ಅಂಬೇಡ್ಕರ್ ಮೇಲೆ ಅಮಿತ್ ಶಾ ಅಸಹನೆ; ಬಾಬಾ ಸಾಹೇಬರ ವಿರುದ್ಧ ಸಂಘಿಗಳ ದ್ವೇಷ ಹೊಸದಲ್ಲ!

Date:

Advertisements

‘ಅಂಬೇಡ್ಕರ್ ಅವರ ಮೇಲೆ ಮತ್ತು ಅಸ್ಪೃಶ್ಯರ ಮೇಲೆ ಹಣವನ್ನು ಖರ್ಚು ಮಾಡುವುದೆಂದರೆ ಹಾವಿಗೆ ಹಾಲೆರದಂತೆ’ ಎಂದಿದ್ದು ಇದೇ ಆರ್‌ಎಸ್‌ಎಸ್‌ನ ಮೂಂಜೆ

ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ತಮ್ಮ ಅಸಹನೆಯನ್ನು, ದ್ವೇಷವನ್ನು ಹೊರಹಾಕಿರುವುದು ವಿವಾದವನ್ನು ಹುಟ್ಟುಹಾಕಿದೆ. ಸಚಿವರು ಕ್ಷಮೆ ಕೇಳಬೇಕೆಂದು ಪ್ರತಿಪಕ್ಷಗಳು ಆಗ್ರಹಿಸುತ್ತಿವೆ.

“ಈಗ ಅಂಬೇಡ್ಕರ್ ಅಂಬೇಡ್ಕರ್, ಅಂಬೇಡ್ಕರ್ ಎನ್ನುವುದು ಫ್ಯಾಷನ್ ಆಗಿಬಿಟ್ಟಿದೆ. ಇಷ್ಟು ಸಲ ದೇವರ ನಾಮವನ್ನು ಜಪಿಸಿದ್ದರೆ ನಿಮಗೆ ಏಳೇಳು ಜನ್ಮಗಳಲ್ಲೂ ಸ್ವರ್ಗ ಪ್ರಾಪ್ತಿಯಾಗುತಿತ್ತು” ಎಂದಿದ್ದಾರೆ ಶಾ.

Advertisements

ಅಂಬೇಡ್ಕರ್ ಅವರು‌ ಈ ದೇಶದಲ್ಲಿ ಹುಟ್ಟಿರದಿದ್ದರೆ, ಅಸಹಾಯಕ ಸಮುದಾಯಗಳು ಅಸ್ಪೃಶ್ಯತೆ, ಜಾತೀಯತೆಯ ಕೂಪದಲ್ಲಿ ನರಳಬೇಕಾಗುತ್ತಿತ್ತು. ಸಂವಿಧಾನ ಮತ್ತು ತಮ್ಮ ಬರಹ ಹಾಗೂ ಭಾಷಣಗಳಿಂದ ತಳಸಮುದಾಯಗಳಿಗೆ ಶಕ್ತಿ ತುಂಬಿದ ಬಾಬಾ ಸಾಹೇಬರ ಹೆಸರು ಹೇಳದೆ, ದೇವರುಗಳನ್ನು ಜಪ ಮಾಡುತ್ತಾ ಕೂತಿದ್ದರೆ ದೇವರ ಪಾದ ಸೇರಬೇಕಾಗುತ್ತಿತ್ತು ಎಂಬ ತೀಕ್ಷ್ಣ ಪ್ರತಿಕ್ರಿಯೆಗಳು ಈಗ ವ್ಯಕ್ತವಾಗಿವೆ.

