ಮೋದಿ ಅವರ ಅತ್ಯಾಪ್ತ ಗೌತಮ್ ಅದಾನಿ ವಿರುದ್ಧ ಭಾರತೀಯ ಅಧಿಕಾರಿಗಳಿಗೆ ಬಹುಕೋಟಿ ಮೊತ್ತದ ಲಂಚ ನೀಡಿದ ಮತ್ತು ಲಂಚದ ಹಣಕ್ಕಾಗಿ ಅಮೆರಿಕ ಉದ್ಯಮಿಗಳಿಗೆ ವಂಚಿಸಿದ್ದಾರೆಂದು ಅಮೆರಿಕ ಪ್ರಾಸಿಕ್ಯೂಟರ್‌ಗಳು ಗಂಭೀರ ಆರೋಪ ಮಾಡಿದ್ದಾರೆ. ಅದಾನಿ ವಿರುದ್ಧ ಅಮೆರಿಕದಲ್ಲಿ ಚಾರ್ಜ್‌ಶೀಟ್ ಜಾರಿಯಾದ ಬೆನ್ನಲ್ಲೇ, ಅದಾನಿ ಜೊತೆಗಿನ ಸೌರ ವಿದ್ಯುತ್ ಒಪ್ಪಂದವನ್ನು ಆಂಧ್ರ ಸರ್ಕಾರ ಪರಿಶೀಲನೆ ನಡೆಸುತ್ತಿದೆ.
ಆಂಧ್ರ ಸರ್ಕಾರ ಮತ್ತು ಅದಾನಿ ಗ್ರೂಪ್ ನಡುವೆ ಸೌರ ವಿದ್ಯುತ್ ಪೂರೈಕೆಗಾಗಿ ವಾರ್ಷಿಕ 490 ಮಿಲಿಯನ್ ಡಾಲರ್ ಮೊತ್ತದ ಒಪ್ಪಂದವನ್ನು 2021ರಲ್ಲಿ ಮಾಡಿಕೊಳ್ಳಲಾಗಿತ್ತು. 7,000 ಮೆಗಾವ್ಯಾಟ್ ವಿದ್ಯುತ್ ಪೂರೈಕೆ ಮಾಡುವ ಒಪ್ಪಂದವನ್ನು ತ್ವರಿತವಾಗಿ ಮುಗಿಸಲಾಗಿತ್ತು. ಇದೀಗ, ಭ್ರಷ್ಟಾಚಾರ ಆರೋಪ ಮುನ್ನೆಲೆಗೆ ಬಂದ ಬಳಿಕ, ಆ ಒಪ್ಪಂದದ ಬಗ್ಗೆ ಹಲವಾರು ಪ್ರಶ್ನೆಗಳು ಎದ್ದಿವೆ. ಒಪ್ಪಂದದ ತ್ವರಿತ ಅನುಮೋದನೆ, ರಾಜ್ಯದ ಮೇಲಿನ ಸಂಭಾವ್ಯ ಹಣಕಾಸಿನ ಒತ್ತಡದ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಅದಾನಿ ಮತ್ತು ಆಂಧ್ರ ಸರ್ಕಾರದ ನಡುವಿನ ವಿದ್ಯುತ್ ಒಪ್ಪಂದವನ್ನು ಕೇವಲ 57 ದಿನಗಳಲ್ಲಿ ಅಂತಿಮಗೊಳಿಸಲಾಗಿದೆ. ಕಡಿಮೆ ಅವಧಿಯಲ್ಲಿಯೇ ವಿದ್ಯುಚ್ಛಕ್ತಿ ತಜ್ಞರು ಹಾಗೂ ಮಾಜಿ ಅಧಿಕಾರಿಗಳು ತ್ವರಿತವಾಗಿ ಒಪ್ಪಂದಕ್ಕೆ ಅಗತ್ಯವಿದ್ದ ಎಲ್ಲ ರೀತಿಯ ಪರಾಮರ್ಶೆ, ವಿವರಣೆಗಳನ್ನು ಒದಗಿಸಿದ್ದಾರೆ. ಅಲ್ಲದೆ, ಒಪ್ಪಂದಕ್ಕೆ ಸಹಿ ಹಾಕಲು ಹಣಕಾಸು ಮತ್ತು ಇಂಧನ ಅಧಿಕಾರಿಗಳು ಎತ್ತಿದ್ದ ಪ್ರಶ್ನೆಗಳನ್ನು ಸರ್ಕಾರವು ತಳ್ಳಿಹಾಕಿದೆ ಎಂಬುದನ್ನು ದಾಖಲೆಗಳು ಬಹಿರಂಗಪಡಿಸಿವೆ ಎಂದು ಸುದ್ದಿಸಂಸ್ಥೆ ‘ರಾಯಿಟರ್ಸ್’ ವರದಿ ಮಾಡಿದೆ.
