ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ಭಾಲ್ಕಿ ತಾಲ್ಲೂಕು ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು ಆಗ್ರಹಿಸಿದರು.
ಪಟ್ಟಣದ ಡಾ.ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ನೂರಾರು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸಚಿವ ಅಮಿತ್ ಶಾ ಹಾಗೂ ಬಿಜೆಪಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ರಾಷ್ಟ್ರಪತಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಉಪ ತಹಶೀಲ್ದಾರ್ ಶಿವಾನಂದ ಬಿರಾದಾರ ಅವರಿಗೆ ಸಲ್ಲಿಸಿದರು.
‘ರಾಜ್ಯಸಭೆಯಲ್ಲಿ ಡಿ.18ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ “ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಅನ್ನೋದು ಈಗ ಕೆಲವರಿಗೆ ಫ್ಯಾಷನ್ ಆಗಿದೆ. ಇಷ್ಟು ಬಾರಿ ದೇವರ ನಾಮ ಜಪಿಸಿದರೆ ಏಳೇಳು ಜನ್ಮಕೂ ಸ್ವರ್ಗ ಪ್ರಾಪ್ತಿಯಾಗುತ್ತದೆ” ಎಂದು ಮಾತನಾಡಿ ಬಾಬಾ ಸಾಹೇಬ್‌ರಿಗೆ ಘೋರ ಅವಮಾನ ಮಾಡಿದ್ದಾರೆ. ಇದು ಸಂವಿಧಾನಕ್ಕೂ ಪರೋಕ್ಷವಾಗಿ ಅವಮಾನ ಮಾಡಿದಂತೆ ಆಗಿದೆ’ ಎಂದು ತೀವ್ರವಾಗಿ ಖಂಡಿಸಿದರು.
ವಿಶ್ವಕ್ಕೇ ಪ್ರಜಾಪ್ರಭುತ್ವ ಮತ್ತು ಸಂಸತ್ತಿನ ಪರಿಕಲ್ಪನೆಯನ್ನು ಕೊಟ್ಟದ್ದು ಭಾರತ. ಸರ್ವರಿಗೂ ಸಮಪಾಲು ದೊರೆಯಲು, ಸಾಮಾಜಿಕ ನ್ಯಾಯ ಸಿಗಲು ಸಂವಿಧಾನವೇ ಕಾರಣ ಎಂಬುದು ನಿರ್ವಿವಾದ. ಅಂಬೇಡ್ಕರ್ ರಚಿತ ಲಿಖಿತ ಸಂವಿಧಾನ ದೇಶಕ್ಕೆ ಜೀವನಧರ್ಮವಾಗಿದೆ. ಆದರೆ, ಸಚಿವ ಅಮಿತ್ ಶಾ ಡಾ.ಅಂಬೇಡ್ಕರ್ ಮತ್ತು ಅವರ ಅಭಿಮಾನಿಗಳಿಗೆ ಅವಮಾನ ಮಾಡಲೆಂದೇ ಉದ್ದೇಶಪೂರ್ವಕವಾಗಿ ಅವಹೇಳನಕಾರಿ ಮಾತನಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶತ ಶತಮಾನಗಳಿಂದ ಅಸ್ಪೃಶ್ಯತೆಯ ನೋವುಂಡು, ಸಾಮಾಜಿಕ ನ್ಯಾಯ, ಶಿಕ್ಷಣ, ಆರೋಗ್ಯ, ಉದ್ಯೋಗ ಸೇರಿದಂತೆ ಸಾಮಾಜಿಕ ನ್ಯಾಯ ದೊರಕಿಸಿ ಕೊಟ್ಟ ಡಾ.ಅಂಬೇಡ್ಕರ್ ಅವರನ್ನು ಅವಮಾನಿಸಿದ ಅಮಿತ್ ಶಾ ಸಚಿವರಾಗಿ ಮುಂದುವರಿಯುವ ಯಾವ ನೈತಿಕತೆಯೂ ಇಲ್ಲ. ಕೂಡಲೇ ಅವರನ್ನು ತಮ್ಮ ಸ್ಥಾನದಿಂದ ವಜಾಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ₹75 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಭೂ ಮಾಪಕ
ಪ್ರತಿಭಟನೆಯಲ್ಲಿ ಜೈಪಾಲ್ ಬೋರಾಳೆ, ಪ್ರಕಾಶ್ ಮಾಶೆಟ್ಟೆ, ಪ್ರಶಾಂತ್ ಕೊಟಗೇರಾ, ವೈಜಿನಾಥ ಸಿರ್ಸಿ, ನಸೀರ್ ಆಹ್ಮದ್, ಧನರಾಜ ಕುಂದೆ, ರಾಜಕುಮಾರ್ ಬಾವಗೆ, ಕೈಲಾಸ್ ಭಾವಿಕಟ್ಟೆ, ಲೋಕೇಶ್ ಭೂರೆ, ವಿಲಾಸ್ ಮೋರೆ, ಕಾಶಿನಾಥ್ ಲದ್ದೆ, ಭಾಸ್ಕರ್, ಸುನೀಲ್ ವಾಂಜರೆ, ವಿಜಯಕುಮಾರ್, ಶಿವಕುಮಾರ್ ಮೇತ್ರೆ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು, ವಿವಿಧ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು.