ಸಿಂಧನೂರು ಆಹಾರ ಇಲಾಖೆಯಲ್ಲಿ ಬಂದಿರುವ ಪಡಿತರ ಧಾನ್ಯಗಳನ್ನು ಕಾಳ ಸಂತೆಗೆ ಸರಬರಾಜು ಮಾಡುತ್ತಿದ್ದಾರೆ ಇಲಾಖೆಯ ವಿರುದ್ಧ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣ ವೇದಿಕೆ(ಶಿವರಾಮೇಗೌಡ ಬಣ)ಯಿಂದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
“ಪಡಿತರ ವಿತರಣೆಗಾಗಿ ಬಂದಿರುವ ಪಡಿತರ ಧಾನ್ಯಗಳನ್ನು ಕಾಳಸಂತೆಗೆ ಕಳುಸುತ್ತಿದ್ದು, ಪ್ರತಿ ತಿಂಗಳೂ 4-5 ಲಕ್ಷ ಅವ್ಯವಹಾರ ಮಾಡಿಕೊಂಡು ಬರಲಾಗಿದೆ. ಮೇಲಾಧಿಕಾರಿಗಳು ಸಮಗ್ರ ತನಿಖೆಗೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು” ಎಂದು ಆಗ್ರಹಿಸಿದರು.
“ಸಿಂಧನೂರು ಅಹಾರ ಇಲಾಖೆಯಲ್ಲಿ ಅಧಿಕಾರಿ ಶಿರಸ್ತೇದಾರ ಆನಂದ ಮತ್ತು ವ್ಯವಸ್ಥಾಪಕ ದಾವಲ್ ಸಾಬ ಒಗ್ಗೂಡಿ ಪಡಿತರ ಧಾನ್ಯಗಳನ್ನು ಲೂಟಿ ಹೊಡೆಯುತ್ತಿದ್ದು, ನಿತ್ಯವೂ ದಂಧೆ ಪ್ರಾರಂಭ ಮಾಡಿದ್ದಾರೆ. ಪ್ರಶ್ನೆ ಮಾಡಿದರೆ ಉಡಾಫೆ ಉತ್ತರ ನೀಡುತ್ತಾರೆ” ಎಂದು ಆರೋಪಿಸಿದರು.
“ಸಿಂಧನೂರು ತಾಲೂಕಿನ 150 ನ್ಯಾಯಬೆಲೆ ಅಂಗಡಿಗಳು ಇದ್ದು, ಪ್ರತಿಯೊಂದು ಅಂಗಡಿಯಿಂದ ಪ್ರತಿ ತಿಂಗಳೂ 1 ಕ್ವಿಂಟಲ್ ಪಡಿತರ ಅಕ್ಕಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಅಂದರೆ ಪ್ರತಿ ತಿಂಗಳೂ 150 ಕ್ವಿಂಟಲ್ ಅಕ್ಕಿಯನ್ನು ಮಾರಾಟ ಮಾಡಿಕೊಂಡು ಇಬ್ಬರೂ ಸೇರಿ ಸಮಪಾಲು ಭಾಗ ಮಾಡಿಕೊಳ್ಳುತ್ತಿದ್ದು, ಇದು ಅವ್ಯವಹಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಅದರಂತೆ ಗೋದಾಮು ವ್ಯವಸ್ಥಾಪಕ ದಾವಲ್ ಸಾಬ 2,250 ಪಡಿತರವನ್ನು ಪಡೆದುಕೊಂಡು ಇಬ್ಬರದೂ ಸೇರಿ ಬೇರೆ ಬೇರೆ ತಾಲೂಕಿನ ಕಾಳಸಂತೆಗೆ ಈ ಪಡಿತರ ಅಕ್ಕಿಯನ್ನು ಕಳುಹಿಸುತ್ತಾರೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಸಂಪುಟದಿಂದ ಗೃಹ ಸಚಿವ ಅಮಿತ್ ಶಾ ವಜಾಕ್ಕೆ ಆಗ್ರಹ
“ಪ್ರತಿ ತಿಂಗಳು ಇಬ್ಬರೂ ಅಧಿಕಾರಿಗಳು ₹5,62,500 ಮೊತ್ತವನ್ನು ಅವ್ಯವಹಾರ ಮಾಡಿಕೊಂಡು ಬಂದಿದ್ದಾರೆ. ಅವ್ಯವಹಾರ ಮಾಡಿರುವ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಿ ಇವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಇಲ್ಲದಿದ್ದರೆ ಕಾರ್ಯಾಲಯದ ಮುಂದೆ ಹೋರಾಟ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ತಾಲೂಕು ಅಧ್ಯಕ್ಷ ಸುರೇಶ್ ಗೊಬ್ಬರಕಲ್, ದಾವಲ್ ಸಾಬ ದೊಡ್ಡನಿ ಸೇರಿದಂತೆ ಇತರರು ಇದ್ದರು.