ದಾಖಲೆ ಸಮಯದಲ್ಲಿ ಒಪ್ಪಂದ
ಭಾರತ ಸರ್ಕಾರದ ಅಡಿಯಲ್ಲಿ ನವೀಕರಿಸಬಹುದಾದ (ಸೌರ/ಪವನ) ವಿದ್ಯುಚ್ಛಕ್ತಿಯನ್ನು ನಿರ್ವಹಿಸುವ ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾ (SECI) ಸಂಸ್ಥೆಯು ಸೌರ ವಿದ್ಯುತ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಆಂಧ್ರ ಸರ್ಕಾರದ ಜೊತೆಗೆ ಮೊದಲು ಮಾತುಕತೆ ನಡೆಸಿತ್ತು. 2021ರ ಸೆಪ್ಟೆಂಬರ್ 15ರಂದು ಸೌರವಿದ್ಯುತ್ ಒಪ್ಪಂದಕ್ಕೆ ಸಹಿ ಹಾಕುವ ಪ್ರಸ್ತಾಪವನ್ನು ಆಂಧ್ರ ಸರ್ಕಾರದ ಮುಂದಿಟ್ಟಿತ್ತು. ಆ ಪ್ರಸ್ತಾಪ ಪತ್ರದಲ್ಲಿ ಸೆಸಿ ಯಾರು ವಿದ್ಯುತ್ ಸರಬರಾಜು ಮಾಡುತ್ತಾರೆ (ಹೆಸರು) ಎಂಬುದನ್ನು ಉಲ್ಲೇಖಿಸಿರಲಿಲ್ಲ. ಆದರೆ, ಆ ಸಮಯದಲ್ಲಿ ಅದಾನಿ ಗ್ರೀನ್ ಎನರ್ಜಿ ಕಂಪನಿಯು ಸೆಸಿಯಿಂದ ಒಪ್ಪಂದಗಳನ್ನು ಪಡೆಯುತ್ತಿರುವ ಅತಿದೊಡ್ಡ ಗುತ್ತಿಗೆದಾರ ಸಂಸ್ಥೆ ಎಂದು ಕರೆಯಲಾಗುತ್ತಿತ್ತು.
ಪ್ರಸ್ತಾವನೆ ಬಂದ ಒಂದೇ ದಿನದೊಳಗೆ, ಅಂದಿನ ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸಚಿವ ಸಂಪುಟವು ಒಪ್ಪಂದಕ್ಕೆ ಪ್ರಾಥಮಿಕ ಅನುಮೋದನೆಯನ್ನೂ ನೀಡಿತು. ಆಂಧ್ರಪ್ರದೇಶ ವಿದ್ಯುತ್ ನಿಯಂತ್ರಣ ಆಯೋಗವು ನವೆಂಬರ್ 11 ರೊಳಗೆ ಒಪ್ಪಂದವನ್ನು ಅಂತಿಮಗೊಳಿಸಿತು. ಡಿಸೆಂಬರ್ 1ರ ವೇಳೆಗೆ, ರಾಜ್ಯವು SECI ಜೊತೆಗೂಡಿ ವಿದ್ಯುತ್ ಒಪ್ಪಂದಕ್ಕೆ ಸಹಿ ಹಾಕಿತು. ಪ್ರತಿ ಕಿಲೋವ್ಯಾಟ್‌ಗೆ ರೂ 2.49 ಬೆಲೆಯಲ್ಲಿ 25 ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಂಡಿತು.
