ಬಸುರಿ-ಬಾಣಂತಿಯರ ತೀರದ ಬವಣೆ

Date:

Advertisements

ವಿಶ್ವ ಸಂಸ್ಥೆಯು ಸುಸ್ಥಿರ ಅಭಿವೃದ್ಧಿಯ ಗುರಿಗಳಡಿ ತಾಯಂದಿರ ಮರಣ ದರವನ್ನು 2030ಕ್ಕೆ ಪ್ರತಿ ಲಕ್ಷ ಜೀವಂತ ಜನನಗಳಲ್ಲಿ 70ಕ್ಕೆ ಇಳಿಸುವ ಗುರಿ ಹೊಂದಿದೆ. ಇಗಾಗಲೇ, ಕರ್ನಾಟಕವು ಈ ಗುರಿಯನ್ನು ತಲುಪಿದ್ದು, ಇಲ್ಲಿನ ತಾಯಿ ಮರಣ ದರವು 2018-20ರಲ್ಲಿ 69ಕ್ಕೆ ಇಳಿದಿರುವುದಾಗಿ ಹೇಳಿರುವ ರಿಜಿಸ್ಟ್ರಾರ್ ಜನರಲ್ ಕಚೇರಿಯ ಮಾಹಿತಿಯು ಪತ್ರಿಕೆಗಳಲ್ಲಿ ವರದಿಯಾಗಿವೆ.

ಬಳ್ಳಾರಿಯ ಜಿಲ್ಲಾ ಆಸ್ಪತ್ರೆಯಲ್ಲಿ ನೀಡಿದ ತಪ್ಪು ಜೌಷಧದಿಂದಾಗಿ ಐದು ಬಾಣಂತಿಯರು ಅಸು ನೀಗಿದ್ದು ಕರ್ನಾಟಕದ ಇವರೆಗಿನ ಪ್ರಗತಿಗೆ ಕಪ್ಪು ಚುಕ್ಕೆ ಇಟ್ಟಂತಾಗಿದೆ. ವಿಶ್ವ ಸಂಸ್ಥೆಯು ಸುಸ್ಥಿರ ಅಭಿವೃದ್ಧಿಯ ಗುರಿಗಳಡಿ ತಾಯಂದಿರ ಮರಣ ದರವನ್ನು 2030ಕ್ಕೆ ಪ್ರತಿ ಲಕ್ಷ ಜೀವಂತ ಜನನಗಳಲ್ಲಿ 70ಕ್ಕೆ ಇಳಿಸುವ ಗುರಿ ಹೊಂದಿದೆ. ಈಗಾಗಲೇ, ಕರ್ನಾಟಕವು ಈ ಗುರಿಯನ್ನು ತಲುಪಿದ್ದು, ಇಲ್ಲಿನ ತಾಯಿ ಮರಣ ದರವು 2018-20ರಲ್ಲಿ 69ಕ್ಕೆ ಇಳಿದಿರುವುದಾಗಿ ಹೇಳಿರುವ ರಿಜಿಸ್ಟ್ರಾರ್ ಜನರಲ್ ಕಚೇರಿಯ ಮಾಹಿತಿಯು ಪತ್ರಿಕೆಗಳಲ್ಲಿ ವರದಿಯಾಗಿವೆ.

2023ರಲ್ಲಿ ತಾಯಂದಿರ ಮರಣವು ಇನ್ನೂ ಇಳಿಕೆಯಾಗಿದ್ದು, ಇದನ್ನು ರಾಜ್ಯದ ಮತ್ತು ಆರೋಗ್ಯ ಇಲಾಖೆಯ ಅತಿ ಮಹತ್ವದ ಸಾಧನೆ ಎಂದೇ ಪರಿಗಣಿಸಬಹುದು. ಚಿಕ್ಕಮಗಳೂರು ರಾಜ್ಯದಲ್ಲಿಯೇ ಅತಿ ಕಡಿಮೆ ತಾಯಿ ಮರಣ ಹೊಂದಿದ ಜಿಲ್ಲೆಯಾಗಿದೆ. ಭಾರತದಲ್ಲಿ 2020ಕ್ಕೆ ತಾಯಿ ಮರಣಗಳು 103ಕ್ಕೆ ಇಳಿದಿದ್ದು, ಇದು 2000-2020 ಅವಧಿಯಲ್ಲಿ ಆಗಿರುವ ಜಾಗತಿಕ ದರಕ್ಕಿಂತ 6.36%ರಷ್ಟು ಹೆಚ್ಚು ಕುಸಿದಿದೆ ಎಂದು ಇಂಟರ್-ಏಜೆನ್ಸಿ ವರದಿ ಹೇಳಿದ್ದು, ಇದೂ ಸಹ ದೇಶದ ಹೆಮ್ಮೆಯ ಸಾಧನೆ ಎನ್ನಬಹುದಾಗಿದೆ. ಇದರೊಂದಿಗೆ, ರಾಜ್ಯದಲ್ಲಿ ನಗರ ಘಟಕಗಳನ್ನು ಸೇರಿ 2524 ಪ್ರಾಥಮಿಕ ಆರೋಗ್ಯ ಘಟಕಗಳು (PHS) ಮತ್ತು 147 ತಾಲ್ಲೂಕು ಆಸ್ಪತ್ರೆಗಳನ್ನು ಹೊಂದಿದ್ದು, ಸಂಖ್ಯೆಯಲ್ಲಿ ದೇಶದಲ್ಲಿಯೇ ಕ್ರಮವಾಗಿ ಮೂರನೇ ಮತ್ತು ಎರಡನೇ ಸ್ಥಾನವನ್ನು ಹೊಂದಿದೆ.

