ಕಸ ವಿಲೇವಾರಿ ಘಟಕದಿಂದ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದರೂ ಸ್ಥಳೀಯ ಆಡಳಿತ ಎಚ್ಚೆತ್ತುಕೊಳ್ಳದೆ ವಿದ್ಯಾರ್ಥಿಗಳ ಆರೋಗ್ಯದ ಜತೆ ಚಲ್ಲಾಟವಾಡುತ್ತಿದೆ.
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ ಹಾಗೂ ಅರ್ಜಿ ಪಂಚಾಯಿತಿ ವ್ಯಾಪ್ತಿಯಲ್ಲಿ ಅಧಿಕಾರಿಗಳು ಕಸ ವಿಲೇವಾರಿ ಘಟಕ ನಿರ್ಮಾಣ ಮಾಡಿದ್ದು, ಸ್ಥಳೀಯ ಆಡಳಿತ, ತಾಲೂಕು ಆಡಳಿತ ಹಾಗೂ ಜನಪ್ರತಿನಿಧಿಗಳು ಶಾಲಾ ನಿಯಮಗಳನ್ನು ಪರಿಪಾಲಿಸದೆ ಗಾಳಿಗೆ ತೂರಿದ್ದಾರೆ.
ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ ಎಸ್ ಪೊನ್ನಣ್ಣ ಪ್ರತಿನಿಧಿಸುವ ಸ್ವಕ್ಷೇತ್ರ. ತಾವೇ ಖುದ್ದಾಗಿ ಬಾಳುಗೋಡಿನಲ್ಲಿ ಬೃಹತ್ ಕಸ ವಿಲೇವಾರಿ ಘಟಕಕ್ಕೆ ಶಂಕುಸ್ಥಾಪನೆ ಮಾಡಿ ಚುರುಕಾಗಿ ನಡೆಯಲು ಪೊಲೀಸ್ ಭದ್ರತೆಯೊಂದಿಗೆ ನೆರವು ಮಾಡಿಕೊಟ್ಟಿದ್ದಾರೆ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿ, ಕಾನೂನಿನ ಅರಿವಿಲ್ಲದಂತೆ ಮಕ್ಕಳ ಆರೋಗ್ಯದ ಜತೆ ಚಲ್ಲಾಟವಾಡಲು ಹೊರಟಿದ್ದಾರೆ. ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಿದರೆ, ಮಕ್ಕಳು ಅನಾರೋಗ್ಯಕ್ಕೀಡಾದರೆ ಶಾಸಕ ಎ ಎಸ್ ಪೊನ್ನಣ್ಣ, ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ತಾಲೂಕು ಪಂಚಾಯಿತಿ ಇಓಗಳೇ ನೇರ ಕಾರಣರಾಗುತ್ತಾರೆ.

ಕಸ ವಿಲೇವಾರಿ ಘಟಕ ನಿರ್ಮಾಣ ಮಾಡುತ್ತಿರುವುದರ ಸುತ್ತ, ಅಂದರೆ ಅರ್ಧ ಕಿಮೀ ವ್ಯಾಪ್ತಿಯಿಂದ ಒಂದು ಕಿಮೀ ಪರಿಮಿತಿಯೊಳಗೆ ಅಂಗನವಾಡಿ, ಕಿರಿಯ ಪ್ರಾಥಮಿಕ ಶಾಲೆ, ಏಕಲವ್ಯ ಮಾದರಿ ವಸತಿ ಶಾಲೆ ಹಾಗೂ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿವೆ.
