ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನದ ಭೋಜನಶಾಲೆಯಲ್ಲಿ ಆಲೂಗಡ್ಡೆ ಸಿಪ್ಪೆ ಸುಲಿಯುವ ಯಂತ್ರಕ್ಕೆ ದುಪಟ್ಟಾ ಸಿಲುಕಿ ಯುವತಿಯೊಬ್ಬರು ಶನಿವಾರ ಸಾವನ್ನಪ್ಪಿದ್ದಾರೆ.
ದೇವಸ್ಥಾನದಲ್ಲಿ ಅನ್ನ ಸಂತರ್ಪಣೆಗಾಗಿ ಆಹಾರ ತಯಾರಿಸುವಾಗ ಈ ಅವಘಡ ಸಂಭವಿಸಿದೆ ಎಂದು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಲಕ್ಷ್ಮೀ ನಾರಾಯಣ ಗಾರ್ಗ್ ತಿಳಿಸಿದ್ದಾರೆ.
ಮೃತ ಯುವತಿಯನ್ನು ರಜನಿ ಖತ್ರಿ ಎಂದು ಗುರುತಿಸಲಾಗಿದೆ. ಅವರು ದೇವಸ್ತಾನದ ಭೋಜನಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ಶನಿವಾರ ಆಲೂಗಡ್ಡೆ ಸುಲಿಯುವಾಗ ಆಕೆಯ ದುಪಟ್ಟಾ ಯಂತ್ರಕ್ಕೆ ಸಿಕ್ಕಿಹಾಕಿಕೊಂಡಿದೆ. ಕುತ್ತಿಗೆಗೆ ಹಾಕಿದ್ದ ದುಪಟ್ಟಾವನ್ನು ಯಂತ್ರ ಎಳೆದಿದ್ದರಿಂದ ಆಕೆ ಉಸಿರುಗಟ್ಟಿ ಸಾವನ್ನಪ್ಪಿದ್‌ದಾರೆ ಎಂದು ಎಸ್‌ಡಿಎಂ ತಿಳಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆಕೆಯ ಕುಟುಂಬಕ್ಕೆ ಸರ್ಕಾರದಿಂದ ಆರ್ಥಿಕ ನೆರವು ನೀಡಲಾಗುತ್ತದೆ ಎಂದು ಎಸ್‌ಡಿಎಂ ತಿಳಿಸಿದ್ದಾರೆ.