ಡಾ. ಬಿ.ಆರ್. ಅಂಬೇಡ್ಕರ್ ವಿರುದ್ಧ ಅಮಿತ್ ಶಾ ದ್ವೇಷ ಭಾಷಣ ಮಾಡಿದ ಬಗ್ಗೆ ದೇಶದ ಮುಂದೆ ಕ್ಷಮೆ ಕೇಳಬೇಕು. ಕೂಡಲೇ ಅವರನ್ನು ಸಚಿವ ಸ್ಥಾನದಿಂದ ಹೊರಹಾಕು ಎಂದು ಒತ್ತಾಯಿಸಿ ಕೊಪ್ಪಳ ನಗರದ ಅಶೋಕ ವೃತ್ತದಲ್ಲಿ ಎಸ್‌ಡಿಪಿಐ ಪಕ್ಷದ ವತಿಯಿಂದ ಪ್ರತಿಭಟನೆ ಮಾಡಲಾಯಿತು.
ಪಾರ್ಲಿಮೆಂಟ್‌ನಲ್ಲಿ ಅಮಿತ್ ಶಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಹಗುರವಾಗಿ ಹೇಳಿಕೆ ಕೊಟ್ಟಿರುವುದು ಹಾಗೂ ಕರ್ನಾಟಕದ ಚಳಿಗಾಲ ಅಧಿವೇಶನ ಸುವರ್ಣ ಸೌಧದಲ್ಲಿ, ಮಾಜಿ ಶಾಸಕ ವಿಧಾನ ಪರಿಷತ್ ಸದಸ್ಯ ಸಿಟಿ ರವಿ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ತುಚ್ಛವಾಗಿ ಮಾತನಾಡಿರುವುದು ಖಂಡನೀಯ. ಪದೇಪದೇ ಅಸಾಂವಿಧಾನಿಕ ಹೇಳಿಕೆಯನ್ನು ಬಿಜೆಪಿಯ ನಾಯಕರು ಕೊಡುತ್ತಿದ್ದಾರೆ. ಇದಕ್ಕೆ ಕಡಿವಾಣ ಬೀಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಎಸ್‌ಡಿಪಿಐ ಕೊಪ್ಪಳ ಜಿಲ್ಲಾಧ್ಯಕ್ಷ ಸಲೀಮ್ ಖಾದ್ರಿ, ಅಮಿತ್ ಶಾ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಬರೆದಂತಹ ಸಂವಿಧಾನದ ಅಡಿಯಲ್ಲಿ ಈ ದೇಶದ ಗೃಹ ಸಚಿವರಾಗಿದ್ದಾರೆ ಎಂಬುದನ್ನು ಮರೆಯಬಾರದು. ಆರ್ ಎಸ್ ಎಸ್ ಮತ್ತು ಸಂಘ ಪರಿವಾರದ ಮನುಸ್ಮೃತಿ ಪಾಲನೆ ಮಾಡುವವರಾಗಿರುವುದರಿಂದ ನಮ್ಮ ದೇಶದ ಸಂವಿಧಾನಕ್ಕೆ ಗೌರವ ಕೊಡುತ್ತಿಲ್ಲ. ಹೋರಾಟದ ಮೂಲಕವೇ ಮುಂದೊಂದು ದಿನ ಎಸ್‌ಡಿಪಿಐ ಇಂತಹವರಿಗೆ ತಕ್ಕ ಪಾಠ ಕಲಿಸುತ್ತದೆ ಎಂದರು.