ಅಂಬೇಡ್ಕರ್ ಅವರ ವಿಚಾರಗಳ ಕುರಿತು ಮೊದಲಿನಿಂದಲೂ ಸಂಘಪರಿವಾರದವರಿಗೆ ವಿಪರೀತ ಅಸಹನೆ ಮತ್ತು ಅಸಹಿಷ್ಣುತೆ. ಇತ್ತೀಚಿನ ವರ್ಷಗಳವರೆಗೂ ಸಂಘಿಕೂಟವು ಅಂಬೇಡ್ಕರ್ ಅವರನ್ನು ವಿರೋಧಿಸುತ್ತಲೇ ಬಂದಿತ್ತು. ಆದರೆ ಅಂಬೇಡ್ಕರ್ ಅವರ ಹೆಸರಿನ ಹಿಂದಿರುವ ಬೃಹತ್ ಜನಸಮುದಾಯವನ್ನು ಎದುರಿಸಲಾಗದು ಎಂಬುದನ್ನು ಅರಿತ ಬಳಿಕ ಅಂಬೇಡ್ಕರ್‌ ಹೆಸರಲ್ಲಿ ಕೋಮುವಾದವನ್ನು ಬಿತ್ತುವ ಕೆಲಸ ಆರಂಭಿಸಿದರು. ಅಸಮಾನತೆಯಿಂದ ನೊಂದು ಹಿಂದೂಧರ್ಮವನ್ನು ತೊರೆದು ಬೌದ್ಧದಮ್ಮಕ್ಕೆ ಮರಳಿದ ಬಾಬಾ ಸಾಹೇಬರನ್ನು ಹಿಂದುತ್ವದ ಭಾಗವೆಂಬಂತೆ ಬಿಂಬಿಸುವ ಕಸರತ್ತನ್ನು ಆರಂಭಿಸಿದರು. ‘ಅಂಬೇಡ್ಕರ್ ವರ್ಸಸ್ ಮುಸ್ಲಿಂ’ ಎಂದು ಚಿತ್ರಿಸಿ ತಳಸಮುದಾಯಗಳನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟಿ ಒಡೆದು ಆಳುವ ಕಾರ್ಯತಂತ್ರವನ್ನು ರೂಪಿಸಲಾಯಿತು. ಆದರೆ ಅಂಬೇಡ್ಕರ್ ಅವರ ವಿಚಾರಗಳು ಸೂರ್ಯನಷ್ಟೇ ಪ್ರಖರ. ಅವುಗಳನ್ನು ಅಷ್ಟು ಸುಲಭವಾಗಿ ತಿರುಚಲು ಸಾಧ್ಯವಿಲ್ಲ ಎಂಬುದು ಸಂಘಿಗಳಿಗೂ ಗೊತ್ತಿದೆ. ಯಾವಾಗ ಸಂವಿಧಾನ ಬದಲಿಸುವ ಹುನ್ನಾರಗಳು ಶುರುವಾದವೋ ಅಂಬೇಡ್ಕರ್, ಅಂಬೇಡ್ಕರ್ ಎಂಬುದು ಸಹಜವಾಗಿ ಹೆಚ್ಚಾಯಿತು. ವರ್ತಮಾನದ ಸಮಸ್ಯೆಗಳಿಗೆ ಅಂಬೇಡ್ಕರ್ ಚಿಂತನೆಗಳು ಸಿದ್ಧೌಷಧವಾಗಿರುವುದನ್ನು ನಮ್ಮ ಜನಪ್ರತಿನಿಧಿಗಳು ಮತ್ತೆ ಮತ್ತೆ ಪ್ರಸ್ತಾಪಿಸುತ್ತಲೇ ಬಂದಿದ್ದಾರೆ. ಆದರೆ ಮೊದಲಿನಿಂದಲೂ ಯಾರು ಅಂಬೇಡ್ಕರ್ ದ್ವೇಷಿಗಳಾಗಿದ್ದಾರೋ ಅವರ ಕಿವಿಗೆ ಅಂಬೇಡ್ಕರ್ ಎಂಬ ಹೆಸರು ಕಾದ ಸೀಸ ಊಯ್ದಂತೆ ಆಗಿರುವುದು ಅಮಿತ್ ಶಾ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ.

