ಚಳ್ಳಕೆರೆ ನಗರಸಭೆಯಲ್ಲಿ ಮೂಲಸೌಕರ್ಯಗಳಿಲ್ಲದೇ ನರಳುತ್ತಿದ್ದರೂ ಅಧಿಕಾರಿವರ್ಗ ಸುಮಾರು ₹24 ಲಕ್ಷ ವೆಚ್ಚದಲ್ಲಿ ಹೊರದೇಶಗಳಿಗೆ ಪ್ರವಾಸ ಕೈಗೊಳ್ಳುತ್ತಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ, ನಗರಸಭೆ ಮಾಜಿ ಸದಸ್ಯ ಟಿ ಜಿ ವೆಂಕಟೇಶ್ ಖಂಡಿಸಿದ್ದಾರೆ.
“ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರಸಭೆಯ 31 ವಾರ್ಡ್‌ಗಳಲ್ಲಿ ಮೂಲ ಸೌಕರ್ಯಗಳಿಲ್ಲದೆ ಸಾರ್ವಜನಿಕರು ನಗರಸಭೆಗೆ ಆಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ವಾರ್ಡ್‌ಗಳ ಮೂಲ ಸೌಕರ್ಯಗಳಿಗೆ ₹1 ಲಕ್ಷ ಅನುದಾನವನ್ನೂ ನೀಡುತ್ತಿಲ್ಲವೆಂದು ಸ್ವತಃ ನಗರಸಭೆ ಸದಸ್ಯರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಲಕ್ಷಗಟ್ಟಲೆ ಹಣ ಖರ್ಚುಮಾಡಿ ಪ್ರವಾಸ ಮಾಡುವುದು ಎಷ್ಟು ಸರಿ” ಎಂದು ಟಿ ಜಿ ವೆಂಕಟೇಶ್ ಪ್ರಶ್ನಿಸಿದ್ದಾರೆ.

ನಗರಸಭೆ ಅಧಿಕಾರಿಗಳ ಪ್ರವಾಸ ಕಾರ್ಯಕ್ರಮಕ್ಕೆ ಈಗಾಗಲೇ ಜಿಲ್ಲಾಧಿಕಾರಿ, ಕ್ಷೇತ್ರದ ಶಾಸಕರು ಪ್ರವಾಸಕ್ಕೆ ಅನುಮತಿ ನೀಡಿದ್ದಾರೆ ಎನ್ನಲಾಗಿದೆ. ಕೂಡಲೇ ಆದೇಶವನ್ನು ರದ್ದುಪಡಿಸಬೇಕು. ಕೆಲ ವಾರ್ಡ್‌ಗಳ ಗಂಭೀರ ಸಮಸ್ಯೆಗಳನ್ನು ಪರಿಹರಿಸುವ ಕೆಲಸವಾಗಬೇಕು” ಎಂದು ಒತ್ತಾಯಿಸಿದ್ದಾರೆ.
“ಸ್ವಚ್ಛತಾ ಕಾರ್ಯಕ್ಕೆ ಬಳಕೆಯಾಗದ ರೀತಿ ಜೆಸಿಬಿ ಕೆಟ್ಟು ನಿಂತಿದ್ದು, ದುರಸ್ತಿಗೆ ಹಣದ ಕೊರತೆಯಿದೆಯೆಂದು ಹೇಳುತ್ತಿರುವ ನಗರಸಭೆಯ ಅಧಿಕಾರಿಗಳ ಪ್ರವಾಸಕ್ಕೆ ಯಾವ ಅನುದಾನ ಬಳಕೆಯಾಗುತ್ತಿದೆ ಎಂಬುದನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಅಂಬೇಡ್ಕರ್‌ರನ್ನು ಅವಮಾನಿಸಿದ ಅಮಿತ್ ಶಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ : ಎನ್‌ಎಸ್‌ಯುಐ
“ಸ್ವಂತ ಕಟ್ಟಡವಿಲ್ಲದೆ ತಾತ್ಕಾಲಿಕವಾಗಿ ಎಂದೇಳಿ ರಂಗಮಂದಿರ ಕಟ್ಟಡಕ್ಕೆ ಹೋದ ನಗರಸಭೆ ಆಡಳಿತ ವರ್ಗ ಅಲ್ಲೇ ಠಿಕಾಣಿ ಹೂಡಿದೆ. ತನಗಾಗಿ ಒಂದು ಕಟ್ಟಡವನ್ನೂ ಸಂಪೂರ್ಣವಾಗಿ ಕಟ್ಟಿಕೊಂಡಿಲ್ಲ. ಸಾರ್ವಜನಿಕರಿಂದ ಕಂದಾಯ ವಸೂಲಿ ಮಾಡುವ ನಗರಸಭಾ ಆಡಳಿತವು ವಾರ್ಡ್‌ಗಳಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸುತ್ತಿಲ್ಲ” ಎಂದು ಆರೋಪಿಸಿದರು.

“ಬಜೆಟ್‌ನಲ್ಲಿ ಘೋಷಣೆಯಾಗುವ ಕಾಮಗಾರಿಗಳು ಮತ್ತು ಅನುದಾನ ಬಳಕೆಯಲ್ಲಿ ಯಾವುದೇ ಪಾರದರ್ಶಕತೆ ಇರುವುದಿಲ್ಲವೆಂದು ಶುಕ್ರವಾರ ನಗರಸಭೆ ಅಧ್ಯಕ್ಷೆ ಜೈತುನ್‌ಬಿ ಅಧ್ಯಕ್ಷತೆಯ ಬಜೆಟ್ 2ನೇ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರೂ ಕೂಡ ಗಂಭೀರ ಆರೋಪ ಮಾಡಿದ್ದಾರೆ. ಇಂತಹ ಸಮಯದಲ್ಲಿ ಸಾರ್ವಜನಿಕರ ತೆರಿಗೆ ಹಣದಲ್ಲಿ ವಿದೇಶಿ ಪ್ರವಾಸ ಕೈಗೊಳ್ಳುವುದು ಎಷ್ಟು ಸೂಕ್ತ?” ಎಂದು ಸಾರ್ವಜನಿಕರು ಕೇಳುತ್ತಿದ್ದಾರೆ.