ಶಾಸಕರು ಕಾನೂನು ಬಲ್ಲವರು ಮುಖ್ಯಮಂತ್ರಿಗಳಿಗೆ ಕಾನೂನು ಸಲಹೆ ನೀಡುವ ಸಂಪುಟ ಸ್ಥಾನಮಾನ ಹೊಂದಿರುವ ವಕೀಲರಾಗಿ ಅನುಭವ ಹೊಂದಿ ಪ್ರಸ್ತುತ ಸ್ಥಳೀಯ ಶಾಸಕರಾಗಿದ್ದು, ಶಾಲಾ ಪರಿಮಿತಿಯಲ್ಲಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವಂತಹ ಯೋಜನೆಯನ್ನು ಕೈಗೊಳ್ಳುವಂತಿಲ್ಲ ಎಂಬುದರ ಅರಿವಿದ್ದರು, ನಿಯಮಗಳ ಪಾಲನೆ ಮಾಡದೆ ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಕೆಲಸ ಚುರುಕಾಗಿ ನಡೆಯುವಂತೆ ಮಾಡಿರುವುದು ರಾಜಕೀಯ ಜಿದ್ದಾಜಿದ್ದಿನ ಕಾರಣಗಳೆಂದು ಮೇಲ್ನೋಟಕ್ಕೆ ಕಂಡುಬರುತ್ತಿವೆ.

ಬಿಟ್ಟಂಗಾಲ ಪಂಚಾಯಿತಿ ಬಾಳುಗೋಡವಿನ ಅರ್ಧ ಕಿಮೀ ವ್ಯಾಪ್ತಿಯಲ್ಲಿ ಅಂಗನವಾಡಿ(12 ಮಕ್ಕಳು), ಕಿರಿಯ ಪ್ರಾಥಮಿಕ ಶಾಲೆ(18 ಮಕ್ಕಳು), ಏಕಲವ್ಯ ಮಾದರಿ ವಸತಿ ಶಾಲೆ(355 ಮಕ್ಕಳು)ಯ ಮಕ್ಕಳು ತಮ್ಮ ವಿದ್ಯಾಭ್ಯಾಸದ ಜತೆಗೆ ವಾಸ್ತವ್ಯ ಹೂಡಿದ್ದಾರೆ.
ಅರ್ಜಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 150 ಮಕ್ಕಳಿದ್ದಾರೆ.
ಅದರ ಪಕ್ಕದಲ್ಲಿಯೇ 50 ಮೀಟರ್ ಅಂತರದಲ್ಲಿ ಅವೈಜ್ಞಾನಿಕವಾಗಿ, ಬಹಳ ಕೆಟ್ಟದಾಗಿ ನಿರ್ವಹಣೆ ಮಾಡುತ್ತಿರುವ ಸುಮಾರು ಏಳು ಎಕರೆಯಲ್ಲಿ ಬೃಹತ್ ಕಸ ವಿಲೇವಾರಿ ಘಟಕವಿದೆ. ಅಂದರೆ ಅರ್ಧ ಕಿಮೀ ವ್ಯಾಪ್ತಿಯಲ್ಲಿ ಈಗಾಗಲೇ ಏಳು ಎಕರೆಯಲ್ಲಿ ಬೃಹತ್ ಕಸ ವಿಲೇವಾರಿ ಘಟಕ ಇದ್ದರೂ ನಿಯಮಬಾಹಿರವಾಗಿ ಬಾಳುಗೋಡುವಿನಲ್ಲಿ ಮತ್ತೊಂದು ಬೃಹತ್ ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ಹೊರಟಿರುವುದು ರಾಜಕೀಯ ಹುನ್ನಾರವಾಗಿದೆ.

ಶಾಲೆಗಳ ಪರಿಮಿತಿಯಲ್ಲಿ ಇಂತಹ ಯೋಜನೆಗಳನ್ನು ಮಾಡಬಾರದು, ಮಕ್ಕಳ ಆರೋಗ್ಯಕ್ಕೆ ತೊಂದರೆಯಾಗಬಾರದು ಎನ್ನುವ ನಿಯಮಗಳನ್ನು ಪಾಲನೆ ಮಾಡುವಲ್ಲಿ ಶಾಸಕ ಎ ಎಸ್ ಪೊನ್ನಣ್ಣ, ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ತಾಲೂಕು ಪಂಚಾಯಿತಿ ಇಒ ವಿಫಲರಾಗಿದ್ದಾರೆ.