ಈ ಸಾಧನೆಗಳನ್ನು ಸಂಭ್ರಮಿಸುವ ಹೊತ್ತಿನಲ್ಲಿ ಮತ್ತಷ್ಟು ಸುಧಾರಣೆಯ ಸಲುವಾಗಿ ಆತ್ಮಾವಲೋಕನವನ್ನೂ ಸಹ ಮಾಡಿಕೊಳ್ಳಬೇಕಾಗಿದೆ. ಬಳ್ಳಾರಿಯ ಬಾಣಂತಿ ಸಾವುಗಳಂತೆ ಸುದ್ದಿಯಾಗದ, ಆದರೆ ತಡೆಯಬಹುದಾಗಿದ್ದ ತಾಯಿ ಮರಣಗಳು ಆಗುತ್ತಿರುವುದಾದರೂ ಯಾಕೆ ಎಂಬುದು ಬಹು ಗಂಭೀರವಾಗಿ ಪರಿಗಣಿಸಬೇಕಾದ ಪ್ರಶ್ನೆಯಾಗಿದೆ.

ಇಲಾಖೆಯು ನೀಡಿದ ಎಲ್ಲಾ ತಿಳಿವಳಿಕೆಗಳನ್ನೂ ಮೀರಿ ಮುಂದುವರಿದ ಜಿಲ್ಲೆಯಲ್ಲಿ ಅತ್ತೆ ನೀಡಿದ ನಂಜಿನ ಮನೆ ಮದ್ದು ಸೇವಿಸಿ 20 ವರ್ಷದ ಬಾಣಂತಿ ಸಾಯುವಂತಾಗಿದ್ದೇಕೆ? ಬೇರೆ ರಾಜ್ಯದಿಂದ ಕೂಲಿಗಾಗಿ ಬಂದ ಅಸ್ಸಾಮಿನ ಹೆಣ್ಣು ಮಗಳೊಬ್ಬಳ ಗರ್ಭದಲ್ಲಿ ಮಗು ಸತ್ತು, ಸೋಂಕಿನಿಂದ ಅವಳೂ ಸತ್ತುಹೋದ ತೀರಾ ನಿನ್ನೆ ಮೊನ್ನೆಯ ಘಟನೆಯು ಜರುಗುವ ಅವಶ್ಯಕತೆ ಇತ್ತೆ? ಮೂರು ತಿಂಗಳಿನಿಂದಲೇ ಗರ್ಭಿಣಿಯೊಬ್ಬಳಿಗೆ ಅಲ್ಪಸ್ವಲ್ಪವಿದ್ದ ರಕ್ತಸ್ರಾವವು ಹೆರಿಗೆ ಸಮಯದಲ್ಲಿ ಜೋರಾಗಿ ಮಗುವಿನ ಉಸಿರು ಗರ್ಭದಲ್ಲಿಯೇ ನಿಂತಿದ್ದರೆ, ತಾಯಿಯ ಉಸಿರು ನಂತರದಲ್ಲಿ ಇಲ್ಲವಾಗುತ್ತದೆ. ಬಹುಶಃ ಹೆಚ್ಚಿನ ಮುಂಜಾಗ್ರತೆ ಮತ್ತು ಕಾಳಜಿಯು ಇವಳನ್ನು ಉಳಿಸಬಹುದಾಗಿತ್ತೆ? ಹೃದಯ ಸಮಸ್ಯೆ ಇದ್ದ ಮತ್ತೊಂದು ಬಾಣಂತಿ ಮಗುವನ್ನು ಅನಾಥ ಮಾಡಿ ತಾನು ಸಾಯುತ್ತಾಳೆ. ಹೆಚ್ಚಿನ ಮುತುವರ್ಜಿ ಇಂತಹ ಅಪಾಯದ ಹೆರಿಗೆಯ ಸಾವನ್ನು ತಡೆಯಬಹುದಿತ್ತೇ ಅಥವಾ ಇದು ತಡೆಯಲಾಗದ ಸಾವೇ? ತವರಿಗೆ ಹೋಗುವ ಬಾಣಂತಿಗೆ ಗಂಡನೂರಿನ ಆರೋಗ್ಯ ಸೇವೆಗಳು ಇಲ್ಲವಾಗುತ್ತವೆ.

