ಗುಬ್ಬಿ ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ಹಿಂಡಿಸ್ಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಿಂಡಿಸ್ಗೆರೆ ಮೊದಲ ವಾರ್ಡ್ ಶಶಿಕಲಾ ಅವರು ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.
ಪಂಚಾಯಿತಿ ಸಭಾಂಗಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯನ್ನು ಉಪ ತಹಶೀಲ್ದಾರ್ ಮುತ್ತುರಾಜ್ ನಡೆಸಿಕೊಟ್ಟರು. ಈ ಹಿಂದೆ ಅಧ್ಯಕ್ಷರಾಗಿದ್ದ ಬಿಟ್ಟುಗೊಂಡನಹಳ್ಳಿ ಪ್ರೇಮಾ ಅವರು ರಾಜೀನಾಮೆ ಸಲ್ಲಿಸಿದ ಹಿನ್ನಲೆ ತೆರವಾಗಿದ್ದ ಸಾಮಾನ್ಯ ಮಹಿಳಾ ಮೀಸಲು ಅಧ್ಯಕ್ಷ ಸ್ಥಾನಕ್ಕೆ ಶಶಿಕಲಾ ಏಕೈಕ ನಾಮಪತ್ರ ಸಲ್ಲಿಸಿದ ಹಿನ್ನಲೆ ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು.
ನೂತನ ಅಧ್ಯಕ್ಷೆ ಶಶಿಕಲಾ ಸುದ್ದಿಗಾರರ ಮಾತನಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು ಎಲ್ಲಾ ಸದಸ್ಯರ ವಿಶ್ವಾಸ ಗಳಿಸಿ ಕೆಲಸ ಮಾಡುತ್ತೇನೆ. ಸರ್ಕಾರದಿಂದ ಬರುವ ಎಲ್ಲಾ ಅನುದಾನವನ್ನು ಅರ್ಹ ಫಲಾನುಭವಿಗಳಿಗೆ ನೀಡುವಲ್ಲಿ ಪ್ರಾಮಾಣಿಕ ಕೆಲಸ ಮಾಡುತ್ತಾ ಸಾಮಾಜಿಕ ಕಳಕಳಿಯ ಕೆಲಸಗಳಿಗೆ ಹೆಚ್ಚು ಒತ್ತು ನೀಡುತ್ತೇನೆ. ನೀರು, ರಸ್ತೆ, ಬೀದಿ ದೀಪ, ವಸತಿ ಹೀಗೆ ಎಲ್ಲಾ ಸವಲತ್ತು ಅರ್ಹರಿಗೆ ನೀಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನೂತನ ಅಧ್ಯಕ್ಷರಿಗೆ ಅಭಿನಂದಿಸಿದ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ರೇಷ್ಮಾ, ಸದಸ್ಯರಾದ ಗುರು ಪ್ರಕಾಶ್, ಕೃಷ್ಣೇಗೌಡ, ಮಮತಾ, ಸುಧಾಮಣಿ, ಭಾರತಿ, ನಾಗರಾಜ್, ಗಂಗಾಧರ್ ಗೌಡ, ಕವಿತಾ, ಶ್ವೇತಾ, ವೆಂಕಟೇಶ್, ಲೋಕೇಶ್, ಪಿಡಿಓ ಮಂಜುಳಾ ಬೆಳ್ಳಳ್ಳಿ ಇತರರು ಇದ್ದರು.