ಲಂಚ ಮತ್ತು ಕಾನೂನು ಉಲ್ಲಂಘನೆ ಆರೋಪಗಳು
ಅದಾನಿ ಮತ್ತು ಇತರ 7 ಆರೋಪಿಗಳು ಒಪ್ಪಂದವನ್ನು ಸರಾಗಗೊಳಿಸಲು ಆಂಧ್ರಪ್ರದೇಶದ ಅಧಿಕಾರಿಗಳಿಗೆ ಬರೋಬ್ಬರಿ 2,029 ಕೋಟಿ ರೂ. ಲಂಚ ನೀಡಿದ್ದಾರೆ. ‘ಅದಾನಿ ಗ್ರೀನ್ ಎನರ್ಜಿ’ ಸರಬರಾಜು ಮಾಡುವ ಸೌರಶಕ್ತಿಯನ್ನು ಖರೀದಿಸಲು ಆಂಧ್ರ ರಾಜ್ಯದ ವಿದ್ಯುತ್ ವಿತರಣಾ ಕಂಪನಿಗೆ ಆರೋಪಿಗಳು ಒತ್ತಾಯ ಹಾಕಿದ್ದಾರೆ ಎಂದು ಅಮೆರಿಕದ ಪೂರ್ವ ನ್ಯೂಯಾರ್ಕ್ ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದಾರೆ.
ಆದಾಗ್ಯೂ, ಅದಾನಿ ಗ್ರೂಪ್ ತನ್ನ ಮೇಲಿನ ಆರೋಪಗಳನ್ನು ‘ಆಧಾರರಹಿತ’ ಎಂದು ತಳ್ಳಿಹಾಕಿದೆ. ಆದರೆ, ಭ್ರಷ್ಟಾಚಾರದ ಬಗ್ಗೆ ರಾಯಿಟರ್ಸ್ ಕೇಳಿದ ಪ್ರಶ್ನೆಗಳಿಗೆ ಅದಾನಿ ಗ್ರೀನ್ ಎನರ್ಜಿ ಉತ್ತರಿಸಿಲ್ಲ. ಇನ್ನು, ಪ್ರತಿ ರಾಜ್ಯವು ಎಷ್ಟು ವಿದ್ಯುಚ್ಛಕ್ತಿ ಖರೀದಿಸಬೇಕು ಎಂಬುದನ್ನು ಅದರ ಆಡಳಿತವು ನಿರ್ಧರಿಸುತ್ತದೆ ಎಂಬುದನ್ನು ಮಾತ್ರವೇ ಸೆಸಿ ಹೇಳಿದೆ. ಆದರೆ, ಭ್ರಷ್ಟಾಚಾರ ಸಂಬಂಧಿತ ಪ್ರಶ್ನೆಗಳಿಗೆ ಸೆಸಿ ಕೂಡ ಉತ್ತರಿಸಿಲ್ಲ.
ಈ ವರ್ಷ, ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡ ಜಗನ್ ಮೋಹನ್ ರೆಡ್ಡಿ ನವೆಂಬರ್ 28ರ ಹೇಳಿಕೆಯಲ್ಲಿ, ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿಕೊಂಡಿದ್ದಾರೆ. ಒಪ್ಪಂದವು ರೈತರಿಗೆ ಉಚಿತ ವಿದ್ಯುತ್ ಒದಗಿಸುವ ಗುರಿಯನ್ನು ಹೊಂದಿತ್ತು ಎಂದು ಪ್ರತಿಪಾದಿಸಿದ್ದಾರೆ.
ಹಣಕಾಸಿನ ಪ್ರಭಾವ
ರಾಯಿಟರ್ಸ್ ವರದಿಯ ಪ್ರಕಾರ, ಸೋಲಾರ್ ಬೆಲೆ ಕುಸಿತ ಮತ್ತು ಭವಿಷ್ಯದಲ್ಲಿ ಅಗ್ಗದ ಬೆಲೆಗಳಿಗೆ ಒಪ್ಪಂದಗಳಾಗುವ ಸಾಧ್ಯತೆಗಳನ್ನು ಉಲ್ಲೇಖಿಸಿದ್ದ ಆಂಧ್ರ ಹಣಕಾಸು ಮತ್ತು ಇಂಧನ ಇಲಾಖೆಗಳು, ದೀರ್ಘಕಾಲದ ಮತ್ತು ಹೆಚ್ಚು ಬೆಲೆಯ ಒಪ್ಪಂದಕ್ಕೆ ಸಹಿ ಹಾಕದಂತೆ ಸೂಚಿಸಿದ್ದವು ಎಂಬುದನ್ನು ದಾಖಲೆಗಳು ಬಹಿರಂಗಪಡಿಸಿವೆ. 25 ವರ್ಷಗಳಿಗೆ ಒಪ್ಪಂದ ಮಾಡಿಕೊಳ್ಳುವ ನಡೆಯನ್ನೂ ಹಣಕಾಸು ಇಲಾಖೆ ಪ್ರಶ್ನಿಸಿದೆ. ಆಂಧ್ರ ಪ್ರದೇಶವು ಖರೀದಿದಾರನಾಗಿ ಸಂಪೂರ್ಣ ನಿಯಂತ್ರಣ ಹೊಂದಿದ್ದು, ಸರಬರಾಜು ಕಂಪನಿಗೆ ಉತ್ತಮ ಷರತ್ತುಗಳನ್ನು ವಿಧಿಸಬಹುದು ಎಂಬ ಸಲಹೆಗಳನ್ನೂ ಇಲಾಖೆ ನೀಡಿತ್ತು.