Advertisements
ಕೂಡ್ಲಿಗಿ

ಮಲತಾಯಿ ಅಸಡ್ಡೆ ಜೊತೆಗೆ, ತವರಿನ ಆಸ್ಪತ್ರೆಯು ಅವಳ ಜಾಡು ಹಿಡಿಯದ ಕಾರಣ, ಹೆಚ್ಚು ರಕ್ತದೊತ್ತಡದಿಂದ ಹೆರಿಗೆಯಲ್ಲಿ ಸಾಯುತ್ತಾಳೆ. ಅಂತೆಯೇ, ತರ್ರಾ ಬುರ್ರಾ ಎಂದು ಬಾರಿಸುತ್ತಾ ದೇವರ ಹೊತ್ತು ಊರೂರು ಸುತ್ತುವ ಗರ್ಭಿಣಿಯನ್ನು ಅಲ್ಲಿನ ಆಶಾ ಗುರುತಿಸಿ ಸೇವೆ ನೀಡುತ್ತಾರಾದರೂ, ಗರ್ಭಿಣಿ ಊರೂರು ಸುತ್ತುವುದರಿಂದ ಅವಳ ಸ್ಥಿತಿ ಏನಾಯಿತೆಂದು ಗೊತ್ತಿಲ್ಲ. ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಬಂದ ಗರ್ಭಿಣಿ ಸರ್ಕಾರಿ ಆಸ್ಪತ್ರೆ ದೂರವಿದೆ ಎಂದು ಅಲ್ಲಿಗೆ ಹೋಗುವುದಿಲ್ಲ. ಅವಳ ಗಂಡ ಕೆಲಸ ಮುಗಿಸಿ ತಡರಾತ್ರಿ ಬಂದು ಅವಳನ್ನು ಹತ್ತಿರದ ನರ್ಸಿಂಗ್ ಹೋಂನಲ್ಲಿ ತೋರಿಸುತ್ತಾನೆ. ಕೊನೆ ಗಳಿಗೆಯಲ್ಲಿ ರಕ್ತಹೀನತೆ ಎಂದು ಅವಳನ್ನು ಸರ್ಕಾರಿ ಆಸ್ಪತ್ರೆಗೆ ಕಳುಹಿಸುತ್ತಾರೆ. ಅವಳು ಸಾವನಪ್ಪುತ್ತಾಳೆ. ಮಗು ಉಳಿಯುತ್ತದೆ. ಮುಂಗಡವಾಗಿ ಹಣ ಕಟ್ಟಲಿಲ್ಲವಾದ್ದರಿಂದ ಖಾಸಗಿ ಆಸ್ಪತ್ರೆಯವರೇ ಅವಳನ್ನು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದರು ಎಂದು ಗಂಡನ ಆರೋಪ. ಮತ್ತೊರ್ವ ಗರ್ಭಿಣಿಗೆ ಅವಧಿಗೆ ಮೊದಲೇ ಹೆರಿಗೆ ನೋವು ಕಾಣಿಸಿ, ರಕ್ತಸ್ರಾವ ಶುರುವಾಗುತ್ತದೆ. ತಾಲ್ಲೂಕು ಆಸ್ಪತ್ರೆಯ ಹೆಚ್ಚಿನ ವೈದ್ಯರು ವರ್ಷದ ಅಂತ್ಯದಲ್ಲಿ ರಜೆಯಲ್ಲಿದ್ದ ಕಾರಣ, ಅವಳು ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ಹೋಗಬೇಕಾಗುತ್ತದೆ. ಅದಕ್ಕೆ ತಗಲಿದ ಸುಮಾರು 40 ಸಾವಿರಗಳ ಸಾಲವನ್ನು ಅವಳ ಬಡ ಗಂಡ ಇನ್ನೂ ತೀರಿಸುತ್ತಿದ್ದಾನೆ.

