ದಾವಣಗೆರೆ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರು ಮತ್ತು ಬಿಜೆಪಿಯೊಂದಿಗಿನ ಹೊಂದಾಣಿಕೆ ರಾಜಕಾರಣದ ಬಗ್ಗೆ ಬೆಳಗಾವಿಯಲ್ಲಿ ಚನ್ನಗಿರಿ ಶಾಸಕ ಬಸವರಾಜ್ ಶಿವಗಂಗಾ ಆಕ್ರೋಶ ಹೊರ ಹಾಕಿದ್ದು, “ದಾವಣಗೆರೆಯ ಜಿಲ್ಲಾ ಕಾಂಗ್ರೆಸ್‌ನಲ್ಲಿ ಚುನಾವಣೆಯ ನಂತರ ಮತ್ತು ಹಿಂದಿನಿಂದಲೂ ಹೊಗೆಯಾಡುತ್ತಿದ್ದ ಅಸಮಾಧಾನದ ರಾಜಕಾರಣ ಈಗ ಮತ್ತೊಮ್ಮೆ ಹೊರಬಿದ್ದಿದೆ” ಎಂದಿದ್ದಾರೆ.
ಡಿಸಿಸಿ ಬ್ಯಾಂಕ್ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯ ಸೋಲಿನ ಹಿನ್ನೆಲೆಯಲ್ಲಿ ಚೆನ್ನಗಿರಿ ಕಾಂಗ್ರೆಸ್ ಶಾಸಕ ಬಸವರಾಜ ಶಿವಗಂಗಾ ಬೆಳಗಾವಿ ಅಧಿವೇಶನದಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
“ಅವರ ಮನೆ ಬೇಳೆ ಬೇಯಿಸಿಕೊಳ್ಳಲು ಏನು ಬೇಕಾದರೂ ಮಾಡುತ್ತಾರೆ. ಅವರಿಗೆ ಪಕ್ಷವೂ ಬೇಕಿಲ್ಲ. ಶಾಸಕರೂ ಬೇಕಿಲ್ಲ. ಅವಶ್ಯಕತೆಯೂ ಇಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಎಲ್ಲವನ್ನೂ ಸಹಿಸಿಕೊಂಡು ಹೋಗುತ್ತಿದ್ದೇವೆ. ಇನ್ನು ಎಷ್ಟು ಅಂತ ಸಹಿಸಿಕೊಳ್ಳಲು ಸಾಧ್ಯ” ಎಂದು ಕಿಡಿಕಾರಿದ್ದಾರೆ.
“ಚನ್ನಗಿರಿಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸೋಲಲು ಸಚಿವರೇ ಕಾರಣ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವಿರುದ್ಧ ಸ್ಪರ್ಧೆ ಮಾಡಿದ್ದ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ. ಚುನಾವಣೆ ಎಂದಮೇಲೆ ಸೋಲು ಗೆಲುವು ಸಹಜ. ಸೋಲು ನಾವು ಒಪ್ಪಿಕೊಳ್ಳುತ್ತೇವೆ. ನಮ್ಮವರಿಂದಲೇ ನಾವು ಸೋತರೆ ನಮಗೆ ಹೇಗಾಗಬೇಡ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಕೊಡಗು | ಕಂದಾಯ ಭೂಮಿ, ಅರಣ್ಯಕ್ಕೆ ಸೇರಿದೆನ್ನುವ ಹುನ್ನಾರ; ಮರ ತೆರವುಗೊಳಿಸಲು ಅರಣ್ಯ ಅಧಿಕಾರಿಗಳಿಗೆ ಗಡುವು
“ದಾವಣಗೆರೆ ಜಿಲ್ಲೆಯಲ್ಲಿ ಸಚಿವರು ಬಿಜೆಪಿಯ ಕೆಲವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ರಾಜಕೀಯ ಮಾಡುತ್ತಿರುವ ಕುರಿತಂತೆ ಸಿಎಂ, ಡಿಸಿಎಂ ಗಮನಕ್ಕೆ ತಂದಿದ್ದೇನೆ. ಸಿಎಂ ಸಿದ್ದರಾಮಯ್ಯನವರುರು ಪತ್ರಕ್ಕೆ ಬೆಲೆ ನೀಡುತ್ತಾರೆಂಬ ವಿಶ್ವಾಸವಿದೆ. ನಮ್ಮದು ಬಿಸಿರಕ್ತ. ಏನು ನಡೆಯುತ್ತೋ ಅದನ್ನೇ ಹೇಳುತ್ತೇವೆ. ಬಕೆಟ್ ಹಿಡಿಯುವ ರಾಜಕಾರಣ ಮಾಡುವುದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ನಡೆ ಬಗ್ಗೆ ಪತ್ರ ಬರೆಯಲೇಬೇಕಿತ್ತು, ಬರೆದಿದ್ದೇನೆ” ಎಂದು ತಿಳಿಸಿದರು.