ಇದನ್ನೂ ಓದಿರಿ: ಅಂಬೇಡ್ಕರ್ ಬಗ್ಗೆ ಹೇಳಿಕೆ; ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ವಿಪಕ್ಷಗಳ ಪ್ರತಿಭಟನೆ

ಸಂವಿಧಾನ ಬದಲಿಸುವ ಮಾತುಗಳಿಂದಾಗಿ ಬಹುಮತ ಕಳೆದುಕೊಂಡಿರುವ ಸಂಘಿ ಕೂಟವು ಇತಿಹಾಸ ತಿರುಚುವಿಕೆಯ ಕೆಲಸವನ್ನು ನಿಲ್ಲಿಸಿಲ್ಲ. ಇದರ ಮುಂದುವರಿದ ಭಾಗವಾಗಿ ‘ಸಿಟಿಜನ್ಸ್ ಫ಼ಾರ್ ಸೋಷಿಯಲ್ ಜಸ್ಟಿಸ್’ ಹೆಸರಿನಲ್ಲಿ ಕರ್ನಾಟಕದ ಸಂಘಪರಿವಾರವು ‘ನ. 26ರಿಂದ ಜನವರಿ 26ರವರೆಗೆ ‘ಸಂವಿಧಾನ ಸನ್ಮಾನ ಅಭಿಯಾನ’ ನಡೆಸುತ್ತಿದೆ. ಆ ಮೂಲಕ ಅಂಬೇಡ್ಕರ್ ವಾರಸುದಾರರು ನಾವೆಂದು ಬಿಂಬಿಸಿಕೊಳ್ಳುವ ವ್ಯರ್ಥ ಕಸರತ್ತನ್ನು ಅದು ನಡೆಸುತ್ತಿರುವ ಹೊತ್ತಿನಲ್ಲೇ ಅಮಿತ್ ಶಾ ಹೇಳಿಕೆ ಹೊರಬಿದ್ದಿದ್ದು, ಸಂಘಪರಿವಾರ ನಿಜವಾದ ಮನಸ್ಸು ಮತ್ತೆ ಅನಾವರಣವಾಗಿದೆ.

ಈ ನಾಡಿನ ಪ್ರಖರ ಚಿಂತಕರಲ್ಲಿ ಒಬ್ಬರಾದ ಶಿವಸುಂದರ್ ಅವರು ಇತ್ತೀಚೆಗೆ ‘ವಾರ್ತಾಭಾರತಿ’ ಪತ್ರಿಕೆಯಲ್ಲಿ ‘ಅಂಬೇಡ್ಕರ್ ದ್ವೇಷಿ, ಸಂವಿಧಾನ ದ್ರೋಹಿ ಸಂಘಿಗಳ ಸಂವಿಧಾನ ಸನ್ಮಾನ ಅಭಿಯಾನ’ ಎಂಬ ಸರಣಿಯನ್ನೇ ಆರಂಭಿಸಿ, 11 ಕಂತುಗಳ ಲೇಖನಗಳನ್ನು ಪ್ರಕಟಿಸಿದ್ದಾರೆ. ಅಂಬೇಡ್ಕರ್ ವಿಚಾರದಲ್ಲಿ ಸಂಘಿ ದುಷ್ಟಕೂಟವು ಆರಂಭದಿಂದಲೂ ಎಂತಹ ದ್ವೇಷವನ್ನು ಕಾರಿಕೊಳ್ಳುತ್ತಾ ಬಂದಿದೆ ಎಂಬುದನ್ನು, ಆರ್‌ಎಸ್‌ಎಸ್ ಮತ್ತು ಬಿಜೆಪಿಯಲ್ಲಿನ ಸಂವಿಧಾನ ಪ್ರೇಮವು ಎಷ್ಟರ ಮಟ್ಟಿಗೆ ಬೂಟಾಟಿಕೆಯದ್ದು ಎಂಬುದನ್ನು, ಇಂದಿರಾಗಾಂಧಿಯವರು ತುರ್ತುಪರಿಸ್ಥಿತಿಯನ್ನು ಹೇರಿ ಈ ದೇಶದ ಪ್ರಜಾತಂತ್ರವನ್ನು ಬುಡಮೇಲು ಮಾಡಲು ಯತ್ನಿಸಿದಾಗ ಈ ಸಂಘಪರಿವಾರದವರು ಹೇಗೆಲ್ಲ ಇಂದಿರಾಗಾಂಧಿಯವರ  ಪಾದಸೇವೆ  ಮಾಡಲು ಅವಣಿಸಿದರು ಎಂಬುದನ್ನು ವಿಸ್ತೃತವಾಗಿ ಶಿವಸುಂದರ್ ವಿವರಿಸಿದ್ದಾರೆ. ಅವರ ಸರಣಿ ಲೇಖನದಲ್ಲಿ ಪ್ರಸ್ತಾಪಿಸಲಾಗಿರುವ ‘ಅಂಬೇಡ್ಕರ್ ಮೇಲೆ ಸಂಘಪರಿವಾರ ಹೊಂದಿರುವ ದ್ವೇಷದ ಇತಿಹಾಸ’ದ ಕುರಿತ ಕೆಲವು ಉಲ್ಲೇಖನಗಳನ್ನು ನಿಮ್ಮೊಂದಿಗೆ ಇಲ್ಲಿ ಹಂಚಿಕೊಳ್ಳಬೇಕಿದೆ.

1935ರಲ್ಲಿ ಅಂಬೇಡ್ಕರ್ ಅವರು ಹಿಂದೂ ಧರ್ಮ ತೊರೆಯುತ್ತೇನೆ ಎಂದು ಘೋಷಿಸಿದ್ದರು. ಹಿಂದೂ ಮಹಾಸಭಾದ ನಾಯಕ ಮತ್ತು ಆರ್‌ಎಸ್‌ಎಸ್ ಸಂಸ್ಥಾಪಕರಲ್ಲಿ ಒಬ್ಬರಾದ ಮೂಂಜೆ ತಮ್ಮ ಡೈರಿಯಲ್ಲಿ ಬರೆದಿದ್ದೇನು ಗೊತ್ತೆ? “ಇವತ್ತಿನ ಸಂದರ್ಭದಲ್ಲಿ ನಾವು ನಮ್ಮ ಎಲ್ಲ ಶಕ್ತಿಯನ್ನು, ಹಣ ಮತ್ತು ಇನ್ನಿತರ ಸಂಪನ್ಮೂಲಗಳನ್ನು ಒಗ್ಗೂಡಿಸಿ ಮಾಡಬೇಕಾದ ತುರ್ತು ಕೆಲಸವೆಂದರೆ ಸವರ್ಣೀಯ ಹಿಂದೂಗಳ ಸೈನಿಕ ತರಬೇತಿ. ಆ ತರಬೇತಿಯನ್ನು ಪಡೆದವರು ನಂತರದಲ್ಲಿ ಹಿಂದೂ ಧರ್ಮವನ್ನು ತೊರೆಯುವವರನ್ನು ಮತ್ತು ಆ ರೀತಿ ಹಿಂದೂಶ್ರದ್ಧೆಯನ್ನು ತೊರೆಯುವಂತೆ ಮಾಡುವವರನ್ನು ಶಿಕ್ಷಿಸಲು ಸಮರ್ಥರಾಗುತ್ತಾರೆ”- ಇದು ಮೂಂಜೆಯವರ ಮಾತು; ಇದು ಅಂಬೇಡ್ಕರ್ ಅವರಿಗೆ ಹಾಕಿದ ಜೀವಬೆದರಿಕೆಯೂ ಹೌದು.