ಚಿಕ್ಕ ವಯಸ್ಸಿನಲ್ಲಿ ಯಾರಿಗೂ ಹೇಳದೆ ಮದುವೆಯಾಗಿ, ಹದಿನೇಳಕ್ಕೆ ಕಾಲಿಡುತ್ತಿರುವ ಹುಡುಗಿಯೊಬ್ಬಳು ಈಗ ಗರ್ಭಿಣಿಯಾಗಿದ್ದರೆ, 8ನೇ ತರಗತಿಯ ಕುಸೊಂದು ತನ್ನ ಬಲಿಯದ ಭ್ರೂಣದಲ್ಲಿ ಮತ್ತೊಂದು ಕೂಸಿಗೆ ತಾವು ಕೊಟ್ಟಿದೆ! ಆಗಾಗ್ಗೆ ಕೇಳಿ ಬರುವ ಇಂತಹ ಪ್ರಕರಣಗಳ ನಡುವೆ ದೇಶದ ಅಥವಾ ರಾಜ್ಯದ ತಾಯಂದಿರ ಮರಣ ದರವು ಕಡಿಮೆಯಾಗಿದೆ ಎಂದು ಸಂಭ್ರಮಿಸಲಾದೀತೇ? ಹೋದ ಜೀವಗಳ ಕುಟುಂಬಸ್ಥರನ್ನು ಈ ಅಂಕಿ ಸಂಖ್ಯೆಗಳು ಸಮಾಧಾನಿಸಲು ಸಾಧ್ಯವೇ? ನ್ಯಾಯದ ತಕ್ಕಡಿಯಲ್ಲಿ ಸರಾಸರಿ ಅಂಕಿಗಳು ಮತ್ತು ಸತ್ತವರ ಹೆಣಗಳು ಸಮನಾಗಿ ತೂಗಬಲ್ಲವೇ? ಕರ್ನಾಟಕದ ಸರಾಸರಿ ತಾಯಿ ಮರಣದ ದರವು ಕಡಿಮೆ ಇದ್ದರೂ, ಚಿಕ್ಕಬಳ್ಳಾಪುರ, ಧಾರವಾಡ, ಹಾವೇರಿ, ಬೆಂಗಳೂರು ಗ್ರಾಮೀಣ ಮತ್ತು ತುಮಕೂರು ಜಿಲ್ಲೆಗಳಲ್ಲಿ ತಾಯಿ ಮರಣಗಳು ನೂರಕ್ಕೂ ಮೇಲಿರುವುದು ಕಂಡುಬರುತ್ತದೆ.

ತಾಯಿ ಮಗು 1

ಅತಿ ರಕ್ತಸ್ರಾವ, ರಕ್ತದೊತ್ತಡ ಹಾಗೂ ಅದನ್ನು ತಡೆಯುವಲ್ಲಿ ವಿಳಂಬ, ಸೋಂಕು, ಚಿಕ್ಕದಾದ ಶ್ರೋಣಿ ಭಾಗ (ಪೆಲ್ವಿಸ್) ಮತ್ತು ಅಸಮರ್ಪಕವಾದ ಭ್ರೂಣ ಸ್ಥಾನ, ಅಸುರಕ್ಷಿತ ಭ್ರೂಣಹತ್ಯೆ, ರಕ್ತಹೀನತೆ ತಾಯಂದಿರ ಸಾವಿಗೆ ನೇರವಾಗಿ ಕಾರಣವಾದರೆ, ಸಕಾಲದಲ್ಲಿ ಸಿಗದ ಸೂಕ್ತ ಸೇವೆ/ಸೌಲಭ್ಯ, ಗರ್ಭಿಣಿ-ಬಾಣಂತಿಯರ ವಲಸೆ, ಇತರೆ ಕಾಯಿಲೆಗಳು ಹಾಗೂ ತಪ್ಪು ಜೌಷಧಿಗಳು ಇನ್ನಿತರೆ ಕಾರಣಗಳಾಗಿವೆ. ಇದಲ್ಲದೆ, ಗರ್ಭಧಾರಣೆ ವಿಷಯವನ್ನು ಬೇಗನೆ ಗುರುತಿಸಿ ಸಕಾಲಕ್ಕೆ ಆರೋಗ್ಯ ಕಾರ್ಯಕರ್ತರಿಗೆ ತಿಳಿಸದೆ ಇರುವುದು, ಬಾಣಂತಿಯೆಂದರೆ ಅವಳೊಬ್ಬಳು ‘ರೋಗಿ’ ಎಂಬ ಕುಟುಂಬಸ್ಥರ ಮನೋಭಾವ, ಆಹಾರ ಮತ್ತು ಆರೈಕೆಯಲ್ಲಿನ ತಪ್ಪು ತಿಳಿವಳಿಕೆಗಳು ಹಾಗೂ ಬಡತನವು ತಾಯಂದಿರ ಆರೋಗ್ಯವನ್ನು ಘಾಸಿಗೊಳಿಸಿದರೆ, ನಂಜಿನ ಮನೆ ಮದ್ದು ಸೇವನೆ ಬಾಣಂತಿಯರ ಜೀವಕ್ಕೆ ಸಂಚಕಾರವೆನ್ನುತ್ತಾರೆ ಅನುಭವಿ ಆರೋಗ್ಯ ಶಿಕ್ಷಣಾಧಿಕಾರಿಗಳೊಬ್ಬರು.

