ತನ್ನನ್ನು ಮದುವೆಯಾಗಲು ನಿರಾಕರಿಸಿದ್ದಕ್ಕೆ ಯುವಕನೊಬ್ಬ ತನ್ನ ಗೆಳತಿಯ ಮನೆಗೆ ಬೆಂಕಿ ಹಚ್ಚಿರುವ ಘಟನೆ ಒಡಿಶಾದ ಭದ್ರಕ್ ಜಿಲ್ಲೆಯ ಆನಂದಪುರದಲ್ಲಿ ನಡೆದಿದೆ. ಆರೋಪಿಯನ್ನು ಪಕ್ಕದ ಗ್ರಾಮ ವಿದ್ಯಾಧರಪುರದ ನಿವಾಸಿ ಜ್ಯೂತಿ ರಂಜನ್ ದಾಸ್ ಎಂದು ಗುರುತಿಸಲಾಗಿದ್ದು, ಆತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಆನಂದಪುರದ ಗ್ರಾಮದ ಯುವತಿ ಮತ್ತು ರಂಜನ್ ದಾಸ್ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದರು. ಆದರೆ, ತನ್ನನ್ನು ಮದುವೆಯಾಗುವಂತೆ ರಂಜನ್ ಯುವತಿಯ ಬೆನ್ನುಬಿದ್ದಿದ್ದ. ನಿರಂತರವಾಗಿ ಒತ್ತಡ ಹಾಕುತ್ತಿದ್ದ. ಆತನ ಕಿರುಕುಳದಿಂದ ಬೇಸತ್ತಿದ್ದ ಯುವತಿ ಪೊಲೀಸರಿಗೆ ದೂರು ನೀಡಿದ್ದರು ಎಂದು ವರದಿಯಾಗಿದೆ.
ತನ್ನ ವಿರುದ್ಧ ದೂರು ನೀಡಿದ್ದಕ್ಕೆ ಯುವತಿಗೆ ರಂಜನ್ ಕೊಲೆ ಬೆದರಿಕೆ ಹಾಕಿದ್ದ. ಕೊನೆಯದಾಗಿ ಭೇಟಿಯಾಗುವಂತೆ ಒತ್ತಾಯಿಸಿದ್ದ. ಆತನನ್ನು ಭೇಟಿಯಾಗಲು ಯುವತಿ ನಿರಾಕರಿಸಿದ್ದಾರೆ. ಇದರಿಂದ ಕುಪಿತಗೊಂಡ ರಂಜನ್, ಯುವತಿಯ ಮನೆಗೆ ಬೆಂಕಿ ಹಚ್ಚಿದ್ದಾನೆ ಎಂದು ತಿಳಿದುಬಂದಿದೆ.
ಬೆಂಕಿಯು ಇಡೀ ಪ್ರದೇಶವನ್ನು ಆವರಿಸಿಕೊಂಡಿದ್ದು, ಸುಮಾರು ಐದು ಶೆಟ್‌ಗಳನ್ನು ಸುಟ್ಟುಹೋಗಿವೆ. ಘಟನೆಯಲ್ಲಿ 15 ಲಕ್ಷ ರೂ. ಮೌಲ್ಯದ ಆಸ್ತಿ ನಾಶವಾಗಿದೆ ಎಂದು ವರದಿಯಾಗಿದೆ.
ಘಟನೆ ಸಂಬಂಧ ಧಾಮ್‌ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿ ಯುವಕ ಪರಾರಿಯಾಗಿದ್ದು, ಆತನಿಗಾಗಿ ಶೋಧ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.