ನುಡಿಗೆ ನೆಲದ ಸ್ಪರ್ಶವಿದೆ. ಉತ್ತು ಬಿತ್ತುವ ಜನರ ಬೆವರಿನೊಂದಿಗೆ ಬೆರೆತ ಆಹಾರ ಕ್ರಮವೂ ಸಾಹಿತ್ಯದ ಬಹುಮುಖ್ಯ ಅಂಗ. ಇದನ್ನು ಮಹೇಶ ಜೋಶಿ ಮರೆಯಬಾರದು
ಮಂಡ್ಯದಲ್ಲಿ ಸಮಾರೋಪಗೊಂಡ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಹೊಸ ಕ್ರಾಂತಿಗೆ ನಾಂದಿ ಹಾಡಿರುವುದು ಆಶಾದಾಯಕ ಬೆಳವಣಿಗೆ. ಮದ್ಯ, ತಂಬಾಕಿನೊಂದಿಗೆ ಮಾಂಸಾಹಾರವನ್ನು ಸಮೀಕರಿಸಿ ಮತ್ತು ತುಚ್ಛೀಕರಿಸಿ ಮಳಿಗೆಯ ನೋಂದಣಿಗೆ ಕನ್ನಡ ಸಾಹಿತ್ಯ ಪರಿಷತ್ ಆಹ್ವಾನಿಸಿದ ಬಳಿಕ ಹುಟ್ಟಿಕೊಂಡ ಆಹಾರ ಹಕ್ಕಿನ ಪ್ರಶ್ನೆಗೆ ಸಣ್ಣಮಟ್ಟಿಗಿನ ಚಲನೆ ದೊರೆತಿದೆ. ಬಹುಜನರು ತಿನ್ನುವ ಆಹಾರವನ್ನು ವ್ಯಸನ ಎಂಬಂತೆ ಬಿಂಬಿಸಿದ್ದು ಮಂಡ್ಯ ಜನರನ್ನು ರೊಚ್ಚಿಗೆಬ್ಬಿಸಿದಷ್ಟೇ ಅಲ್ಲದೇ, ‘ಸಸ್ಯಾಹಾರದೊಂದಿಗೆ ಮಾಂಸಾಹಾರವೂ ಇರಲಿ, ಬೇಳೆಯ ಜೊತೆಗೆ ಮೂಳೆಯೂ ಇರಲಿ’ ಎಂಬ ಘೋಷಣೆಗಳಿಗೆ ನಾಂದಿ ಹಾಡಿತು. ಮಾಂಸಾಹಾರದ ಕುರಿತು ಬಿತ್ತಲಾಗಿರುವ ಅಸಹನೆ, ತಪ್ಪು ಕಲ್ಪನೆ, ಬ್ರಾಹ್ಮಣೀಯ ಚಿಂತನೆಯ ವಿರುದ್ಧ ಸಿಡಿದೆದ್ದ ಜನ, ತಿಂದುಂಡು ತೇಗಲೆಂದೇನೂ ಮಾಂಸಾಹಾರದ ಆಗ್ರಹವನ್ನು ಮಾಡಿರಲಿಲ್ಲ. ಸಣ್ಣ ಕಿಡಿಯೊಂದರ ಮೂಲಕ ಧುತ್ತೆಂದು ಎದ್ದುಬಂದ ಪ್ರಶ್ನೆಯ ಹಿಂದೆ ಚಾರಿತ್ರಿಕವಾದ ದಬ್ಬಾಳಿಕೆಯ ವಿರುದ್ಧ ಆಕ್ರೋಶವಿತ್ತು. ಈವರೆಗಿನ ಬ್ರಾಹ್ಮಣೀಯ ಸಂಪ್ರದಾಯಕ್ಕೆ ತಿಲಾಂಜಲಿ ಇಡಬೇಕು, ಶ್ರಮ ಸಂಸ್ಕೃತಿಯ ಪ್ರತೀಕವಾದ ಮಾಂಸಾಹಾರವನ್ನೂ ಉಣಬಡಿಸಬೇಕು ಎಂಬುದು ಮಹತ್ವದ ಒತ್ತಾಯವಾಗಿತ್ತು.