ಇದೆಲ್ಲವು ಆರೋಗ್ಯ ಇಲಾಖೆಗೆ ತಿಳಿದಿಲ್ಲವೆಂದಲ್ಲ. ಇವೆಲ್ಲವನ್ನೂ ಕೂಲಂಕಷವಾಗಿ ವಿಶ್ಲೇಷಿಸಿ ಘನವಾದ ಧ್ಯೇಯೋದ್ದೇಶ ಮತ್ತು ನೀತಿ ದಾಖಲೆಯನ್ನು ಹೊರತಂದು, ಪೂರಕವಾದ ಅನೇಕ ಕಾರ್ಯಕ್ರಮಗಳನ್ನು ಇಲಾಖೆಯು ರೂಪಿಸಿದೆ. ಹಳ್ಳಿಗರು ಆಶಾ ಕಾರ್ಯಕರ್ತರು, ದಾದಿಯರು, ಆರೋಗ್ಯ ಶಿಕ್ಷಕರು ಮತ್ತಿತರ ಕ್ಷೇತ್ರ ಮಟ್ಟದ ಸಿಬ್ಬಂದಿ ಕುರಿತು ಒಳ್ಳೆಯದನ್ನೇ ಹೇಳುತ್ತಾರೆ. (ಆದರೆ ನಗರಗಳಲ್ಲಿ ಇದು ವ್ಯತಿರಿಕ್ತ). ಹಾಗಾದರೆ ಮತ್ತೆಲ್ಲಿದೆ ಸಮಸ್ಯೆ? ನೀವೇಕೆ ಹಣ ಸುರಿದು ಖಾಸಗಿ ಆಸ್ಪತ್ರೆಗೆ ಹೋಗುತ್ತಿರಾ? ಈ ಸಾವುಗಳೇಕೆ ಎಂದಾಗ, ಅವರ ಉತ್ತರ ನೇರವಾಗಿದೆ.

“ಎಲ್ಲಾ ಹೆರಿಗೆಗಳಿಗೂ ತಾಲ್ಲೂಕು ಆಸ್ಪತ್ರೆಗೆ ಕಳಿಸ್ತಾರೆ. ಅಲ್ಲೋ ಮೂರು ಮತ್ತೊಂದು ಡಾಕ್ಟ್ರು. ಕಷ್ಟದ ಹೆರ್ಗೆಗೆ ಇನ್ನೂ ದೂರ ಹೋಗ್ಬೇಕು, ಇಲ್ಲ ಪ್ರೈವೆಟ್ಗೆ ಹೊಗ್ಬೇಕು. ಸೊನೊಗ್ರಪಿ ಪರೀಕ್ಷೆಗೂ ಪ್ರೈವೇಟ್‌ಗೆ ಕಳುಸ್ತಾರೆ. ಸರ್ಕಾರಿ ಆಸ್ಪತ್ರೆ ಮೆಷಿನ್ಗಳು ಯಾವಾಗ್ಲು ರಿಪೇರಿನೆ. ಬಿ.ಪಿ, ಶುಗರ್, ಥೈರಾಯ್ಡ್‌ ಪರೀಕ್ಷೆ ಮಾಡ್ಸಿದ್ರೆ ಬ್ಯಾರೆ ನಂಬರ್ ತೋರ್ಸುತ್ತೆ. ಪ್ರೈವೇಟ್‌ನಲ್ಲಿ ತೋರ್ಸದಾಗ ಅದು ಬ್ಯಾರೆ ಇರುತ್ತೇ. ಜನರೇಟರ್ ಒಂದೊಂದ್ ಸಲ ಒಡೋದೇ ಇಲ್ಲ, ಡಾಕ್ಟ್ರುಗಳು ಪಾಪ ಹಬ್ಬ ಹರಿದಿನ ಅಂತ ಸೂಟಿ ಹೊಗ್ತಾರೆ, ಹೆರಿಗೆ ನೋವು ಸೂಟಿ ನೊಡ್ಕಂಡು ಬರುತ್ತಾ? ಬಸ್ರಿಬಾಣಂತಿರು ಸ್ವಚ್ಚವಾಗಿರ್ಬೇಕು ಅಂತಾರೆ, ಆದರೆ ಆಸ್ಪತ್ರೆ ಟಾಯಲೇಟಿಗೆ ಕಾಲಿಡಕ್ಕಾಗಲ್ಲ, ಅಲ್ಲಿಂದ್ಲೇ ಬಾಣಂತಿಗೆ ರೋಗ ಅಂಟ್ಕಳುತ್ತೆ. ಅದ್ಕೆನೆ ಸಾಲ ಸೋಲ ಮಾಡ್ಕಾಂಡಾದ್ರು ಪ್ರೈವೆಟ್ಗೆ ಹೋಗ್ತಿವಿ”! ಇಷ್ಟೊಂದು ಸರ್ಕಾರಿ ಸಹಾಯ ಇದೆ, ನೀವ್ಯಾಕೆ ಸಾಲ ಮಾಡ್ಬೇಕು ಅಂದಾಗ, “ಅವೇನು ಸುಲ್ಬಕ್ಕೆ ಸಿಗ್ತಾವೇನು, ಅದ್ರ ಹಿಂದೆ ಒಡಾಡವ್ರು ಯಾರು? ಮೊದ್ಲು ಅದೆನೋ ಮಡ್ಲು ಕಿಟ್ಟು ಅಂತ ಆಸ್ಪತ್ರೆಲೆ ಕೊಡೋರು, ಈಗ ಅದೂ ಇಲ್ಲ. ಆಯುಸ್ಮಾನ್ ಇನ್ಸುರೆನ್ಸ್ ಕಾರ್ಡ್ ಮಾಡ್ಸಿದ್ರೆ ಒಳ್ಳೆದಂತೆ, ಅದ್ನ ಕೊಟ್ರೆ ಸೀರಿಯಸ್ ಆಗಿರೋರು ದೊಡ್ಡ ಆಸ್ಪತ್ರೆಲಿ ಹೆರ್ಗೆ ಮಾಡಿಸ್ಕಂಡ್ರೆ ತಾಯಿ ಮಕ್ಲು ಉಳ್ಕಾತವೆ” – ಒಂದೇ ಎರಡೇ ಜನರ ಅವಹಾಲುಗಳು!!