ಆದರೆ, 2021ರ ಅಕ್ಟೋಬರ್ 28ರಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ಎಲ್ಲ ಸಲಹೆಗಳನ್ನೂ ಸಚಿವ ಸಂಪುಟವು ನಿರ್ಲಕ್ಷಿಸಿ, ವಜಾಗೊಳಿಸಿತ್ತು. ಗಂಭೀರವಾದ ಚರ್ಚೆಯನ್ನೂ ನಡೆಸದೆ, ಕೆಲವೇ ನಿಮಿಷಗಳ ಸಭೆ ನಡೆಸಿದ ಸಂಪುಟವು ಹಣಕಾಸು ಇಲಾಖೆಯ ಶಿಫಾರಸುಗಳನ್ನು ‘ರದ್ದುಗೊಳಿಸಿದೆ’ ಎಂಬುದನ್ನು ರಾಯಿಟರ್ಸ್ ಗಮನಿಸಿದೆ.
ಈ ವರದಿ ಓದಿದ್ದೀರಾ?: ಸಂಸತ್ತಿನಲ್ಲಿ ವಿಪಕ್ಷಗಳ ಸದ್ದಡಗಿಸುವುದು ಪ್ರಜಾಪ್ರಭುತ್ವಕ್ಕೆ ಶೋಭೆಯಲ್ಲ!
ಇತ್ತೀಚೆಗೆ ಅಧಿಕಾರಕ್ಕೆ ಬಂದ ಎನ್ ಚಂದ್ರಬಾಬು ನಾಯ್ಡು ಸರ್ಕಾರವು ಈ ಒಪ್ಪಂದವನ್ನು ವಿಶ್ಲೇಷಿಸಿದ್ದು, ಅದಾನಿ ಗ್ರೀನ್ ಕಂಪನಿಯ ಮೇಲೆ ಹೆಚ್ಚುವರಿ ತೆರಿಗೆಗಳು ಮತ್ತು ಸುಂಕಗಳ ವೆಚ್ಚವನ್ನು 23% ರಷ್ಟು ಹೆಚ್ಚಿಸಬಹುದು ಎಂಬುದನ್ನು ಕಂಡುಕೊಂಡಿದೆ. ಆದರೆ, ಈವರೆಗೆ ಅದನ್ನೂ ಜಾರಿಗೊಳಿಸಿಲ್ಲ.
ಪ್ರಶ್ನಾರ್ಹ ನಿರ್ಧಾರಗಳು
2021ರ ಸೆಪ್ಟೆಂಬರ್ 15ರಂದು ಒಪ್ಪಂದಕ್ಕೆ ಸಹಿ ಕೋರಿ ತಮಗೆ ಕರೆ ಬರುವವರೆಗೂ ಈ ಪ್ರಸ್ತಾಪದ ಬಗ್ಗೆ ತಮಗೆ ಮಾಹಿತಿಯೇ ಇರಲಿಲ್ಲ. ಒಪ್ಪಂದದ ಕುರಿತು ಅಧ್ಯಯನ ನಡೆಸಲು ಸಾಕಷ್ಟು ಸಮಯಾವಕಾಶವಿಲ್ಲದೆ, ಕಡತ ಮಂಜೂರಾತಿಗೆ ತರಾತುರಿ ಮಾಡಲಾಗಿತ್ತು. ಫೈಲ್‌ಗಳು ಅನುಮೋದನೆಗೆ ಬರುವವರೆಗೂ ನಮಗೆ ಅದಾನಿಯೇ ಸರಬರಾಜುದಾರ ಎಂಬುದು ತನಗೆ ತಿಳಿದಿರಲಿಲ್ಲ ಎಂದು ಆಗಿನ ಇಂಧನ ಸಚಿವ ಬಾಲಿನೇನಿ ಶ್ರೀನಿವಾಸ ರೆಡ್ಡಿ ಹೇಳಿಕೊಂಡಿದ್ದಾರೆ.
