ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ಒಳ ಮತ್ತು ಹೊರ ರೋಗಿಗಳಿಗೆ ಉಚಿತವಾಗಿ ಸ್ಕ್ಯಾನಿಂಗ್ ಮಾಡಿಬೇಕಿತ್ತು. ಆದರೆ ಹೊರಗೆ ಫಲಕವನ್ನೂ ಹಾಕದೆ ರೋಗಿಗಳಿಂದ ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ದಲಿತ ಸಂಘಟನೆಗಳ ಒಕ್ಕೂಟದ ಸಾಮಾಜಿಕ ಹೋರಾಟಗಾರ ಮುತ್ತು ಬಿಳೆಯಲಿ ಆರೋಪಿಸಿದರು.
ಈ ಕುರಿತು ಮಾತನಾಡಿದ ಅವರು, “ಕಳೆದ ಸೆಪ್ಟೆಂಬರ್‌ನಲ್ಲಿ ಎಲ್ಲ ತರಹದ ಚಿಕಿತ್ಸಾ ದರಗಳನ್ನು ಹೆಚ್ಚಿಸಿ ವಿವಾದಕ್ಕೆ ಈಡಾಗಿದ್ದ ಜಿಮ್ಸ್ ದಲಿತ ಸಂಘಟನೆಗಳ ಪ್ರತಿಭಟನೆಗೆ ಮಣಿದು ಆದೇಶವನ್ನು ರದ್ದುಮಾಡಿತ್ತು. ಈಗ ಮತ್ತೆ ಸರ್ಕಾರಿ ಆದೇಶವೆಂದು ಹೇಳುತ್ತ ಸ್ಕ್ಯಾನಿಂಗ್ ದರವನ್ನು ಏಕಾಏಕಿ ಹೆಚ್ಚಿಸಿದೆ. ಜಿಮ್ಸ್ ಈ ಹಿಂದೆ ಚಿಕಿತ್ಸೆಗಾಗಿ ಬರುವ ಹೊರರೋಗಿಗಳಿಗೆ ಹಾಗೂ ಒಳರೋಗಿಗಳಿಗೆ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗೆ ಉಚಿತವಾಗಿ ಗದಗ ಕೆ ವಿ ಹಂಚಿನಾಳ ಡಯಗ್ನೋಸ್ಟಿಕ್ ಸೆಂಟರ್‌ನಿಂದ ಉಚಿತವಾಗಿ ಸ್ಕ್ಯಾನಿಂಗ್ ಮಾಡುತ್ತಿದ್ದರು. ಆದರೆ ಈಗ ವೈದ್ಯರು ಸೂಚಿಸಿದ ಸ್ಕ್ಯಾನಿಂಗ್ ಚೀಟಿಯನ್ನು ತೆಗೆದುಕೊಂಡು ರಿಯಾಯಿತಿಗಾಗಿ ಸ್ಕ್ಯಾನಿಂಗ್‌ಗೆ ಸಂಬಂಧಿಸಿದ ಎಬಿಆರ್‌ಕೆ ಕಚೇರಿಗೆ ಹೋಗಿ ಅಲ್ಲಿ ಅನುಮೋದನೆ ತೆಗೆದುಕೊಂಡು ಬಂದಾಗ ಮಾತ್ರ ಉಚಿತ ಸ್ಕ್ಯಾನಿಂಗ್ ಮಾಡುತ್ತಾರಂತೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಸರ್ಕಾರಿ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಗೆ ಆಗಮಿಸುವ ರೋಗಿಗಳು ಸ್ಕ್ಯಾನಿಂಗ್ ಸಂದರ್ಭದಲ್ಲಿ ನಾಲ್ಕು ಗಂಟೆಗಳ ಕಾಲ ಕಾಯಬೇಕು. ರೋಗಿಗಳು ಈ ರೀತಿಯ ತೊಂದರೆ ಅನುಭವಿಸುತ್ತಿದ್ದಾರೆ. ರೋಗಿಗಳು ಎಬಿಆರ್‌ಕೆ ಅನುಮತಿಗಾಗಿ ಕಾಯುವುದು ಎಷ್ಟು ಸರಿ?. ಸಂಜೆಯ ನಂತರ ಹಾಗೂ ಸರ್ಕಾರಿ ರಜಾ ದಿನಗಳಲ್ಲಿ ಎಬಿಆರ್‌ಕೆಯ ವ್ಯವಸ್ಥೆಯು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸುವುದಿಲ್ಲ. ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ಆಗಮಿಸುವ ಸುಮಾರು ದಿನನಿತ್ಯ 1,500 ಒಳ ಹಾಗೂ ಹೊರ ರೋಗಿಗಳ ಪೈಕಿ ಎರಡು ಅಥವಾ ಮೂರು ರೋಗಿಗಳಿಗೆ ಮಾತ್ರ ಸ್ಕ್ಯಾನಿಂಗ್ ಮಾಡುತ್ತಾರೆ” ಎಂದು ಹೇಳಿದರು.
