ದಲಿತ ವಿದ್ಯಾರ್ಥಿಗಳ ಮೇಲೆ ಭೀಕರ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯ ಕುರವಾಲಿ ಡೆವಲಪ್‌ಮೆಂಟ್ ಬ್ಲಾಕ್‌ನ ರೀಚ್‌ಪುರ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ.
ಸುಮಾರು 10 ದಿನಗಳ ಹಿಂದೆ ಈ ಘಟನೆ ನಡೆದಿದ್ದರೂ ಗುರುವಾರವಷ್ಟೇ ಪ್ರಕರಣ ಬೆಳಕಿಗೆ ಬಂದಿತ್ತು. ಮಕ್ಕಳ ಮೈಮೇಲೆ ಗಾಯಗಳಿರುವುದನ್ನು ಗಮನಿಸಿದ ಪೋಷಕರು ಆತಂಕಗೊಂಡು ವಿಚಾರಿಸಿದಾಗ ನಿರಂತರವಾಗಿ ಹಲ್ಲೆ ನಡೆಸುತ್ತಿರುವುದು ತಿಳಿದುಬಂದಿದೆ.
ಮಕ್ಕಳ ಮೈಮೇಲೆ ಗಾಯಗಳಿರುವ ವಿಡಿಯೊವೊಂದು ಕಳೆದ ವಾರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. “1 ರಿಂದ 8ನೇ ತರಗತಿಯ ಮಕ್ಕಳಿಗೆ ಪಾಠ ಮಾಡುವ, 40 ವರ್ಷ ವಯಸ್ಸಿನ ಅನಿತಾ ಗುಪ್ತಾ ಅವರು ಕ್ಷುಲ್ಲಕ ವಿಷಯಗಳ ಕಾರಣಕ್ಕೆ ಯಾವಾಗಲೂ ನಮ್ಮ ಮಕ್ಕಳನ್ನು ಹೊಡೆಯುತ್ತಾರೆ. ಈ ರೀತಿಯ ವರ್ತನೆ ಪುನರಾವರ್ತನೆಯಾಗುತ್ತಲೇ ಇದೆ” ಎಂದು ಪೋಷಕರು ಹೇಳಿದ್ದಾರೆ.
‘ಮೇಡಂ ನಮ್ಮ ಮೇಲೆ ತುಂಬಾ ಕೋಪ ಮಾಡಿಕೊಳ್ಳುತ್ತಾರೆ’ ಎಂದು ದಲಿತ ವಿದ್ಯಾರ್ಥಿಯೊಬ್ಬ ತಿಳಿಸಿದ್ದಾನೆ. ‘ಜಾತಿಯ ಕಾರಣಕ್ಕಾಗಿಯೇ ಆರು-ಏಳು ದಲಿತ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿಕೊಂಡು ಶಿಕ್ಷಕಿ ಅನಿತಾ ಗುಪ್ತಾ ಥಳಿಸುತ್ತಿದ್ದಳು’ ಎಂಬ ಆರೋಪ ಬಂದಿದೆ.
ಇದನ್ನೂ ಓದಿರಿ: ನೆಲಮಂಗಲ | ಕಾರಿನ ಮೇಲೆ ಕಂಟೇನರ್ ಲಾರಿ ಪಲ್ಟಿ, 6 ಮಂದಿ ದಾರುಣ ಸಾವು
ತರಗತಿ ವೇಳೆ ದಲಿತ ವಿದ್ಯಾರ್ಥಿಗಳ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುವುದು, ತಾರತಮ್ಯ ಮಾಡುವುದು ಈ ಶಿಕ್ಷಕಿಯ ಛಾಳಿಯಾಗಿದೆ ಎಂಬುದು ಪತ್ರಿಕಾ ವರದಿಗಳಿಂದ ಹೊರಬಿದ್ದಿದೆ. ‘ನಮ್ಮ ಮಕ್ಕಳನ್ನು ಅಸ್ಪೃಶ್ಯರೆಂದು ಪರಿಗಣಿಸಿ ಆಕೆ ಥಳಿಸುತ್ತಾಳೆ’ ಎಂದು ಒಬ್ಬ ವಿದ್ಯಾರ್ಥಿಯ ತಂದೆ ಅಮರ್ ಸಿಂಗ್ ನೋವು ತೊಡಿಕೊಂಡಿದ್ದಾರೆ.
ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ಬಗ್ಗೆ ತನಿಖೆ ಆರಂಭಿಸಿದೆ. ವಿದ್ಯಾರ್ಥಿಗಳ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿರುವುದನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ. ‘ಜಾತಿವಾದಿ ನಿಂದನೆಗಳನ್ನು ಸಮರ್ಥಿಸುವ ಯಾವುದೇ ಪುರಾವೆಗಳು ಕಂಡುಬಂದಿಲ್ಲ’ ಎಂದೂ ಅಧಿಕಾರಿಗಳು ಹೇಳಿಕೊಂಡಿದ್ದಾರೆ.