ಕಾಲಕಾಲಕ್ಕೆ ನಡೆಯುವ ಸಾಹಿತ್ಯ ಸಮ್ಮೇಳನದ ವಿವಿಧ ಗೋಷ್ಠಿಗಳಲ್ಲಿ ನಡೆಯುವ ಚರ್ಚೆಗಳು ವೇದಿಕೆಗೆ ಮಾತ್ರ ಸೀಮಿತವಾಗಿಬಿಡುತ್ತವೆ. ಮೂರು ದಿನ ಪತ್ರಿಕೆಯಲ್ಲಿ ವರದಿಯಾಗಿ, ನಂತರ ತಣ್ಣಗಾಗುತ್ತವೆ. ಹಾಗೆ ನೋಡಿದರೆ ಈ ಚರ್ಚೆಗಳು ಪರಿಣಾಮಾತ್ಮಕ ಪ್ರಭಾವ ಬೀರುವುದೇ ಇಲ್ಲ. ಆದರೆ ಮಂಡ್ಯ ಸಮ್ಮೇಳನವು ಗೋಷ್ಠಿಗಳ ಹೊರತಾಗಿಯೂ ಒಂದು ಮಹತ್ವದ ಸಾಧನೆಯನ್ನು ಮಾಡಿತು. ಸಸ್ಯಾಹಾರ, ಮಾಂಸಾಹಾರ- ಈ ಎರಡೂ ಮನುಷ್ಯನ ಬದುಕಿನ ಭಾಗ ಎಂಬುದನ್ನು ಎತ್ತಿ ಹಿಡಿಯಿತು. ಜನಾಗ್ರಹದ ಬಳಿಕ, ಕನ್ನಡ ಸಾಹಿತ್ಯ ಪರಿಷತ್ ಮತ್ತು ಸರ್ಕಾರ- ಕೊನೆಯ ದಿನವಾದರೂ ಮೊಟ್ಟೆಯನ್ನು ವಿತರಿಸಿ, ಮಾಂಸಾಹಾರದ ವಿರುದ್ಧ ನಮ್ಮ ನಡೆ ಇಲ್ಲ ಎಂಬುದನ್ನು ಸಾಬೀತು ಮಾಡಿವೆ. ಸಮ್ಮೇಳನ ಜರುಗುವ ಕೆಲ ದಿನಗಳ ಹಿಂದಷ್ಟೇ ಈ ಆಹಾರದ ಪ್ರಶ್ನೆ ಮುನ್ನಲೆಗೆ ಬಂದಿದ್ದರಿಂದ ದೊಡ್ಡ ಮಟ್ಟಿಗಿನ ಮಾಂಸಾಹಾರ ಸರಬರಾಜು ವ್ಯವಸ್ಥೆ ಸಾಧ್ಯವಾಗಲಿಲ್ಲ ಎಂದು ಊಹಿಸಿದರೂ ಮೊಟ್ಟೆಯನ್ನು ಅಧಿಕೃತವಾಗಿ ಸರ್ಕಾರದ ಭಾಗವಾಗಿ ವಿತರಿಸಿರುವುದು ಮಹತ್ವದ ಮುಂಚಲನೆ. ಸರ್ಕಾರ ನೀಡದಿದ್ದರೇನಂತೆ, ನಾವೇ ನೀಡುತ್ತೇವೆ ಎಂದು ಸಮ್ಮೇಳನದ ಕೊನೆಯ ದಿನದ ಮಧ್ಯಾಹ್ನ ಸಾಂಕೇತಿಕವಾಗಿ ಊಟದ ಕೌಂಟರ್‌ನಲ್ಲಿ ಮಂಡ್ಯದ ಜನ ಮಾಂಸಾಹಾರವನ್ನು ಹಂಚಿದ್ದರು. ಕೊನೆಯ ದಿನದ ಸಂಜೆ ವೇಳೆಗೆ ಸರ್ಕಾರವೇ ಮೊಟ್ಟೆ ವಿತರಿಸಿದ್ದು ಹೋರಾಟಕ್ಕೆ ಸಿಕ್ಕ ಗೆಲುವು.