“ಜಿಮ್ಸ್‌ನ ಹೊಸ ಕಟ್ಟಡದಲ್ಲಿ ಜಿಮ್ಸ್ ಆಡಳಿತದಲ್ಲಿರುವ ಸ್ಕ್ಯಾನಿಂಗ್ ಸೆಂಟರ್ ಇದೆ. ಅಲ್ಲಿಯೂ ಕೂಡ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಉಚಿತವಾಗಿ ಸ್ಕ್ಯಾನಿಂಗ್ ಮಾಡಬೇಕು. ಆದರೆ ಅಲ್ಲಿ ಇಂಥವರಿಗೆ ಉಚಿತವಾಗಿದೆಯೆಂದು ಯಾವುದೇ ಸೂಚನಾ ಫಲಕವಿಲ್ಲ. ಅಲ್ಲಿಯೂ ಜನರಿಂದ ಒಂದು ಸ್ಕ್ಯಾನಿಂಗ್‌ಗೆ ₹500 ಸುಲಿಗೆಮಾಡಿ ಜನರನ್ನು ವಂಚಿಸುತ್ತಿದ್ದಾರೆ” ಎಂದು ಆರೋಪಿಸಿದರು.
“ಕರ್ನಾಟಕ ಸರ್ಕಾರ ಉಚಿತ ಸ್ಕ್ಯಾನಿಂಗ್ ರದ್ದುಪಡಿಸಿ, ದರ ನಿಗದಿಯ ಆದೇಶ ಹೊರಡಿಸಿದ್ದಾರೆ. ಕೂಡಲೇ ಆ ಆದೇಶವನ್ನು ರದ್ದುಪಡಿಸಿ ಉಚಿತ ಚಿಕಿತ್ಸೆಯ ಆದೇಶವನ್ನು ಮಾಡಬೇಕು. ಜಿಮ್ಸ್ ಆಸ್ಪತ್ರೆಯಲ್ಲಿ ಯಾವುದೇ ಖಾಸಗಿ ವ್ಯಕ್ತಿಗಳಿಗೆ ಸ್ಕ್ಯಾನಿಂಗ್‌ನ ಪರವಾನಗಿ ನೀಡದೆ ಜಿಮ್ಸ್ ಆಡಳಿತಕ್ಕೆ ಅದರ ಜವಾಬ್ದಾರಿಯನ್ನು ನೀಡಬೇಕು. ಸರ್ಕಾರಿ ಆಸ್ಪತ್ರೆಗೆ ಬರುವವರು ಬಡವರೇ ಆಗಿದ್ದಾರೆ. ಹಾಗಾಗಿ ಸರ್ಕಾರ ಬಡವರ ಹಿತಕಾಯಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಸರ್ಕಾರದ ಕಾನೂನು ಆದೇಶದಂತೆ ಅರಣ್ಯ ಒತ್ತುವರಿ ತೆರವು; ಅಡಕೆ ತೋಟ ಸಂಹಾರ
“ಜಿಮ್ಸ್ ನಿರ್ದೇಶಕ ಬಸವರಾಜ ಬೊಮ್ಮನಹಳ್ಳಿಯವರು ಆಸ್ಪತ್ರೆಯ ಒಳಗೆ ಉಚಿತ ಚಿಕಿತ್ಸೆಯ ಯಾವುದೇ ಮಾಹಿತಿಯ ಫಲಕವನ್ನು ಹಾಕದೆ ಜನರನ್ನು ವಂಚಿಸುತ್ತಿದ್ದಾರೆ. ಇವರು ಅಧಿಕಾರ ವಹಿಸಿಕೊಂಡ ದಿನದಿಂದ ಒಂದಿಲ್ಲೊಂದು ವಿವಾದಕ್ಕೆ ಕಾರಣರಾಗುತ್ತಿದ್ದಾರೆ. ಇವರ ಆಡಳಿತ ಒಂದು ರೀತಿಯ ಹಿಟ್ಲರ್ ಆಡಳಿತ ಇದ್ದಂತಿದೆ. ಕೂಡಲೇ ಇವರನ್ನು ಆ ಹುದ್ದೆಯಿಂದ ವಜಾಮಾಡಿ ಜನಪರವಾಗಿ ಕೆಲಸ ಮಾಡುವ ಒಬ್ಬ ಒಳ್ಳೆಯ ಅಧಿಕಾರಿಯನ್ನು ನೇಮಿಸಬೇಕು” ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
