ಬೀದರ್ ಜಿಲ್ಲೆಯ ಜೀವನಾಡಿ ಆಗಿರುವ ಕಾರಂಜಾ ಜಲಾಶಯ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ನೀಡುವ ಕುರಿತಾದ ಬೇಡಿಕೆ ಪರಿಶೀಲನೆಗೆ ತಾಂತ್ರಿಕ ಸಮಿತಿ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಬೆಳಗಾವಿ ಸುವರ್ಣ ಸೌಧದಲ್ಲಿ ಗುರುವಾರ ಕಾರಂಜಾ ಯೋಜನೆ ಸಂತ್ರಸ್ರರ ಹೋರಾಟಗಾರರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ನಡೆಸಿ, ಸಂತ್ರಸ್ತರ ಬೇಡಿಕೆ ಅನುಷ್ಠಾನದ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಸಿದರು.
ತಮ್ಮನ್ನು ಭೇಟಿ ಮಾಡಿದ ನಿಯೋಗ ಮತ್ತು ಮುಖಂಡರುಗಳೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿಗಳು ಸಂತ್ರಸ್ತರಿಗೆ ಪರಿಹಾರ ನೀಡುವ ಸಂಬಂಧ ತಾಂತ್ರಿಕ ಸಮಿತಿಯೊಂದನ್ನು ರಚಿಸಿ, ಸಮಿತಿ ನೀಡುವ ವರದಿಯಾಧರಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಕಾರಂಜಾ ಜಲಾಶಯ ನಿರ್ಮಾಣಕ್ಕೆ 1972-73ರಲ್ಲಿ ಭೂಸ್ವಾಧೀನವಾಗಿತ್ತು. ಜಮೀನು ಕಳೆದುಕೊಂಡ ಸಂತ್ರಸ್ತರಿಗೆ ಎಕರೆಗೆ ರೂ ₹3 ಸಾವಿರದಂತೆ 1981-86ರಲ್ಲಿ ಅಂದಿನ ಮಾರುಕಟ್ಟೆ ಬೆಲೆ ಆಧರಿಸಿ ಪರಿಹಾರ ನೀಡಲಾಗಿತ್ತು. ಆದರೆ ಪರಿಹಾರ ಧನದ ಬಗ್ಗೆ ತಕರಾರು ಎತ್ತಿ ನ್ಯಾಯಾಲಯದ ಮೊರೆ ಹೋದ ಸಂತ್ರಸ್ತರು ಹೆಚ್ಚು ಪರಿಹಾರ ಧನ ಪಡೆದಿದ್ದರು. ನ್ಯಾಯಾಲಯದ ಮೊರೆ ಹೋಗದ ರೈತರು ಹೆಚ್ಚುವರಿ ಪರಿಹಾರಕ್ಕಾಗಿ ಆಗ್ರಹಿಸಿ ಕಳೆದ 895 ದಿನಗಳಿಂದ ಬೀದರ್‌ನಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಅಬ್ಬಬ್ಬಾ! ಏನ್ ಚಳಿ ಅಂತೀರಾ…
ಸಚಿವರಾದ ರಹೀಂ ಖಾನ್, ಕೆಕೆಡಿಬಿ ಅಧ್ಯಕ್ಷ ಅಜಯ ಸಿಂಗ್ ಹಾಗೂ ಜಿಲ್ಲೆಯ ಶಾಸಕರು ಸೇರಿದಂತೆ ಹಿರಿಯ ಅಧಿಕಾರಿಗಳು, ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.