- 7 ದಿನಗಳ ಒಳಗೆ ಉತ್ತರ ಕೊಡದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ
- ಈ ಹಿಂದೆಯೂ ಎಂಜಿ ರಸ್ತೆಯಲ್ಲಿರುವ ಹಲವು ಪಬ್ಗಳ ವಿರುದ್ಧವೂ ಪ್ರಕರಣ ದಾಖಲು
ಎಂಜಿ ರಸ್ತೆ ಸಮೀಪ ಚಿನ್ನಸ್ವಾಮಿ ಸ್ಟೇಡಿಯಂ ಎದುರಿರುವ ರತ್ನಮ್ ಕಾಂಪ್ಲೆಕ್ಸ್ನ 6ನೇ ಮಹಡಿಯಲ್ಲಿರುವ ಕ್ರಿಕೆಟಿಗ ವಿರಾಟ್ ಕೊಹ್ಲಿ ಸಹಮಾಲೀಕತ್ವದ ಒನ್ 8 ಕಮ್ಯೂನ್ ಬಾರ್ ಆ್ಯಂಡ್ ರೆಸ್ಟೋರೆಂಟ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೋಟಿಸ್ ಜಾರಿಗೊಳಿಸಿದೆ.
ಅಗ್ನಿ ಸುರಕ್ಷತೆ ಅಳವಡಿಸಿಲ್ಲ ಮತ್ತು ಅಗ್ನಿಶಾಮಕ ದಳದ ಪ್ರಮಾಣ ಪತ್ರ ಪಡೆದಿಲ್ಲ ಎಂದಿರುವ ಬಿಬಿಎಂಪಿ, ಸುರಕ್ಷತಾ ಕ್ರಮಗಳನ್ನು ಅಳವಡಿಸದ ಕಾರಣ ಒನ್ 8 ಕಮ್ಯೂನ್ ಪಬ್ ಕಾನೂನು ಉಲ್ಲಂಘನೆ ಮಾಡಿದೆ ಎಂದು ನೋಟಿಸ್ ನೀಡಿದೆ.
ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಎಂಬುವವರು ಈ ಬಗ್ಗೆ ಬಿಬಿಎಂಪಿಗೆ ದೂರು ನೀಡಿದ್ದರು. ಇದನ್ನು ಆಧರಿಸಿ ಶಾಂತಿನಗರ ಪಾಲಿಕೆ ಅಧಿಕಾರಿಗಳು ನೋಟಿಸ್ ಜಾರಿಗೊಳಿಸಿದ್ದಾರೆ. ಈ ಹಿಂದೆಯೂ ಒಂದು ಸಲ ನೋಟಿಸ್ ನೀಡಲಾಗಿತ್ತು. ಆದರೆ ಬಾರ್ ಆ್ಯಂಡ್ ರೆಸ್ಟೋರೆಂಟ್ ಉತ್ತರಿಸಿರಲಿಲ್ಲ.
ಇದೀಗ 7 ದಿನಗಳ ಒಳಗೆ ಉತ್ತರ ಕೊಡದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಈ ಹಿಂದೆಯೂ ಪಬ್ ವಿರುದ್ಧ ತಡರಾತ್ರಿ ತನಕ ಪಬ್ ತೆರೆದಿದ್ದರ ಹಿನ್ನೆಲೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ರಾತ್ರಿ ಅವಧಿಯಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ಇದು ಕಂಡು ಬಂದಿತ್ತು.
ಇದನ್ನು ಓದಿದ್ದೀರಾ?: ಸರ್ವಾಧಿಕಾರಿ ವಿರುದ್ಧ ಸ್ಪಷ್ಟ ನಿಲುವು ಪ್ರದರ್ಶಿಸಿ, ಜಗತ್ತು ಜಿಂಬಾಬ್ವೆಯತ್ತ ನೋಡುವಂತೆ ಮಾಡಿದ ಹೆನ್ರಿ ಒಲಾಂಗ
ಒನ್ 8 ಕಮ್ಯೂನ್ ಪಬ್ ಅಷ್ಟೇ ಅಲ್ಲ, ಎಂಜಿ ರಸ್ತೆಯಲ್ಲಿರುವ ಹಲವು ಪಬ್ಗಳ ವಿರುದ್ಧವೂ ಪ್ರಕರಣ ದಾಖಲಾಗಿತ್ತು. ಮಧ್ಯರಾತ್ರಿ 1 ಗಂಟೆಯ ನಂತರವೂ ಪಬ್ ತೆರೆದು ನಗರ ನಿಯಮಗಳನ್ನು ಉಲ್ಲಂಘಿಸಿದ್ದರು. ಅಲ್ಲದೆ, ಜೋರು ಡಿಜೆ ಹಾಕಿದ್ದರು. ಗ್ರಾಹಕರೂ ಇದ್ದರು. ಹೀಗಾಗಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಕೊಹ್ಲಿ ಮಾಲೀಕತ್ವದ ಒನ್ 8 ಕಮ್ಯೂನ್ ಪಬ್ಗಳು ದೆಹಲಿ, ಮುಂಬೈ, ಪುಣೆ, ಗುರ್ಗಾಂವ್ ಮತ್ತು ಕೋಲ್ಕತ್ತಾ ಸೇರಿ ಪ್ರಮುಖ ನಗರಗಳಲ್ಲಿ ಶಾಖೆಗಳನ್ನು ಹೊಂದಿದೆ. 2023ರ ಡಿಸೆಂಬರ್ನಲ್ಲಿ ಬೆಂಗಳೂರು ಶಾಖೆ ಆರಂಭ ಆಗಿತ್ತು. ಇಲ್ಲಿ ಕಿಟಕಿಯ ಪಕ್ಕದ ಮೇಜಿನ ಬಳಿ ಕುಳಿತರೆ ಕ್ರಿಕೆಟ್ ಮೈದಾನ ಭಾಗಶಃ ಕಾಣಿಸುತ್ತದೆ. ಇದು 3 ಮಹಡಿಗಳಲ್ಲಿ ಹರಡಿರುವ ವಿಲಾಸಿ ರೆಸ್ಟೋರೆಂಟ್ ಆಗಿದ್ದು, ಬೋಹಿಮಿಯನ್ನಿಂದ ಅಲಂಕೃತಗೊಂಡಿದೆ.