ಬಳ್ಳಾರಿಯ ತಮ್ಮ ಮನೆಯಿಂದ ನಾಪತ್ತೆಯಾಗಿದ್ದ ಮಹಿಳೆಯೊಬ್ಬರು 25 ವರ್ಷಗಳ ಬಳಿಕ ಹಿಮಾಚಲ ಪ್ರದೇಶದಲ್ಲಿ ಪತ್ತೆಯಾಗಿದ್ದಾರೆ. ಬಳ್ಳಾರಿಯಿಂದ ವಿಡಿಯೋ ಕಾಲ್ ಮೂಲಕ ತಾಯಿಯನ್ನು ನೋಡಿದ ಮಕ್ಕಳು ದುಃಖಿತರಾದರು.
ಬಳ್ಳಾರಿ ಮೂಲದ ಸಾಕಮ್ಮ ಅವರು 25 ವರ್ಷಗಳ ಹಿಂದೆ ನಾಪತ್ತೆಯಾಗಿದ್ದರು. ಮಹಿಳೆಯ ಸುಳಿವು ಸಿಗದ ಕಾರಣ ಕುಟುಂಬಸ್ಥರು ಮೃತಪಟ್ಟಿದ್ದಾಳೆ ಎಂದು ತಿಳಿದು ಆಕೆಯ ತಿಥಿ ಕಾರ್ಯವನ್ನೂ ಮಾಡಿದ್ದರು. ಆದರೆ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಹಾಗೂ ಹಿಮಾಚಲ ಪ್ರದೇಶದ ಕನ್ನಡಿಕ ಐಪಿಎಸ್ ಅಧಿಕಾರಿ ರವಿನಂದನ್ ಅವರ ನೆರವಿನಿಂದ ಮೃತಪಟ್ಟಿದ್ದಾಳೆ ಎಂದುಕೊಂಡಿದ್ದ ಮಹಿಳೆ ಹಿಮಾಚಲ ಪ್ರದೇಶದ ಮಂಡಿ ನಗರದಲ್ಲಿ ಪತ್ತೆಯಾಗಿದ್ದಾರೆ.
ಸಾಕಮ್ಮ ಅವರು ಹಿಮಾಚಲ ಪ್ರದೇಶದ ಮಂಡಿಯ ನಿರಾಶ್ರಿತರ ಶಿಬಿರದಲ್ಲಿ ಆಶ್ರಯ ಪಡೆದಿದ್ದರು. ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯ ತಾಯಿಯಾಗಿದ್ದ ಇವರು ಮಾನಸಿಕ ಸಮಸ್ಯೆ ಹೊಂದಿದ್ದರು.
ಈ ಸುದ್ದಿ ಓದಿದ್ದೀರಾ? ಆರ್ ಅಶ್ವಿನ್ | ಸಾಧಾರಣ ಕುಟುಂಬದ ಹುಡುಗ ಸ್ಟಾರ್ ಕ್ರಿಕೆಟಿಗನಾದ ಕತೆ
ಮಕ್ಕಳಾದ ವಿಕ್ರಮ್, ಬೋಧರಾಜ್, ಲಕ್ಷ್ಮಿ ಸಣ್ಣವರಿರುವಾಗಲೇ ಬಳ್ಳಾರಿಯ ಹೊಸಪೇಟೆಯಿಂದ ಆಕಸ್ಮಿಕವಾಗಿ ರೈಲು ಹತ್ತಿ ಹಿಮಾಚಲ ಪ್ರದೇಶಕ್ಕೆ ತೆರಳಿದ್ದರು. ಅನಾಥವಾಗಿದ್ದ ಸಾಕಮ್ಮ ಹಿಮಾಚಲ ಪ್ರದೇಶದ ಮಂಡಿಯ ನಿರಾಶ್ರಿತ ಶಿಬಿರದಲ್ಲೇ ಉಳಿದುಕೊಂಡಿದ್ದರು. ಹಿಮಾಚಲ ಪ್ರದೇಶದ ಮಂಡಿಯಲ್ಲಿ ಮಂಡ್ಯ ಮೂಲದ ಐಪಿಎಸ್ ಅಧಿಕಾರಿ ರವಿನಂದನ್ ಅವರು ಸಾಕಮ್ಮ ಅವರ ಬಗ್ಗೆ ಬೆಂಗಳೂರಿನಲ್ಲಿರುವ ತಮ್ಮ ಸ್ನೇಹಿತರಿಗೆ ವಿಡಿಯೋ ಮೂಲಕ ಮಾಹಿತಿ ನೀಡಿದ್ದರು. ಐಪಿಎಸ್ ಅಧಿಕಾರಿಯ ಸ್ನೇಹಿತ ಸಾಕಮ್ಮ ಅವರ ವಿಡಿಯೋವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು.
ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ವಿಡಿಯೋ ಗಮನಿಸಿದ್ದ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ ಮಣಿವಣ್ಣನ್ ಅವರು ಐಪಿಎಸ್ ಅಧಿಕಾರಿ ರವಿನಂದನ್ ಜೊತೆ ಚರ್ಚಿಸಿ ಮಾಹಿತಿ ಪಡೆದಿದ್ದರು. ಬಳ್ಳಾರಿ ಮೂಲದ ಸಾಕಮ್ಮ ಅವರ ಬಗ್ಗೆ ಬಳ್ಳಾರಿಯ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಮಣಿವಣ್ಣನ್ ನಿರ್ದೇಶನದ ಮೇರೆಗೆ ಮೂವರು ಸಿಬ್ಬಂದಿಗಳ ತಂಡ ಹಿಮಾಚಲ ಪ್ರದೇಶದ ಮಂಡಿಗೆ ತೆರಳಿತ್ತು.
ಅಲ್ಲಿಗೆ ತೆರಳಿದಾಗ ಸಾಕಮ್ಮ ಅವರಿಗೆ ಮಕ್ಕಳು, ಕುಟುಂಬ ಇದೆ ಎಂಬ ಮಾಹಿತಿ ದೊರಕಿದೆ. ಈ ವಿಷಯ ಗೊತ್ತಾಗುತ್ತಿದ್ದಂತೆ ಕುಟುಂಬಸ್ಥರನ್ನು ಪತ್ತೆ ಹಚ್ಚಿದ ಅಧಿಕಾರಿಗಳು, ಮಂಡಿಯಿಂದಲೇ ವಿಡಿಯೋ ಕಾಲ್ ಮೂಲಕ ಮಕ್ಕಳ ಜೊತೆ ತಾಯಿ ಸಾಕಮ್ಮ ಅವರನ್ನು ಮಾತನಾಡಿಸಿದರು. ತಾಯಿ ಜೊತೆ ಮಾತನಾಡುವಾಗ ಮಕ್ಕಳು ಕೂಡ ಭಾವುಕರಾಗಿ ಕಣ್ಣೀರು ಹಾಕಿದರು. ಸಾಕಮ್ಮ ಕೂಡ ಬೆಂಗಳೂರಿಗೆ ಆಗಮಿಸಿ ಮಕ್ಕಳ ಮನೆ ಸೇರಿದ್ದಾರೆ.