‘ಮೂಂಜೆ ಡೈರಿ’ಯಲ್ಲಿ ಇಂತಹ ಹಲವಾರು ಆಣಿಮುತ್ತುಗಳು ಸಿಗುತ್ತವೆ. ಅಸ್ಪೃಶ್ಯರನ್ನು ಮೇಲೆತ್ತುವ ಪ್ರಯತ್ನಗಳ ವಿರುದ್ಧ ಅವರು ಸಾಕಷ್ಟು ಕಾರಿಕೊಳ್ಳುತ್ತಾರೆ. ‘ಅಂಬೇಡ್ಕರ್ ಅವರ ಮೇಲೆ ಮತ್ತು ಅಸ್ಪೃಶ್ಯರ ಮೇಲೆ ಹಣವನ್ನು ಖರ್ಚು ಮಾಡುವುದೆಂದರೆ ಹಾವಿಗೆ ಹಾಲೆರದಂತೆ. ನಾವು ಅಸ್ಪೃಶ್ಯರಿಗೆ ಯಾವುದೇ ಸಹಾಯವನ್ನು ಮಾಡದೆ ಅವರ ಕಷ್ಟಗಳನ್ನು ಅವರೇ ಅನುಭವಿಸಲು ಬಿಟ್ಟುಬಿಡಬೇಕು’ ಎನ್ನುತ್ತಾರೆ ಮೂಂಜೆ.

ಅಂಬೇಡ್ಕರ್ ಅವರು ಬೌದ್ಧಧಮ್ಮಕ್ಕೆ ಮರಳಿದ್ದು ಸಂಘಿ ಕೂಟಕ್ಕೆ ನುಂಗಲಾರದ ತುತ್ತಾಗಿತ್ತು. ಸಾವರ್ಕರ್ ತನ್ನ ‘Six Glorious Epochs Of Indian History’ ಕೃತಿಯಲ್ಲಿ, ಮುಸ್ಲಿಂ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರವನ್ನು ಸಮರ್ಥಿಸುವಷ್ಟು ವಿಕೃತಿಯನ್ನು ಮೆರೆದಿದ್ದಾರೆ. ಅದೇ ಕೃತಿಯಲ್ಲಿ ಬೌದ್ಧಧಮ್ಮದ ಬಗ್ಗೆ ಬಹಳ ತುಚ್ಛವಾಗಿ ಸಾವರ್ಕರ್ ಬರೆಯುತ್ತಾರೆ. “ಬೌದ್ಧ ಧರ್ಮವು ಜಾತಿ, ಜನಾಂಗ ಅಥವಾ ರಾಷ್ಟ್ರೀಯತೆಗಳ ವ್ಯತ್ಯಾಸಗಳನ್ನೇ ಗುರುತಿಸಲಿಲ್ಲ. ಇಂಥಾ ರಾಷ್ಟ್ರದ್ರೋಹಿ, ಭಾರತ ದ್ರೋಹಿ, ಚಿಂತನೆಗಳ ಮೂಲಕ ಬೌದ್ಧ ಪ್ರಚಾರಕರು ಭಾರತದ ಜನರನ್ನು ದಾರಿತಪ್ಪಿಸಲು ಪ್ರಾರಂಭಿಸಿದರು” ಎಂದು ಬರೆದಿರುವುದನ್ನು ನೋಡಿದರೆ, ಸಾವರ್ಕರ್ ಸಂತತಿಯವರಿಗೆ ಬೌದ್ಧತತ್ವವನ್ನು ಪ್ರತಿಪಾದಿಸುವ ಸಂವಿಧಾನದ ಬಗ್ಗೆ ಅಸಹನೆ ಹಳೆಯದ್ದೆಂಬುದು ಸ್ಪಷ್ಟವಾಗುತ್ತದೆ. 1956ರಲ್ಲಿ ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ಮರಳಿದಾಗ ಹೇಡಿ ಧರ್ಮಕ್ಕೆ ಸೇರಿದ ಅಂಬೇಡ್ಕರ್ ಎಂದು ಸಾವರ್ಕರ್ ತುಚ್ಛವಾಗಿ ಮಾತನಾಡುತ್ತಾರೆ. ಅದಕ್ಕೆ ಅಂಬೇಡ್ಕರ್ ಮಾರ್ಗದರ್ಶನದಲ್ಲಿ ಬರುತ್ತಿದ್ದ ಪ್ರಬುದ್ಧ ಭಾರತ್ ಪತ್ರಿಕೆಯು ‘ಸಾವರ್ಕರ್‌ಗೆ ವೀರ ಎಂದು ಕರೆದವರು ಯಾರು?’ ಎಂಬ ಪ್ರಶ್ನೆಯನ್ನು ಮುಂದೆ ತರುತ್ತದೆ.