ಪೋಷಕರು ಒಳ್ಳೆಯ ವಾತಾವರಣದಲ್ಲಿ ಮಕ್ಕಳು ಬೆಳೆಯಲಿ ಎನ್ನುವ ಉದ್ದೇಶಕ್ಕೆ, ಸರ್ಕಾರಗಳು ಮಕ್ಕಳ ಏಳಿಗೆಗಾಗಿ, ಮಕ್ಕಳ ಶಿಕ್ಷಣದ ಹಕ್ಕಿನಂತೆ ಅಗತ್ಯ ಸೌಲಭ್ಯ ಒದಗಿಸಿ ಶಾಲೆ, ವಸತಿ ಶಾಲೆ ನಿರ್ಮಿಸಿ ಮಕ್ಕಳ ಓದಿಗೆ ಅನುವು ಮಾಡಿಕೊಟ್ಟಿರುತ್ತಾರೆ. ಅದರಂತೆ ಶಾಲಾ ವ್ಯಾಪ್ತಿಯಲ್ಲಿ ಇಂತಿಷ್ಟು ನಿಯಮಗಳನ್ನೂ ಕೂಡಾ ಹೇರಿರುತ್ತಾರೆ. ಪೋಷಕರು ಮಕ್ಕಳ ಶಿಕ್ಷಣಕ್ಕಾಗಿ ವಸತಿ ಶಾಲೆಗೆ ಕಳುಹಿಸಿರುತ್ತಾರೆ. ಇಲ್ಲಿ ಕಸ ಸಂಗ್ರಹ ಮಾಡುವುದರಿಂದ ಸರಿಯಾದ ನಿರ್ವಹಣೆ ಇಲ್ಲದೆ, ಸೊಳ್ಳೆ, ನೊಣ ಹಾಗೂ ಕೆಟ್ಟವಾಸನೆಯಿಂದ ಮಕ್ಕಳು ಅನಾರೋಗ್ಯಕ್ಕೆ ಗುರಿಯಾಗುವಂತಾಗಿದೆ. ಹೆಚ್ಚು ಕಡಿಮೆಯಾದರೆ ಅದರ ಹೊಣೆ ಯಾರು? ಪೋಷಕರಿಗೆ ಉತ್ತರ ಕೊಡುವವರು ಯಾರು?.

ಪೋಷಕರು, ನಮ್ಮ ಮಕ್ಕಳು ವಸತಿ ಶಾಲೆಯಲ್ಲಿದ್ದಾರೆ ಎನ್ನುವ ಕಾರಣಕ್ಕೆ ಸುಮ್ಮನಿರುತ್ತಾರೆ. ಇಲ್ಲಿ ಸ್ಥಳೀಯ ಆಡಳಿತ, ಬೇಜವಾಬ್ದಾರಿ ಅಧಿಕಾರಿಗಳಿಂದಾಗಿ ಕಸ ವಿಲೇವಾರಿ ಘಟಕ ಮಾಡಿ ಅದನ್ನು ಸರಿಯಾಗಿ ನಿರ್ವಹಣೆ ಮಾಡದೆ ಮತ್ತೊಂದು ತ್ಯಾಜ್ಯ ಘಟಕ ಮಾಡಲು ಹೊರಟಿರುವುದು ಕೆಟ್ಟ ನಡೆಯಾಗಿದೆ.
