ವ್ಯಾಪಾರ ವ್ಯವಹಾರ ಜ್ಞಾನ ಮಕ್ಕಳಿಗೆ ಕಲಿಸುವ ನಿಟ್ಟಿನಲ್ಲಿ ಸಂತೆ ವ್ಯಾಪಾರದ ಪರಿಕಲ್ಪನೆಯಲ್ಲಿ ಆಯೋಜಿಸಿದ್ದ ಸಂತೆ ಮೇಳ ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ನಿಜವಾದ ಸಂತೆಯ ಪ್ರತಿರೂಪ ಸೃಷ್ಟಿಸಿತ್ತು.
ಗ್ರಾಮೀಣ ಭಾಗದ ಹೆಣ್ಣುಮಕ್ಕಳು ಹೆಚ್ಚಾಗಿ ಅಧ್ಯಯನ ಮಾಡುವ ಈ ಶಾಲೆಯಲ್ಲಿ ಹಳ್ಳಿ ಸೊಗಡಿನ ಮಕ್ಕಳು ಸಂತೆಯ ಅಪರಾವತಾರ ನಿರ್ಮಿಸಿದರು. ರೈತರ ಮಕ್ಕಳೇ ಬಹುತೇಕ ಇರುವ ಕಾರಣ ತಾವೇ ಬೆಳೆದ ತರಕಾರಿ, ಹಣ್ಣಗಳ ಜೊತೆ ಚುರುಮುರಿ, ಪಾನಿಪುರಿ, ಜ್ಯೂಸ್, ಕಾಫಿ ಟೀ ಹೀಗೆ ಎಲ್ಲವೂ ಶಾಲೆಯ ಆವರಣದಲ್ಲಿ ರಂಗು ರಂಗಾಗಿ ಕಾಣಿಸಿತು. ಹೆಣ್ಣು ಮಕ್ಕಳೇ ವ್ಯಾಪಾರಸ್ಥರಾಗಿ ವ್ಯವಹಾರ ನಡೆಸಿದ್ದು, ಚೌಕಾಸಿ ವ್ಯಾಪಾರ, ಗ್ರಾಹಕರ ನಡುವಿನ ಸಂಪರ್ಕ, ಲೆಕ್ಕಾಚಾರದ ಮನಸ್ಥಿತಿ ಎಲ್ಲವನ್ನೂ ಕಲಿಯುವ ವಾತಾವರಣ ಅಲ್ಲಿ ಸೃಷ್ಟಿಯಾಗಿತ್ತು.

ಮಕ್ಕಳ ಸಂತೆಯಲ್ಲಿ ವ್ಯಾಪಾರ ಮಾಡಿದ ರೈತ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್ ಮಾತನಾಡಿ ಮಕ್ಕಳಲ್ಲಿ ವ್ಯವಹಾರ ಜ್ಞಾನ ಇಲ್ಲವಾಗಿದೆ. ಮಕ್ಕಳ ತೀಕ್ಷ್ಣ ಮತಿ ಹೊರಬರಲು ಈ ಸಂತೆಮೇಳ ಉಪಯೋಗವಾಗಿದೆ. ಶಿಕ್ಷಣ ಇಲಾಖೆಯ ಈ ಕಲ್ಪನೆ ಮಕ್ಕಳಲ್ಲಿ ಗಣಿತಜ್ಞಾನ ವೃದ್ಧಿ ಮಾಡುತ್ತದೆ. ಅದರಲ್ಲೂ ಗ್ರಾಮೀಣ ಮಕ್ಕಳು ಹೆಚ್ಚಾಗಿರುವ ಈ ಶಾಲೆಯಲ್ಲಿ ಹೆಣ್ಣು ಮಕ್ಕಳು ವ್ಯಾಪಾರ ವ್ಯವಹಾರ ಮಾಡುವುದರಲ್ಲಿ ಎತ್ತಿದ ಕೈ ಎಂದು ತೋರಿಸಿದ್ದಾರೆ. ತರಕಾರಿ, ಹಣ್ಣುಗಳ ಜೊತೆ ಕೆಲ ವಸ್ತುಗಳು ಮಾರಾಟಕ್ಕೆ ಬಂದಿದ್ದು ನಿಜವಾದ ಸಂತೆಯ ವೈಭವ ಕಂಡು ಬಂತು. ನಾಲ್ಕು ಗೋಡೆಯ ಶಿಕ್ಷಣಕ್ಕಿಂತ ಹೊರಗಿನ ಪ್ರಪಂಚ ತೋರಿಸುವ ಈ ಶಿಕ್ಷಣ ಉತ್ತಮ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜ್ ಸಂತೆಗೆ ಭೇಟಿ ನೀಡಿ ಮಕ್ಕಳ ಆಸಕ್ತಿ ಆಲಿಸಿದರು. ಈ ಸಂದರ್ಭದಲ್ಲಿ ಎಸ್ ಡಿಎಂಸಿ ಅಧ್ಯಕ್ಷ ರೇಣುಕಪ್ಪ, ಮುಖ್ಯಶಿಕ್ಷಕಿ ದೇವಿಕಾ ಇತರರು ಇದ್ದರು.
‘ಶಿಕ್ಷಣ ಇಲಾಖೆ ಪ್ರತಿಭಾ ಕಾರಂಜಿ ಹಾಗೂ ವಿಜ್ಞಾನ ವಸ್ತು ಪ್ರದರ್ಶನ ನಡೆಸಿ ಮಕ್ಕಳ ಪ್ರತಿಭೆಗೆ ವೇದಿಕೆ ಸೃಷ್ಟಿಸಿದೆ. ಈ ಜೊತೆಗೆ ಮಕ್ಕಳಲ್ಲಿ ವ್ಯವಹಾರ ಜ್ಞಾನ ಬೆಳೆಸಲು ಸಂತೆ ಮೇಳ ನಡೆಸುತ್ತಿದ್ದು ಮಕ್ಕಳಿಗೆ ಶಾಲೆಯ ಹೊರತಾದ ಪ್ರಪಂಚ ಪರಿಚಯ ಮಾಡಲಾಗುತ್ತಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜ್ ತಿಳಿಸಿದರು.