ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಬಗ್ಗೆ ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆಯು ಈಗ ಭಾರೀ ವಿವಾದ ಸೃಷ್ಟಿಸಿದೆ. ಗೃಹ ಸಚಿವರ ಈ ಹೇಳಿಕೆಯ ವಿರುದ್ಧವಾಗಿ ವಿರೋಧ ಪಕ್ಷಗಳು ಸಂಸತ್ತಿನ ಆವರಣದಲ್ಲಿ ಪ್ರತಿಭಟನೆ ನಡೆಸಿದೆ.
ವಿರೋಧ ಪಕ್ಷದ ಸಂಸದರ ಪ್ರತಿಭಟನೆಯ ನಡುವೆ ಲೋಕಸಭೆ ಮತ್ತು ರಾಜ್ಯಸಭೆಯನ್ನು ಬುಧವಾರ ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.
ಇದನ್ನು ಓದಿದ್ದೀರಾ? ಅಂಬೇಡ್ಕರ್ ಬಗ್ಗೆ ಅಮಿತ್ ಶಾ ವಿವಾದಾತ್ಮಕ ಹೇಳಿಕೆ; ಕ್ಷಮೆಯಾಚನೆಗೆ ಕಾಂಗ್ರೆಸ್ ಆಗ್ರಹ
ಸಂಸತ್ತಿನಲ್ಲಿ ಮಾತನಾಡಿದ್ದ ಅಮಿತ್ ಶಾ, “ಈಗ ಅಂಬೇಡ್ಕರ್ ಅಂಬೇಡ್ಕರ್, ಅಂಬೇಡ್ಕರ್… ಎನ್ನುವುದು ಫ್ಯಾಷನ್ ಆಗಿಬಿಟ್ಟಿದೆ. ಇಷ್ಟು ಸಲ ದೇವರ ನಾಮವನ್ನು ಜಪಿಸಿದ್ದರೆ ನಿಮಗೆ ಏಳೇಳು ಜನ್ಮಗಳಲ್ಲೂ ಸ್ವರ್ಗ ಪ್ರಾಪ್ತಿಯಾಗುತಿತ್ತು” ಎಂದು ಹೇಳಿದ್ದಾರೆ. ಅಮಿತ್ ಶಾ ಈ ಹೇಳಿಕೆಯನ್ನು ವಿರೋಧ ಪಕ್ಷಗಳು ತೀವ್ರವಾಗಿ ಖಂಡಿಸಿದೆ.
ಪ್ರತಿಭಟನಾನಿರತ ಸಂಸದರುಗಳು ಅಮಿತ್ ಶಾ ಅವರು ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಈ ನಡುವೆ ಬಿಜೆಪಿ ಪ್ರತಿಪಕ್ಷಗಳು ಭಾಷಣದ ಒಂದು ತುಣುಕನ್ನು ಪ್ರಸಾರ ಮಾಡುತ್ತಿವೆ ಮತ್ತು ರಾಜಕೀಯ ಗಿಮಿಕ್ ಮಾಡುತ್ತಿದೆ ಎಂದು ಆರೋಪಿಸಿದೆ.
ಇನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಸೇರಿದಂತೆ ವಿರೋಧ ಪಕ್ಷದ ಸಂಸದರು ಸಂಸತ್ತಿನ ಆವರಣದಲ್ಲಿ ಅಂಬೇಡ್ಕರ್ ಅವರ ಫೋಟೋಗಳನ್ನು ಹಿಡಿದು ಪ್ರತಿಭಟಿಸಿದ್ದಾರೆ.