ಊಟದ ಮೇಲೆ ನೊಣಗಳು ಕೂರುವುದು, ಸೊಳ್ಳೆ ಕಚ್ಚುವುದರಿಂದ ನಾನಾ ಸಮಸ್ಯೆ ಎದುರಾಗಿದ್ದು, ದುರ್ವಾಸನೆಯಿಂದ ಉಸಿರಾಟದ ತೊಂದರೆಯಾಗಿದೆ. ಈಗಾಗಲೇ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಒಂದು ಬೋರ್ವೆಲ್ ಮುಚ್ಚಲಾಗಿದೆ. ಕುಡಿಯುವ ನೀರಿನಲ್ಲಿ ಪ್ಲೋರೈಡ್ ಅಂಶ ಹೆಚ್ಚಾಗಿದೆ, ನೀರು ಶುದ್ಧವಾಗಿಲ್ಲವೆಂಬ ಕಾರಣದಿಂದ ಓಂದು ಬೋರ್ವೆಲ್ ಮುಚ್ಚಿದ್ದಾರೆ. ಇಂತಹ ಕೆಟ್ಟ ವಾತಾವರಣ ಸೃಷ್ಟಿಸುವಲ್ಲಿ ನೇರ ಪಾಲುದಾರರಾಗಿ ಶಾಸಕರು ಹಾಗೂ ಅಧಿಕಾರಿಗಳು ಭಾಗಿಯಾಗಿರುವುದು ದುರದೃಷ್ಟಕರ ಸಂಗತಿ. ರಾಜಕೀಯ ಏನೇ ಇರಲಿ ಮಕ್ಕಳ ಜೀವನದ ಜತೆ ಆಟವಾಡಲು ಯಾರಿಗೂ ಅಧಿಕಾರವಿಲ್ಲ. ಇದನ್ನು ಮನಗಂಡು ಇಂತಹ ಯೋಜನೆ ಕೈಗೊಳ್ಳಬಾರದಿತ್ತು.

ಇದಕ್ಕಾಗಿ ಗ್ರಾಮ, ಪಟ್ಟಣ ಪರಿಮಿತಿಯಿಂದ ದೂರದಲ್ಲಿ ಯಾರಿಗೂ ತೊಂದರೆಯಾಗದ ಸ್ಥಳದಲ್ಲಿ ಇಂತಹ ಯೋಜನೆ ಕೈಗೊಂಡು ಕಸ ವಿಲೇವಾರಿ ವೈಜ್ಞಾನಿಕವಾಗಿ ನಡೆಸುವ ಪ್ರಕ್ರಿಯೆಯಾಗಬೇಕಿತ್ತು. ಆದರೆ ಇದ್ಯಾವುದನ್ನೂ ಮಾಡದೆ ಫಲವತ್ತಾದ ಕೃಷಿ ಭೂಮಿ, ಸುತ್ತಲೂ ಕುಡಿಯುವ ನೀರಿನ ಸೆಲೆ, ಸಾವಿರಾರು ಜನರ ವಾಸವಿದೆ. ಆದೇ ಜಾಗದಲ್ಲಿ ಆದಿವಾಸಿ ಜನಗಳಿಗೆ ನಿವೇಶನ ಕೊಟ್ಟು ಅಲ್ಲಿಯೇ ಕಸ ವಿಲೇವಾರಿ ಘಟಕ ಮಾಡುತ್ತಿರುವುದು ನಿಜಕ್ಕೂ ಶೋಚನೀಯವಾಗಿದ್ದು, ಸ್ಥಳೀಯ ಆಡಳಿತದ ವೈಫಲ್ಯ ಎದ್ದುಕಾಣುತ್ತಿದೆ.

ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆಯ ಅಮಾನತಿಗೆ ಒಳಗಾಗಿರುವ ಪ್ರಾಂಶುಪಾಲೆ ಮಮತಾ ಮಾತನಾಡಿ, “ಸ್ವಚ್ಛತೆ, ಸಮರ್ಪಕ ನಿರ್ವಹಣೆ, ಊಟದಲ್ಲಿ ನೊಣ ಬಿದ್ದಿತ್ತು ಎನ್ನುವುದನ್ನು ಪತ್ರಿಕೆ ವರದಿ ಮಾಡಿತ್ತು. ಅದರಂತೆ ನನ್ನನ್ನು ಉದ್ದೇಶಪೂರ್ವಕವಾಗಿ ಅಮಾನತು ಮಾಡಿದರು. ತಪ್ಪಿಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವಂತತಾಗಿದೆ. ಊಟದಲ್ಲಿ ನೊಣ ಬಿದ್ದಿರುವುದು
ತಿಳಿಯಿತು. ಆದರೆ ನೊಣ ಊಟದಲ್ಲಿ ಬೀಳಲು ಕಾರಣವೇನು? ಎನ್ನುವುದನ್ನು ತಿಳಿಯುವ ಪ್ರಯತ್ನ ಮಾಡಲಿಲ್ಲ. ಕೇವಲ 50 ಮೀಟರ್ ಅಂತರದಲ್ಲಿ ಬೃಹತ್ ಕಸ ವಿಲೇವಾರಿ ಘಟಕವಿದೆ. ಹಲವಾರು ವರ್ಷಗಳಿಂದ ಸುರಿದ ರಾಶಿ ರಾಶಿ ಕಸ ಹಾಗೆಯೇ ಇದೆ. ಇದು ಪದೇಪದೆ ಮಳೆಯಲ್ಲಿ ನೆಂದು ಕೆಟ್ಟ ವಾಸನೆ ಬರುತ್ತಿದೆ. ಸೊಳ್ಳೆ, ನೊಣಗಳ ಉತ್ಪತಿಯಾಗುತ್ತವೆ. ಪಂಚಾಯಿತಿ ಕಡೆಯಿಂದ ವಾರಕ್ಕೊಮ್ಮೆ ಕ್ರಿಮಿನಾಶಕ ಸಿಂಪಡಿಸಿದರೆ ಸೊಳ್ಳೆ ಹಾಗೂ ನೊಣದಿಂದ ಮುಕ್ತಿ ಹೊಂದಲು ಸಾಧ್ಯವೇ?

“ಏಳು ಎಕರೆಯಲ್ಲಿ ಕಸ ಸುರಿದು ಇಡೀ ವಾತಾವರಣ ಹದಗೆಟ್ಟಿದೆ. ಅಧಿಕಾರಿಗಳು, ಗ್ರಾಮ ಪಂಚಾಯಿತಿ, ತಾಲೂಕು ಆಡಳಿತದ ಅಧಿಕಾರಿಗಳೇ ಇದಕ್ಕೆ ಕಾರಣ. ಈ ಕುರಿತಾಗಿ ಹಲವು ಬಾರಿ ಅಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿದರೂ ಸೂಕ್ತ ಕ್ರಮ ಕೈಗೊಳ್ಳಲಿಲ್ಲ. ಆದರೆ ಸರಿಯಾಗಿ ನಿರ್ವಹಣೆ ಮಾಡಲಿಲ್ಲವೆಂದು ನನಗೆ ಅಮಾನತು ಶಿಕ್ಷೆಯಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಬಾಳುಗೋಡು ಹಿತ ರಕ್ಷಣಾ ಸಮಿತಿಯ ಸಚಿನ್ ಮಾತನಾಡಿ, “ರಾಜಕೀಯ ಏನೇ ಇರಲಿ ಜನರ ಜೀವನದ ಜತೆ ಆಟವಾಡುವಷ್ಟು ಕೀಳು ಮಟ್ಟಕ್ಕೆ ಬರಬಾರದು. ಇದೇನು ಬರಡು ಭೂಮಿ, ಬಾಣೆ ಅಲ್ಲ. ಸಿಟಿಯಿಂದ ಹೊರಗೆ ಸಾಕಷ್ಟು ಜಾಗವಿದೆ. ಕೆಲಸಕ್ಕೆ ಬಾರದ ಜಾಗದಲ್ಲಿ ಕಸ ವಿಲೇವಾರಿ ಘಟಕ ಮಾಡಿ, ಬೇಡ ಅಂದವರು ಯಾರು. ಊರು ಮಧ್ಯದಲ್ಲಿ ಬಂದು, ಕುಡಿಯುವ ನೀರು, ಕೃಷಿ ಭೂಮಿಗೆ, ವಾಸ ಮಾಡುವ ಜನಕ್ಕೆ ತೊಂದರೆ ಕೊಡುವ ಕೆಲಸ ಮಾಡುತ್ತಿದ್ದೀರಿ. ಇದು ಸರಿಯಲ್ಲ. ಗ್ರಾಮದ ಜನರಿಗೆ ಕಿಂಚಿತ್ತು ತೊಂದರೆಯಾದರೂ ಅದರ ಪರಿಣಾಮ ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಕೊಡಗು | ಕಂದಾಯ ಭೂಮಿ, ಅರಣ್ಯಕ್ಕೆ ಸೇರಿದೆನ್ನುವ ಹುನ್ನಾರ; ಮರ ತೆರವುಗೊಳಿಸಲು ಅರಣ್ಯ ಅಧಿಕಾರಿಗಳಿಗೆ ಗಡುವು
ಯುವಮುಖಂಡ ಪ್ರದೀಪ್ ಮಾತನಾಡಿ, “ಸುತ್ತಲೂ ಶಾಲೆಗಳಿವೆ, ಮಕ್ಕಳಿದ್ದಾರೆ, ವಯಸ್ಸಾದ, ಅನಾರೋಗ್ಯ ಪೀಡಿತರು, ಬಾಣಂತಿಯರು ಇರುವ ಊರಿನೊಳಗೆ ಕಸ ವಿಲೇವಾರಿ ಘಟಕ ಮಾಡುತ್ತಿರುವುದು ಖಂಡನೀಯ. ಇಲ್ಲಿ ತ್ಯಾಜ್ಯ ಘಟಕ ನಿರ್ಮಾಣ ಮಾಡಬೇಡಿ ಅಂದರೂ ಗ್ರಾಮದ ಜನರ ಮಾತನ್ನು ಕಡೆಗಣಿಸಿ ಈ ಯೋಜನೆ ಕೈಗೆತ್ತಿಕೊಂಡಿದ್ದಾರೆ. ಮಾಡಲೇಬೇಕೆನ್ನುವ ಕೆಟ್ಟ ಹಠಕ್ಕೆ ಬಿದ್ದು ನಮ್ಮೂರಿನ ವಾತಾವರಣ ಹಾಳುಮಾಡುತ್ತಿದ್ದಾರೆ. ಅವರ ಯೋಗ್ಯತೆಗೆ ಈಗಾಗ್ಲೇ ಅರ್ಜಿಗ್ರಾಮದಲ್ಲಿರುವ ಸರಿಸುಮಾರು ಏಳು ಎಕರೆ ಕಸ ವಿಲೇವಾರಿ ಘಟಕ ನಿರ್ವಹಣೆ ಮಾಡಲು ಆಗಿಲ್ಲ. ಎಷ್ಟೋ ವರ್ಷದ ಕಸ ಹಾಗೆ ಬಿದ್ದಿದೆ. ಅದರಿಂದ ಈಗಾಗಲೇ
ಸಾಕಷ್ಟು ತೊಂದರೆಯಾಗಿದೆ. ಹೀಗಿದ್ದರೂ ಮತ್ತೆ ಮಗದೊಂದು ಕಸ ವಿಲೇವಾರಿ ಘಟಕ ಅದುವೇ ಆದಿವಾಸಿಗಳಿಗೆ ನಿವೇಶನ ಕೊಟ್ಟಿರುವ, ಕುಡಿಯುವ ನೀರಿನ ಬೋರ್ವೆಲ್ ಇರುವ ಜಾಗದಲ್ಲಿ ಮಾಡುತ್ತಿರುವುದು ಉದ್ದೇಶಪೂರ್ವಕ. ಇದಕ್ಕೆಲ್ಲ ಅವಕಾಶ ಕೊಡಲ್ಲ. ಕಾನೂನು ಹೋರಾಟ ಅಷ್ಟೇ ಅಲ್ಲ, ಇಡೀ ಊರಿನ ಆಕ್ರೋಶ ಎದುರಿಸಬೇಕಾಗುತ್ತದೆ. ತಕ್ಷಣ ಎಚ್ಚೆತ್ತುಕೊಂಡು ಕಸ ವಿಲೇವಾರಿ ಘಟಕ ಯೋಜನೆ ಕೈಬಿಡಬೇಕು” ಎಂದು ಆಗ್ರಹ ಮಾಡಿದರು.
