ಡಾ. ಬಿ ಆರ್ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ನಿರಂತರವಾಗಿ ನೋಯಿಸಿ, ವಂಚಿಸಿದೆ. ಚುನಾವಣೆಗಳಲ್ಲಿ ಅಂಬೇಡ್ಕರ್ ಸ್ಪರ್ಧಿಸಿದಾಗ ಅವರನ್ನು ನೆಹರೂ ಅವರು ಗುಂಪು ಕಟ್ಟಿಕೊಂಡು ಸೋಲಿಸಿದ್ದರು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.
ಮಾಧ್ಯಮಗಳೊಂದಿಗೆ ಗುರುವಾರ ಮಾತನಾಡಿದ ಅವರು, “ಅಂಬೇಡ್ಕರ್ ಅವರ ಹೇಳಿಕೆಗಳನ್ನು ವಿರೋಧಿಸಿದ್ದಲ್ಲದೆ ಖಂಡಿಸುತ್ತ ಕಾಂಗ್ರೆಸ್ ಬಂದಿದೆ. ಬಾಬಾ ಸಾಹೇಬರು ದಲಿತರಿಗೆ ಪ್ರತ್ಯೇಕ ಎಲೆಕ್ಟೋರೇಟ್ ಬೇಕೆಂದು ಬ್ರಿಟಿಷರನ್ನು ಕೇಳಿದಾಗ ಕಾಂಗ್ರೆಸ್ಸಿಗರು ಅದನ್ನು ವಿರೋಧಿಸಿದ್ದರು. ಅಂಥ ಮೇಧಾವಿ ವ್ಯಕ್ತಿ ಸಂವಿಧಾನ ಬರೆದ ಮೇಲೂ ಈ ದೇಶದಲ್ಲಿ ಅವರು ಬರೆದ ಸಂವಿಧಾನ ಜಮ್ಮು-ಕಾಶ್ಮೀರದಲ್ಲಿ ಜಾರಿಯಲ್ಲಿ ಇರಲಿಲ್ಲ ” ಎಂದರು.
“ಮೊದಲಿನಿಂದ ರಾಹುಲ್ ಗಾಂಧಿ, ಇತರ ಕಾಂಗ್ರೆಸ್ಸಿಗರು ಸಂವಿಧಾನದ ಪ್ರತಿಯನ್ನು ಯಾಕೆ ಕೈಯಲ್ಲಿ ಹಿಡಿದಿಲ್ಲ? ಇವತ್ತು ನಮಗೆ ಸ್ವಾತಂತ್ರ್ಯ ಬಂದಿದೆಯೇ? ಸಂವಿಧಾನ ಪ್ರದರ್ಶನ ಕೇವಲ ನಾಟಕ” ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ‘ಅಂಬೇಡ್ಕರ್’- ಅಮಿತ್ ಶಾ ಆಡಿದ ಮಾತಲ್ಲ, ಹೊಟ್ಟೆಯೊಳಗಿನ ಹೊಲಸು
“ದಲಿತರನ್ನು ಸೆಳೆಯಲು, ಓಟ್ ಬ್ಯಾಂಕಿಗಾಗಿ ನೀವು ಅನುಸರಿಸುವ ಕ್ರಮ. ಇದನ್ನೇ ಅಮಿತ್ ಶಾ ಅವರು ಎಳೆಎಳೆಯಾಗಿ ಬಿಡಿಸಿ ಹೇಳಿದ್ದಾರೆ. ಅಮಿತ್ ಶಾ ಅವರು ಹೇಳಿದ್ದು ನೂರಕ್ಕೆ ನೂರು ಸತ್ಯ ಇದೆ. ಕಾಂಗ್ರೆಸ್ ದಲಿತ ವಿರೋಧಿ, ಕಾಂಗ್ರೆಸ್ ಅಂಬೇಡ್ಕರರ ವಿರೋಧಿ ಎಂದು ನಾನೂ ಹೇಳುವೆ. ಇದು ಬೇಕಿದ್ದರೆ ವೈರಲ್ ಆಗಲಿ” ಎಂದರು.