ಕೊಪ್ಪಳ ಜಿಲ್ಲೆ ಕನಕಗಿರಿ ತಾಲ್ಲೂಕಿನ ರಾಂಪೂರ ಗ್ರಾಮದ ಸರಕಾರಿ ಕಿರಿಯ ಶಾಲೆಯಲ್ಲಿ ಖಾಯಂ ಶಿಕ್ಷಕರ ಕೊರತೆಯೇ ಹೆಚ್ಚಿದ್ದು, ಓರ್ವ ಅತಿಥಿ ಶಿಕ್ಷಕರೇ 40 ಮಕ್ಕಳ ಕಲಿಕೆಗೆ ನೆರವಾಗಿದ್ದಾರೆ. ಶಿಕ್ಷಕರ ಕೊರತೆಯಿಂದ ಮಕ್ಕಳ ಶೈಕ್ಷಣಿಕ ಗುಣಮಟ್ಟ ಸುಧಾರಿಸುತ್ತಿಲ್ಲ ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಶಾಲೆಯಲ್ಲಿ 1 ರಿಂದ 5ನೇ ತರಗತಿವರೆಗೆ ಒಟ್ಟು 40 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಒಬ್ಬರೂ ಖಾಯಂ ಶಿಕ್ಷಕರಿಲ್ಲದ ಕಾರಣ ಓರ್ವ ಅತಿಥಿ ಶಿಕ್ಷಕರೇ ಐದು ತರಗತಿಗಳಿಗೆ ಪಾಠ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ರಾಂಪೂರ ಗ್ರಾಮ ಸಮೀಪದ ಮುಸ್ಲಾಪುರ ಗ್ರಾಮದ ಶಿಕ್ಷಕರೊಬ್ಬರನ್ನು ತಾತ್ಕಾಲಿಕವಾಗಿ ನಿಯೋಜನೆ ಮಾಡಿದ್ದಾರೆ. ಆದರೆ ಅವರೂ ದಿನ ಬಿಟ್ಟು ದಿನ ಬರುವ ಕಾರಣ ಮಕ್ಕಳ ಶೈಕ್ಷಣಿಕ ಗುಣಮಟ್ಟ ಕುಂಠಿತಗೊಳ್ಳುತ್ತಿದೆ ಎಂದು ಪೋಷಕರು ಬೇಸರ ವ್ಯಕ್ತಪಡಿಸಿದರು.
ʼಶಾಲೆಗೆ ಕನಿಷ್ಠ ಮೂಲಸೌಕರ್ಯಗಳಾದ ಕಾಂಪೌಂಡ್, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ . ಇನ್ನು ಶಾಲಾ ಕೊಠಡಿಗಳ ಮೇಲ್ಛಾವಣಿ ಸೋರುತ್ತಿದ್ದರೂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಹೊಸ ಕೋಣೆಗಳು ಮಂಜೂರಾಗಿ ಮೂರು ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಳಿಸದೇ ನನೆಗುದಿಗೆ ಬಿದ್ದಿದೆ. ಇದರಿಂದ ʼಮಕ್ಕಳಿಗೆ ಕೂರಲು ಜಾಗವಿಲ್ಲ, ಕಲಿಸುವ ಶಿಕ್ಷಕರಿಲ್ಲʼ ಎಂಬಂತಾಗಿದೆ. ಇಂತಹ ದುಸ್ಥಿತಿಯಲ್ಲಿ ಗುಣಮಟ್ಟ ಶಿಕ್ಷಣ ನಿರೀಕ್ಷಿಸಲು ಸಾಧ್ಯವಿಲ್ಲʼ ಎಂದು ಮಹಿಳಾ ಮುನ್ನಡೆ ಹೋರಾಟಗಾರ್ತಿ ಶೋಭಾ ಹೇಳಿದರು.

ʼನಮ್ಮೂರಿನ ಸರ್ಕಾರಿ ಶಾಲೆಯಲ್ಲಿ ಖಾಯಂ ಶಿಕ್ಷಕರು ಇಲ್ಲದಿರುವುದರಿಂದ ಶ್ರೀಮಂತರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುತ್ತಿದ್ದಾರೆ. ಬಡ ಕೂಲಿ ಕಾರ್ಮಿಕರ ಮಕ್ಕಳಿಗೆ ಇದೇ ಶಾಲೆ ಗತಿಯಾಗಿದೆ. ಸರ್ಕಾರಿ ಶಾಲೆಗಳಿಗೆ ಸರ್ಕಾರ ಎಲ್ಲ ಸೌಕರ್ಯಗಳು ಉಚಿತವಾಗಿ ನೀಡುತ್ತಿದೆ. ಆದರೆ ಶಿಕ್ಷಕರೇ ಇಲ್ಲದ ಶಾಲೆಗಳಿಗೆ ಮಕ್ಕಳನ್ನು ಹೇಗೆ ಕಳಿಸುವುದು. ಕೂಡಲೇ ಶಿಕ್ಷಕರ ನೇಮಕ ಮಾಡಬೇಕು ಎಂದು ಶರಣಪ್ಪ ಪೂಜಾರ ಒತ್ತಾಯಿಸಿದರು.
ʼಶಾಲೆ ಪಕ್ಕದಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಇರುವ ಕಾರಣ ವಿದ್ಯಾರ್ಥಿಗಳು ನಿತ್ಯವೂ ಭಯದಲ್ಲಿ ಒಡಾಡುವಂತಾಗಿದೆ. ಶಾಲೆಯ ಕಾಂಪೌಂಡ್ ಶಿಥಿಲಗೊಂಡ ಪರಿಣಾಮ ಸಂಜೆಯಾದರೆ ಶಾಲಾ ಆವರಣ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಪ್ರಾಥಮಿಕ ಶಿಕ್ಷಣದಿಂದ ಮಕ್ಕಳು ವಂಚಿತವಾಗಬಾರದು ಎಂಬ ಕಾರಣದಿಂದ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದರೂ ನಮ್ಮೂರು ಶಾಲೆಯ ಅವ್ಯವಸ್ಥೆ ತೀರಾ ಹದಗೆಟ್ಟಿದೆʼ ಎಂದು ಶಂಭು ಕಿರಣ ನಾಯಕ ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಅಂಬೇಡ್ಕರ್‌ರನ್ನು ಅವಮಾನಿಸಿದ ಅಮಿತ್ ಶಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ : ಎನ್‌ಎಸ್‌ಯುಐ
ಈ ವಿಷಯ ಕುರಿತು ಮಾಹಿತಿಗಾಗಿ ಗಂಗಾವತಿಯ, ಕನಕಗಿರಿ ಬಿಇಒ ಅವರನ್ನು ಈದಿನ.ಕಾಮ್ ಸಂಪರ್ಕಿಸಲು ಪ್ರಯತ್ನಿಸಿತ್ತು. ಆದರೆ ಅವರು ಸಂಪರ್ಕಕ್ಕೆ ಸಿಗಲಿಲ್ಲ.

ಕೇಶವ ಕಟ್ಟಿಮನಿ
ಕೃಷಿ, ಪುಸ್ತಕ ಓದುಗ,
ಫೀಲ್ಡ್ ಕೋರ್ಡಿನೇಟರ್,
ಕೊಪ್ಪಳ ಮತ್ತು ಬಳ್ಳಾರಿ, ಮಾಸ್ ಮೀಡಿಯಾ ಫೌಂಡೇಶನ್