ಬಳ್ಳಾರಿಯಲ್ಲಿ ನಡೆಯಲಿರುವ 88ನೇ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರವನ್ನು ವಿತರಿಸಬೇಕಾದ ಹೊಣೆಗಾರಿಕೆ ಕಸಾಪ ಮತ್ತು ಸರ್ಕಾರದ್ದಾಗಿದೆ. ಮಂಡ್ಯದಲ್ಲಿ ಉಂಟಾಗಿರುವ ಚಲನೆಯನ್ನು ಬಳ್ಳಾರಿಯ ಜನ ಮುಂದಕ್ಕೆ ಕೊಂಡೊಯ್ಯುವ ಎಲ್ಲ ಸಾಧ್ಯತೆಗಳು ನಿಚ್ಚಳವಾಗಿವೆ. ಆಹಾರ ತಯಾರಿಕೆಯ ಜವಾಬ್ದಾರಿಯು ಸಮ್ಮೇಳನದ ಆಹಾರ ಸಮಿತಿಯದ್ದು ಎಂದು ಹೇಳಿ ಕಸಾಪ ಅಧ್ಯಕ್ಷ ಮಹೇಶ ಜೋಶಿ ಕೈತೊಳೆದುಕೊಂಡು ಕೂರುವಂತಿಲ್ಲ. ಇನ್ನೊಬ್ಬರ ಜವಾಬ್ದಾರಿ ಎನ್ನುವಾಗ ಆಹಾರ ಹಕ್ಕಿನ ಪ್ರತಿಪಾದನೆಗೆ ತಮ್ಮ ಅಸಮ್ಮತಿ ಇದೆ ಎಂದು ತೋರಿಸಿದಂತಾಗುತ್ತದೆ. ಮಂಡ್ಯ ಸಮ್ಮೇಳನದ ಆಹಾರ ಸಮಿತಿಯಲ್ಲಿ ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು ಇದ್ದರು. ಹೀಗಾಗಿ ಸಮಿತಿಯ ಹೆಗಲಿಗೆ ಜವಾಬ್ದಾರಿಯನ್ನು ಹೊರಿಸಿ ಅಂತರ ಕಾಯ್ದುಕೊಳ್ಳುವ ಕಸರತ್ತನ್ನು ಜೋಶಿ ಮಾಡಿದರು. ಅದು ಸಮ್ಮತವಾದ ಸಂಗತಿಯಲ್ಲ. ಮುಂಬರುವ ಸಮ್ಮೇಳನಕ್ಕೆ ಸಕಲ ಸಿದ್ಧತೆಯನ್ನೂ ಕಸಾಪ ಮಾಡಿಕೊಳ್ಳಬೇಕು, ಜನರ ತೆರಿಗೆ ಹಣವನ್ನು ಬಳಸುವ ಸರ್ಕಾರವೂ ಇದಕ್ಕೆ ಸಿದ್ಧವಿರಬೇಕು. ‘ಆಹಾರ ಹಕ್ಕಿನ ಪ್ರಶ್ನೆ’ ಕುರಿತು ಸಮ್ಮೇಳನದಲ್ಲಿ ಗೋಷ್ಠಿಗಳನ್ನು ಏರ್ಪಡಿಸಿ, ಗಂಭೀರ ಚರ್ಚೆಗೆ ಅವಕಾಶ ನೀಡಬೇಕು.