ಆದಾಗ್ಯೂ, 2021ರ ಅಕ್ಟೋಬರ್ 21ರೊಳಗೆ, ಆಂಧ್ರಪ್ರದೇಶದ ವಿದ್ಯುತ್ ಸಮನ್ವಯ ಸಮಿತಿಯು ಒಪ್ಪಂದವನ್ನು ಮೌಲ್ಯಮಾಪನ ಮಾಡುವ ಕಾರ್ಯ ನಡೆಸಲು ಶಿಫಾರಸು ಮಾಡಿತು. ಏಳು ದಿನಗಳ ನಂತರ, ಹಣಕಾಸು ಮತ್ತು ಇಂಧನ ಇಲಾಖೆಗಳ ಅಧಿಕಾರಿಗಳು ಸಲ್ಲಿಸಿದ್ದ ಆಕ್ಷೇಪಣೆಗಳ ಹೊರತಾಗಿಯೂ ಕ್ಯಾಬಿನೆಟ್ ಅಧಿಕೃತವಾಗಿ ಒಪ್ಪಂದಕ್ಕೆ ಬದ್ಧವಾಗಿದೆ ಎಂದು ಘೋಷಿಸಿತು ಎಂಬುದನ್ನು ರಾಯಿಟರ್ಸ್ ಬಹಿರಂಗಗೊಳಿಸಿದೆ.
ರಾಜ್ಯದ ಬೊಕ್ಕಸವನ್ನು ನಿರ್ವಹಿಸಲು ಈಗ ಹಣಕಾಸು ಇಲಾಖೆ ಹೆಣಗಾಡುತ್ತಿದೆ. ತನ್ನ ಹಣಕಾಸು ಶಾಖೆಗಳೊಂದಿಗೆ ಸೆಣಸಾಡುತ್ತಿದೆ. ಸೌರ ಒಪ್ಪಂದಕ್ಕೆ ವಾರ್ಷಿಕ ಪಾವತಿಗಳು ಆರಂಭವಾದರೆ, ವಿದ್ಯುತ್ ಸರಬರಾಜು ಸಂಪೂರ್ಣವಾಗಿ ಕಾರ್ಯಗತಕ್ಕೆ ಬಂದರೆ, ರಾಜ್ಯದ ಸಾಮಾಜಿಕ ಭದ್ರತೆ ಮತ್ತು ಪೌಷ್ಟಿಕಾಂಶ ಕಾರ್ಯಕ್ರಮದ ಬಜೆಟ್‌ಗಳಿಗೆ ಹೊಡೆತ ಬೀಳಲಿದೆ. ಈ ಒಪ್ಪಂದವು ಆಂಧ್ರಪ್ರದೇಶವನ್ನು ದಶಕಗಳ ಕಾಲ ಆರ್ಥಿಕ ಹೊರೆಯಿಂದ ಬಳಲುವಂತಹ ಅಪಾಯಕ್ಕೆ ದೂಡುತ್ತದೆ ಎಂದು ಹೇಳಲಾಗುತ್ತಿದೆ.
ಅಮೆರಿಕ ಪ್ರಾಸಿಕ್ಯೂಟರ್‌ಗಳು ಚಾರ್ಜ್‌ಶೀಟ್ ಸಲ್ಲಿಸಿದ ನಂತರ, ಆಂಧ್ರಪ್ರದೇಶದ ಹೊಸ ಸರ್ಕಾರವು ಅದಾನಿ ಗ್ರೂಪ್ ಜೊತೆಗಿನ ವಿದ್ಯುತ್ ಒಪ್ಪಂದವನ್ನು ಅಮಾನತುಗೊಳಿಸಲು ಪ್ರಯತ್ನಿಸುತ್ತಿದೆ. ಡಿಸೆಂಬರ್ ಅಂತ್ಯದ ವೇಳೆಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.