ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹಲವು ಬೇಡಿಕೆ ಒತ್ತಾಯಿಸಿ ಅಹೋರಾತ್ರಿ ಪ್ರತಿಭಟನೆ ನಡೆಸಿದರು.
“ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಪ್ರಾರಂಭವಾಗಿ 50 ವರ್ಷಗಳು ಸಮೀಪಿಸುತ್ತಿದೆ. ಪಾಲನೆ, ಪೋಷಣೆ, ಶಿಕ್ಷಣ ಸಂವಿಧಾನಬದ್ಧ ಕರ್ತವ್ಯಗಳಿವೆ. 2013ರ ಆಹಾರ ಭದ್ರತಾ ಕಾಯ್ದೆ, 2009ರ ಕಡ್ಡಾಯ ಶಿಕ್ಷಣ ಕಾಯ್ದೆಯ ಕರ್ತವ್ಯಗಳನ್ನು ಶಾಸನಬದ್ಧವಾಗಿ ಸ್ಥಾಪಿಸಲ್ಪಟ್ಟ ಅಂಗನವಾಡಿ ಕೇಂದ್ರಗಳ ಮುಖಾಂತರ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಜಾರಿ ಮಾಡುತ್ತಿದ್ದಾರೆ. ಸುಪ್ರೀಂಕೋರ್ಟ್ ಮತ್ತು ಗುಜರಾತ್ ಹೈಕೋರ್ಟ್‌ಗಳು ಇವರನ್ನು 3 ಮತ್ತು 4 ಗ್ರೇಡ್‌ನ ನೌಕರರನ್ನಾಗಿ ಪರಿಗಣಿಸಲು ಜಂಟೀ ನಿಯಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸಬೇಕೆಂದೂ ತೀರ್ಪು ನೀಡಿದೆ ಮತ್ತು ಸುಪ್ರೀಂ ಕೋರ್ಟ್ 1972 ಗ್ರಾಜ್ಯುಟಿ ಪಾವತಿ ಕಾಯ್ದೆಯಡಿ ಅರ್ಹರೆಂದೂ ತೀರ್ಪು ನೀಡಿದೆ” ಎಂದು ಮುಖಂಡರಾದ ಎಂ. ಬಿ ಪುಷ್ಪ ತಿಳಿಸಿದರು.

“ದೇಶದ ಅಭಿವೃದ್ಧಿಗೆ ಪೂರಕವಾದ ಮಾನವ ಸಂಪನ್ಮೂಲಗಳನ್ನು ಅಪೌಷ್ಟಿಕತೆ, ಅಂಗವೈಕಲ್ಯತೆಗಳಿಂದ ಕಾಪಾಡಿ ಮಾನಸಿಕ ಮತ್ತು ದೈಹಿಕವಾಗಿ ಬೆಳೆಸಿ ಮಾನವ ಸಮಾಜದ ಪುನರುತ್ಪಾದನೆಗೆ ಕೊಡುಗೆ ಕೊಡುತ್ತಿರುವ ICDSನ್ನು ಯೋಜನೆಯನ್ನಾಗಿಯೇ 49 ವರ್ಷಗಳ ನಂತರವೂ ಉಳಿಸಿಕೊಳ್ಳಲಾಗಿದೆ. ಮಾತ್ರವಲ್ಲದೇ 2014ರ ನಂತರ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳ ಪರಿಕಲ್ಪನೆ ಬದಲಾಗಿ ನೀತಿ ಆಯೋಗದ ಶಿಫಾರಸ್ಸುಗಳಂತೆ 60:40ರ ಅನುಪಾತದ ಆಧಾರದಲ್ಲಿ ಕೇಂದ್ರ ಸರ್ಕಾರ ತನ್ನ ಮೂಲ ಜವಾಬ್ದಾರಿಯಿಂದ ನುಣಿಚಿಕೊಂಡು ಬಜೆಟ್ ಅನುದಾನಗಳನ್ನು ನಿರಂತರವಾಗಿ ಕಡಿಮೆ ಮಾಡುತ್ತಿದೆ. ಅಂಗನವಾಡಿ ಮಕ್ಕಳಿಗೆ ಕೊಡುವ ಪೌಷ್ಟಿಕ ಆಹಾರದ ಘಟಕವೆಚ್ಚ 2018ರಿಂದ ಹೆಚ್ಚಳ ಮಾಡದೇ GSTಯನ್ನು ಹಾಕಿದ್ದರಿಂದ ಗುಣಮಟ್ಟದ ಆಹಾರ ಪದಾರ್ಥಗಳನ್ನು ಕೊಡುವುದರಲ್ಲಿ ವೈಫಲ್ಯತೆ ಎದ್ದು ಕಾಣುತ್ತಿದೆ. ಮತ್ತು ಅಂಗನವಾಡಿ ನೌಕರರ ವೇತನವನ್ನು ಕೂಡಾ ಹೆಚ್ಚಳ ಮಾಡದೇ ಹೊಸ ಆಕರ್ಷಕ ಘೋಷಣೆಗಳಿಗೆ ಮಾತ್ರವೇ ಸೀಮಿತವಾಗುತ್ತಿದೆ” ಎಂದು ಅಂಗನವಾಡಿ ನೌಕರರ ಸಂಘದ ಇಂದ್ರಮ್ಮ ತಿಳಿಸಿದರು.