ಮೊದಲಿನಂತೆ ಈಗ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (ಪಿಹೆಚ್‍ಸಿ) ಹೆರಿಗೆ ಮಾಡಿಸುವುದಿಲ್ಲ. ಪಿಹೆಚ್‍ಸಿಯ ನಂತರದ ಸಮುದಾಯ ಆರೋಗ್ಯ ಕೇಂದ್ರಗಳು (ಸಿಹೆಚ್‍ಸಿ) ಹೆರಿಗೆ ನಡೆಸುತ್ತವೆ. ರಾಷ್ಟ್ರೀಯ ಆರೋಗ್ಯ ಮಿಷನ್ ‘ಲಕ್ಷ್ಯ’ ಮಾರ್ಗಸೂಚಿಯ ಪ್ರಕಾರ ಹೆರಿಗೆ ಮಾಡಿಸಲು ಒಬ್ಬರು ಪ್ರಸೂತಿ -ಸ್ತ್ರೀ ರೋಗ ತಜ್ಞರು, ಒಬ್ಬರು ಮಕ್ಕಳ ವೈದ್ಯರು, ಒಬ್ಬರು ಅರಿವಳಿಕೆ ತಜ್ಞರು, ಜೊತೆಗೆ 4 ಮಂದಿ ಗ್ರೆಡ್ ‘ಎ’ ದಾದಿಯರು (ರಾತ್ರಿ ಪಾಳಿ ಸೇರಿ) ಹಾಗೂ ಎರಡು ಸ್ವಚ್ಚತೆಯ ಸಿಬ್ಬಂದಿ ಇರಬೇಕು. ರಾಜ್ಯದಲ್ಲಿ ಕೇವಲ 212 ಸಿಹೆಚ್‍ಸಿ ಇದ್ದು, ಹೆಚ್ಚಿನವುಗಳಲ್ಲಿ ನಿಯಮದಂತೆ ಎಲ್ಲಾ ಸಿಬ್ಬಂದಿ ಮತ್ತು ರಕ್ತ ಸಂಗ್ರಹಣೆ ವ್ಯವಸ್ಥೆ ಇಲ್ಲದ ಕಾರಣ ಹೆಚ್ಚಿಗೆ ಹೆರಿಗೆಗಳು ನಡೆಯುವುದಿಲ್ಲ. ಸಿಬ್ಬಂದಿ ಇರುವ ಕಡೆ ನಾರ್ಮಲ್ ಹೆರಿಗೆ ಮಾಡಿಸುತ್ತಾರಾದರೂ, ಅಪಾಯದ ಪ್ರಕರಣಗಳನ್ನು ತಾಲ್ಲೂಕು ಆಸ್ಪತ್ರೆಗೆ ಸಾಗ ಹಾಕುವುದು ಸಾಮಾನ್ಯವಾಗಿದೆ.

ಒಂದು ವರದಿ ಪ್ರಕಾರ, ಒಟ್ಟು ಹೆರಿಗೆಯ ಸುಮಾರು 50-55% ಸರ್ಕಾರಿ ಮತ್ತು 35-40% ಖಾಸಗಿ ಆಸ್ಪತ್ರೆಗಳಲ್ಲಿಯೂ ಹಾಗೂ ಇನ್ನುಳಿದ ಹೆರಿಗೆಗಳು ಮನೆಗಳಲ್ಲಾಗುತ್ತಿವೆ ಎನ್ನಲಾಗಿದೆ. ಅಂದರೆ, ಹೆಚ್ಚು ಹೆರಿಗೆಗಳು ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಆಗುತ್ತಿದ್ದು, ಅಲ್ಲಿಯೂ ಸಹ ತಜ್ಞ ಮತ್ತು ತಾಂತ್ರಿಕ ಸಿಬ್ಬಂದಿ ಹಾಗೂ ಮತ್ತಿತರ ಸೌಲಭ್ಯಗಳ ಕೊರತೆಯು ಬಹಳವಾಗಿದೆ.

