ರಾಜ್ಯಸಭೆ ಅಧಿವೇಶನದಲ್ಲಿ ಕಾಂಗ್ರೆಸ್ ಪಕ್ಷವನ್ನು ವಿರೋಧಿಸುವ ಭರದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅವಮಾನಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಹಿರಂಗವಾಗಿ ಕ್ಷಮೆಯಾಚಿಸಬೇಕೆಂದು ವಿವಿಧ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.
ಅಮಿತ್ ಶಾ ತನ್ನ ಭಾಷಣದಲ್ಲಿ “ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್… ಎನ್ನುವುದು ಈಗ ಒಂದು ಫ್ಯಾಷನ್ ಆಗಿಬಿಟ್ಟಿದೆ. ನೀವು ಇಷ್ಟು ಸಲ ದೇವರ ಹೆಸರು ತೆಗೆದುಕೊಂಡಿದ್ದರೆ, ಏಳೇಳು ಜನ್ಮಗಳಲ್ಲಿ ಸ್ವರ್ಗ ಪ್ರಾಪ್ತಿಯಾಗುತ್ತಿತ್ತು” ಎಂದು ಹೇಳಿದ್ದು ದೇಶದ ಕೋಟ್ಯಾಂತರ ಅಂಬೇಡ್ಕರ್ ಅನುಯಾಯಿಗಳಿಗೆ ನೋವುಂಟು ಮಾಡಿದೆʼ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿ ಪಕ್ಷಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೇಲೆ ಕನಿಷ್ಠ ಗೌರವ ಇಟ್ಟುಕೊಳ್ಳದೆ ತನ್ನ ಹಳೆಯ ಮನಸ್ಥಿತಿ ಬಹಿರಂಗಪಡಿಸಿದೆ. ದಲಿತರ, ಶೋಷಿತರ, ಹಿಂದುಳಿದ ವರ್ಗದವರಿಗೆ ದೇವರಿಗಿಂತ ಶ್ರೇಷ್ಠ ಆಗಿರುವ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ವಿರುದ್ಧ ಶಾ ನೀಡಿದ ವಿವಾದಾತ್ಮಕ ಹೇಳಿಕೆಯನ್ನು ಸಹಿಸುವುದಿಲ್ಲʼ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಜಿಲ್ಲೆಯಲ್ಲಿ ಮೂರ್ನಾಲ್ಕು ದಿನ ತೀವ್ರ ಶೀತಗಾಳಿ ಬೀಸುವ ಸಾಧ್ಯತೆ
ಬಾಬಾ ಸಾಹೇಬ್‌ರನ್ನು ಅಪಮಾನ ಮಾಡಿದ ಕೇಂದ್ರ ಗೃಹ ಸಚಿವ ಅಮಿತಾ ಶಾ ಕೂಡಲೇ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ರೂಪಿಸುವುದಾಗಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಅಂಬೇಡ್ಕರ್ ಪಕ್ಷದ ರಾಜ್ಯಾಧ್ಯಕ್ಷ ಮಹೇಶ ಗೋರನಾಳಕರ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಉಪಾಧ್ಯಕ್ಷ ರಾಜಕುಮಾರ ಮೂಲಭಾರತಿ, ಅಂಬೇಡ್ಕರ್ ಯುವ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ರಾಜಕುಮಾರ ಗೂನ್ನಳ್ಳಿ, ಕರ್ನಾಟಕ ಸ್ವಾಭಿಮಾನಿ ಭೋವಿ ವಡ್ಡರ್ ವೇದಿಕೆ ರಾಜ್ಯಾಧ್ಯಕ್ಷ ಸಂತೋಷ ಏಣಕೂರೆ, ದಲಿತ ಯೂನಿಟಿ ಮೂವ್ಮೆಂಟ್ ರಾಜ್ಯಾಧ್ಯಕ್ಷ ಪ್ರಕಾಶ ರಾವಣ ಒತ್ತಾಯಿಸಿದ್ದಾರೆ.