ಕನ್ನಡ ಸಾಹಿತ್ಯ, ಸಾಹಿತಿಗಳು ಮತ್ತು ಮಾಂಸಾಹಾರ- ಈ ಮೂರನ್ನೂ ಬೇರ್ಪಡಿಸಿ ನೋಡಲು ಸಾಧ್ಯವಿಲ್ಲ. ಹಲವು ಘಟ್ಟಗಳನ್ನು ಹಾದು ಬಂದಿರುವ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಸ್ಯಾಹಾರಿ ಸಾಹಿತಿಗಳಿಗಿಂತಲೂ ಮಾಂಸಾಹಾರಿ ಸಾಹಿತಿಗಳೇ ಹೆಚ್ಚಿದ್ದಾರೆ. ನುಡಿಗೆ ನೆಲದ ಸ್ಪರ್ಶವಿದೆ. ಉತ್ತು ಬಿತ್ತುವ ಜನರ ಬೆವರಿನೊಂದಿಗೆ ಬೆರೆತ ಆಹಾರ ಕ್ರಮವೂ ಸಾಹಿತ್ಯದ ಬಹುಮುಖ್ಯ ಅಂಗ. ಇದನ್ನು ಮಹೇಶ ಜೋಶಿ ಮರೆಯಬಾರದು.
ಮುಖ್ಯವಾಗಿ, ಮಾಂಸಾಹಾರದ ಹಕ್ಕಿನ ಪ್ರಶ್ನೆಯು ಕೇವಲ ಸಮ್ಮೇಳನಕ್ಕೆ ಸೀಮಿತವಾಗಬಾರದು ಎಂದು ಚಿಂತಿಸಲು ಇದು ಸಕಾಲ. ಕರ್ನಾಟಕದಲ್ಲಿ ಶೇ. 80ರಷ್ಟು ಮಾಂಸಾಹಾರಿಗಳಿದ್ದಾರೆ ಎಂದು ಇಂಡಿಯಾ ಟುಡೇ ಸಮೀಕ್ಷೆ ಹೇಳುತ್ತದೆ. ಆದರೆ ಸರ್ಕಾರಿ ಸಭೆ, ಸಮಾರಂಭಗಳಲ್ಲಿ ಅದ್ದೂರಿಯಾಗಿ ಸಸ್ಯಾಹಾರವನ್ನು ವಿತರಿಸಿದರೂ ಮಾಂಸಾಹಾರವು ಗಣನೆಯಲ್ಲಿ ಇರುವುದೇ ಇಲ್ಲ. ಸರ್ಕಾರ ಘೋಷಿಸುವ ಸಾರ್ವತ್ರಿಕ ರಜೆಗಳಂದು ಮಾಂಸಾಹಾರವನ್ನು ನಿಷೇಧಿಸುವುದು ನಡೆಯುತ್ತದೆ. ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಂತಹ ದಿನಗಳಲ್ಲೂ ಮಾಂಸಾಹಾರ ಮಾರಾಟವನ್ನು ನಿರ್ಬಂಧಿಸುವ ಬೆಳವಣಿಗೆಗಳು ಈ ದೇಶದಲ್ಲಿಆಗಿವೆ. ಮಹಾತ್ಮ ಗಾಂಧಿಯವರ ಹತ್ಯೆಯಾದ ದಿನವನ್ನು ‘ಸರ್ವೋದಯ ದಿನ’ ಎಂದು ಸ್ಮರಿಸಲಾಗುತ್ತದೆ. ಸರ್ವರನ್ನೂ ಒಳಗೊಳ್ಳಬೇಕಾದ ದಿನದಂದು ಬಹುಜನರ ಆಹಾರವಾದ ಮಾಂಸ ಮಾರಾಟಕ್ಕೆ ತಡೆ ನೀಡಲಾಗುತ್ತದೆ! ಬುದ್ಧ ಜಯಂತಿ, ಮಹಾವೀರ ಜಯಂತಿ, ಇತರೆ ಹಬ್ಬಗಳಂದೂ ಮಾಂಸಾಹಾರ ನಿಷೇಧವಿರುತ್ತದೆ. ಆಯಾ ಧರ್ಮದ, ಆಯಾ ಪಂಥೀಯರ ಅನುಯಾಯಿಗಳು ಮಾಂಸಾಹಾರವನ್ನು ನಿರ್ದಿಷ್ಟ ದಿನಗಳಂದು ತ್ಯಜಿಸುವುದು ಅವರ ಆಯ್ಕೆಗೆ ಬಿಟ್ಟಿದ್ದು. ಆದರೆ ಅವರ ಭಾವನೆಯ ನೆಪದಲ್ಲಿ ಇಡೀ ಬಹುಸಂಖ್ಯಾತರ ಆಹಾರದ ಮೇಲೆ ನಿರ್ಬಂಧದ ಪ್ರಹಾರವನ್ನು ಸರ್ಕಾರಗಳು ನಡೆಸುತ್ತಲೇ ಬಂದಿವೆ. ಸರ್ಕಾರಿ ವ್ಯವಸ್ಥೆಯೊಳಗಿರುವ ಬ್ರಾಹ್ಮಣೀಯ ಮನಸ್ಥಿತಿ ಇಲ್ಲಿ ಸಕ್ರಿಯವಾಗಿರುತ್ತದೆ.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಸಾಹಿತ್ಯ ಸಮ್ಮೇಳನ – ಜನ ಮರುಳೋ-ಜಾತ್ರೆ ಮರುಳೋ ಎಂದಾಗಬಾರದು!