ಬಳ್ಳಾರಿ ಜಿಲ್ಲಾಸ್ಪತ್ರೆ 1

ಕೇಂದ್ರ ಆರೋಗ್ಯ ಸಚಿವಾಲಯದ ವರದಿಯನ್ನಾಧರಿಸಿ, ದಿ ಹಿಂದು ಪತ್ರಿಕೆಯು , “ಸಿಹೆಚ್‍ಸಿಗಳಿಗೆ ಒಟ್ಟು 758 ತಜ್ಞರು ಬೇಕಾಗಿದ್ದು, ಅದರಲ್ಲಿ ಇನ್ನೂ 455 ಹುದ್ದೆಗಳನ್ನು ತುಂಬಿಲ್ಲವೆಂದು, ಗ್ರಾಮೀಣ ಭಾಗದಲ್ಲಿ 70 ರೆಡಿಯಾಲಜಿಸ್ಟ್, 412 ಲ್ಯಾಬ್ ತಂತ್ರಜ್ಞರು ಹಾಗೂ 810 ಫಾರ್ಮಸಿಸ್ಟ್ ಹುದ್ದೆಗಳು ಖಾಲಿ ಇವೆ” ಎಂದು 10 ಅಕ್ಟೋಬರ್ 2024 ರಂದು ವರದಿ ಮಾಡಿದೆ. ಇನ್ನೊಂದು ವರದಿ ಪ್ರಕಾರ, ಗ್ರಾಮೀಣ ಪ್ರದೇಶಗಳಲ್ಲಿ ಕೇವಲ 477 ಪ್ರಸೂತಿ ಮತ್ತು ಸ್ತ್ರಿ ರೋಗ ತಜ್ಞರು, 375 ಮಕ್ಕಳ ತಜ್ಞರು ಹಾಗೂ 237 ಸರ್ಜನ್‍ಗಳು ಇದ್ದಾರೆಂದು ತಿಳಿದು ಬರುತ್ತದೆ. ವೈದ್ಯರಿಗೆ ಹಳ್ಳಿಗಳಲ್ಲಿ ಕೆಲಸ ಮಾಡಲು ಆಸಕ್ತಿ ಇಲ್ಲದ ಕಾರಣ ತಾಲೂಕು ಆಸ್ಪತ್ರೆ ಮತ್ತು ಸಿಹೆಚ್‍ಸಿಗಳಲ್ಲಿ ಅತಿ ಹೆಚ್ಚು ಖಾಲಿ ಹುದ್ದೆಗಳು ಇವೆ ಎನ್ನಲಾಗಿದೆ. ಇಂದಿನ ಆರೋಗ್ಯ ಸಚಿವರು ಹಂತ ಹಂತವಾಗಿ ವೈದ್ಯರ ನೇಮಕ ಮತ್ತು ಆಕರ್ಷಕ ಸಂಬಳ ನೀಡುವ ಭರವಸೆ ನೀಡಿದ್ದಾರೆನ್ನಲಾಗಿದೆ.

ಸಿಹೆಚ್‍ಸಿ ಮತ್ತು ತಾಲೂಕು ಆಸ್ಪತ್ರೆಯಲ್ಲಿನ ಮೂರು ಮತ್ತೊಂದು ತಜ್ಞರು, ತಂತ್ರಜ್ಞರು ಮತ್ತವರ ರಜೆ ಬಳಕೆಯ ಚಿಂತೆ ಹಾಗೂ ಕೊರತೆಯುಳ್ಳ ಸೌಲಭ್ಯಗಳ ಸ್ಥಿತಿಯು ಅಪಾಯದ ಹೆರಿಗೆಗಳನ್ನು ಮುಂದಿನ ಅಥವಾ ಖಾಸಗಿ ಆಸ್ಪತ್ರೆಗೆ ಸಾಗಹಾಕುವ ವ್ಯವಸ್ಥೆ ಸೃಷ್ಟಿಸಿದ್ದು, ಇದು ಗರ್ಭಿಣಿ-ಬಾಣಂತಿಯ ಜೀವಕ್ಕೆ ಕಂಟಕವಾಗಿದೆ. ಔಷಧಿ ಇಲ್ಲವೆಂದು ಬರೆದುಕೊಡುವ, ಸೊನೊಗ್ರಫಿ ಮತ್ತು ಸಿಸೇರಿಯನ್ ಕೇಸುಗಳನ್ನು ಖಾಸಗಿ ಆಸ್ಪತ್ರೆಗಟ್ಟುವಂತಹ ಕೆಟ್ಟ ವ್ಯವಸ್ಥೆಯೊಳಗೆ ಗರ್ಭಿಣಿ-ಬಾಣಂತಿಯರನ್ನು ದೂಡಲಾಗುತ್ತಿದೆ. ಕರ್ನಾಟಕದಲ್ಲಿ ಸಿಸೇರಿಯನ್ ಹೆರಿಗೆಗಳು ಹೆಚ್ಚುತ್ತಿದ್ದು, 2023-24ರಲ್ಲಿ ಇದು 41.8% ಏರಿದೆಯೆಂದು ಟೈಮ್ಸ್ ಆಫ್ ಇಂಡಿಯಾ 4ನೇ ಮಾರ್ಚ್ 2024ರಂದು ವರದಿ ಮಾಡಿದೆ. ಇನ್ನೊಂದು ವರದಿಯು ನಗರಗಳಲ್ಲಿ ಅದರಲ್ಲೂ ಖಾಸಗಿ ಅಸ್ಪತ್ರೆಗಳಲ್ಲಿ ಇದು 60%ಗೂ ಹೆಚ್ಚಿದೆ ಎಂದಿದೆ. ಈ ಬೆಳವಣಿಗೆ ಕೇವಲ ಜನರ ಜೇಬಿಗಷ್ಟೇ ಕತ್ತರಿಯಲ್ಲ, ಮಹಿಳೆಯರ ಜೀವ ಮತ್ತು ಆರೋಗ್ಯಕ್ಕೂ ಕಂಟಕವಾಗಿದೆ.