ಈ ದೇಶದ ಬಹುಸಂಖ್ಯಾತ ದಲಿತಾದಿ, ಶೂದ್ರರನ್ನು, ಮಹಿಳೆಯರನ್ನು ಗುಲಾಮಗಿರಿಗೆ ದೂಡುವ ಮನುಸ್ಮೃತಿಯನ್ನು ಬಾಬಾ ಸಾಹೇಬರು 1927ರ ಡಿಸೆಂಬರ್‌ನಲ್ಲಿ ಸುಟ್ಟುಹಾಕಿದ್ದು ಚಾರಿತ್ರಿಕ ವಿದ್ಯಮಾನ. ಆದರೆ ಸಾವರ್ಕರ್, “ವೇದಗಳ ನಂತರದಲ್ಲಿ ನಮ್ಮ ಹಿಂದೂ ರಾಷ್ಟ್ರವು ಅತ್ಯಂತ ಪೂಜನೀಯ ಎಂದು ಗೌರವಿಸುವ ಶಾಸ್ತ್ರಗ್ರಂಥವೆಂದರೆ ಮನುಸ್ಮೃತಿ” ಎಂದು ಬಣ್ಣಿಸುತ್ತಾರೆ. ಮುಂದುವರಿದು, “ಇದು ಅನಾದಿ ಕಾಲದಿಂದಲೂ ನಮ್ಮ ಸಂಸ್ಕೃತಿ-ಸಂಪ್ರದಾಯಗಳ, ವಿಚಾರ ಹಾಗೂ ಆಚಾರಗಳ ಆಧಾರಪ್ರಾಯವಾದ ಗ್ರಂಥವಾಗಿದೆ. ಈ ಪುಸ್ತಕವು ನಮ್ಮ ರಾಷ್ಟ್ರವು ಶತಮಾನಗಳಿಂದ ಸಾಧಿಸುತ್ತಿರುವ ಆಧ್ಯಾತ್ಮಿಕ ಹಾಗೂ ದೈವಿಕ ಮುನ್ನೆಡೆಗಳನ್ನು ಸೂತ್ರೀಕರಿಸಿದೆ. ಇಂದಿಗೂ ಈ ದೇಶದ ಕೋಟ್ಯಂತರ ಜನರ ಜೀವನ ಮತ್ತು ನಡೆಗಳು ಮನುಸ್ಮೃತಿಯನ್ನೇ ಅನುಸರಿಸುತ್ತವೆ. ಇಂದು ಮನುಸ್ಮೃತಿಯೇ ಹಿಂದೂ ಕಾನೂನು ಕೂಡಾ ಆಗಿದೆ. ಇದು ಹಿಂದೂ ದೇಶವಾಗಿದೆ” ಎನ್ನುತ್ತಾ ಅಸಮಾನತೆಗಾಗಿ ಹಂಬಲಿಸುತ್ತಾರೆ. ಇಂಥವರಿಗೆ ‘ಅಂಬೇಡ್ಕರ್’ ಎಂಬ ಹೆಸರು ಸೂಜಿಯಂತೆ ಚುಚ್ಚುತ್ತಿದ್ದರೆ ಆಶ್ಚರ್ಯವೇನೂ ಅಲ್ಲ.

