ರಾಜ್ಯಾದ್ಯಂತ ಡಿಸೆಂಬರ್ 14ರಂದು ನಡೆದ ಲೋಕ ಅದಾಲತ್‌ನಲ್ಲಿ ಬರೋಬ್ಬರಿ 38 ಲಕ್ಷಕ್ಕೂ ಅಧಿಕ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ. ಅಲ್ಲದೆ, ವಿವಿಧ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಒಟ್ಟು 2,248 ಕೋಟಿ ರೂ. ಪರಿಹಾರ ಪಾವತಿ ಮಾಡುವಂತೆ ಮಾಡಲಾಗಿದೆ ಎಂದು ಕಾನೂನು ಸೇವಾ ಪ್ರಾಧಿಕಾರ ತಿಳಿಸಿದೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ನ್ಯಾಯಮೂರ್ತಿ ವಿ ಕಾಮೇಶ್ವರ್ ರಾವ್, “ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್ ಅಂಗವಾಗಿ ರಾಜ್ಯಾದ್ಯಂತ ಒಂದೇ ದಿನದಲ್ಲಿ ಒಟ್ಟು 38.80 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿಲಾಗಿದೆ. ಅವುಗಳಲ್ಲಿ ಹೈಕೋರ್ಟ್, ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿನ 2,45,189 ಪ್ರಕರಣಗಳು ಮತ್ತು 36,35,692 ವ್ಯಾಜ್ಯ ಪೂರ್ವ ಪ್ರಕರಣಗಳು ಇತ್ಯರ್ಥಗೊಂಡಿವೆ. ಒಟ್ಟು 2,248 ಕೋಟಿ ರೂ. ಪರಿಹಾರ ಕೊಡಿಸಲಾಗಿದೆ” ಎಂದು ತಿಳಿಸಿದ್ದಾರೆ.
“ಇತ್ಯರ್ಥವಾದ ಪ್ರಕರಣಗಳಲ್ಲಿ 1,581 ವಿಚ್ಛೇದನ ಪ್ರಕರಣಗಳಿವೆ. ಅವುಗಳಲ್ಲಿ 307 ಪ್ರಕರಣಗಳಲ್ಲಿ ದಂಪತಿ ಮತ್ತೆ ಜೊತೆಯಾಗಿದ್ದಾರೆ. ಅಲ್ಲದೆ, 5,168 ಮೋಟಾರು ವಾಹನ ಅಪರಾಧ ಪರಿಹಾರ ಪ್ರಕರಣಗಳು ಇತ್ಯರ್ಥಗೊಂಡಿದ್ದು, 260 ಕೋಟಿ ರೂ. ಪರಿಹಾರ ಕೊಡಿಸಲಾಗಿದೆ” ಎಂದು ಹೇಳಿದ್ದಾರೆ.
“ಚೆಕ್ ಬೌನ್ಸ್ ಆರೋಪದ 11,262 ಪ್ರಕರಣಗಳು, ಭೂಸ್ವಾಧೀನ ಕುರಿತ 597 ಪ್ರಕರಣಗಳ ಇತ್ಯರ್ಥವಾಗಿದ್ದು, 773 ಕೋಟಿ ರೂ. ಪರಿಹಾರ ಕೊಡಿಸಲಾಗಿದೆ. ಗ್ರಾಹಕ ವ್ಯಾಜ್ಯಗಳ ಕುರಿತ 611 ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದು, 3 ಕೋಟಿ ರೂ. ಪರಿಹಾರ ವಿತರಣೆ ಮಾಡಲಾಗಿದೆ” ಎಂದು ವಿವರಿಸಿದ್ದಾರೆ.