ಆರೋಗ್ಯ ಇಲಾಖೆಯೊಂದಿಗೆ ನಿಕಟವಾಗಿ ಕೆಲಸ ಮಾಡುವ ಸಂಸ್ಥೆಯೊಂದು ಹೆರಿಗೆ ನಂತರದಲ್ಲಿ ನೀಡುವ ಜೀವರಕ್ಷಕ ಔಷಧಿಗಳ ಖರೀದಿಯಲ್ಲಿನ ಭ್ರಷ್ಟಾಚಾರದಿಂದಾಗಿ ಕಳಪೆ ಗುಣಮಟ್ಟದ ಔಷಧಿಗಳು ತಾಯಿ ಮಕ್ಕಳ ಸಾವಿಗೆ ಕಾರಣವಾಗಿದೆ ಎಂದು ಆರೋಪಿಸುತ್ತದೆ.

ಇದನ್ನೂ ಓದಿ ಈ ದಿನ ಸಂಪಾದಕೀಯ | ಸಿ ಟಿ ರವಿಯಂಥವರಿಗೆ ಮಹಿಳೆಯರನ್ನು ಅಪಮಾನಿಸೋದು ಮನುವಾದಿ ವ್ಯಸನ

ರಾಷ್ಟ್ರೀಯ ಮಿಷನ್ ಯೋಜನೆಯಡಿ ಕೇಂದ್ರದ ಹಣವು ರಾಜ್ಯಕ್ಕೆ ಸರಿಯಾಗಿ ಬರುತ್ತಿಲ್ಲ ಎಂಬ ದೂರುಗಳಿವೆ. ಅದು ನಿಜವಿರಬಹುದು. ಆದರೆ ಇದು, ಮಳೆ ಬರಲಿಲ್ಲವೆಂದು ಮಕ್ಕಳನ್ನು ಉಪವಾಸ ಕೆಡಹಿದಂತೆ ಆಗಿದೆ. ಜನರ ನಂಬಿಕೆ ಮತ್ತು ಬಹುಮತ ಗಳಿಸಿ ಅಧಿಕಾರದಲ್ಲಿರುವ ಈ ಸರ್ಕಾರವು 2023-24 ರಲ್ಲಿನ ಒಟ್ಟಾರೆ ಆಯವ್ಯಯದ 4.9% ಮೊತ್ತವನ್ನು ಮಾತ್ರ ಆರೋಗ್ಯ ಕ್ಷೇತ್ರಕ್ಕೆ ನೀಡಿರುತ್ತದೆ. ಗುಣಮಟ್ಟದ ಸೇವೆಗಳು ಅಗ್ಗವಲ್ಲ ಎಂಬುದನ್ನು ಸರ್ಕಾರವು ಮುಂದಿನ ಬಜೆಟ್ ಸಮಯದಲ್ಲಾದರೂ ನೆನಪಿಸಿಕೊಂಡು ಮುಖ್ಯವಾಗಿ ಸಿಬ್ಬಂದಿ ಮತ್ತಿತರ ಸೌಲಭ್ಯಗಳ ಕೊರತೆಯನ್ನು ಆದ್ಯತೆ ಮೇರೆಗೆ ನೀಗಿಸಬೇಕಾಗಿದೆ. ಎಲ್ಲಾ ಗರ್ಭಿಣಿಯರನ್ನು ಆಯುಷ್ಮಾನ್ ಭಾರತದ ವಿಮೆ ಯೋಜನೆಯಡಿ ತಂದಲ್ಲಿ, ಗಂಡಾಂತರ ಹೆರಿಗೆಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆಂಬ ಹಲವರ ಅಭಿಪ್ರಾಯವನ್ನು ಸರ್ಕಾರ ಪರಿಗಣಿಸುವ ಜೊತೆಗೆ ಹೆಚ್ಚುತ್ತಿರುವ ಸಿಸೇರಿಯನ್ ವ್ಯವಸ್ಥೆಯನ್ನು ನಿಯಂತ್ರಿಸುವುದು ಅಗತ್ಯವಿದೆ.

ಲತಾಮಾಲ
ಲತಾಮಾಲ
+ posts

ಗ್ರಾಮೀಣಾಭಿವೃದ್ಧಿ ತಜ್ಞರು ಮತ್ತು ಲೇಖಕರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಲತಾಮಾಲ
ಲತಾಮಾಲ
ಗ್ರಾಮೀಣಾಭಿವೃದ್ಧಿ ತಜ್ಞರು ಮತ್ತು ಲೇಖಕರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X