ಕಳೆದ 15 ದಿನಗಳ ಹಿಂದೆ ಕೋಟ ಠಾಣಾ ವ್ಯಾಪ್ತಿಯಲ್ಲಿ ಅಪಘಾತಕ್ಕೆ ಒಳಗಾದ ಒರಿಸ್ಸಾದ ಕಾರ್ಮಿಕ ಯುವಕನಿಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡದೆ ಉಡುಪಿಗೆ ಹಿಂದಕ್ಕೆ ಕಳುಹಿಸಿದ, ಇನ್ನೇನು ಕೊನೆ ಘಳಿಗೆ ಸಾವು ಸಂಭವಿಸುವ ಸಂದರ್ಭ, ವಿಶು ಶೆಟ್ಟಿಯವರು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ ಯುವಕ ಇದೀಗ ಪುನರ್ಜನ್ಮ ಪಡೆದಿದ್ದಾನೆ.
ಒರಿಸ್ಸಾ ಮೂಲದ ಕೂಲಿ ಕಾರ್ಮಿಕ ಕೃಷ್ಣ (27) ಅಪಘಾತದಿಂದ ಉದರದ ಒಳಭಾಗ ತೀವ್ರ ಹೊಡೆತದಿಂದ ಚಿಂತಾ ಜನಕ ಪರಿಸ್ಥಿತಿ ಇದ್ದು ತುರ್ತು ಶಸ್ತ್ರಚಿಕಿತ್ಸೆಗೆ ಆಂಬುಲೆನ್ಸ್ ಮುಖಾಂತರ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಿದೆ ಉಡುಪಿಗೆ ವಾಪಾಸು ಕಳುಹಿಸಿದ್ದರು. ಪ್ರಾಣ ಉಳಿಸುವ ಅಮೂಲ್ಯ ಸಮಯದಲ್ಲಿ ರೋಗಿಯು 5 ಗಂಟೆಗಳ ಕಾಲ ಸಾವು ಬದುಕಿನ ಹೋರಾಟವನ್ನು ಆಂಬುಲೆನ್ಸ್ ನಲ್ಲಿ ಅನಾವಶ್ಯಕವಾಗಿ ಕಳೆಯಬೇಕಾಯಿತು. ಕೂಲಿ ಕಾರ್ಮಿಕನಾದ ಯುವಕ ಬಡತನದಿಂದ ಹೊರ ರಾಜ್ಯದಿಂದ ಇಲ್ಲಿಗೆ ಬಂದಿದ್ದು ಆತನ ಸಂಗಡಿಗರು ಕಂಗಾಲಾಗಿದ್ದರು. ವಿಷಯ ತಿಳಿದ ವಿಶು ಶೆಟ್ಟಿ ಕೂಡಲೇ ತಾನೇ ಜವಾಬ್ದಾರಿ ಹೊತ್ತು ಕೆಎಂಸಿ ಮಣಿಪಾಲಕ್ಕೆ ದಾಖಲಿಸಿ ತುರ್ತು ಶಸ್ತ್ರ ಚಿಕಿತ್ಸೆ ಮಾಡಿಸಿ 6 ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದಿದ್ದು, ಮುಂದಿನ ಆರೈಕೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ, ಇದೀಗ ಯುವಕನನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದ್ದು, ಊರಿಂದ ಬಂದ ಸಂಬಂಧಿ ಜೊತೆ ತನ್ನೂರಾದ ಒರಿಸ್ಸಾಗೆ ತೆರಳಿದ್ದಾನೆ.
ಪ್ರಕರಣದ ಗಂಭೀರತೆ ಅರಿತ ಉದ್ಯಮಿ ಕೃಷ್ಣಮೂರ್ತಿ ಭಟ್ ಕೆಮ್ತೂರು ರೂ. 50000/- ಚಿಕಿತ್ಸೆಗೆ ನೀಡಿ ಸಹಕರಿಸಿದ್ದರು. ಯುವಕನ ಜೊತೆಕೆಲಸಗಾರ ಅನಿಲ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಗಿಯುವ ತನಕ ಜೊತೆಗಿದ್ದು ಉಪಚರಿಸಿ ಸಹಕರಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ ವಿಷಯವನ್ನು ಹಂಚಿಕೊಂಡು ಇಂತಹ ಗಂಭೀರ ಪ್ರಕರಣದಲ್ಲಿ ವೆನ್ಲಾಕ್ ಆಸ್ಪತ್ರೆಯಲ್ಲಿನ ನಿರ್ಲಕ್ಷತನ ಅಮಾನವೀಯ. ಮುಂದೆಂದೂ ಇಂತಹ ಪ್ರಕರಣ ನಡೆಯದಿರಲಿ. ಕೆಎಂಸಿ ಮಣಿಪಾಲದ ಮುಖ್ಯಸ್ಥರು ತುರ್ತು ಮನವಿಗೆ ಸ್ಪಂದಿಸಿ ಯುವಕನ ಜೀವ ಉಳಿಸುವಲ್ಲಿ ನೆರವಾಗಿ ಸಹಕರಿಸಿದ್ದಾರೆ. ಉಡುಪಿ ಜಿಲ್ಲಾ ಆಸ್ಪತ್ರೆಯ ವೈದ್ಯರು ಕೆಎಂಸಿಯಿಂದ ಬಿಡುಗಡೆ ಆದ ನಂತರ ತೀವ್ರ ನಿಗಾ ಘಟಕದಲ್ಲಿ ಉತ್ತಮ ಚಿಕಿತ್ಸೆ ನೀಡಿದ್ದಾರೆ. ಉಡುಪಿ ಜಿಲ್ಲಾಸ್ಪತ್ರೆಗೆ ಇನ್ನಷ್ಟು ಮೂಲಸೌಕರ್ಯ ಸರಕಾರ ಒದಗಿಸಲಿ ಎಂದು ಹೇಳಿದರು.
