ಶತಾಯಷಿ ಡಾ.ಚನ್ನಬಸವ ಪಟ್ಟದ್ದೇವರ 135ನೆಯ ಜಯಂತ್ಯುತ್ಸವ ನಿಮಿತ್ತ ಭಾಲ್ಕಿ ಪಟ್ಟಣದಲ್ಲಿ ಶುಕ್ರವಾರ ನಡೆದ ಚನ್ನಬಸವ ಮ್ಯಾರಥಾನ್ ಓಟ ಸೊಬಗು ನೀಡಿತು.
ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಹಿರೇಮಠ ಸಂಸ್ಥಾನದ ವತಿಯಿಂದ ಆಯೋಜಿಸಿದ್ದ ಚನ್ನಬಸವ ಮ್ಯಾರಥಾನ್ ಓಟಕ್ಕೆ ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಬಲೂನ್ ಹಾರಿಸಿ ಚಾಲನೆ ನೀಡಿ ಮಾತನಾಡಿದರು.

‘ಗಡಿ ಭಾಗದಲ್ಲಿ ಡಾ.ಚನ್ನಬಸವ ಪಟ್ಟದ್ದೇವರು ತಮ್ಮ ಜೀವಿತಾವಧಿಯಲ್ಲಿ ಸಮಾಜದ ಹಿತಕ್ಕಾಗಿ ಅದ್ಭುತ ಕಾರ್ಯಗಳು ಮಾಡಿದ್ದಾರೆ. ಅವರ ಸವಿನೆನಪು ಮತ್ತು ಸುಂದರ ಸ್ವಾಸ್ತ್ಯ ಸಮಾಜ ನಿರ್ಮಾಣಕ್ಕಾಗಿ ಮ್ಯಾರಥಾನ್ ಸೇರಿ ವಿವಿಧ ಕಾರ್ಯಕ್ರಮಗಳು ನಡೆಯುತ್ತಿರುವುದು ಹೆಮ್ಮೆ ತರಿಸಿದೆ’ ಎಂದು ತಿಳಿಸಿದರು.
ನೇತೃತ್ವ ವಹಿಸಿದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ‘ಶತಾಯಷಿ ಡಾ.ಚನ್ನಬಸವ ಪಟ್ಟದ್ದೇವರು ಜೀವನದುದ್ದಕ್ಕೂ ಬಸವಣ್ಣನವರ ತತ್ವ ಮತ್ತು ಕನ್ನಡದ ಪ್ರೇಮ ಎತ್ತಿ ಹಿಡಿದವರು, ಅವರ ಆದರ್ಶ ನಮಗೆ ಪ್ರೇರಣೆಯಾಗಬೇಕು’ ಎಂದು ತಿಳಿಸಿದರು.
ಬೆಳಕು ಹರಿಯುವ ಹೊತ್ತಿಗೆ ಚನ್ನಬಸವಾಶ್ರಮ ರಸ್ತೆಯಿಂದ ಆರಂಭಗೊಂಡಿದ್ದ 5.40 ಕಿ.ಮೀ. ಉದ್ದದ ಮ್ಯಾರಥಾನ್ ಓಟ ಬಸವೇಶ್ವರ ವೃತ್ತ, ಮಹಾತ್ಮ ಗಾಂಧಿ ವೃತ್ತ, ಅಷ್ಟೂರೆ ಕಲ್ಯಾಣ ಮಂಟಪ ಮಾರ್ಗವಾಗಿ ಚನ್ನಬಸವೇಶ್ವರ ಪದವಿ ಕಾಲೇಜು ಸಮೀಪದಿಂದ ಮುಖ್ಯ ರಸ್ತೆ ಪ್ರವೇಶಗೊಂಡು ಬೊಮಗೊಂಡೇಶ್ವರ ವೃತ್ತ, ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತದ ಮೂಲಕ ಸಾಗಿಬಂದು ಚನ್ನಬಸವಾಶ್ರಮದ ಮುಖ್ಯ ರಸ್ತೆ ತಲುಪಿತು.

ಚನ್ನಬಸವ ಮ್ಯಾರಥಾನ್ ಓಟದಲ್ಲಿ ತಾಲೂಕಿನ ಗಡಿಭಾಗದ ಅಟ್ಟರಗಾ ಗ್ರಾಮದ ನಿವಾಸಿ ಮತ್ತು ಬೀದರ್ ಗುರುನಾನಕ್ ಕಾಲೇಜಿನ ವಿದ್ಯಾರ್ಥಿ ಬಜರಂಗ ಉತ್ತಮರಾವ ಪ್ರಥಮ ಸ್ಥಾನ ಪಡೆದು ಕೊಂಡಿದ್ದಾರೆ. ಕದೀರಾಬಾದ ವಾಡಿಯ ಮನೋಜ ತುಕಾರಾಮ ದ್ವಿತೀಯ ಮತ್ತು ಬೀದರ್ನ ಆದಿತ್ಯ ಅವಿನಾಶ ತೃತೀಯ ಸ್ಥಾನ ಪಡೆದು ಕೊಂಡಿದ್ದಾರೆ. ವಿಜೇತರಿಗೆ ಡಿ.22ರಂದು ಬಹುಮಾನ ವಿತರಿಸಲಾಗುವುದು ಎಂದು ಪೂಜ್ಯರು ತಿಳಿಸಿದರು.
ಓಟದಲ್ಲಿ ಜಿಲ್ಲೆಯ ಬೀದರ್ನ ವಿವಿಧ ಕಡೆಗಳಿಂದ ಬಂದಿದ್ದ ಓಟಗಾರರು ಸ್ಥಳೀಯರೊಂದಿಗೆ ಸೇರಿ ಮಿಂಚಿನ ಸಂಚಾರ ಮೂಡಿಸಿದರು. ಮಹಾಲಿಂಗ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಬಸವಲಿಂಗ ದೇವರು, ಪ್ರಭುಲಿಂಗ ಸ್ವಾಮೀಜಿ, ಶಿವಬಸವ ಸ್ವಾಮೀಜಿ ನೇತೃತ್ವ ವಹಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಅಂಬೇಡ್ಕರ್ ಕುರಿತ ಹೇಳಿಕೆ : ಸಂಪುಟದಿಂದ ಅಮಿತ್ ಶಾ ವಜಾಕ್ಕೆ ವ್ಯಾಪಕ ಆಗ್ರಹ
ಕಾರ್ಯಕ್ರಮದಲ್ಲಿ ಭಾಲ್ಕಿ ಪುರಸಭೆ ಉಪಾಧ್ಯಕ್ಷ ವಿಜಯಕುಮಾರ ರಾಜಭವನ, ಚನ್ನಬಸವ ಮ್ಯಾರಥಾನ್ ಸೇವಾ ಸಮಿತಿ ಅಧ್ಯಕ್ಷ ರವೀಂದ್ರ ಚಿಡಗುಪ್ಪೆ, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ ಬನ್ನಾಳೆ, ಆಡಳಿತಾಧಿಕಾರಿ ಮೋಹನ ರೆಡ್ಡಿ, ದೈಹಿಕ ನಿರ್ದೇಶಕರಾದ ಹಣಮಂತ ಕಾರಾಮುಂಗೆ, ಅನಿಲಕುಮಾರ ಪಾಟೀಲ್ ಸೇರಿದಂತೆ ಹಲವರು ಇದ್ದರು. ಈಶ್ವರ ರುಮ್ಮಾ ನಿರೂಪಿಸಿ ವಂದಿಸಿದರು.