ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿರುದ್ಧ ಅವಾಚ್ಯ ಪದ ಬಳಸಿರುವ ಬಿಜೆಪಿ ಸದಸ್ಯ ಸಿ ಟಿ ರವಿ ಮತ್ತು ಆತನ ಮನೆಯ ಹೆಣ್ಣುಮಕ್ಕಳು ಕ್ಷಮೆಯಾಚಿಸದಿದ್ದರೆ ಮುಂದಿನ ದಿನಗಳಲ್ಲಿ ಸಿ ಟಿ ರವಿ ಮನೆ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುತ್ತದೆ ಎಂದು ಕಾಂಗ್ರೆಸ್ ಮಹಿಳಾ ಮುಖಂಡೆ ನಿರ್ಮಲಾ ಬೆಣ್ಣೆ ಎಚ್ಚರಿಕೆ ನೀಡಿದರು.
ರಾಯಚೂರು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, “ಪ್ರಜಾಪ್ರಭುತ್ವದ ಹೆಬ್ಬಾಗಿಲಾಗಿರುವ ಬೆಳಗಾವಿಯ ಸುವರ್ಣಸೌಧದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಬಿಜೆಪಿ ಸದಸ್ಯ ಸಿ ಟಿ ರವಿ ಅವಾಚ್ಯ ಪದ ಬಳಸಿ ನಿಂದಿಸಿರುವುದು ಇಡೀ ರಾಜ್ಯದ ಮಹಿಳೆಯರಿಗೆ ಕೆಟ್ಟ ಸಂದೇಶವಾಗಿದೆ. ದೇಗುಲ ಎಂದೇ ಭಾವಿಸುವ ಬೆಳಗಾವಿ ಸುವರ್ಣ ಸೌಧದಲ್ಲಿ ಸಚಿವೆ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿರುವುದು ಸಭ್ಯತೆಯಲ್ಲ. ಸಿ ಟಿ ರವಿ ನಡೆ ತೀವ್ರ ಖಂಡನೀಯ” ಎಂದರು.
“ಒಬ್ಬ ಮಹಿಳಾ ಪ್ರತಿನಿಧಿಗೆ ಈ ರೀತಿ ಹೇಳಿಕೆ ನೀಡಿ ತನ್ನ ಸ್ಥಾನಕ್ಕೆ ಅವಮಾನ ಮಾಡಿಕೊಂಡಿದ್ದಾರೆ. ಈ ಹಿಂದೆ ರಮೇಶ್ ಜಾರಕಿಹೊಳಿ ಮಹಿಳೆಯರ ವಿರುದ್ಧ ಅವಾಚ್ಯ ಪದ ಬಳಸಿದ್ದರು. ಅದೇ ರೀತಿ ಈಗ ಸಿ ಟಿ ರವಿ ಬಳಸಿದ್ದಾರೆ. ಹೆಣ್ಣುಮಕ್ಕಳಿಗೆ ಕೆಟ್ಟ ಪದಗಳನ್ನು ಬಳಸಿರುವುದನ್ನು ಬಿಜೆಪಿ ಬೆಂಬಲಿಸುತ್ತಿದೆ” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಅಮಿತ್ ಶಾ ರಾಜೀನಾಮೆಗೆ ಆಗ್ರಹ; ಡಿ.27ರಂದು ಬೃಹತ್ ಪ್ರತಿಭಟನೆ
“ಬಿಜೆಪಿಗರಿಗೆ ಮಹಿಳೆಯರ ಮೇಲೆ ಗೌರವವಿಲ್ಲ. ಕಾಂಗ್ರೆಸ್ ಪಕ್ಷ ಎಂದಿಗೂ ಮಹಿಳೆಯರ ವಿರುದ್ಧ ಅಗೌರವದಿಂದ ನಡೆದುಕೊಂಡಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಮಹಿಳೆಯರಿಗೆ ಅಪಾರ ಗೌರವವಿದೆ. ಆದರೆ ಸಿ ಟಿ ರವಿಯ ಅವಾಚ್ಯ ಪದ ತೀವ್ರ ಖಂಡನೀಯ” ಎಂದರು.
ಈ ಸಂದರ್ಭದಲ್ಲಿ ಎಸ್ ಪ್ರತಿಭಾ ರೆಡ್ಡಿ, ಜ್ಯೋತಿ, ಭಾರತಿ, ವಂದನಾ ಶಿವುಕುಮಾರ ಇದ್ದರು.
