ಭಾರತೀಯ ಹವಾಮಾನ ಇಲಾಖೆಯಿಂದ ಡಿ.18 ಜಿಲ್ಲೆಯನ್ನು ರೆಡ್ ಅಲರ್ಟ್ ಘೋಷಿಸಿದ್ದು, ಮುಂದಿನ ಮೂರ್ನಾಲ್ಕು ದಿನಗಳವರೆಗೆ ಜಿಲ್ಲೆಯಾದ್ಯಂತ ಬೆಳಗಿನ ಜಾವ ತೀವ್ರವಾದ ಶೀತಗಾಳಿ ಬೀಸುವ ಸಾಧ್ಯತೆ ಇದೆ ಎಂದು ಅಪರ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಸಾಮಾನ್ಯ ತಾಪಮಾನಕ್ಕಿಂತ 5-6 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆ ಆಗುವ ಸಾಧ್ಯತೆ ಇದೆ. ಆದ್ದರಿಂದ ಸಾರ್ವಜನಿಕರು ಬೆಳಿಗ್ಗೆ ಸೂರ್ಯೋದಯಕ್ಕಿಂತ ಮುಂಚೆ, ಸೂರ್ಯಾಸ್ತದ ನಂತರ ವಾಕಿಂಗ್ ಬರುವವರು ಮುನ್ನೆಚ್ಚರಿಕೆ ವಹಿಸಬೇಕು. ಗ್ರಾಮಗಳಲ್ಲಿ ಸಾರ್ವಜನಿಕರು ಮತ್ತು ರೈತರು ಅನಾವಶ್ಯಕವಾಗಿ ದ್ವಿಚಕ್ರ ವಾಹನಗಳಲ್ಲಿ ಹೊರಗಡೆ ಬರಬಾರದು ಎಂದು ಜಿಲ್ಲಾಡಳಿತ ವಿನಂತಿಸಿದೆ ಎಂದರು.
ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಹವಾಮಾನ ಸಂಪೂರ್ಣ ಬದಲಾಗಿದೆ. ಚಳಿಯ ಪ್ರಮಾಣ ಹೆಚ್ಚಾಗಿದೆ. ಕಳೆದ ಸೋಮವಾರ ರಾಜ್ಯದಲ್ಲಿಯೇ ಅತಿ ಕಡಿಮೆ ತಾಪಮಾನ ದಾಖಲಾಗಿತ್ತು. ಮುಂದಿನ ಮೂರ್ನಾಲ್ಕು ದಿನಗಳವರೆಗೆ ತಾಪಮಾನ 5 ರಿಂದ 6 ಡಿಗ್ರಿ ಸೆಲ್ಸಿಯಸ್ ಗೆ ಇಳಿಕೆಯಾಗುವ ಸಾಧ್ಯತೆ ಇದೆ. ಇದರಿಂದ ಚಳಿಯ ಪ್ರಮಾಣ ಮತ್ತಷ್ಟು ಹೆಚ್ಚಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದೇವಾಲಯ ಪ್ರವೇಶಕ್ಕೆ ಅಂಗಲಾಚುವ ದಲಿತರಿಗೆ ಬಾಬಾಸಾಹೇಬರು ಹೇಳಿದ್ದ ಪಾಠಗಳೇನು?
ಸಾರ್ವಜನಿಕರು ಸಾಧ್ಯವಾದಷ್ಟು ಮನೆ ಬಿಟ್ಟು ಹೊರಗಡೆ ಬರದಿರಲು ತಿಳಿಸಿದೆ. ಒಂದು ವೇಳೆ ಅವಶ್ಯವಿದ್ದಲ್ಲಿ ಬೆಚ್ಚನೆಯ ಉಡುಪುಗಳಾದ ಸ್ಟೇಟರ್, ಜಾಕೇಟ್, ಉಲನ್ ಟೋಪಿ ಕಾಲುಕುಬಸ್, ಕೈಗ್ಲೌಸ್ ಗಳನ್ನು ಧರಿಸಲು ಸೂಚಿಸಿದೆ. ಮಕ್ಕಳನ್ನು ಮನೆಯಿಂದ ಹೊರಗಡೆ ಬಿಡದಿರಲು ತಿಳಿಸಿದೆ.