವು ಯಾರ ಜೊತೆ ನಿಲ್ಲುತ್ತಾರೆಂದು ಮಹಾತ್ಮ ಗಾಂಧಿ ಹೇಳಬೇಕು. ಅವರು ನನ್ನ ಎದುರಾಳಿಗಳ ಜೊತೆ ನಿಲ್ಲುವುದೇ ಆದಲ್ಲಿ, ನಾನು ಗಾಂಧಿ ಪಾಳೆಯದಲ್ಲಿ ಇರುವುದು ಸಾಧ್ಯವಿಲ್ಲ. ನನ್ನ ಜೊತೆ ನನ್ನ ಪಾಳೆಯದಲ್ಲಿ ನಿಲ್ಲುವುದೇ ಆದಲ್ಲಿ ಅವರು ಈಗಿಂದೀಗಲೇ ನಿಲ್ಲಬೇಕು”.

ಇದನ್ನೂ ಓದಿ ಅಂಬೇಡ್ಕರ್ ನಮಗೆ ವ್ಯಸನ ಅಲ್ಲ, ನಿತ್ಯ ಸ್ಮರಣೆ; ಅಮಿತ್‌ ಶಾಗೆ ಬಹಿರಂಗ ಪತ್ರ ಬರೆದ ಸಿಎಂ ಸಿದ್ದರಾಮಯ್ಯ

ಬಾಬಾಸಾಹೇಬರ ಈ ಮಾತುಗಳು ದಲಿತರ ಕಣ್ಣು ತೆರೆಸಬೇಕಿದೆ. ಆಳುವವರು ಬಾಬಾಸಾಹೇಬರನ್ನು ಕೇವಲ ಪ್ರತಿಮೆಯಾಗಿ ವೈಭವೀಕರಿಸಿ, ಅವರ ವಿಚಾರಗಳನ್ನು ಮೂಲೆಗುಂಪು ಮಾಡುತ್ತ ಬಂದಿದ್ದಾರೆ. ದಲಿತರ ಕಣ್ಣುಗಳಿಗೆ ಮಣ್ಣೆರಚಿದ್ದಾರೆ. ಆದರೆ ದಲಿತರು ಖುದ್ದು ಆಳುವವರ ದಾರಿ ತುಳಿದು ತಮ್ಮ ಕಣ್ಣುಗಳಿಗೆ ತಾವೇ ಮಣ್ಣೆರಚಿಕೊಳ್ಳುವುದು ಆತ್ಮಹತ್ಯೆಯೇ ಸರಿ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X