ಕೇಂದ್ರ ಸರ್ಕಾರದ ಮಹತ್ತರ ಅಮೃತ-2 ಯೋಜನೆಯಡಿ ಕೈಗೆತ್ತಿಕೊಂಡಿರುವ ಜಲಜೀವನ್ ಮಿಷನ್(ಜೆಜೆಎಂ) ಕುಡಿಯುವ ನೀರಿನ ಕಾಮಗಾರಿಯು ಎಂಜಿನಿಯರ್, ಗುತ್ತಿಗೆದಾರರು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಂಪೂರ್ಣ ಕಳಪೆಯಾಗಿದೆ ಎಂದು ಗದಗ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಸಂತೋಷ ಕುರಿ ಆರೋಪಿಸಿದರು.
ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದಲ್ಲಿ ಕಾಮಗಾರಿ ಕುರಿತು ಮಾತನಾಡಿದ ಅವರು, “ಕುಡಿಯುವ ನೀರಿನ ಬವಣೆ ನೀಗಿಸಲು ದಿನದ 24 ಗಂಟೆಯೂ(24×7) ನೀರನ್ನು ಒದಗಿಸುವ ಸದುದ್ದೇಶದಿಂದ ಪ್ರಾರಂಭವಾದ ಪ್ರಸ್ತುತ ಯೋಜನೆಯ ಕಾಮಗಾರಿ ಕಳಪೆಯಾಗಿದೆ. ಸ್ಥಳೀಯ ಪಟ್ಟಣ ಪಂಚಾಯಿತಿಯಿಂದ ನೀಡಿದ ನಿವೇಶನದಲ್ಲಿ 5 ಲಕ್ಷ ಲೀಟರ್ ನೀರಿನ ಸಾಮರ್ಥ್ಯ ಹೊಂದಿದ ನೀರಿನ ಟ್ಯಾಂಕ್ ಇದಾಗಿದೆ. ಕಾಮಗಾರಿಯಲ್ಲಿ ಕಡಿಮೆ ದಪ್ಪ ಹೊಂದಿದ ಸ್ಟೀಲ್ ಉಪಯೋಗಿಸುತ್ತಿರುವುದು ಅಚ್ಚರಿಯ ಸಂಗತಿ. ಕಾಂಕ್ರೀಟ್‌ನಲ್ಲಿ ತಮಗೆ ತಿಳಿದ ಕಡಿಮೆ ಗ್ರೇಡ್‌ನ ಸಿಮೆಂಟ್ ಬಳಸುತ್ತಿದ್ದು, ಕಾಂಕ್ರೀಟ್ ಹಾಕುವ ಸಮಯದಲ್ಲಿ ಸ್ಟೀಲ್ ಕಂಬಿಗಳನ್ನು ನೆಟ್ಟು ಅದಕ್ಕೆ ಜಾಲಿ(ತಂತಿ) ಕಟ್ಟುತ್ತಿದ್ದಾರೆ. ಅಲ್ಲದೇ ಕಾಂಕ್ರೀಟ್‌ನಲ್ಲಿ ಹೆಚ್ಚಿನ ಮರಳು ಹಾಗೂ ಜೆಲ್ಲಿಗಳನ್ನು ಹಾಕಿ ಮುಚ್ಚುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಸಂಬಂಧಪಟ್ಟ ಅಧಿಕಾರಿಗಳಾಗಲಿ, ಎಂಜಿನಿಯರ್ ಹಾಗೂ ಗುತ್ತಿಗೆದಾರರಾಗಲೀ ಈವರೆಗೂ ಕಾಮಗಾರಿಯನ್ನು ವೀಕ್ಷಣೆ ಮಾಡಿಲ್ಲ. ಪಟ್ಟಣಕ್ಕೆ ಬಂದರೂ ಕೇವಲ ಕಚೇರಿಯಲ್ಲಿ ತಮ್ಮ ಕೆಲಸ ಮುಗಿಸಿ ಹೋಗುತ್ತಿದ್ದಾರೆ. ಪಟ್ಟಣದ ತುಂಬೆಲ್ಲ ಪೈಪ್‌ಲೈನ್ ಮಾಡುತ್ತಿದ್ದಾರೆ. ಗುಣಮಟ್ಟದ ಟ್ಯಾಂಕ್ ನಿರ್ಮಿಸದಿದ್ದಲ್ಲಿ ಪಕ್ಕದಲ್ಲಿರುವ ಶಾಲೆ ಹಾಗೂ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗಬಹುದು” ಎಂದು ಆತಂಕ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಅಂಬೇಡ್ಕರ್‌ಗೆ ಅವಮಾನಿಸಿದ ಅಮಿತ್ ಶಾ ಗಡಿಪಾರಿಗೆ ಚಲವಾದಿ ಮಹಾಸಭಾ ಮಹಿಳಾ ಘಟಕ ಆಗ್ರಹ
“ಟ್ಯಾಂಕ್ ನಿರ್ಮಾಣವಾಗುವ ಮೊದಲು ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಕಾಮಗಾರಿಯ ಗುಣಮಟ್ಟ ಪರೀಶೀಲಿಸಬೇಕು. ಇಲ್ಲದೇ ಹೋದಲ್ಲಿ ಸಂಪೂರ್ಣ ಕಾಮಗಾರಿಯನ್ನು ತಡೆಯಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು. ಇದೇ ವೇಳೆ ಚಂದ್ರು ಜೋಗೆರ ಇದ್ದರು.