ವಾರಕ್ಕೆ 70 ಗಂಟೆಗಳ ಕಾಲ ದುಡಿಯಬೇಕು ಎಂಬ ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿ ಅವರ ಹೇಳಿಕೆಯನ್ನು ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಟೀಕಿಸಿದ್ದಾರೆ. ಅಧಿಕ ಸಮಯ ‘ಅರ್ಥಹೀನವಾಗಿ’ ಕೆಲಸ ಮಾಡುವುದಕ್ಕಿಂತ ದಕ್ಷತೆಯ ಕಡೆಗೆ ಗಮನಹರಿಸಬೇಕು ಎಂದು ಅಭಿಪ್ರಾಯಿಸಿದ್ದಾರೆ.
ಯುವಕರು ವಾರದಲ್ಲಿ 70 ಗಂಟೆಗಳ ಕಾಲ ಕೆಲಸ ಮಾಡುವುದು ಅತ್ಯಗತ್ಯ. ಇದು ದೇಶದ ಬೆಳವಣಿಗೆಗೆ ಸಹಕಾರಿ ಎಂದು ನಾರಾಯಣ ಮೂರ್ತಿ ಅವರು ಹಲವು ಬಾರಿ ಹೇಳಿದ್ದಾರೆ. ವಿರೋಧ ವ್ಯಕ್ತವಾದಾಗಲೂ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ವಾರಕ್ಕೆ 70 ಗಂಟೆ ದುಡಿಮೆ | ನಾನು ಸತ್ತರೂ ನನ್ನ ಅಭಿಪ್ರಾಯ ಬದಲಿಸಿಕೊಳ್ಳಲ್ಲ: ನಾರಾಯಣ ಮೂರ್ತಿ
ಈ ಬಗ್ಗೆ ಭಾನುವಾರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ, “ದೀರ್ಘಕಾಲ ಕೆಲಸ ಮಾಡುವುದು ಅರ್ಥಹೀನ. ದಕ್ಷತೆಯ ಮೇಲೆ ಅಧಿಕ ಗಮನ ಕೇಂದ್ರೀಕರಿಸಬೇಕು” ಎಂದು ಹೇಳಿದ್ದಾರೆ.
“ದೈನಂದಿನ ಜೀವನ ಒಂದು ಹೋರಾಟವಾಗಿದೆ. ಅಸಮರ್ಥ ಮತ್ತು ಕೆಳದರ್ಜೆಯ ಮೂಲಸೌಕರ್ಯದ ವಿರುದ್ಧವಾಗಿ ಹೋರಾಟ ನಡೆಯುತ್ತಿರುತ್ತದೆ. ಉತ್ತಮ ಸಾಮಾಜಿಕ ವ್ಯವಸ್ಥೆ ಮತ್ತು ಸಾಮರಸ್ಯದ ಜೀವನಕ್ಕಾಗಿ ಉದ್ಯೋಗ ಜೀವನದಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಅತೀ ಅಗತ್ಯ” ಎಂದು ಅಭಿಪ್ರಾಯಿಸಿದ್ದಾರೆ.
ಇದನ್ನು ಓದಿದ್ದೀರಾ? ನಾರಾಯಣ ಮೂರ್ತಿಯ ವಾರಕ್ಕೆ 70 ಗಂಟೆ ದುಡಿಮೆ ಹೇಳಿಕೆ: ನೆಟ್ಟಿಗರಿಂದ ಆಕ್ರೋಶ
ಹಾಗೆಯೇ, “ವಾರದ ನಾಲ್ಕು ದಿನಗಳ ಸೋಮವಾರ ಮಧ್ಯಾಹ್ನ 12 ರಿಂದ ಶುಕ್ರವಾರ ಮಧ್ಯಾಹ್ನ 2 ರವರೆಗೆ ಕೆಲಸದ ಅವಧಿ ಇರಬೇಕು” ಎಂದು ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಭಾನುವಾರ ಟ್ವೀಟ್ ಮಾಡಿದ್ದಾರೆ.
ಈ ಹಿಂದೆ ಹಲವು ಬಾರಿ ವಾರಕ್ಕೆ 70 ಗಂಟೆ ದುಡಿಮೆಯ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ನಾರಾಯಣ ಮೂರ್ತಿ ಅವರು, ಕಳೆದ ತಿಂಗಳು “ನಾನು ಉದ್ಯೋಗ ಜೀವನದಲ್ಲಿ ಸಮತೋಲನ ಇರಬೇಕು ಎಂಬುದನ್ನು ನಂಬುವುದಿಲ್ಲ” ಎಂದು ಸಿಎನ್‌ಬಿಸಿ ಗ್ಲೋಬಲ್ ಲೀಡರ್‌ಶಿಪ್ ಶೃಂಗಸಭೆಯಲ್ಲಿ ಹೇಳಿದ್ದರು.
Working longer is meaningless, focus should be on efficiency. Daily life is as it is a struggle, battling inefficient & substandard infrastructure & amenities. Work life balance is most important for good social order & harmony. We should infact move to a 4 day working week. 12… https://t.co/EOOer6AgnK
— Karti P Chidambaram (@KartiPC) December 22, 2024
ಹಾಗೆಯೇ ಆರು ದಿನಗಳ ಉದ್ಯೋಗವಧಿಯನ್ನು 1986ರಲ್ಲಿ ಐದು ದಿನಗಳ ಕೆಲಸದ ಅವಧಿಗೆ ಕಡಿತಗೊಳಿಸಿರುವ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದರು. “ಹಾಗೆಯೇ ನನ್ನನ್ನು ಕ್ಷಮಿಸಿ. ನಾನು ನನ್ನ ದೃಷ್ಟಿಕೋನವನ್ನು ಬದಲಾಯಿಸಿಲ್ಲ. ನಾನು ಸಾಯುವವರೆಗೂ ಇದೇ ನಿಲುವು ಹೊಂದಿರುತ್ತೇನೆ” ಎಂದಿದ್ದರು.