ಭೀಮಾ ಕೋರೆಗಾಂವ್ ಯುದ್ಧದಲ್ಲಿ ಪೇಶ್ವೆಗಳ ವಿರುದ್ಧ ಮಹಾರ್ ಸೈನಿಕರು ಪಡೆದ ದಿಗ್ವಿಜಯದ ಸ್ಮರಣಾರ್ಥ ನಿರ್ಮಿಸಿರುವ ಸ್ತೂಪಕ್ಕೆ ಅಂಬೇಡ್ಕರ್ ಅವರು 1927ರಲ್ಲಿ ನಮನ ಸಲ್ಲಿಸಿದ್ದನ್ನು, ಆಂತರಿಕ ವಸಾಹತುಶಾಹಿಗಳಾಗಿರುವ ಬ್ರಾಹ್ಮಣಿಕೆಯ ವಿರುದ್ಧ ದಿಗ್ವಿಜಯವೆಂದು ಅಂಬೇಡ್ಕರ್ ಬಣ್ಣಿಸಿದ್ದನ್ನು ಆರ್‌ಎಸ್‌ಎಸ್ ಸರಸಂಘಚಾಲಕ ಗೋಳ್ವಲ್ಕರ್ ಕಟುವಾಗಿ ಟೀಕಿಸುವುದಷ್ಟೇ ಅಲ್ಲದೆ, ಅಂಬೇಡ್ಕರ್ ಅವರನ್ನು ‘ವಿಕೃತ’ ಎಂದು ಜರೆಯುತ್ತಾರೆ. ಜಾತಿವಾದಿ ಪೇಶ್ವೆಗಳ ವಿರುದ್ಧ ನಡೆದ ಸಮರದಲ್ಲಿ ದಲಿತರ ಪಾತ್ರ ದೊಡ್ಡದು. ಇದನ್ನು ಸಹಿಸದ ಗೋಳ್ವಲ್ಕರ್, ದಲಿತರು ವಸಾಹತುಶಾಹಿಗಳ ಜೊತೆ ಸೇರಿ ನಡೆಸಿದ ದಂಗೆ ಎಂಬಂತೆ ಮಾತನಾಡಿ ಅಂಬೇಡ್ಕರ್ ಅವರ ವಿರುದ್ಧ ಅಸಹನೆಯನ್ನು ಹೊರಹಾಕುತ್ತಾರೆ. ಈ ದಿಗ್ವಿಜಯದ ಸ್ಮರಣೆಗಾಗಿ ದಲಿತರು ಪ್ರತಿವರ್ಷ ವಿಜಯೋತ್ಸವವನ್ನು ಆಚರಿಸುತ್ತಾ ಬಂದಿದ್ದನ್ನು ಸಹಿಸದ ಸಂಘಿಕೂಟ, 2018ರಲ್ಲಿ ಪಿತೂರಿ ಮಾಡಿ, ಹೋರಾಟಗಾರರನ್ನು ಜೈಲಿಗೆ ದೂಡಿದ್ದು ಗೊತ್ತೇ ಇದೆ. ಗುಜರಾತ್‌ನಲ್ಲಿ ಅಧಿಕಾರದಲ್ಲಿರುವ ಬಿಜೆಪಿಯವರ ಪ್ರಕಾರ ಅಂಬೇಡ್ಕರ್ ಅವರು ರಾಷ್ಟ್ರೀಯ ನಾಯಕರೇ ಅಲ್ಲವಂತೆ. ಅದನ್ನು ಸರ್ಕಾರದ ಅಧಿಕೃತ ಸುತ್ತೋಲೆಗಳೇ ಹೇಳುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿರಿ: ಒಂದು ದೇಶ – ಒಂದು ಚುನಾವಣೆ ಮಸೂದೆ ಮಂಡನೆ: ಲೋಕಸಭೆಯಲ್ಲಿ 269 ಪರ, 198 ವಿರುದ್ಧ ಮತ