ಡಿಎಸ್ಎಸ್ ತಾಲೂಕು ಘಟಕದ ಅಧ್ಯಕ್ಷರಾದ ರಾಘು ಚಾಕ್ರಿ ಮಾತನಾಡಿ, “ಅಮಿತ್ ಶಾ ಗ್ರಹ ಮಂತ್ರಿ ಸ್ಥಾನಕ್ಕೇ ಲಾಯಕ್ಕಿಲ್ಲ. ಒಬ್ಬ ನಾಲಾಯಕ್ ಕೇಂದ್ರ ಸಚಿವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಮಾತನಾಡುವುದಕ್ಕೂ ಯೋಗ್ಯತೆ ಇಲ್ಲ. ಅಂಬೇಡ್ಕರ್ ಜಗತ್ತಿನ ಒಬ್ಬ ಚಿಂತಕ ಮಾನವತಾವಾದಿ, ಸಾಮಾಜಿಕ ಹೋರಾಟಗಾರ. ಅಮಿತ್ ಶಾ ಅವರು ಅಂಬೇಡ್ಕರ್ ಬಗ್ಗೆ ಹಗುರವಾಗಿ ಮಾತನಾಡಿ, ತಮ್ಮ ನೈಜ ಸಂಸ್ಕೃತಿ ತೋರಿದ್ದಾರೆ. ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ದೇಶದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಭಾರತೀಯ ಭೀಮ್ ಸೇನೆ ಜಿಲ್ಲಾಧ್ಯಕ್ಷ ಕಾಶಪ್ಪ ಛಲವಾದಿ ಮಾತನಾಡಿ, ಬಿಜೆಪಿಯ ನಾಯಕರು ದೇಶದಲ್ಲಿ ಮತ್ತು ರಾಜ್ಯದಲ್ಲಿ ಪದೇ ಪದೇ ಅಶಾಂತಿ ಉಂಟು ಮಾಡುತ್ತಿದ್ದಾರೆ. ಈ ದೇಶದ ಕಾನೂನಿನ ಬಗ್ಗೆ ಗೌರವವಿಲ್ಲ. ಬಿಜೆಪಿಯ ಕುತಂತ್ರವನ್ನು ದಲಿತರು, ಅಲ್ಪಸಂಖ್ಯಾತರು ಅರ್ಥ ಮಾಡಿಕೊಳ್ಳದಿದ್ದರೆ, ಬರುವ ದಿನಗಳಲ್ಲಿ ಇವರಿಂದ ಬಾಬಾ ಸಾಹೇಬ್ ರಚಿಸಿದ ಕಾನೂನು ಬದಲಾಯಿಸಿ ಮನುಸ್ಮೃತಿ ಕಾನೂನು ಜಾರಿಗೆ ತರುತ್ತಾರೆ. ಆದ್ದರಿಂದ, ಶೋಷಿತರು ಎಚ್ಚೆತ್ತುಕೊಳ್ಳಬೇಕು. ಮುಂದಿನ ದಿನದಲ್ಲಿ ಅಂಬೇಡ್ಕರ್ ಅವರ ಬಗ್ಗೆ ಹಗುರವಾಗಿ ಮಾತನಾಡುವವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಕರೆಕೊಟ್ಟರು.
ಇದನ್ನು ಓದಿದ್ದೀರಾ? ಉಡುಪಿ | ಪಂಚರ್ ಹಾಕುವ ವೇಳೆ ಟೈರ್ ಸ್ಫೋಟ: ಗಾಳಿಯಲ್ಲಿ ಹಾರಿಬಿದ್ದ ಯುವಕ; ವಿಡಿಯೋ ವೈರಲ್
ಪ್ರತಿಭಟನೆಯಲ್ಲಿ ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಮುಹಮ್ಮದ್ ಸಾದಿಕ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಿಜಾಮುದ್ದಿನ್ ಮಾಳೆಕೊಪ್ಪ, ಉಪಾಧ್ಯಕ್ಷ ಫಾರೂಕ್ ಅತ್ತಾರ, ಎಸ್‌ಡಿಪಿಐ ಜಂಟಿ ಕಾರ್ಯದರ್ಶಿ ಅರ್ಷದ್ ಶೈಖ್, ದಲಿತ ಯುವ ಮುಖಂಡ ಪ್ರಕಾಶ್ ಬೆಲ್ಲದ ಮುಂತಾದವರು ಉಪಸ್ಥಿತರಿದ್ದರು.
