ವೇಗವಾಗಿ ಸಾಗಿದ ವಾಹನ ಅಪಘಾತಕ್ಕೀಡಾಗಿ ಇಬ್ಬರು ಮಕ್ಕಳು ಸೇರಿ ಐವರು ದಾರುಣವಾಗಿ ಸಾವನ್ನಪ್ಪಿದ್ದ ಘಟನೆ ಬಿಹಾರದ ಪೊರ್ನೆಯ ಜಿಲ್ಲೆಯಲ್ಲಿ ನಡೆದಿದೆ.
ಪಿಕ್ ಅಪ್ ವಾಹನ ವೇಗವಾಗಿ ಸಾಗಿದ ಕಾರಣ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಈ ಭೀಕರ ಅಪಘಾತದಲ್ಲಿ ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ವಿಜಯಪುರ | ಬಿಹಾರದ ಬೋಧ್ ಗಯಾ ಜಗತ್ತಿನ ಬೌದ್ಧರಿಗೆಲ್ಲ ಪವಿತ್ರವಾದ ಸ್ಥಳ: ಸಂಜು ಕಂಬಾಗಿ
“ಚಾಲಕ ವಾಹನವನ್ನು ವೇಗವಾಗಿ ಚಲಾಯಿಸಿದ್ದು ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ಗಾಯಗೊಂಡ 11 ಮಂದಿಯನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೂವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ” ಎಂದು ಪಿಟಿಐಗೆ ಪೊಲೀಸ್ ಅಧಿಕಾರಿ ಸಂದೀಪ್ ಗೋಲ್ಡಿ ತಿಳಿಸಿದ್ದಾರೆ.
ಮೃತರನ್ನು ಜ್ಯೋತಿಶ್ ಠಾಕೂರ್ (50), ಸಂಯುಕ್ತ ದೇವಿ (45), ಅಕಿಲೇಶ್ (11) ಮತ್ತು ಅಮರ್‌ದೀಪ್ (6) ಎಂದು ಗುರುತಿಸಲಾಗಿದೆ. ಇತರರ ಗುರುತು ಪತ್ತೆ ಮಾಡಲಾಗುತ್ತಿದೆ ಎಂದು ವರದಿಯಾಗಿದೆ.
ಇನ್ನು ಅಪಘಾತದ ಬಳಿಕ ಚಾಲಕ ಪರಾರಿಯಾಗಿದ್ದು, ಆತನ ಪತ್ತೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