1948 ರ ಕನಿಷ್ಠ ವೇತನ ಕಾಯ್ದೆಯಡಿಯಲ್ಲಿ ತಿಳಿಸಿದಂತೆ 4 ಗಂಟೆಗಿಂತ ಹೆಚ್ಚು ಕೆಲಸ ಮಾಡುವವರಿಗೆ ಕನಿಷ್ಠ ವೇತನ ನೀಡಬೇಕು ಎಂದೂ ತಿಳಿಸಿದೆ. ಆದರೆ ಯಾವುದೇ ಸರ್ಕಾರಗಳು ಇದನ್ನು ಜಾರಿ ಮಾಡಲು ಮುಂದಾಗಲಿಲ್ಲ. ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವಾಗ ತನ್ನ ಪ್ರಚಾರದಲ್ಲಿ ಹೇಳಿದಂತೆ 3500 ರೂ ಮತ್ತು 1750 ರೂ. ವೇತನ ಹೆಚ್ಚಿಸಲು ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಸಿಐಟಿಯು ಶೈಲಜಾ ಅವರು ತಿಳಿಸಿದರು.
ಪ್ರಮುಖ ಬೇಡಿಕೆಗಳು
1. ಗುಜರಾತ್ ಹೈಕೊರ್ಟ್ ತೀರ್ಪಿನಂತೆ ಕಾರ್ಯಕರ್ತೆ, ಸಹಾಯಕಿಯರನ್ನು ವರ್ಗ 3 ಮತ್ತು 4 ಎಂದು ಪರಿಗಣಿಸಿ ಖಾಯಂ ಮಾಡಬೇಕು.
2. ಮ.ಮ.ಇ 14 ಐಸಿಡಿ 2023ರ ಆದೇಶದ ಪ್ರಕಾರ ಕೂಡಲೇ ಗ್ರಾಚ್ಯುಟಿ ಹಣ ಬಿಡುಗಡೆ ಮಾಡಿ ಮತ್ತು ಎಲ್ಲರಿಗೂ ಅನ್ವಯಿಸಿ.
3. 2018 ರಿಂದ ಕೇಂದ್ರ ಸರ್ಕಾರ ಯಾವುದೇ ಗೌರವಧನ ಹೆಚ್ಚಳ ಮಾಡಿಲ್ಲವಾದ್ದರಿಂದ ಕೇಂದ್ರ ಸರ್ಕಾರವು 26,000 ರೂ. ಗಳಿಗೆ ಗೌರವಧನ ಹೆಚ್ಚಿಸಬೇಕು.
4. 2023ರ ವಿಧಾನಸಭಾ ಚುನಾವಣೆಯ ಸಂದರ್ಬದಲ್ಲಿ ಘೋಷಣೆ ಮಾಡಿದ 15 ಸಾವಿರ ರೂ. ಗಳಿಗೆ ಗೌರವಧನ ಹೆಚ್ಚಿಸಬೇಕು.
5. ನಿವೃತ್ತಿಯಾದವರಿಗೆ ಇಡಗಂಟು ಅಥವಾ NPS ಹಣವನ್ನು ಹಾಗೂ ರೂ. 10 ಸಾವಿರ ಮಾಸಿಕ ಪಿಂಚಣಿಯನ್ನು ನೀಡಬೇಕು.
6. ಶಿಕ್ಷಣ ಇಲಾಖೆ ಮತ್ತು SDMC ಗಳಿಂದ ಪ್ರಾರಂಭ ಮಾಡಿರುವ LKG-UKG ನಿಲ್ಲಿಸಿ ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಅಂಗನವಾಡಿ ಕೇಂದ್ರಗಳಲ್ಲಿಯೇ LKG-UKG ಪ್ರಾರಂಭಿಸಬೇಕು.
7.ICDS ಯೋಜನೆಗೆ ಪ್ರತ್ಯೇಕ ನಿರ್ದೇಶನಾಲಯಬೇಕು ಎಂದು ಹಲವು ಬೇಡಿಕೆಗಳನ್ನ ಇಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂಓದಿದ್ದೀರಾ?ಹಾಸನ | ಅಂಕಗಳಿಸುವ ಯಂತ್ರಗಳಂತೆ ಶಿಕ್ಷಣ ಕಲಿತರೆ ಸಾಲದು: ಶಿಕ್ಷಣಾಧಿಕಾರಿ ಕಾಂತರಾಜು
ಈ ವೇಳೆ ಎಂ ಬಿ ಪುಷ್ಪ, ಇಂದ್ರಮ್ಮ, ಜಿ.ಪಿ ಶೈಲಜಾ, ಮಂಜುಳಾ, ಶಾರದ, ಕಾಮಾಕ್ಷಿ ರಾಜು, ಹೆಚ್ ಟಿ ಮೀನಾಕ್ಷಿ, ಟಿ ಹೆಚ್ ಜಯಂತಿ, ಲಲಿತಾ, ಕೆ ಪಿ.ವೀಣಾ, ಸುಮಿತ್ರಾ, ವೀಣಾ, ಬಿ ಕೆ ಸಂಗೀತ, ಎಂ ಆರ್ ಗೀತಾ, ಜರೀನಾ ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತಿಯಲಿದ್ದರು.