ನಮ್ಮ ಬದುಕಿನೊಂದಿಗೆ ಬೆರೆತ ಆಹಾರವನ್ನು ಪ್ರಶ್ನಿಸಬೇಡಿ ಎಂದು ನಾವು ಹೇಳುವಂತಹ ಸಂದಿಗ್ಧತೆ ಸೃಷ್ಟಿಯಾಗಿರುವುದು ಬೇಸರದ ಸಂಗತಿಯಾದರೂ, ಬಹುಜನರು ಇಂದು ಮಾತನಾಡಲೇಬೇಕಾಗಿದೆ. ಮಾಂಸಾಹಾರದ ಹಕ್ಕಿನ ಪ್ರಶ್ನೆಗೆ ಇನ್ನಾದರೂ ಕಿವಿಯಾಗಿ ಸರ್ಕಾರಿ ಸಭೆ, ಸಮಾರಂಭಗಳಲ್ಲೂ ಮಾಂಸಾಹಾರ ವಿತರಿಸಲು ತೀರ್ಮಾನಿಸುವಂತೆ ಒತ್ತಾಯಿಸಲು ಈಗ ಕಾಲ ಕೂಡಿಬಂದಿದೆ. ಈ ಸಾಂವಿಧಾನಿಕ ಹಕ್ಕಿನ ವಿರುದ್ಧ ಬ್ರಾಹ್ಮಣೀಯ ಸಿದ್ಧಾಂತ ಪ್ರತಿಪಾದಿಸುವ ಮುಖ್ಯವಾಹಿನಿ ಮಾಧ್ಯಮಗಳು ಅಪಪ್ರಚಾರ ಮಾಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಅರಚಾಟ, ಕಿರುಚಾಟ ನಡೆಸಿ ಮಾಧ್ಯಮಗಳು ಮುಗಿಬೀಳಬಹುದೆಂಬ ಭಯದಲ್ಲಿ ಸರ್ಕಾರ ಕೈಕಟ್ಟಿ ಕೂರುವ ಅಗತ್ಯವೂ ಇಲ್ಲ. ಬಹುಜನರ ಆಹಾರದ ವಿರುದ್ಧ ಅಸಹನೆಯನ್ನು ಬಿತ್ತಲು ಯತ್ನಿಸಿದರೆ, ಆ ಮಾಧ್ಯಮಗಳ ವಿರುದ್ಧವೇ ಜನಾಕ್ರೋಶ ವ್ಯಕ್ತವಾಗುವುದು ಖಾತ್ರಿ. ಇದನ್ನು ಮನಗಂಡು ಸರ್ಕಾರ ಕ್ರಾಂತಿಕಾರಿಕ ಹೆಜ್ಜೆಗಳನ್ನು ಇಡಬೇಕಾದದ್ದು ಇಂದಿನ ತುರ್ತು ಕೂಡ ಹೌದು.
