ತನ್ನ ಅಣ್ಣ ವ್ಯಾಪಾರ-ವಹಿವಾಟಿನಲ್ಲಿ ಯಶಸ್ಸು ಕಾಣುತ್ತಿರುವುದನ್ನು ಸಹಿಸದ ತಮ್ಮನೊಬ್ಬ ಅಣ್ಣನ ಮನೆಗೆ ನುಗ್ಗಿ 1.2 ಕೋಟಿ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ಕದ್ದಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
ಹೈದರಾಬಾದ್‌ನ ದೋಮಲಗುಡದಲ್ಲಿ ಇಂದ್ರಜಿತ್ ಫೋಸಾಯಿ ಎಂಬಾತ ಇತರ 11 ಮಂದಿಯ ಜೊತೆಗೂಡಿ ಕೊಡಲಿ, ಚಾಕು ಹಾಗೂ ಬಂದೂಕುಗಳೊಂದಿಗೆ ತನ್ನದೇ ಅಣ್ಣನ ಮನೆಗೆ ನುಗ್ಗಿದ್ದಾನೆ. ಮನೆಯಲ್ಲಿದ್ದವರನ್ನು ಬೆದರಿಸಿ ಚಿನ್ನ, ಬೆಳ್ಳಿ, ಹಿತ್ತಾಳೆ ವಸ್ತುಗಳು ಹಾಗೂ ₹ 2.9 ಲಕ್ಷ ನಗದು ಕದ್ದು ಪರಾರಿಯಾಗಿದ್ದಾರೆ.
ಅಣ್ಣನ ಯಶಸ್ಸನ್ನು ಸಹಿಸಲಾಗದೆ ಅಸೂಯೆಯಿಂದ ಈ ಡಕಾಯಿತಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. “ಆರೋಪಿ ಇಂದ್ರಜಿತ್ ಕೂಡ ಚಿನ್ನಾಭರಣ ವ್ಯವಹಾರ ನಡೆಸುತ್ತಿದ್ದ. ಆದರೆ, ಆರ್ಥಿಕ ನಷ್ಟ ಮತ್ತು ದುಂದುವೆಚ್ಚದಿಂದಾಗ ನಷ್ಟಕ್ಕೆ ಸಿಲುಕಿದ್ದ. ಆದರೆ, ಆತನ ಅಣ್ಣ ವ್ಯಾಪಾರದಲ್ಲಿ ಉತ್ತಮ ಲಾಭ ಪಡೆಯುತ್ತಿದ್ದ. ಆದ್ದರಿಂದ ಅಸೂಯೆಗೆ ಒಳಗಾಗಿದ್ದ ” ಎಂದು ಪೊಲೀಸರು ತಿಳಿಸಿದ್ದಾರೆ.
ಹೈದರಾಬಾದ್ ಪೊಲೀಸರು ಆರೋಪಿಗಳನ್ನು ಪಶ್ಚಿಮ ಬಂಗಾಳದಲ್ಲಿ ಬಂಧಿಸಿದ್ದಾರೆ. ಆರೋಪಿಳ ಬಳಿ ಇದ್ದ 1.20 ಕೋಟಿ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳು, ಹಿತ್ತಾಳೆ ವಸ್ತುಗಳು, ನಗದು ಮತ್ತು ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಕೊಡಲಿಗಳು, ಕುಡಗೋಲು ಮತ್ತು ಚಾಕುಗಳನ್ನು ಸಹ ವಶಕ್ಕೆ ಪಡಿದಿದ್ದಾರೆ.