ನವೆಂಬರ್ 26, 1949ರಲ್ಲಿ ಸಂವಿಧಾನ ಸಮರ್ಪಣೆಯಾದ ಬಳಿಕ, ಅದೇ ನವೆಂಬರ್ 30ರಂದು ಆರ್‌ಎಸ್‌ಎಸ್‌ನ ಮುಖವಾಣಿ ‘ಆರ್ಗನೈಸರ್’ ಪತ್ರಿಕೆಯು ಸಂವಿಧಾನವನ್ನು ವಿರೋಧಿಸಿ ಬರೆಯುತ್ತದೆ. “ಸಂವಿಧಾನದಲ್ಲಿ ಭಾರತೀಯವಾದದ್ದು ಏನೂ ಇಲ್ಲ. ಇದು ಹೀನಾಯವಾದ ಸಂಗತಿ. ನಮ್ಮ  ಮನುಸ್ಮೃತಿ ಅತ್ಯಂತ ಪ್ರಾಚೀನವಾದದ್ದು. ಜಗತ್ತಿನ ಜನರು ಸ್ವಯಂಪ್ರೇರಿತವಾಗಿ ಅದರ ಬಗ್ಗೆ ಗೌರವ ವ್ಯಕ್ತಪಡಿಸುತ್ತಾರೆ. ಆದರೆ ನಮ್ಮ ಸಂವಿಧಾನ ಪಂಡಿತರಿಗೆ (ಅಂದರೆ ಅಂಬೇಡ್ಕರ್ ಥರದವರಿಗೆ) ಅದು ಏನೂ ಅಲ್ಲ” ಎಂದು ಶ್ರೇಣೀಕೃತ ವ್ಯವಸ್ಥೆಯನ್ನು ಪ್ರತಿಪಾದಿಸುವ ಮನುಸ್ಮೃತಿಯ ಜಪ ಮಾಡುತ್ತದೆ ಆರ್‌ಎಸ್‌ಎಸ್.

ಇಂತಹ ಅನೇಕ ಸಂಗತಿಗಳನ್ನು ಶಿವಸುಂದರ್ ಅವರು ಇತಿಹಾಸದ ಪುಟಗಳಿಂದ ಹೆಕ್ಕಿ ತೆಗೆದು ಇತ್ತೀಚೆಗಷ್ಟೇ ಸರಣಿಯಾಗಿ ಪ್ರಕಟಿಸಿದ್ದಾರೆ. ಸಂಘಪರಿವಾರದಲ್ಲಿ ಅಂಬೇಡ್ಕರ್ ಅವರ ಬಗ್ಗೆ ಎಂತಹ ದ್ವೇಷ ಹೊಗೆಯಾಡುತ್ತಿದೆ ಎಂಬುದನ್ನು ಈಗಾಗಲೇ ಸಾಕಷ್ಟು ಕೃತಿಗಳು ಅನಾವರಣ ಮಾಡಿವೆ. ಅದರ ಇತಿಹಾಸವೇ ಅಂಥದ್ದು- ಸಂವಿಧಾನ ವಿರೋಧಿಯಾದ್ದದ್ದು, ಅಂಬೇಡ್ಕರ್ ವಿರೋಧಿಯಾದದ್ದು. ಅಮಿತ್ ಶಾ ಅವರ ಮಾತುಗಳು ಬಾಯಿತಪ್ಪಿನಿಂದ ಬಂದಿದ್ದೇನೂ ಅಲ್ಲ. ಅವರ ಅಂತರಾಳದಲ್ಲೇ ಆ ಮಾತುಗಳಿವೆ. ಇಂಥವರು ದಲಿತರ ಬಗ್ಗೆ, ಸಾಮಾಜಿಕ ನ್ಯಾಯದ ಬಗ್ಗೆ ಬೂಟಾಟಿಕೆಯ ಮಾತುಗಳನ್ನಾಡುತ್ತಾರೆ. ಅವರ ಆಂತರ್ಯದಲ್ಲಿ ಅಂಬೇಡ್ಕರ್ ದ್ವೇಷ, ಸಂವಿಧಾನ ದ್ವೇಷ ಮಡುಗಟ್ಟಿದೆ. ಅದು ಮಿತಿಮೀರಿದಾಗ ಬಾಯಿಯ ಮೂಲಕ ಹೊರಬೀಳುವುದನ್ನು ಅಮಿತ್‌ ಶಾ ಅವರು ತೋರಿಸಿಕೊಟ್ಟಿದ್ದಾರೆ ಅಷ್ಟೇ!

yathiraj 2
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X